ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ, ಬಿಹಾರದ ಸರ್ಕಾರಿ ಉದ್ಯೋಗಗಳ ಪ್ರತಿಯೊಂದು ವರ್ಗದ ಎಲ್ಲ ಹುದ್ದೆಗಳಲ್ಲಿ ಶೇಕಡಾ 35 ರಷ್ಟು ಬಿಹಾರದ ಖಾಯಂ ನಿವಾಸಿ ಮಹಿಳೆಯರಿಗೆ ಮಾತ್ರ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಘೋಷಿಸಿದ್ದಾರೆ.
“ಎಲ್ಲ ರಾಜ್ಯ ಸರ್ಕಾರಿ ಸೇವೆಗಳಲ್ಲಿ ಎಲ್ಲ ವರ್ಗಗಳು, ಹಂತಗಳು ಮತ್ತು ಪ್ರಕಾರದ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಬಿಹಾರದ ಮೂಲ ನಿವಾಸಿಗಳಾದ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ 35% ಮೀಸಲಾತಿ” ಎಂದು ನಿತೀಶ್ ಕುಮಾರ್ ಹೇಳಿದರು.
ಎಲ್ಲ ಹಂತಗಳು ಮತ್ತು ಇಲಾಖೆಗಳಲ್ಲಿ ಸಾರ್ವಜನಿಕ ಸೇವೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಹೆಚ್ಚಿನ ಮಹಿಳೆಯರು ಸರ್ಕಾರದ ಕಾರ್ಯಪಡೆಗೆ ಪ್ರವೇಶಿಸುವುದು ಸೇರಿದಂತೆ ಬಿಹಾರದ ಆಡಳಿತದಲ್ಲಿ ದೊಡ್ಡ ಪಾತ್ರವನ್ನು ವಹಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ನಿರ್ಧಾರ ಹೊಂದಿದೆ ಎಂದು ನಿತೀಶ್ ಕುಮಾರ್ ಹೇಳಿದರು.
ಪಾಟ್ನಾದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಯುವಜನರಿಗೆ ತಮ್ಮ ಸರ್ಕಾರದ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿತೀಶ್ ಕುಮಾರ್, ರಾಜ್ಯ ಸಚಿವ ಸಂಪುಟವು ಅನುಮೋದಿಸಿದ ಹೊಸ ಶಾಸನಬದ್ಧ ಸಂಸ್ಥೆಯಾದ ಬಿಹಾರ ಯುವ ಆಯೋಗದ ರಚನೆಯನ್ನು ಸಹ ಘೋಷಿಸಿದರು.
“ಬಿಹಾರದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು, ಅವರಿಗೆ ತರಬೇತಿ ನೀಡಲು ಮತ್ತು ಅವರನ್ನು ಸಬಲೀಕರಣಗೊಳಿಸಲು, ಸಮರ್ಥರನ್ನಾಗಿ ಮಾಡಲು, ಸರ್ಕಾರವು ಬಿಹಾರ ಯುವ ಆಯೋಗವನ್ನು ರಚಿಸಲು ನಿರ್ಧರಿಸಿದೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ. ಸಂಪುಟ ಇದಕ್ಕೆ ಅನುಮೋದನೆ ನೀಡಿದೆ” ಎಂದು ಮುಖ್ಯಮಂತ್ರಿ ಹೇಳಿದರು.
ಬಿಹಾರ ಯುವ ಆಯೋಗವು ರಾಜ್ಯದ ಯುವಕರ ಉನ್ನತಿ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುತ್ತದೆ. ಯುವಜನರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಖಚಿತಪಡಿಸಿಕೊಳ್ಳಲು ಇದು ಸರ್ಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುತ್ತದೆ.
ಆಯೋಗವು ಒರ್ವ ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು ಮತ್ತು ಏಳು ಸದಸ್ಯರನ್ನು ಒಳಗೊಂಡಿರುತ್ತದೆ. ಎಲ್ಲರೂ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ರಾಜ್ಯದೊಳಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಯುವಕರು ಆದ್ಯತೆ ಪಡೆಯುವುದನ್ನು ಇದು ಮೇಲ್ವಿಚಾರಣೆ ಮಾಡುತ್ತದೆ. ರಾಜ್ಯದ ಹೊರಗೆ ಅಧ್ಯಯನ ಮಾಡುತ್ತಿರುವ ಅಥವಾ ಉದ್ಯೋಗದಲ್ಲಿರುವ ಬಿಹಾರದ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುತ್ತದೆ.
“ಮದ್ಯ ಮತ್ತು ಮಾದಕ ದ್ರವ್ಯ ಸೇವನೆಯಂತಹ ಸಾಮಾಜಿಕ ಅನಿಷ್ಟಗಳನ್ನು ನಿಗ್ರಹಿಸಲು ಕಾರ್ಯಕ್ರಮಗಳನ್ನು ಸಿದ್ಧಪಡಿಸುವ ಕಾರ್ಯವನ್ನು ಆಯೋಗಕ್ಕೆ ವಹಿಸಲಾಗುವುದು, ಅಂತಹ ವಿಷಯಗಳಲ್ಲಿ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡುತ್ತದೆ” ಎಂದು ನಿತೀಶ್ ಕುಮಾರ್ ಹೇಳಿದರು.
ಈ ಉಪಕ್ರಮವು ಬಿಹಾರದ ಯುವಕರನ್ನು ಸ್ವಾವಲಂಬಿ, ಕೌಶಲ್ಯಪೂರ್ಣ ಮತ್ತು ಉದ್ಯೋಗಕ್ಕೆ ಸಿದ್ಧರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ, ಇದು ಮುಂಬರುವ ಪೀಳಿಗೆಗೆ ಸುರಕ್ಷಿತ ಭವಿಷ್ಯವನ್ನು ಖಾತ್ರಿಪಡಿಸುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಪಕ್ಷ ಅಧಿಕಾರಕ್ಕೆ ಬಂದರೆ ಒಂದೇ ಗಂಟೆಯಲ್ಲಿ ವಕ್ಫ್ ಕಾಯ್ದೆ ರದ್ದು: ಕಾಂಗ್ರೆಸ್ ಸಂಸದ ಇಮ್ರಾನ್


