ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿದ್ದಾರೆ. ಆದರೆ, ನಂತರ ಪಕ್ಷ ಬದಲಾಯಿಸಬಹುದು, ಅವರು ಮತ್ತೆ ಮುಖ್ಯಮಂತ್ರಿಯಾಗುವ ಭರವಸೆಯಲ್ಲಿದ್ದಾರೆ ಎಂದು ಚುನಾವಣಾ ತಂತ್ರಜ್ಞ ಹಾಗೂ ರಾಜಕಾರಣಿ ಪ್ರಶಾಂತ್ ಕಿಶೋರ್ ಬುಧವಾರ ಹೇಳಿದ್ದಾರೆ.
ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜನ ಸುರಾಜ್ ಪಕ್ಷದ ಸಂಸ್ಥಾಪಕ, “74 ವರ್ಷದ ನಾಯಕ ಯಾವ ಮೈತ್ರಿಕೂಟದ ಭಾಗವಾದರೂ ಪರವಾಗಿಲ್ಲ” ಎಂದು ಪ್ರತಿಪಾದಿಸಿದರು.
“ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ಮುಗಿದ ನಂತರ, ನಿತೀಶ್ ಕುಮಾರ್ ಹೊರತುಪಡಿಸಿ ಯಾರಾದರೂ ಮುಖ್ಯಮಂತ್ರಿಯಾಗಬಹುದು. ನೀವು ಅದನ್ನು ನನ್ನಿಂದ ಲಿಖಿತವಾಗಿ ಪಡೆಯಬಹುದು. ನಾನು ತಪ್ಪು ಎಂದು ಸಾಬೀತಾದರೆ, ನಾನು ನನ್ನ ರಾಜಕೀಯ ಪ್ರಚಾರವನ್ನು ತ್ಯಜಿಸುತ್ತೇನೆ” ಎಂದು ಕಿಶೋರ್ ಹೇಳಿದರು.
ವಿಧಾನಸಭಾ ಚುನಾವಣೆಗೆ ಮುನ್ನ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲು ಹಿಂಜರಿಯುತ್ತಿರುವುದನ್ನು ಪರಿಗಣಿಸಿ, “ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಾರೆ. 2015 ರ ಚುನಾವಣೆಗಳನ್ನು ಹೊರತುಪಡಿಸಿ, ನಾನು ಅವರ ಪ್ರಚಾರವನ್ನು ನಿರ್ವಹಿಸಿದ್ದಾಗಲೂ ಅವರು ಹಾಗೆ ಮಾಡುತ್ತಲೇ ಬಂದಿದ್ದಾರೆ” ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ನಿತೀಶ್ ಕುಮಾರ್ ಅವರ ಜನಪ್ರಿಯತೆ ಕಡಿಮೆಯಾಗುತ್ತಿರುವುದರಿಂದ ಅವರನ್ನು ಎನ್‌ಡಿಎಯ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲು ಬಿಜೆಪಿ ಎಚ್ಚರದಿಂದಿತ್ತು ಎಂದು ಕಿಶೋರ್ ಹೇಳಿದ್ದಾರೆ.
“ಚುನಾವಣೆಯ ನಂತರ (ಎನ್‌ಡಿಎ ಅಧಿಕಾರಕ್ಕೆ ಬಂದರೆ) ನಿತೀಶ್ ಕುಮಾರ್ ಐದು ವರ್ಷಗಳ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಘೋಷಿಸಲು ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸವಾಲು ಹಾಕುತ್ತೇನೆ. ಅವರು ಹಾಗೆ ಮಾಡಿದರೆ, ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಕಷ್ಟವಾಗುತ್ತದೆ” ಎಂದು ಕಿಶೋರ್ ಹೇಳಿದರು.
ನಿತೀಶ್ ಕುಮಾರ್ ಅವರೊಂದಿಗಿನ ಜಗಳದಿಂದ 2020 ರಲ್ಲಿ ಪಕ್ಷದಿಂದ ಹೊರಹಾಕಲ್ಪಟ್ಟ ಮಾಜಿ ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷರು, ಆಡಳಿತ ಪಕ್ಷವು ತುಂಬಾ ಕೆಟ್ಟದಾಗಿದೆ ಎಂದು ಹೇಳಿಕೊಂಡಿದ್ದಾರೆ.
“ಬಿಜೆಪಿ ಮತ್ತೊಂದು ಅವಧಿಗೆ ನಿತೀಶ್ ಕುಮಾರ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟವಾದ ನಂತರ ನಿತೀಶ್ ಕುಮಾರ್ ಪಕ್ಷ ಬದಲಾಯಿಸಲು ಪ್ರಯತ್ನಿಸಬಹುದು. ಆದರೆ, ಜೆಡಿಯು ಗೆದ್ದ ಸ್ಥಾನಗಳ ಸಂಖ್ಯೆ ತುಂಬಾ ಕಳಪೆಯಾಗಿದ್ದು, ಅವರು ಯಾವುದೇ ಪಕ್ಷಕ್ಕೆ ಸೇರಿದರೂ ಅವರಿಗೆ ಉನ್ನತ ಹುದ್ದೆ ಸಿಗುವುದಿಲ್ಲ” ಎಂದು ಕಿಶೋರ್ ಭವಿಷ್ಯ ನುಡಿದರು.
“70 ವರ್ಷದ ಮುಖ್ಯಮಂತ್ರಿ ದೈಹಿಕವಾಗಿ ದಣಿದಿದ್ದಾರೆ, ಮಾನಸಿಕವಾಗಿ ನಿವೃತ್ತರಾಗಿದ್ದಾರೆ” ಎಂದು ಪ್ರಶಾಂತ್ ಆರೋಪಿಸಿದರು.
“ನಾನಲ್ಲ, ಆದರೆ ದಿವಂಗತ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ನಿತೀಶ್ ಕುಮಾರ್ ಗಂಭೀರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು. ಒಂದು ಕಾಗದದ ತುಣುಕನ್ನು ನೋಡದೆ, ಅವರ ಸಂಪುಟದಲ್ಲಿರುವ ಸಚಿವರ ಹೆಸರುಗಳನ್ನು ಉಚ್ಚರಿಸುವಂತೆ ನಾನು ಬಹಳ ಸಮಯದಿಂದ ಅವರಿಗೆ ಸವಾಲು ಹಾಕುತ್ತಿದ್ದೇನೆ. ಅಧಿಕಾರಿಗಳ ಪ್ರೇರಣೆಯ ಹೊರತು ಅವರು ಪ್ರವಾಸ ಮಾಡುತ್ತಿರುವ ಜಿಲ್ಲೆಯ ಹೆಸರನ್ನು ಹೇಳಲು ಸಾಧ್ಯವಿಲ್ಲ. ಅಂತಹ ಮನಸ್ಥಿತಿಯೊಂದಿಗೆ ಅವರು ಬಿಹಾರವನ್ನು ಆಳುತ್ತಿರುವುದು ದುರದೃಷ್ಟಕರ” ಎಂದು ಗಂಭೀರ ಆರೋಪ ಮಾಡಿದ್ದಾರೆ.
“ಕಳೆದ ವರ್ಷ ಹೊಸ ಕೇಂದ್ರ ಸರ್ಕಾರ ಪ್ರಮಾಣವಚನ ಸ್ವೀಕರಿಸುವಾಗ, ಇತರ ಅನೇಕ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ, ನಿತೀಶ್ ಕುಮಾರ್ ಅವರು ಮೋದಿಯ ಪಾದಗಳನ್ನು ಮುಟ್ಟುವ ಮೂಲಕ ಬಿಹಾರಕ್ಕೆ ಅಪಖ್ಯಾತಿ ತಂದಿದ್ದಾರೆ” ಎಂದು ಅವರು ಸಮರ್ಥಿಸಿಕೊಂಡರು.
“ಅವರಿಗೆ ಪ್ರಧಾನಿ ಮೇಲೆ ಅಷ್ಟೊಂದು ಗೌರವವಿದ್ದರೆ, ಅವರು ಖಾಸಗಿಯಾಗಿ ಅವರ ಪಾದ ಮುಟ್ಟಬಹುದಿತ್ತು. ಆದರೆ, ಅವರು ಕುರ್ಚಿಯಲ್ಲಿಯೇ ಉಳಿಯಲು ಮಾತ್ರ ಮುಖಸ್ತುತಿ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಉಳಿಯಲು ಜೆಡಿ(ಯು) ಬೆಂಬಲವನ್ನು ಅವಲಂಬಿಸಿರುವ ಬಿಜೆಪಿಯೊಂದಿಗಿನ ತಮ್ಮ ಪ್ರಭಾವವನ್ನು ಬಳಸಿಕೊಂಡು ಬಿಹಾರದಲ್ಲಿ ನಶಿಸಿ ಹೋಗಿರುವ ಸಕ್ಕರೆ ಉದ್ಯಮವನ್ನು ಪುನರುಜ್ಜೀವನಗೊಳಿಸಲು ಅವರು ಏಕೆ ಬಳಸುವುದಿಲ್ಲ” ಎಂದು ಅವರು ಪ್ರಶ್ನಿಸಿದರು.
ನಿತೀಶ್ ಕುಮಾರ್ ಮತ್ತು ಅವರ ಬದ್ಧವೈರಿ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ದಶಕಗಳಿಂದ ಒತ್ತೆಯಾಳುಗಳಾಗಿರಿಸಿಕೊಂಡಿರುವ ರಾಜಕೀಯ ಹಳಿಯಿಂದ ಬಿಹಾರವನ್ನು ಹೊರತರಲು ಜನ ಸುರಾಜ್ ಪಕ್ಷವು ಕಣಕ್ಕೆ ಇಳಿಯಲಿದೆ ಎಂದು ಅವರು ಹೇಳಿದರು.
ಆರ್‌ಜೆಡಿ ಹಲವು ವರ್ಷಗಳಿಂದ ಅಧಿಕಾರದಲ್ಲಿ ಉಳಿಯಲು ಸಹಾಯ ಮಾಡಿದ ಬಿಜೆಪಿ ಮತ್ತು ಕಾಂಗ್ರೆಸ್, ಬಿಹಾರದ ದುಃಸ್ಥಿತಿಗೆ ಹೊಣೆಯಾಗಿದೆ ಎಂದು ಅವರು ಆರೋಪಿಸಿದರು.
ರಾಜ್ಯದ ಬಹು ಪ್ರಚಾರ ಪಡೆದ ಮದ್ಯ ನಿಷೇಧ ನೀತಿಯನ್ನು ಟೀಕಿಸಿದ ಕಿಶೋರ್, ಬಿಹಾರದಲ್ಲಿ ಮದ್ಯ ನಿಷೇಧವು ಬಿಜೆಪಿಯ ದ್ವಂದ್ವತೆಗೆ ಮತ್ತೊಂದು ಉದಾಹರಣೆಯಾಗಿದೆ ಎಂದು ಹೇಳಿದರು.
“ಬಿಜೆಪಿ ಪಕ್ಕದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮತ್ತು ಅದರ ಆಳ್ವಿಕೆಯಲ್ಲಿರುವ ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಇದೇ ರೀತಿ ಘೋಷಿಸಲು ಏಕೆ ಕೇಳುವುದಿಲ್ಲ? ಇತರ ರಾಜ್ಯಗಳಲ್ಲಿ, ಅವರು ಬೆಳವಣಿಗೆ ಮತ್ತು ಹೂಡಿಕೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಬಿಹಾರದಲ್ಲಿ, ಐದು ಕೆಜಿ ಉಚಿತ ಪಡಿತರ ಮತ್ತು ಮದ್ಯ ನಿಷೇದಕ್ಕಿಂತ ಇನ್ನೇನೂ ಅಗತ್ಯವಿಲ್ಲ ಎಂದು ಅವರು ಭಾವಿಸುತ್ತಾರೆ” ಎಂದು ಅವರು ಹೇಳಿದರು.
ವಕ್ಫ್ ವಿವಾದ| ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೋರಾಟಕ್ಕೆ ಪ್ರತಿಯಾಗಿ ಹಿಂದುತ್ವ ಗುಂಪಿನಿಂದ ಪ್ರತಿಭಟನೆ!


