ಲೋಕಸಭೆ ಚುನಾವಣೆಯ ಫಲಿತಾಂಶ ಹೊರ ಬರುತ್ತಿದ್ದಂತೆ ಪ್ರತಿಕ್ರಿಯಿಸಿದ ಎಡರಂಗದ ಎರಡು ಪಕ್ಷಗಳು ಪ.ಬಂಗಾಳದಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ನಂತರ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್(AIFB) ಮತ್ತು ಕ್ರಾಂತಿಕಾರಿ ಸಮಾಜವಾದಿ ಪಕ್ಷ (RSP) ಜೂನ್ 5ರಂದು ಭವಿಷ್ಯದಲ್ಲಿ ಎಡರಂಗ ಮತ್ತು ಕಾಂಗ್ರೆಸ್ ನಡುವೆ ಯಾವುದೇ ಮೈತ್ರಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಎಡರಂಗವು ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿದೆ. ಮಾಲ್ಡಾ ದಕ್ಷಿಣದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಮಾತ್ರ ಪಡೆದುಕೊಂಡಿದೆ. ತೃಣಮೂಲ ಕಾಂಗ್ರೆಸ್ 42ರಲ್ಲಿ 29 ಸ್ಥಾನಗಳನ್ನು ಗೆದ್ದುಕೊಂಡಿದೆ. ಎಡರಂಗವು 33 ಸ್ಥಾನಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿತ್ತು, ಉಳಿದ ಒಂಬತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಎಐಎಫ್‌ಬಿ ರಾಜ್ಯ ಕಾರ್ಯದರ್ಶಿ ನರೇನ್ ಚಟರ್ಜಿ ಈ ಕುರಿತು ಮಾತನಾಡಿದ್ದು, 2019 ಮತ್ತು 2024ರ ಎರಡೂ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವಿನ ಮೈತ್ರಿ ಕೆಲಸ ಮಾಡಲಿಲ್ಲ. ಎಐಎಫ್‌ಬಿ ಸ್ಪರ್ಧಿಸಿದ್ದ ಬರಾಸತ್, ಪುರುಲಿಯಾ ಮತ್ತು ಕೂಚ್‌ಬೆಹಾರ್‌ಗಳ ಎಲ್ಲಾ ಮೂರು ಕ್ಷೇತ್ರಗಳಲ್ಲಿ ಸೋತಿದೆ. ಪಶ್ಚಿಮ ಬಂಗಾಳದಾದ್ಯಂತ 0.24% ಮತಗಳಿತ್ತು. ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದರೂ ಪುರುಲಿಯಾ ಮತ್ತು ಕೂಚ್‌ಬೆಹರ್ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು ಎಂದು ಹೇಳಿದ್ದಾರೆ.
ಎಡರಂಗ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆಯನ್ನು ಸಿಪಿಐ(ಎಂ) ನಿರ್ಧರಿಸಿದೆ, ನಮ್ಮನ್ನು ಸಂಪರ್ಕಿಸಿಲ್ಲ. ಈ ಹಿಂದೆ ಬಂಗಾಳದಲ್ಲಿ ಕಾಂಗ್ರೆಸ್ ಮಾಡಿರುವ ಕೆಲಸಗಳ ಹೊರೆಯನ್ನು ಎಡಪಕ್ಷಗಳಾದ ನಾವೇಕೆ ಹೊರಬೇಕು? ನಾವು ಮೈತ್ರಿ ಮಾಡಿಕೊಂಡರೆ, ಜವಾಬ್ದಾರಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಸೈದ್ಧಾಂತಿಕವಾಗಿ ವಿರೋಧಿಸುವ ಕಾಂಗ್ರೆಸ್ ಜೊತೆ ಸೀಟು ಹಂಚಿಕೊಳ್ಳುವ ಉದ್ದೇಶ ನಮ್ಮ ಪಕ್ಷಕ್ಕಿಲ್ಲ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಯಾವಾಗಲೂ ಜಗಳವಾಡುತ್ತಿವೆ. ನಾವು ಇದನ್ನು ಸಂಪೂರ್ಣವಾಗಿ ಎಡರಂಗ ಮತ್ತು ವಿಶೇಷವಾಗಿ ಸಿಪಿಐ(ಎಂ) ಜೊತೆ ಚರ್ಚಿಸುತ್ತೇವೆ ಮತ್ತು ಈ ಮೈತ್ರಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳುತ್ತೇವೆ ಎಂದು ಚಟರ್ಜಿ ಹೇಳಿದ್ದಾರೆ.
ಇದನ್ನು ಓದಿ: ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ವಾಪಾಸ್ಸಾಗಲು ಮುಂದಾದ ಅಜಿತ್ ಬಣದ ಬಹುಪಾಲು ಶಾಸಕರು!


