ಕೋವಿಡ್ ಎರಡನೇ ಅಲೆಯ ಬಿಕ್ಕಟ್ಟಿನ ನಡುವೆ ಕೋವಿಡ್ ಲಸಿಕೆಗೆ ಭಾರೀ ಮಹತ್ವ ಬಂದಿದೆ. ಇದುವರೆಗೂ 45 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿದ್ದ ಲಸಿಕೆಯನ್ನು ಮೇ 1 ರಿಂದ 18-45 ವರ್ಷ ವಯಸ್ಸಿನವರಿಗೂ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ ಈ ವಯಸ್ಸಿನವರಿಗೆ ಲಸಿಕೆ ಉಚಿತವಲ್ಲ, ಮಧ್ಯವರ್ತಿಗಳು ಬೆಲೆ ನಿಯಂತ್ರಣವಿಲ್ಲದ ಲಸಿಕೆ ಮಾರುವುದರಿಂದ ದುರ್ಬಲ ವರ್ಗಗಳಿಗೆ ಲಸಿಕೆ ಗ್ಯಾರಂಟಿಯಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಕೇಂದ್ರ ಸರ್ಕಾರದ ಲಸಿಕೆ ವಿತರಣೆಯ ಕಾರ್ಯತಂತ್ರವು ಎಲ್ಲರಿಗೂ ಲಸಿಕೆ ನೀಡುವ ಬದಲು ತಾರತಮ್ಯದಿಂದ ಕೂಡಿದೆ. 18-45 ವರ್ಷ ವಯಸ್ಸಿನವರಿಗೆ ಲಸಿಕೆ ಉಚಿತವಲ್ಲ, ಅವರು ಮಧ್ಯವರ್ತಿಗಳು ನಿಗಧಿಪಡಿಸುವ ಬೆಲೆ ಕೊಟ್ಟು ಖರೀದಿಸಬೇಕು. ಅಲ್ಲಿ ಬೆಲೆ ನಿಯಂತ್ರಣವು ಇರುವುದಿಲ್ಲ. ಹಾಗಾಗಿ ಸಮಾಜದ ಬಡವರು, ದುರ್ಬಲ ವರ್ಗದವರು ಲಸಿಕೆ ಗ್ಯಾರಂಟಿಯಿಂದ ದೂರವುಳಿಯಲಿದ್ದಾರೆ” ಎಂದು ಆರೋಪಿಸಿದ್ದಾರೆ.
• No free vaccines for 18-45 yr olds.
• Middlemen brought in without price controls.
• No vaccine guarantee for weaker sections.
GOI’s Vaccine Discrimination- Not Distribution- Strategy!
— Rahul Gandhi (@RahulGandhi) April 20, 2021
ಭಾರತವು ಜನವರಿ ಮಧ್ಯಭಾಗದಲ್ಲಿ ಲಸಿಕೆ ವಿತರಣೆ ಕಾರ್ಯಕ್ರಮ ಆರಂಭಿಸಿದೆ. ಮುಂಚೂಣಿ ಆರೋಗ್ಯ ಕಾರ್ಯಕರ್ತರು ಆಗ ಲಸಿಕೆ ತೆಗೆದುಕೊಂಡರೆ ಮಾರ್ಚ್‌ನಿಂದ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಈ ನಡುವೆ ಮೇ 1 ರಿಂದ 18-45 ವರ್ಷ ವಯಸ್ಸಿನವರಿಗೂ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಲಸಿಕೆ ಲಭ್ಯತೆಯಿಲ್ಲ ಎಂದ ಆರೋಪಗಳು ಸಹ ಈ ನಡುವೆ ಕೇಳಿಬಂದಿವೆ.
ಹೊಸ ತಂತ್ರದ ಪ್ರಕಾರ, ಲಸಿಕೆ ತಯಾರಕರು ತಮ್ಮ ಮಾಸಿಕ ಕೇಂದ್ರ ಔಷಧ ಪ್ರಯೋಗಾಲಯದ ಪ್ರಮಾಣಗಳಲ್ಲಿ 50% ಅನ್ನು ಕೇಂದ್ರಕ್ಕೆ ಪೂರೈಸುತ್ತಾರೆ ಮತ್ತು ಉಳಿದ 50% ಪ್ರಮಾಣವನ್ನು ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯಗಳಿಗೆ ಪೂರೈಸಲು ಅನುಮತಿಸಲಾಗುವುದು. ಖಾಸಗಿ ಮಧ್ಯವರ್ತಿಗಳು ಮುಕ್ತ ಮಾರುಕಟ್ಟೆಯಲ್ಲಿ ಮೀಸಲಿಟ್ಟ 50% ಪೂರೈಕೆಯಿಂದ ಪ್ರತ್ಯೇಕವಾಗಿ ಲಸಿಕೆ ಸಂಗ್ರಹಿಸಬೇಕಾಗುತ್ತದೆ ಮತ್ತು ಬೆಲೆ ನಿಗಧಿ ಮಾಡಬೇಕಿದೆ.
ಸರ್ಕಾರದ ಲಸಿಕೆ ಕಾರ್ಯತಂತ್ರವನ್ನು ರಾಹುಲ್ ಗಾಂಧಿ ನಿರಂತರವಾಗಿ ಟೀಕಿಸಿದ್ದಾರೆ. ವಿದೇಶದಿಂದ ಲಸಿಕೆ ಆಮದು ಮಾಡಿಕೊಳ್ಳಲು ಇರುವ ಷರತ್ತುಗಳನ್ನು ಕೈಬಿಡಬೇಕೆಂದು ಅವರು ಒತ್ತಾಯಿಸಿದ್ದರು. ಆರಂಭದಲ್ಲಿ ಅದನ್ನು ನಿರಾಕರಿಸಿದ ಕೇಂದ್ರ ಸರ್ಕಾರ ನಾಲ್ಕು ದಿನಗಳ ನಂತರ ಅದಕ್ಕೆ ಒಪ್ಪಿಗೆ ಸೂಚಿಸಿದೆ. ಸರ್ಕಾರ ದುರಂಹಕಾರ ಬಿಟ್ಟು ಸ್ಪಷ್ಟ ಲಸಿಕೆ ಕಾರ್ಯತಂತ್ರ ಮತ್ತು ಜನರಿಗೆ ಆರ್ಥಿಕ ಬಲ ತುಂಬವ ಕೆಲಸ ಮಾಡಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದರು.
ಇದನ್ನೂ ಓದಿ: ಕೇಂದ್ರದ ನಿಯಮ ಮೀರಿ ಲಸಿಕೆ ಪಡೆದ 23 ವರ್ಷದ ಬಿಜೆಪಿ ನಾಯಕನ ಸಂಬಂಧಿ?


