ಇದೊಂದು ಆಘಾತದ ಸುದ್ದಿ. ಜಿಲ್ಲೆಯೊಂದರ 132 ಗ್ರಾಮಗಳಲ್ಲಿ ಕಳೆದ ಮೂರು ತಿಂಗಳಲ್ಲಿ ಒಂದೇ ಒಂದು ಹೆಣ್ಣು ಕೂಸು ಜನಿಸಿಲ್ಲ!
ಉತ್ತರಪ್ರದೇಶದ ಉತ್ತರ ಕಾಶಿ ಜಿಲ್ಲೆಯಲ್ಲಿ ಇಂಥದ್ದೊಂದು ವಿದ್ಯಮಾನ ಬೆಳಕಿಗೆ ಬಂದಿದೆ. ಅಲ್ಲಿನ 132 ಹಳ್ಳಿಗಳಲ್ಲಿ ಕಳೆದ ಮೂರು ತಿಂಗಳಲ್ಲಿ 212 ಮಕ್ಕಳು ಜನಿಸಿದ್ದು ಎಲ್ಲವೂ ಗಂಡು ಶಿಶುಗಳೇ ಆಗಿದ್ದು, ಒಂದೇ ಒಂದು ಹೆಣ್ಣು ಶಿಶು ಇಲ್ಲದಿರುವುದು ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿ ಪ್ರಚಲಿತದಲ್ಲಿ ಇರುವುದಕ್ಕೆ ಸಾಕ್ಷಿಯಾಗಿದೆ.
ಈ ವರದಿ ಬಂದ ನಂತರ ಎಚ್ಚೆತ್ತುಕೊಂಡಿರುವ ಅಲ್ಲಿನ ಜಿಲ್ಲಾಡಳಿತವು ಆ 132 ಗ್ರಾಮಗಳನ್ನು ಕೆಂಪು ವಲಯ (ರೆಡ್ ಝೋನ್) ಪಟ್ಟಿಗೆ ಸೇರಿಸಿದ್ದು ಆಶಾ ಕಾರ್ಯಕರ್ತೆಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
2011ರ ಜನಗಣತಿಯ ಪ್ರಕಾರ ಉತ್ತರ ಕಾಶಿ ಜಿಲ್ಲೆಯಲ್ಲಿ 1,61,489 ಮಹಿಳೆಯರು ಮತ್ತು 1,68,597 ಪುರುಷರಿದ್ದರು. ಕಳವಳ ಮೂಡಿಸಿದ ಈ ಲಿಂಗಾನುಪಾತದ ಪರಿಣಾಮವಾಗಿ ಅಲ್ಲಿ ಲಿಂಗಾನುಪಾತ ಸುಧಾರಿಸಲು ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದ ಮೂರು ತಿಂಗಳಲ್ಲಿ ಉತ್ತರ ಕಾಶಿ ಜಿಲ್ಲೆಯ ದುಂಡಾ ಬ್ಲಾಕಿನ 27 ಹಳ್ಳಿಗಳಲ್ಲಿ 51 ಮಕ್ಕಳ ಜನನವಾಗಿದ್ದು ಒಂದೂ ಹೆಣ್ಣು ಶಿಶುವಿನ ಜನನವಾಗಿಲ್ಲ. ಭತ್ವಾರಿ ಬ್ಲಾಕ್ (27 ಗ್ರಾಮಗಳಲ್ಲಿ 49 ಜನನ), ನೌಗೌನ್ ಬ್ಲಾಕ್ (28 ಗ್ರಾಮಗಳಲ್ಲಿ 47 ಜನನ), ಮೋರಿ ಬ್ಲಾಕ್ (20 ಗ್ರಾಮಗಳಲ್ಲಿ 29 ಜನನ), ಚಿನ್ಯಾಲಿಪೌರ್ ಬ್ಲಾಕ್( 16 ಗ್ರಾಮಗಳಲ್ಲಿ 23 ಜನನ) ಮತ್ತು ಪುರೋಲಾ ಬ್ಲಾಕಿನಲ್ಲಿ 14 ಗ್ರಾಮಗಳಲ್ಲಿ 17 ಜನನಗಳಾಗಿದ್ದು ಒಂದೇ ಒಂದು ಹೆಣ್ಣು ಶಿಶು ಜನಿಸದಿರುವುದು ಆರೋಗ್ಯ ಇಲಾಖೆಯನ್ನು ಕಳವಳಕ್ಕೆ ದೂಡಿದೆ.

ಸದ್ಯ ಈ 132 ಗ್ರಾಮಗಳಲ್ಲಿನ ಚಟುವಟುಕೆಗಳ ಮೇಲೆ ನಿಗಾ ಇಡಲಾಗಿದ್ದು ಮುಂದಿನ ಆರು ತಿಂಗಳ ಬೆಳವಣಿಗೆಗಳ ಮೇಲೆ ಜಿಲ್ಲಾಡಳಿತ ಗಮನ ಹರಿಸಿದೆ. ಜನನ ಲಿಂಗಾನುಪಾತದಲ್ಲಿ ಸುಧಾರಣೆ ಆಗದಿದ್ದರೆ ಆಶಾ ಕಾರ್ಯಕರ್ತರನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.
ಇದು ಕಾಕತಾಳೀಯ ಇರಬಹುದು ಎಂದು ನಿರ್ಲಕ್ಷಿಸುವಂತಿಲ್ಲ ಎಂದಿರುವ ಜಿಲ್ಲಾಧಿಕಾರಿ ಅತೀಶ್ ಚೌಹಾಣ್, ಹೆಣ್ಣು ಭ್ರೂಣ ಹತ್ಯೆಗಳು ಜರುಗುತ್ತಿರವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
2015-17ರ ಅವಧಿಯಲ್ಲಿ ದೇಶದ ಜನನ ಲಿಂಗಾನುಪಾತ (ಪ್ರತಿ ಸಾವಿರ ಗಂಡು ಶಿಶುಗಳಿಗೆ ಹೆಣ್ಣು ಶಿಶುಗಳ ಸಂಖ್ಯೆ) ತೀವ್ರ ಕುಸಿತ ಕಂಡಿದ್ದು, ಈ ಅವಧಿಯಲ್ಲಿ ಅದು 897 ಇದೆ. ಇಷ್ಟು ಕಡಿಮೆ ಪ್ರಮಾಣದ ಜನನ ಲಿಂಗಾನುಪಾತ ಹಿಂದೆಂದೂ ಕಂಡುಬಂದಿರಲಿಲ್ಲ.
ಉತ್ತರಪ್ರದೇಶ, ರಾಜಸ್ಥಾನ್, ಬಿಹಾರ್, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ 2015-17ರಲ್ಲಿ ಜನನ ಲಿಂಗಾನುಪಾತದಲ್ಲಿ ತೀವ್ರ ಕುಸಿತ ಕಂಡು ಬಂದಿರುವುದನ್ನು ಇಲ್ಲಿ ಗಮನಿಸಬೇಕು.
(ಕೃಪೆ: ಟೈಮ್ಸ್ ಆಫ್ ಇಂಡಿಯಾ)


