Homeಬಹುಜನ ಭಾರತಯಾವ ಸರ್ಕಾರವೂ ದೇಶಕ್ಕಿಂತ ದೊಡ್ಡದಲ್ಲ. ನಾಯಕ ಜನತೆಗಿಂತ ದೊಡ್ಡವನಲ್ಲ: ಡಿ.ಉಮಾಪತಿ

ಯಾವ ಸರ್ಕಾರವೂ ದೇಶಕ್ಕಿಂತ ದೊಡ್ಡದಲ್ಲ. ನಾಯಕ ಜನತೆಗಿಂತ ದೊಡ್ಡವನಲ್ಲ: ಡಿ.ಉಮಾಪತಿ

- Advertisement -
- Advertisement -

ಆಡುವ ನುಡಿಗಳಿಗೆ ಸಾಧಕ ಬಾಧಕಗಳಿರುತ್ತವೆ. ಉಳಿದೆಲ್ಲರಿಗಿಂತ ಹೆಚ್ಚಾಗಿ ನಿತ್ಯ ಜನಸಮೂಹಗಳೊಂದಿಗೆ ಪ್ರತ್ಯಕ್ಷ-ಪರೋಕ್ಷ ಸಂವಾದದಲ್ಲಿ ತೊಡಗುವ ಜನಪ್ರತಿನಿಧಿಗಳಿಗೆ ಈ ಮಾತು ವಿಶೇಷವಾಗಿ ಅನ್ವಯಿಸುತ್ತದೆ. ಜನರಿಗೆ ಮತ್ತು ಜನರಿಂದ ರೂಪಿತವಾಗಿರುವ ಸಂವಿಧಾನದ ಆಶಯಗಳಿಗೆ ಅವರು ಬದ್ಧರಾಗಿರಬೇಕು. ಹಾಗೆಂದು ಶಾಸನಸಭೆ ಮತ್ತು ಸಂಸತ್ತಿನಲ್ಲಿ ನಿಂತು ಪ್ರಮಾಣವಚನ ಸ್ವೀಕರಿಸುತ್ತಾರೆ. ಪ್ರಮಾಣವಚನ ಸ್ವೀಕರಿಸಿದ ನಂತರವೇ ಅವರಿಗೆ ಶಾಸನಸಭೆಗಳು- ಸಂಸತ್ತಿನಲ್ಲಿ ಆಸನಗಳು ದೊರೆಯುತ್ತವೆ. ಮಾತಾಡುವ ಹಕ್ಕು ಲಭಿಸುತ್ತದೆ. ಸಂಬಳ-ಸಾರಿಗೆ-ಭತ್ಯೆಗಳು ಮತ್ತು ಸಂಸದೀಯ ಅಧಿಕಾರಗಳು ದತ್ತವಾಗುತ್ತವೆ. ಮಂತ್ರಿಗಳು ಈ ಪ್ರಮಾಣವಚನವನ್ನು ಎರಡು ಸಲ ಸ್ವೀಕರಿಸುತ್ತಾರೆ. ಸ್ಪೀಕರ್-ಸಭಾಪತಿ ರಾಜ್ಯಪಾಲರು- ರಾಷ್ಟ್ರಪತಿಯವರು ಬೋಧಿಸುವ ಈ ಶಪಥವನ್ನು ಬಹಿರಂಗವಾಗಿ ಬಾಯಲ್ಲಿ ನುಡಿದು ಆಡಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.

‘… ಎಂಬುವವನಾದ ನಾನು ದೇವರ- ಸತ್ಯನಿಷ್ಠೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತೇನೆ. ವಿಧಿ ದ್ವಾರಾ ಸ್ಥಾಪಿಸಲಾದ ಭಾರತದ ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತೇನೆ. ನಾನು ಭಾರತದ ಪ್ರಭುತೆ ಮತ್ತು ಅಖಂಡತೆಯನ್ನು ಕಾಪಾಡುತ್ತೇನೆ. ನನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ಮತ್ತು ಶುದ್ಧ ಅಂತಃಕರಣದಿಂದ ನಿರ್ವಹಿಸುತ್ತೇನೆ. ಭಯ ಅಥವಾ ಪಕ್ಷಪಾತ, ಅನುರಾಗ ಇಲ್ಲವೇ ದ್ವೇಷಗಳಿಲ್ಲದೆ, ಎಲ್ಲ ರೀತಿಯ ಜನರಿಗೆ ಸಂವಿಧಾನ ಮತ್ತು ವಿಧಿಯ ಅನುಸಾರ ನ್ಯಾಯ ಸಲ್ಲಿಸುತ್ತೇನೆ’ ಎಂಬುದಾಗಿ ಶಾಸಕರು- ಸಂಸದರು ಸ್ವೀಕರಿಸುವ ಪ್ರತಿಜ್ಞೆಯ ಜೊತೆಗೆ ಪ್ರಧಾನಮಂತ್ರಿ-ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಗೌಪ್ಯತೆಯ ಶಪಥವನ್ನೂ ಸ್ವೀಕರಿಸುತ್ತಾರೆ.

ಭಯ ಅಥವಾ ಪಕ್ಷಪಾತ ಅನುರಾಗ ಇಲ್ಲವೇ ದ್ವೇಷಗಳಿಲ್ಲದೆ ಶುದ್ಧ ಅಂತಃಕರಣದಿಂದ ತಮ್ಮ ಕರ್ತವ್ಯಗಳನ್ನು ಆಳುವ ಪಕ್ಷದ ಜನಪ್ರತಿನಿಧಿಗಳು ಮಂತ್ರಿಗಳು ಪ್ರಧಾನಮಂತ್ರಿ ನಿರ್ವಹಿಸುತ್ತಿದ್ದಾರೆಯೇ, ಭಾರತದ ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಒಮ್ಮೆ ಕೇಳಿಕೊಳ್ಳಬೇಕಿದೆ.

ಎಲ್ಲ ನೈತಿಕ ಎಲ್ಲೆಗಳನ್ನು ಎದೆ ಸೆಟೆಸಿ ಉಲ್ಲಂಘಿಸುವ ಭಂಡತನದಲ್ಲಿ ಪೈಪೋಟಿ ನಡೆಯತೊಡಗಿದೆ. ದ್ವೇಷ, ದ್ರುವೀಕರಣ ಹಾಗೂ ಹಿಂಸೆಗಳನ್ನು ಪ್ರಚೋದಿಸುವ ಪಂದ್ಯಗಳಲ್ಲಿ ತಾವು ಭಾಗವಹಿಸುತ್ತಿದ್ದೇವೆ ಎಂಬ ಭಾವನೆಯನ್ನು ಬಿಜೆಪಿಯಲ್ಲಿ ಮತ್ತು ಈ ಪಕ್ಷದ ಕಟ್ಟರ್‌ವಾದಿ ಬೆಂಬಲಿಗರಲ್ಲಿ ಉತ್ತೇಜಿಸಲಾಗುತ್ತಿದೆ. ಈ ನಾಚಿಕೆಗೇಡಿನಲ್ಲಿ ತೊಡಗಿದವರಿಗೆ ಇಂದಲ್ಲದಿದ್ದರೆ ನಾಳೆ ಪಕ್ಷ ಬಹುಮಾನಗಳನ್ನು ನೀಡಿ ಬೆನ್ನು ತಟ್ಟುತ್ತಿದೆ. ಶಾಹೀನ್‌ಬಾಗ್‌ನಲ್ಲಿ ಗುಂಡು ಹಾರಿಸಿರುವ ಭಯೋತ್ಪಾದಕರಿಗೂ ಮುಂದೊಂದು ದಿನ ಬಿಜೆಪಿ ಚುನಾವಣಾ ಟಿಕೆಟ್ ಗಳು ದೊರೆತರೆ ಚಕಿತರಾಗಬೇಕಿಲ್ಲ.

ಸಿ.ಎ.ಎ – ಎನ್.ಆರ್.ಸಿ. ವಿರುದ್ಧ ಶಾಂತಿಯುತ ಪ್ರತಿಭಟನೆ ಜರುಗುತ್ತಿರುವ ಶಾಹೀನ್‌ಬಾಗ್ ಅನ್ನು ಮಿನಿ ಪಾಕಿಸ್ತಾನ ಎಂದು ಕರೆಯುವುದು, ದೇಶ್ ಕೇ ಗದ್ದಾರೋಂ ಕೋ ಗೋಲೀ ಮಾರೋ ಸಾಲೋಂ ಕೋ ಎಂಬ ಘೋಷಣೆಗಳನ್ನು ಜನಸಭೆಗಳಲ್ಲಿ ಕೂಗಿಸುವುದು, ಎಷ್ಟು ಸಿಟ್ಟಿನಿಂದ ನೀವು ಚುನಾವಣಾ ಮತಯಂತ್ರದ ಗುಂಡಿ ಒತ್ತಬೇಕೆಂದರೆ ಅದರ ಆಘಾತ ಶಾಹೀನ್‌ಬಾಗ್‌ಗೆ ತಗುಲಬೇಕು ಎಂದು ಪ್ರಚೋದಿಸುವುದು, ಕಾಶ್ಮೀರದಲ್ಲಿ ಪಂಡಿತರನ್ನು ಹಿಂಸಿಸಿ ಬೆದರಿಸಿ ಓಡಿಸಿದಂತೆಯೇ ದೆಹಲಿಯಲ್ಲಿ ಶಾಹೀನ್‌ಬಾಗ್‌ನ ಪ್ರತಿಭಟನಕಾರರು ನಾಳೆ ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿ ಕೊಲ್ಲಬಹುದು ಎಂದು ಒಂದು ಜನಾಂಗದ ವಿರುದ್ಧ ಹೇವರಿಕೆ ಭಯ ದ್ವೇಷ ಹುಟ್ಟಿಸುವುದು, ಶಾಹೀನ್‌ಬಾಗ್ ಪ್ರತಿಭಟನೆಯ ಹಿಂದೆ ದೇಶವನ್ನು ಒಡೆಯುವ ಹುನ್ನಾರವಿದೆ ಎಂಬುವ ವಿಷ ಕಕ್ಕುವ ಮಾತುಗಳು ಬಿಜೆಪಿಯವು.

ಶಾಹೀನ್‌ಬಾಗ್ ನಲ್ಲಿ ಧರಣಿ ಕುಳಿತಿರುವ ಮಹಿಳೆಯರು ಮತ್ತು ಮಕ್ಕಳು ಸಾಯಬಾರದೇಕೆ, ಉತ್ತರಪ್ರದೇಶದಂತಹ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಸಿಎಎ ಪ್ರತಿಭಟನಾಕಾರರನ್ನು ನಾಯಿಗಳಂತೆ ಗುಂಡು ಹೊಡೆದು ಸಾಯಿಸಲಾಗಿದೆ ಎನ್ನುತ್ತಾರೆ. ತಮ್ಮ ಕಾರ್ಯಕರ್ತರು ಸಿಎಎ ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬಳನ್ನು ಬೆಂಬತ್ತಿ ಛೇಡಿಸುವುದನ್ನು ಬೆಂಬಲಿಸುತ್ತಾರೆ. ಅವಳ ಅದೃಷ್ಟ ಚೆನ್ನಾಗಿತ್ತು, ನಮ್ಮ ಕಾರ್ಯಕರ್ತರು ಆಕೆಯನ್ನು ಅಷ್ಟಕ್ಕೇ ಬಿಟ್ಟುಬಿಟ್ಟರು ಎನ್ನುತ್ತಾರೆ ದ್ವೇಷದ ಕಿಚ್ಚು ಹಚ್ಚುವ ನುಡಿಗಳು. ಕಪಿಲ್ ಮಿಶ್ರಾ ಎಂಬ ಪುಡಿ ಪುಢಾರಿಯಿಂದ ಹಿಡಿದು, ಸಂಸದ ಪ್ರವೇಶ್‌ವರ್ಮಾ, ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಕೇಂದ್ರ ಸರ್ಕಾರದ ಕಿರಿಯ ಮಂತ್ರಿ ಅನುರಾಗ್ ಠಾಕೂರ್, ದೇಶದ ಗೃಹಮಂತ್ರಿ ಅಮಿತ್ ಶಾ ಹಾಗೂ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಕೋಮುವಾದದ ಕಾಳ್ಗಿಚ್ಚನ್ನು ಹೊತ್ತಿಸುವ ಕೃತ್ಯದಲ್ಲಿ ತೊಡಗಿದ್ದಾರೆ. ಈ ದ್ವೇಷದ ಕಿಚ್ಚನ್ನು ಜನಮಾನಸದ ಎದೆಯಲ್ಲಿ ಹೊತ್ತಿಸಿ ದಾರಿ ತಪ್ಪಿಸುವ ಅಪಾಯಕಾರಿ ಆಟವಿದು. ಜನರನ್ನು ಒಡೆದು ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟಿ ಕೊಲ್ಲಿಸುವ ಆಟ. ಈ ಆಟದಲ್ಲಿ ಕಿಚ್ಚು ಹೊತ್ತಿಸುವವರು ಗೆಲ್ಲಬಹುದು, ಆದರೆ ದೇಶ ಸೋಲುತ್ತದೆ.

ಗೋಲಿ ಮಾರೋ ಸಾಲೋಂ ಕೋ ಎಂಬ ತಮ್ಮ ನಾಯಕರು ಕುಡಿಸಿರುವ ದ್ವೇಷದ ನಶೆಯನ್ನು ಏರಿಸಿಕೊಂಡಿರುವ ಯುವಕರು ಈಗಾಗಲೆ ಶಾಹೀನ್‌ಬಾಗ್‌ನಲ್ಲಿ ಗುಂಡು ಹಾರಿಸತೊಡಗಿದ್ದಾರೆ.

ಈ ಕಿಚ್ಚು ಇಷ್ಟಕ್ಕೇ ನಿಲ್ಲುತ್ತದೆಯೇ, ಪಕ್ಕದ ಮನೆ ಸುಟ್ಟರೆ, ಆ ಬೆಂಕಿ ಇಂದಲ್ಲ ನಾಳೆ ನನ್ನ ಮನೆಯನ್ನೂ ಸುಟ್ಟೀತಲ್ಲವೇ ಎಂಬ ಪ್ರಜ್ಞೆ ಮೂಡಬೇಕಿದೆ. ಚುನಾವಣೆಗಳಲ್ಲಿ ಗೆಲ್ಲುವ ಅಲ್ಪಕಾಲೀನ ತಂತ್ರ ಮಾತ್ರವಲ್ಲದೆ ಮತ್ತು ಕೇಸರಿ ಸೈದ್ಧಾಂತಿಕ ನೆಲೆಯ ಶಾಶ್ವತ ಸ್ಥಾಪನೆಗಾಗಿ ಮುಸ್ಲಿಮರು, ವಿದ್ಯಾರ್ಥಿಗಳು, ಸಾಮಾಜಿಕ ಹೋರಾಟಗಾರರು, ಉದಾರವಾದಿಗಳು, ಪ್ರಜ್ಞಾವಂತರು, ಕೇಂದ್ರ ಸರ್ಕಾರದ ನೀತಿ ನಿರ್ಧಾರಗಳನ್ನು ವಿರೋಧಿಸುವ ಯಾರೇ ಇರಲಿ, ಅವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ. ಅವರಿಗೆ ಗುಂಡು ಹೊಡೆಯಬೇಕೆಂದು ಕರೆ ನೀಡಲಾಗುತ್ತಿದೆ. ಈ ಕರೆಯನ್ನು ದೇಶದ ಪ್ರಧಾನಮಂತ್ರಿ- ಗೃಹಮಂತ್ರಿ ಪ್ರತ್ಯಕ್ಷ ಪರೋಕ್ಷವಾಗಿ ಸಮರ್ಥಿಸುತ್ತಿದ್ದಾರೆ. ಇನ್ನು ಬಂಧನ ಕೇಂದ್ರಗಳು ಆರಂಭ ಆಗತೊಡಗಿವೆ.

ವಿದ್ಯಾರ್ಥಿ ಪರಿಷತ್ತಿನ ಸಂಬಂಧವಿದ್ದ ಬಲಪಂಥೀಯ ಮುಸುಕುಧಾರಿಗಳು ಜೆ.ಎನ್.ಯು ಹಾಸ್ಟೆಲುಗಳ ನುಗ್ಗಿ ವಿದ್ಯಾರ್ಥಿಗಳನ್ನು ತಲೆ ಒಡೆದು ರಕ್ತ ಹರಿಸಿ ತಿಂಗಳೇ ಉರುಳಿತು. ಒಬ್ಬನೇ ಒಬ್ಬನನ್ನು ಪೊಲೀಸರು ಈವರೆಗೆ ಬಂಧಿಸಿಲ್ಲ. ಶಾಹೀನ್‌ಬಾಗ್‌ನಲ್ಲಿ ಗುಂಡು ಹಾರಿಸಿದ ಗೋಪಾಲ ಶರ್ಮನನ್ನು ಅಪ್ರಾಪ್ತ ವಯಸ್ಕನೆಂದು ಸಾರಿ ರಕ್ಷಿಸಲಾಗಿದೆ. ಅತ್ತ ಬೀದರಿನಲ್ಲಿ ಮನೆಗೆಲಸ ಮಾಡಿ ಹೊಟ್ಟೆ ಹೊರೆವ ಮುಸ್ಲಿಂ ತಾಯಿಯನ್ನು ದೇಶದ್ರೋಹದ ಆಪಾದನೆಯ ಮೇರೆಗೆ ಬಂಧಿಸಲಾಗಿದೆ. ಹೊರಗಿರುವ ಆಕೆಯ ಒಂಬತ್ತು ವರ್ಷದ ಮಗಳು ಈಗ ಏಕಾಂಗಿ. ಕಾಗದ ತೋರಿಸಬೇಕೆಂದು ತೋರಿಸುವವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು ಎಂಬ ಮಾತು ಇರುವ ನಾಟಕ ಆಡಿಸಿದರೆಂದು ಅಲ್ಪಸಂಖ್ಯಾತ ಶಾಲೆಯೊಂದರ ಮಕ್ಕಳನ್ನು ಪೊಲೀಸರು ಪ್ರಶ್ನಿಸತೊಡಗಿದ್ದಾರೆ. ಗೋಲಿ ಮಾರೋ ಸಾಲೋಂ ಕೋ ಎಂಬುದಾಗಿ ಪ್ರಚೋದಿಸುವವರ ಮೇಲೆ ಕನಿಷ್ಠ ಎಫ್.ಐ.ಆರ್ ಕೂಡ ಇಲ್ಲ.

ನಾಜಿ ಜರ್ಮನಿಯ ಇತಿಹಾಸ ಭಾರತದಲ್ಲಿ ಸುರುಳಿ ಬಿಚ್ಚತೊಡಗಿದೆ. ಅನುಮಾನವೇ ಇಲ್ಲ, ಇದು ದೀರ್ಘ ಇರುಳು. ಆದರೆ ನೆನಪಿಡೋಣ ಯಾವ ಸರ್ಕಾರವೂ ದೇಶಕ್ಕಿಂತ ದೊಡ್ಡದಲ್ಲ. ನಾಯಕ ಅದೆಷ್ಟೇ ಪ್ರಚಂಡನಾದರೂ ಜನತೆಗಿಂತ ದೊಡ್ಡವನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...