“ಸಾಗರೋತ್ತರ ಪಿತೂರಿ”ಯ ತನಿಖೆಯು ಗ್ರೇಟಾ ಥನ್‌ಬರ್ಗ್ ವಿರುದ್ಧವಲ್ಲ, ಆದರೆ ಅವರು ಹಂಚಿಕೊಂಡ ಟೂಲ್‌ಕಿಟ್ ಸಿದ್ಧಪಡಿಸಿದವರ ವಿರುದ್ಧ. “ಖಲಿಸ್ತಾನಿ ಗುಂಪು” ಒಂದಕ್ಕೆ ಇದು ಸಂಬಂಧಿಸಿದ್ದು ಎಂಬ ಅನುಮಾನವಿದೆ ಎಂದು ದೆಹಲಿ ಪೊಲೀಸರು ಗುರುವಾರ ಹೇಳಿದ್ದಾರೆ.
“ಜನವರಿ 26 ರ ಕೆಂಪೊಕೋಟೆ ಹಿಂಸಾಚಾರದ ಹಿಂದಿನ ಪಿತೂರಿಯ ಕಾರ್ಯಸೂಚಿಯನ್ನು ವಿವರಿಸುವ ಟೂಲ್‌ಕಿಟ್ ಡಾಕ್ಯುಮೆಂಟ್ ಅನ್ನು ದೆಹಲಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಭಾರತದ ವಿರುದ್ಧ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಯುದ್ಧವನ್ನು ನಡೆಸುವುದು ಇದರ ಉದ್ದೇಶವಾಗಿದೆ” ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ ಪ್ರವೀರ್ ರಂಜನ್ ತಿಳಿಸಿದ್ದಾರೆ.
ಆದರೆ, ಥನ್‌ಬರ್ಗ್ ಹಳೆಯ ಟೂಲ್‌ಕಿಟ್ ಡಿಲೀಟ್ ಮಾಡಿ, ನವೀಕೃತ ಟೂಲ್‌ಕಿಟ್ ಹಂಚಿಕೊಂಡಿದ್ದು, ಅದರಲ್ಲಿ ಜನವರಿ 26ರ ಪ್ರಸ್ತಾಪವಿಲ್ಲ.
‘ಭಾರತ ಸರ್ಕಾರದ ವಿರುದ್ಧ ಅಸಮಾಧಾನವನ್ನು ಹರಡುವ ಯತ್ನಕ್ಕಾಗಿ ಒಂದು ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದೇವೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಧಾರದ ಮೇಲೆ ಗುಂಪುಗಳ ನಡುವೆ ವೈಮನಸ್ಯ ಮೂಡಿಸುವ ಕ್ರಿಮಿನಲ್ ಪಿತೂರಿ ಇದಾಗಿದೆ” ಎಂದು ಅಧಿಕಾರಿ ಹೇಳಿದ್ದಾರೆ.
18 ವರ್ಷದ ಗ್ರೆಟಾ ಥನ್‌ಬರ್ಗ್‌ರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆಯೇ ಎಂದು ಕೇಳಿದಾಗ, “ನಾವು ಎಫ್‌ಐಆರ್‌ನಲ್ಲಿ ಯಾರನ್ನೂ ಹೆಸರಿಸಿಲ್ಲ. ಇದು ಟೂಲ್‌ಕಿಟ್‌ನ ಸೃಷ್ಟಿಕರ್ತರ ವಿರುದ್ಧ ಮಾತ್ರ” ಎಂದು ಅವರು ಉತ್ತರಿಸಿದ್ದಾರೆ.
ಟೂಲ್‌ಕಿಟ್ ಅನ್ನು ಯಾರು ಹಂಚಿಕೊಂಡಿದ್ದಾರೆಂದು ಸೂಚಿಸಲು ವರದಿಗಾರರು ಒತ್ತಾಯಿಸಿದಾಗ, “ನಿಮಗೆ ಇದರ ಬಗ್ಗೆ ತಿಳಿದಿದೆ, ನಾನು ಅದನ್ನು ಇಲ್ಲಿ ಹೆಸರಿಸಲು ಬಯಸುವುದಿಲ್ಲ” ಎಂದು ರಂಜನ್ ಹೇಳಿದ್ದಾರೆ.
ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಗ್ರೇಟಾ ಥನ್‌ಬರ್ಗ್ ಬುಧವಾರ ಸಂಜೆ “ಟೂಲ್‌ಕಿಟ್” ಅನ್ನು ಟ್ವೀಟ್ ಮಾಡಿದ್ದರು, ಆದರೆ ಇದು ಕಳೆದ ವಾರ ನಡೆದ ಗಣರಾಜ್ಯೋತ್ಸವದ ಪ್ರತಿಭಟನೆಯ ಮೇಲೆ ಕೇಂದ್ರೀಕೃತವಾಗಿತ್ತು. ಸ್ವಲ್ಪ ಸಮಯದ ನಂತರ ಆ ಪೋಸ್ಟ್ ಡಿಲೀಟ್ ಮಾಡಿ, ಗುರುವಾರ ಬೆಳಿಗ್ಗೆ, ಹೊಸ ಟೂಲ್‌ಕಿಟ್ ಅನ್ನು ಪೋಸ್ಟ್ ಮಾಡಿದ್ದರು. ಹೊಸ ಟೂಲ್‌ಕಿಟ್ ಫೆಬ್ರವರಿ 13 ಮತ್ತು 14 ರಂದು ಪ್ರಪಂಚಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
‘ತನ್ನನ್ನು “ಪೊಯೆಟಿಕ್ ಜಸ್ಟೀಸ್ ಫೌಂಡೇಶನ್” ಎಂದು ಕರೆದುಕೊಳ್ಳುವ ಖಲಿಸ್ತಾನಿ ಗುಂಪು ಈ ಟೂಲ್‌ಕಿಟ್ ಸೃಷ್ಟಿಸಿದೆ ಎಂಬ ಮಾಹಿತಿಯಿದೆ’ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
“ನೀವು ಜನವರಿ 26 ರ ಘಟನೆಗಳನ್ನು ನೋಡಿದರೆ ಅದು ಟೂಲ್‌ಕಿಟ್‌ನ ಕ್ರಿಯಾ ಯೋಜನೆಯ ಕಾಪಿ ಕ್ಯಾಟ್ ಎಂಬುದನ್ನು ಬಹಿರಂಗಪಡಿಸುತ್ತದೆ. ಇದು ದೆಹಲಿ ಪೊಲೀಸರಿಗೆ ಕಳವಳಕಾರಿ ಸಂಗತಿಯಾಗಿದೆ. ಖಂಡಿತವಾಗಿಯೂ ಟೂಲ್‌ಕಿಟ್‌ನ ಸೃಷ್ಟಿಕರ್ತರ ಉದ್ದೇಶವು ವಿವಿಧ ಸಾಮಾಜಿಕ , ಧಾರ್ಮಿಕ ಗುಂಪುಗಳ ನಡುವೆ ವೈಮನಸ್ಸು ಮೂಡಿಸುವುದಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ,
ನಿನ್ನೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಗ್ರೇಟಾ ಥನ್‌ಬರ್ಗ್, “ನಾನು ಇನ್ನೂ ರೈತರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುತ್ತೇನೆ. ಯಾವುದೇ ರೀತಿಯ ದ್ವೇಷ, ಬೆದರಿಕೆಗಳು ಅಥವಾ ಮಾನವ ಹಕ್ಕುಗಳ ಉಲ್ಲಂಘನೆಗಳು ಅದನ್ನು ಎಂದಿಗೂ ಬದಲಾಯಿಸುವುದಿಲ್ಲ’ ಎಂದಿದ್ದರು.
ಕಳೆದ ಎರಡು ದಿನಗಳಿಂದ ರೈತ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ ಹಲವಾರು ಅಂತರರಾಷ್ಟ್ರೀಯ ವ್ಯಕ್ತಿಗಳಲ್ಲಿ ಈ ಯುವ ಪರಿಸರ ಕಾರ್ಯಕರ್ತೆ ಕೂಡ ಸೇರಿದ್ದಾರೆ. ಈ ಬೆಂಬಲದಿಂದ ಕೇಂದ್ರವು ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ನವೆಂಬರ್ ಅಂತ್ಯದಲ್ಲಿ ಪ್ರಾರಂಭವಾದ ಆಂದೋಲನಕ್ಕೆ ಜಾಗತಿಕ ಮನ್ನಣೆ ಪ್ರಾಪ್ತವಾಗಿದ್ದು, ಭಾರತ ಸರ್ಕಾರಕ್ಕೆ ಜಾಗತಿಕ ಮಟ್ಟದಲ್ಲಿ ಇರಿಸುಮುರಿಸು ಉಂಟಾಗಿದೆ.
ಟ್ವಿಟರ್‌ನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದಿರುವ ಪಾಪ್ ತಾರೆ ರಿಹಾನ್ನಾ ಅವರ ಪೋಸ್ಟ್‌ನೊಂದಿಗೆ ಮಂಗಳವಾರ ಸಂಜೆ ಇದು ಪ್ರಾರಂಭವಾಯಿತು. ಹಲವಾರು ಅಮೆರಿಕ ಜನಪ್ರತಿನಿಧಿಗಳು ಮತ್ತು ಇತರರು ಇದನ್ನು ಅನುಸರಿಸುತ್ತಿದ್ದಂತೆ, ಸರ್ಕಾರವು “ಸಂವೇದನಾಶೀಲ ಸಾಮಾಜಿಕ ಮಾಧ್ಯಮ ಹ್ಯಾಶ್‌ಟ್ಯಾಗ್‌ಗಳು ಮತ್ತು ಕಾಮೆಂಟ್‌ಗಳ ಪ್ರಲೋಭನೆ” ವಿರುದ್ಧ ಎಚ್ಚರಿಕೆ ನೀಡಿ ಪ್ರಕಟಣೆ ಹೊರಡಿಸಿತ್ತು.
ಇದನ್ನೂ ಓದಿ: ಜಾಗತಿಕ ಐಕಾನ್ ಗ್ರೇಟಾ ಥನ್‌ಬರ್ಗ್ ವಿರುದ್ಧ FIR – ಸ್ವಾಗತ ಕೋರಿದ ಕನ್ಹಯ್ಯಾ!



Yes it is bad