ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ರೇಡಿಯೋ ಭಾಷಣದ ಕಾರ್ಯಕ್ರಮದಲ್ಲಿ ಮಣಿಪುರದ ಹಿಂಸಾಚಾರ ಕುರಿತು ಮಾತನಾಡದಿರುವುದನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿದೆ.
ಮಣಿಪುರದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಮೈತಿ ಮತ್ತು ಕುಕಿ ಸಮುದಾಯದ ಜನರ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 115 ಜನರು ಪ್ರಾಣ ಕಳೆದುಕೊಂಡಿದ್ದು, 60 ಸಾವಿರ ಮಂದಿ ನೆಲೆ ಕಳೆದುಕೊಂಡಿದ್ದಾರೆ. ಸಚಿವರ ಮನೆಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಶಾಂತಿ ಪುನರ್ ಸ್ಥಾಪನೆಗೆ ಭಾರತೀಯ ಸೇನೆ ಸೇರಿದಂತೆ 40 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಮೊಕ್ಕಾಂ ಹೂಡಿದ್ದು, ಸಂಘರ್ಷ ನಿಯಂತ್ರಣಕ್ಕೆ ಹರಸಾಹಸಪಡುತ್ತಿದ್ದಾರೆ. ಪ್ರತಿನಿತ್ಯ ಒಂದಿಲ್ಲೊಂದು ಹಿಂಸಾಚಾರದ ಘಟನೆಗಳು ನಡೆಯುತ್ತಲೇ ಇವೆ.
ಪ್ರಧಾನಿ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ರೇಡಿಯೋ ಭಾಷಣದ ವೇಳೆ ಮಣಿಪುರ ಹಿಂಸಾಚಾರದ ಬಗ್ಗೆ ಮಾತನಾಡಲಿಲ್ಲ. ಹಾಗಾಗಿ ಅವರ ಭಾಷಣ ಮುಕ್ತಾಯಗೊಂಡ ಕೂಡಲೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯೊಂದನ್ನು ನೀಡಿ, ”ಪ್ರಧಾನಿಯ ರೇಡಿಯೋ ಭಾಷಣವು ‘ಮಣಿಪುರಿ ಕಿ ಬಾತ್’ ಅನ್ನು ಕೂಡಾ ಒಳಗೊಳ್ಳಬೇಕಿತ್ತು ಎಂದು ಹೇಳಿದ್ದಾರೆ. ”ಮಣಿಪುರದ ಪರಿಸ್ಥಿತಿ ಅತ್ಯಂತ ಘೋರವಾಗಿದೆ ಹಾಗೂ ಅತ್ಯಂತ ಕಳವಳಕಾರಿಯಾಗಿದೆ. ಆದರೆ ಆ ಬಗ್ಗೆ ನೀವು ಒಂದೇ ಒಂದು ಮಾತನ್ನೂ ಆಡಿಲ್ಲ. ಒಂದೇ ಒಂದು ಸಭೆಯನ್ನೂ ನಡೆಸಿಲ್ಲ” ಎಂದು ಹರಿಹಾಯ್ದರು.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಅಪ್ರಚೋದಿತ ಗುಂಡಿನ ದಾಳಿ; ಯೋಧನಿಗೆ ಗಾಯ
”ಇನ್ನೂ ಕೂಡಾ ಮಣಿಪುರದ ಸರ್ವ ಪಕ್ಷ ನಿಯೋಗವನ್ನು ಭೇಟಿಯಾಗಿಲ್ಲ. ನಿಮ್ಮ ಸರಕಾರವು ಮಣಿಪುರವನ್ನು ಭಾರತದ ಭಾಗವೆಂದು ಪರಿಗಣಿಸಿಲ್ಲವೆಂಬಂತೆ ಕಾಣುತ್ತದೆ. ಇದು ಒಪ್ಪತಕ್ಕದ್ದಲ್ಲ. ಮಣಿಪುರ ಹೊತ್ತಿ ಉರಿಯುತ್ತಿರುವಾಗ ನಿಮ್ಮ ಸರಕಾರವು ಗಾಢನಿದ್ದೆಯಲ್ಲಿದೆ” ಎಂದು ಖರ್ಗೆ ಟೀಕಿಸಿದ್ದಾರೆ.
ರಾಜಧರ್ಮವನ್ನು ಪಾಲಿಸುವಂತೆ ಪ್ರಧಾನಿಯನ್ನು ಕೇಳಿಕೊಂಡಿರುವ ಖರ್ಗೆ, ಶಾಂತಿಯನ್ನು ಕದಡುವವರ ವಿರುದ್ಧ ದೃಢವಾಗಿ ಕಾರ್ಯಾಚರಿಸುವಂತೆ ಸೂಚಿಸಿದ್ದಾರೆ. ಪೌರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿಯನ್ನು ಮರುಸ್ಥಾಪಿಸಬೇಕು ಹಾಗೂ ಸರ್ವಪಕ್ಷ ನಿಯೋಗವು ರಾಜ್ಯವನ್ನು ಸಂದರ್ಶಿಸಲು ಅನುಮತಿ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ”ಮತ್ತೊಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಮಣಿಪುರದ ಬಗ್ಗೆ ಮೌನ ವಹಿಸಿದ್ದಾರೆ. ವಿಪತ್ತು ನಿರ್ವಹಣೆಯಲ್ಲಿ ಭಾರತದ ಶ್ರೇಷ್ಠ ಸಾಮರ್ಥ್ಯಗಳಿಗಾಗಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ಪ್ರಧಾನಿ, ಮಣಿಪುರ ಎದುರಿಸುತ್ತಿರುವ ಸಂಪೂರ್ಣ ಮಾನವ ನಿರ್ಮಿತ ಮಾನವೀಯ ದುರಂತದ ಬಗ್ಗೆ ಏನು? ಎಂದು ಪ್ರಶ್ನಿಸಿದ್ದಾರೆ.
So one more Mann ki Baat but Maun on Manipur. The PM patted himself on the back for India's great capabilities in disaster management. What about the entirely man-made (actually self-inflicted) humanitarian disaster that is confronting Manipur. Still no appeal for peace from him.…
— Jairam Ramesh (@Jairam_Ramesh) June 18, 2023
”ಇನ್ನೂ ಶಾಂತಿ ಕಾಪಾಡುವಂತೆ ಪ್ರಧಾನಿ ಮನವಿ ಮಾಡಿಲ್ಲ. ಲೆಕ್ಕಪರಿಶೋಧನೆ ಮಾಡಲಾಗದ ಪಿಎಂ-ಕೇರ್ಸ್ ಫಂಡ್ ಇದೆ ಆದರೆ ಪ್ರಧಾನಿ ಮಣಿಪುರದ ಬಗ್ಗೆ ಕಾಳಜಿ ವಹಿಸುತ್ತಾರೆಯೇ? ಎಂಬುದು ನಿಜವಾದ ಪ್ರಶ್ನೆ” ಎಂದಿದ್ದಾರೆ.
ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ಜನರ ಗುಂಪೊಂದು ರೇಡಿಯೋ ಸೆಟ್‌ಗಳನ್ನು ಮುರಿದುಹಾಕುವ ಮೂಲಕ ಪ್ರತಿಭಟನೆ ನಡೆಸುತ್ತಿರುವ ದೃಶ್ಯದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಯಾಕೆ ಮನ್ ಕಿ ಬಾತ್‌ನಲ್ಲಿ ಮಾತನಾಡದಿರುವುದನ್ನು ವಿರೋಧಿಸಿ, ಈ ಪ್ರತಿಭಟನೆ ನಡೆದಿದೆ ಎನ್ನಲಾಗುತ್ತಿದೆ.


