39 ಜೀವಗಳನ್ನು ಬಲಿ ಪಡೆದ ಕರೂರು ಕಾಲ್ತುಳಿತ ದುರಂತದ ಬಗ್ಗೆ ಯಾವುದೇ ರಾಜಕೀಯ ಹೇಳಿಕೆ ನೀಡುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಭಾನುವಾರ (ಸೆ.28) ಹೇಳಿದ್ದಾರೆ.
ನಿವೃತ್ತ ಹೈಕೋರ್ಟ್ ನ್ಯಾಯಾಧೀಶೆ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದ ತನಿಖಾ ಆಯೋಗದ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸ್ಟಾಲಿನ್, “ನಾನು ಯಾವುದೇ ರಾಜಕೀಯ ಹೇಳಿಕೆ ನೀಡಲು ಬಯಸುವುದಿಲ್ಲ. ಯಾವುದೇ ಕ್ರಮವು ತನಿಖಾ ಆಯೋಗದ ವರದಿ ಆಧರಿಸಿರುತ್ತದೆ” ಎಂದಿದ್ದಾರೆ.
ದುರಂತದ ಪ್ರಾಥಮಿಕ ವರದಿ, ನಟ-ರಾಜಕಾರಣಿ ವಿಜಯ್ ಅವರ ಬಂಧನದ ಬಗ್ಗೆ ಊಹಾಪೋಹಗಳು, ಕಾರ್ಯಕ್ರಮದ ಪೊಲೀಸ್ ಅನುಮತಿ ಮತ್ತು ಜನಸಂದಣಿ ನಿಯಂತ್ರಣದ ಕುರಿತು ಸಾಮಾಜಿಕ ಮಾಧ್ಯಮಗಳ ಟೀಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಅವರು ಮೇಲಿನಂತೆ ಉತ್ತರಿಸಿದ್ದಾರೆ.
ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸ್ಟಾಲಿನ್, ಗಾಯಾಳುಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ವೈದ್ಯರು 26 ಪುರುಷರು ಮತ್ತು 25 ಮಹಿಳೆಯರು ಸೇರಿ 51 ಜನರು ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಎಂಗೆ ಮಾಹಿತಿ ನೀಡಿದ್ದಾರೆ.
“ರಾಜಕೀಯ ಪಕ್ಷ ನಡೆಸಿದ ಕಾರ್ಯಕ್ರಮದಿಂದಾಗಿ ಜನರು ಪ್ರಾಣ ಕಳೆದುಕೊಂಡರು. ಇದು ಮತ್ತೆ ಎಲ್ಲಿಯೂ ಸಂಭವಿಸಬಾರದು” ಎಂದು ಸಿಎಂ ಸ್ಟಾಲಿನ್ ‘ತಮಿಳಗ ವೆಟ್ರಿ ಕಳಗಂ (ಟಿವಿಕೆ)’ ಪಕ್ಷದ ಹೆಸರನ್ನು ಉಲ್ಲೇಖಿಸದೆ ಹೇಳಿದ್ದಾರೆ.
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 1ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ಶನಿವಾರ ರಾತ್ರಿ ಘೋಷಿಸಿದ್ದನ್ನು ಪುನರುಚ್ಚರಿಸಿದ್ದಾರೆ.
ಕಾಲ್ತುಳಿತ ದುರಂತದ ತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ಏಕಸದಸ್ಯ ತನಿಖಾ ಆಯೋಗದ ಮುಖ್ಯಸ್ಥರಾಗಿ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ಅವರನ್ನು ನೇಮಿಸಲಾಗಿದೆ. ಅರುಣಾ ಜಗದೀಶನ್ ಅವರು ಈ ಹಿಂದೆ ಸಾತಂಕುಲಂ ಕಸ್ಟಡಿ ಸಾವಿನ ತನಿಖೆಯ ನೇತೃತ್ವ ವಹಿಸಿದ್ದರು.
ಕರೂರು ಕಾಲ್ತುಳಿತ | ಮೃತರ ಸಂಖ್ಯೆ 39ಕ್ಕೆ ಏರಿಕೆ; ತನಿಖೆಗೆ ಆಯೋಗ ರಚಿಸಿದ ಸಿಎಂ ಸ್ಟಾಲಿನ್


