ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಬುಧವಾರ(11) ರಾಜ್ಯಸಭೆಗೆ ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2005ರ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74, 75, 76 ಮತ್ತು 85ರ ಅಡಿಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾನೂನು ಪರಿಹಾರಗಳನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ವಿನಾಯಿತಿ 2 ರ ಪ್ರಕಾರ ಪುರುಷನು ತನ್ನ ಹೆಂಡತಿಯೊಂದಿಗೆ ಬಲವಂತದ ಲೈಂಗಿಕ ಸಂಭೋಗ ನಡೆಸುವಾಗ,ಆಕೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿರದಿದ್ದರೆ ಅದು ಅತ್ಯಾಚಾರವಲ್ಲ. ಸೆಕ್ಷನ್ 375 ಅತ್ಯಾಚಾರದ ಅಪರಾಧವನ್ನು ವ್ಯಾಖ್ಯಾನಿಸುತ್ತದೆ. ಈ ನಿಬಂಧನೆಯು ಈಗ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 63 ರ ಅಡಿಯಲ್ಲಿ ಬರುತ್ತದೆ. ಜುಲೈ 1,2024ರಿಂದ ಭಾರತೀಯ ದಂಡ ಸಂಹಿತೆಯ ಬದಲಾಗಿ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬಂದಿದೆ.
ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ 2013ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ವೈವಾಹಿಕ ಲೈಂಗಿಕ ಸಂಬಂಧದ ಒಪ್ಪಿಗೆಯ ವಯಸ್ಸನ್ನು 18 ಕ್ಕೆ ಹೆಚ್ಚಿಸಿದೆ. ಮಕ್ಕಳ ಹಕ್ಕುಗಳ ಸಂಸ್ಥೆ ಇಂಡಿಪೆಂಡೆಂಟ್ ಥಾಟ್ ವಿನಾಯಿತಿ 2 ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿತ್ತು. ಈ ನಿಬಂಧನೆಯು 15 ರಿಂದ 18 ವರ್ಷ ವಯಸ್ಸಿನ ವಿವಾಹಿತ ಹುಡುಗಿಯರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಿತ್ತು.
ಕ್ರಿಮಿನಲ್ ಕೋಡ್ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74 ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆಯ ಬಗ್ಗೆ ವಿವರಿಸುತ್ತದೆ. ಸೆಕ್ಷನ್ 75 ಲೈಂಗಿಕ ಕಿರುಕುಳದ ಬಗ್ಗೆ ತಿಳಿಸುತ್ತದೆ. ಸೆಕ್ಷನ್ 76 ಆಕ್ರಮಣಕ್ಕಾಗಿ ಶಿಕ್ಷೆ ಮತ್ತು ವಸ್ತ್ರಾಪಹರಣ ಮಾಡುವ ಉದ್ದೇಶದಿಂದ ಕ್ರಿಮಿನಲ್ ಬಲವನ್ನು ಬಳಸುವುದಕ್ಕೆ ಸಂಬಂಧಿಸಿದೆ ಮತ್ತು ಸೆಕ್ಷನ್ 85 ಮಹಿಳೆಯ ಮೇಲೆ ಆಕೆಯ ಪತಿ ಅಥವಾ ಅವನ ಸಂಬಂಧಿಯಿಂದ ನಡೆದ ಕ್ರೌರ್ಯಕ್ಕಾಗಿ ಶಿಕ್ಷೆಯ ಬಗ್ಗೆ ವಿವರಿಸುತ್ತದೆ.
ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ಅಕ್ಟೋಬರ್ 2ರಂದು ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸರ್ಕಾರ ಮದುವೆಯೆಂಬ ಸಾಂಸ್ಥಿಕ ವ್ಯವಸ್ಥೆಯಲ್ಲಿ ಒಪ್ಪಿತವಲ್ಲದ ಲೈಂಗಿಕ ಸಂಬಂಧವನ್ನು ಅತ್ಯಾಚಾರದ ಅಪರಾಧವಾಗಿ ಪರಿಗಣಿಸುವುದು ‘ಅತಿ ಕಠಿಣ’ನಿಲುವು ಎಂದಿತ್ತು. ಬಲವಂತದ ಲೈಂಗಿಕ ಕ್ರಿಯೆಯನ್ನು ವೈವಾಹಿಕ ಜೀವನದ ಒಳಗೆ ಮತ್ತು ಹೊರಗೆ ಭಿನ್ನವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿತ್ತು.
ಇದನ್ನೂ ಓದಿ :


