Homeಮುಖಪುಟಮೈಕ್ರೋ ಆರ್‌ಎನ್‌ಎ ಸಂಶೋಧನೆಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಮೈಕ್ರೋ ಆರ್‌ಎನ್‌ಎ ಸಂಶೋಧನೆಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

- Advertisement -
- Advertisement -

ಕೋವಿಡ್-19 ಸಾಂಕ್ರಾಮಿಕವನ್ನು ತಡೆಗಟ್ಟಲು ಹಲವು ರೀತಿಯ ಲಸಿಕೆಗಳು ತಯಾರಾದವು. ಅವುಗಳಲ್ಲೊಂದು ಎಂಆರ್‌ಎನ್‌ಎ ಲಸಿಕೆ (mRNA vaccine). ಅಂತಹ ವಿಧಾನದಲ್ಲಿ ಎಂಆರ್‌ಎನ್‌ಎ (mRNA:messenger RNA) ತಂತ್ರಜ್ಞಾನವನ್ನು ಬಳಸಿಕೊಳ್ಳಲಾಯಿತು. ಆ ತಂತ್ರಜ್ಞಾನವನ್ನು ಮೊದಲೇ ಶೋಧಿಸಿಕೊಟ್ಟಿದ್ದ ವಿಜ್ಞಾನಿಗಳಾದ ಡ್ರ್ಯೂ ವೈಸ್‌ಮ್ಯಾನ್ ಮತ್ತು ಕ್ಯಾಟಲಿನ್ ಕ್ಯಾರಿಕೋ ಅವರಿಗೆ 2023ರ ಶರೀರಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯ ವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಕೊಡಲಾಯಿತು.

ಈ ವರ್ಷ, 2024ರ ಶರೀರಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯ ವಿಜ್ಞಾನದ ನೊಬೆಲ್ ಪ್ರಶಸ್ತಿಯು ಮೈಕ್ರೋ ಆರ್‌ಎನ್‌ಎ (microRNA: miRNA) ಮತ್ತದರ ಕಾರ್ಯಗಳನ್ನು ಸಂಶೋಧಿಸಿದ ಅಮೆರಿಕದ ಮೆಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ವಿಕ್ಟರ್ ಆಂಬ್ರೋಸ್ ಮತ್ತು ಹಾರ್ವರ್ಡ್ ಮೆಡಿಕಲ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ಗ್ಯಾರಿ ರವ್ಕಿನ್ ಅವರಿಗೆ ನೀಡಲಾಗಿದೆ. ಪ್ರತಿಯೊಬ್ಬರಿಗೂ ಬಹುಮಾನದ ಮೊತ್ತವಾಗಿ ತಲಾ 11 ಲಕ್ಷ ಡಾಲರ್ (ಸುಮಾರು ರೂ. 9 ಕೋಟಿ 68 ಲಕ್ಷಗಳು) ಸಿಗಲಿದೆ. ಮೈಕ್ರೋ ಆರ್‌ಎನ್‌ಎವನ್ನು ಕಂಡುಹಿಡಿಯುವ ಮೂಲಕ ವಂಶವಾಹಿ ಕ್ರಿಯೆಗಳ ನಿಗ್ರಹಿಸುವಿಕೆಗೆ ಹೊಸ ಸಿದ್ಧಾಂತವನ್ನು ಇವರಿಬ್ಬರೂ ಕೊಟ್ಟಿದ್ದಾರೆ.

ಎಂಆರ್‌ಎನ್‌ಎ (ಮೆಸೆಂಜರ್ ರೈಬೋನ್ಯೂಕ್ಲಿಯಿಕ್ ಆಸಿಡ್: mRNA) ಮತ್ತು ಮೈಕ್ರೋ ಆರ್‌ಎನ್‌ಎ (ಮೈಕ್ರೋ ರೈಬೋನ್ಯೂಕ್ಲಿಯಿಕ್ ಆಸಿಡ್: miRNA) ಎರಡು ವಿಭಿನ್ನ ಆಣ್ವಿಕ (molecule)ಗಳಾಗಿವೆ ಎಂಬುದನ್ನು ಓದುಗರು ಮೊಟ್ಟಮೊದಲು ತಮ್ಮ ಗ್ರಹಿಕೆಗೆ ತಂದುಕೊಳ್ಳಬೇಕು. ಇನ್ನು miRNA ಆಣ್ವಿಕದ ಕಾರ್ಯವನ್ನು ಅರ್ಥೈಸಿಕೊಳ್ಳುವುದು ಕೂಡ ಸಾಮಾನ್ಯ ಓದುಗರಿಗೆ ತುಸು ಕಷ್ಟವೇ. ನೊಬೆಲ್ ಪ್ರಶಸ್ತಿ ದಕ್ಕಿಸಿಕೊಂಡ ಮೈಕ್ರೋ ಆರ್‌ಎನ್‌ಎ ಸಂಶೋಧನೆ ಮತ್ತದರ ಪ್ರಮುಖ ಕ್ರಿಯೆಗಳ ಕುರಿತು ಒಂದು ಸರಳ ಲೇಖನವಿದು.

ಸಾಮಾನ್ಯ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಶರೀರಕ್ರಿಯಾ ವಿಜ್ಞಾನ, ಸೂಕ್ಷ್ಮಜೀವಿ ವಿಜ್ಞಾನ, ರಸಾಯನ ವಿಜ್ಞಾನ, ತಳಿ ವಿಜ್ಞಾನ, ಆಣ್ವಿಕ ಜೀವವಿಜ್ಞಾನ ಮುಂತಾದ ವಿಜ್ಞಾನದ ವಿದ್ಯಾರ್ಥಿಗಳು ಒಂದು ಸಿದ್ಧಾಂತವನ್ನು ಅತ್ಯಗತ್ಯವಾಗಿ ಓದಿದವರೇ ಆಗಿರುತ್ತಾರೆ. ಅಂತಹ ಸಿದ್ಧಾಂತವನ್ನು ಆಣ್ವಿಕ ಜೀವವಿಜ್ಞಾನದ ಕೇಂದ್ರ ಸಿದ್ಧಾಂತ Central Dogma of Molecular Biology) ಎಂದು ಕರೆಯಲಾಗಿದೆ. Dogma ಎಂಬ ಪದದ ಅರ್ಥವನ್ನು ಕನ್ನಡದಲ್ಲಿ ’ಸಿದ್ಧಾಂತ’ ಅಥವಾ ’ತತ’ ಎಂಬರ್ಥದಲ್ಲಿ ಬಳಸಬೇಕಿದೆ. ನಾವೀಗ ಮಾಲೆಕ್ಯುಲಾರ್ ಬಯಾಲಜಿ ಅಥವಾ ಬಯೋಟೆಕ್ನಾಲಜಿ (ಗಮನಸಿ ಐಟಿಬಿಟಿಯಲ್ಲಿ ಬಿಟಿ ಎಂದರೆ ಬಯೋಟೆಕ್ನಾಲಜಿ) ಎಂಬ ಪರ್ವಕಾಲದಲ್ಲಿದ್ದೇವೆ.

ಈ ’ಸಿದ್ಧಾಂತ’ದಂತೆ ಪ್ರತಿ ಜೀವಕೋಶದ ನ್ಯೂಕ್ಲಿಯಸ್‌ನಲ್ಲಿ ಬಹುಮುಖ್ಯ ಕ್ರಿಯೆಯು ಅಬಾಧಿತವಾಗಿ ನಡೆಯುತ್ತದೆ. ಅಲ್ಲಿರುವ DNA ಆಣ್ವಿಕವು RNA ಆಣ್ವಿಕ ಆಗುವ ಪ್ರಕ್ರಿಯೆಯನ್ನು ಪ್ರತಿಲೇಖನ (Transcription) ಎಂತಲೂ, RNA ಆಣ್ವಿಕವು Protein (ಸಸಾರಜನಕ) ಆಗುವ ಪ್ರಕ್ರಿಯೆಯನ್ನು ಅನುವಾದ/ನಿರ್ಮಿತಿ (Translation) ಎಂತಲೂ ಕರೆಯಲಾಗಿದೆ. ಇದೇ ಆ ಸಿದ್ಧಾಂತ. ಈ ಜೀವಕ್ರಿಯೆಯಲ್ಲಿ ಸಸಾರಜನಕದ ಸಂಶ್ಲೇಷಣೆಯಲ್ಲಿ ಆರ್‌ಎನ್‌ಎದ ಒಂದು ವಿಧವಾದ ಎಂಆರ್‌ಎನ್‌ಎ (mRNA:messenger RNA) ಪಾಲ್ಗೊಳ್ಳುತ್ತದೆ. mRNA ಅನ್ನು ನಿಗ್ರಹಿಸುವ ಒಂದು ಆಣ್ವಿಕವೇ ಮೈಕ್ರೋಆರ್‌ಎನ್‌ಎ (microRNA: miRNA). ಈ miRNA ಸಂಶೋಧನೆಗೆ 2024ರ ನೊಬೆಲ್ ಪ್ರಶಸ್ತಿ ಸಂದಿದೆ. ಇನ್ನು ಮೇಲೆ ’ಆಣ್ವಿಕ ಜೀವವಿಜ್ಞಾನದ ಕೇಂದ್ರ ಸಿದ್ಧಾಂತ’ವನ್ನು ತರಗತಿಗಳಲ್ಲಿ ಬೋಧಿಸುವಾಗ ಅದರಲ್ಲಿ ಮೈಕ್ರೋಆರ್‌ಎನ್‌ಎ ಪಾತ್ರ ಕುರಿತು ಒತ್ತುಕೊಟ್ಟು ವಿವರಿಸಲೇಬೇಕಿದೆ.

ಪ್ರತಿ ಜೀವಕೋಶದಲ್ಲಿ ಸಸಾರಜನಕದ ಉತ್ಪತ್ತಿಯು ನಿತ್ಯ ನಿರಂತರ ಕ್ರಿಯೆ. ಅಲ್ಲಿ ಸಾವಿರಾರು ರೀತಿಯ ಸಸಾರಜನಕಗಳು ಉತ್ಪತ್ತಿಯಾಗುತ್ತಿರುತ್ತವೆ. ದೇಹದ ವಿವಿಧ ಜೀವಕೋಶಗಳಲ್ಲಿ ಬೇರೆಬೇರೆ ರೀತಿಯ ಸಸಾರಜನಕಗಳು ಉತ್ಪತ್ತಿಯಾಗುತ್ತವೆ. ಉದಾಹರಣೆಗೆ, ಜಠರ, ಮಾಂಸಖಂಡ, ನರವ್ಯೂಹ, ಯಕೃತ್ತು, ಕರುಳು ಮುಂತಾದ ಜೀವಕೋಶಗಳಲ್ಲಿ ವಿಭಿನ್ನ ರೀತಿಯ ಪ್ರೋಟೀನುಗಳು ತಯಾರಾಗುತ್ತವೆ. ಇದಕ್ಕೆ ಮೂಲಭೂತವಾಗಿ ಡಿಎನ್‌ಎ ಕಾರಣ. ಇದು ಜೀನ್ ನಿಗ್ರಹದಿಂದ ಸಾಧ್ಯವಾಗುತ್ತದೆ. ಈ ಜೀನ್ ಅಥವಾ ವಂಶವಾಹಿ ನಿಗ್ರಹದಲ್ಲಿ ಏರುಪೇರಾದರೆ ಕ್ಯಾನ್ಸರ್, ಮಧುಮೇಹ, ಹೃದ್ರೋಗ, ನರ ದೌರ್ಬಲ್ಯಗಳು, ದೇಹ ಪ್ರತಿರಕ್ಷಣೆ ಕ್ರಿಯೆಗಳ ವ್ಯತ್ಯಾಸ ಮುಂತಾದ ಕಾಯಿಲೆಗಳು ಉದ್ಭವಿಸುತ್ತವೆ.

ವಂಶವಾಹಿಗಳ ನಿಗ್ರಹ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿರಬೇಕು. ಇಂತಹ ನಿಗ್ರಹಿಸುವ ಆಣ್ವಿಕೆಯೊಂದರ ಸಂಶೋಧನೆಯ ಬೆಳಕಿಂಡಿಯಲ್ಲಿ ಕಂಡುಕೊಂಡ ಬೆಳಕೇ ಮೈಕ್ರೋ ಆರ್‌ಎನ್‌ಎ (miRNA). ಇದೊಂದು ಅತಿಸಣ್ಣ ಆರ್‌ಎನ್‌ಎ. ಇದೊಂದು ನಾನ್ ಕೋಡಿಂಗ್ ಆರ್‌ಎನ್‌ಎ. ಇದರ ಉದ್ದದಲ್ಲಿ ಕೇವಲ 19 ರಿಂದ 22 ನ್ಯೂಕ್ಲಿಯೋಟೈಡ್‌ಗಳು ಇರುತ್ತವೆ. ಆದರೆ, ಎಂಆರ್‌ಎನ್‌ಎನಲ್ಲಿ ನೂರರಿಂದ ಸಾವಿರ ಸಂಖ್ಯೆಯಷ್ಟು ನ್ಯೂಕ್ಲಿಯೋಟೈಡ್‌ಗಳಿರುತ್ತವೆ.

ಸೀನೋರಾಬ್ಡಿಟಿಸ್ ಎಲಿಗೆನ್ಸ್ ಎಂಬ ಮಾದರಿ ಜೀವಿಯಲ್ಲಿ ಅಧ್ಯಯನ

ಮೈಕ್ರೋ ಆರ್‌ಎನ್‌ಎ ಎಂದರೆ ಪುಟ್ಟ ಆರ್‌ಎನ್‌ಎ. ಇದನ್ನು ಆವಿಷ್ಕರಿಸಲು ಪ್ರೊ. ವಿಕ್ಟರ್ ಆಂಬ್ರೋಸ್ ಮತ್ತು ಪ್ರೊ. ಗ್ಯಾರಿ ರವ್ಕಿನ್ ಅವರು ಬಳಸಿಕೊಂಡಿದ್ದು ಸೀನೋರಾಬ್ಡಿಟಿಸ್ ಎಲಿಗೆನ್ಸ್ (Caenorhabditis elegans)ಎಂಬ ಒಂದು ದುಂಡುಹುಳವನ್ನು. ಅದೊಂದು ನೆಮಟೋಡ್. ಅದು ಅತಿ ಚಿಕ್ಕ ಹುಳು. ಅದರ ಉದ್ದ ಕೇವಲ ಒಂದು ಮಿಲಿಮೀಟರ್! ಅದರ ಜೀವಿತಾವಧಿ 12 ರಿಂದ 18 ದಿನಗಳು. ಹಲವು ಜೆನೆಟಿಕ್ಸ್ ಅಧ್ಯಯನದಲ್ಲಿ ಈ ದುಂಡುಹುಳುವನ್ನು ಸಾಮಾನ್ಯ ’ಮಾದರಿ ಪ್ರಯೋಗಜೀವಿ’ಯಾಗಿ ಬಳಸಲಾಗುತ್ತದೆ. ಅದರ ಅಧ್ಯಯನಗಳಲ್ಲಿ ಕಂಡುಬರುವ ಅಂಶಗಳನ್ನು ಇತರೆ ಬಹುಕೋಶಿಜೀವಿಗಳಿಗೆ ಹಾಗೂ ಮಾನವರಿಗೆ ಅನ್ವಯಿಸಬಹುದಾಗಿದೆ.

ಅಮೆರಿಕದ ಮೆಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಾಬರ್ಟ್ ಹೊರ್ವಿಟ್ಜ್ ಅವರ ಪ್ರಯೋಗಾಲಯವು ಸೀನೋರಾಬ್ಡಿಟಿಸ್ ಎಲಿಗೆನ್ಸ್ ಹುಳುವನ್ನು ಬಳಸಿಕೊಂಡು ಕೈಗೊಳ್ಳಲಾಗುತ್ತಿದ್ದ ತಳಿವಿಜ್ಞಾನದ ಸಂಶೋಧನೆಗಳಿಗೆ ಹೆಸರುವಾಸಿಯಾಗಿತ್ತು. ಅಲ್ಲಿ ಸಂಶೋಧನೆ ಕೈಗೊಂಡಿದ್ದ ಸಿಡ್ನಿ ಬ್ರೆನ್ನರ್ ಮತ್ತು ರಾಬರ್ಟ್ ಹೊರ್ವಿಟ್ಜ್ ಅವರಿಗೆ 2002ರಲ್ಲಿ ನೊಬೆಲ್ ಪುರಸ್ಕಾರ ಬಂದಿತ್ತು. ಅದೇ ಪ್ರಯೋಗಾಲಯದಲ್ಲಿ ಆಂಬ್ರೋಸ್ ಮತ್ತು ರವ್ಕಿನ್ ಅವರು ಸೀನೋರಾಬ್ಡಿಟಿಸ್ ಎಲಿಗೆನ್ಸ್ ಜೀವಿಯ ವಂಶವಾಹಿಯ ಅಧ್ಯಯನಕ್ಕೆ ಜೊತೆಯಾದರು. ಲಿನ್-4 ಮತ್ತು ಲಿನ್-14 ಎಂಬ ವಿಭಿನ್ನ ಮ್ಯೂಟೆಂಟ್ ದುಂಡುಹುಳುಗಳಲ್ಲಿ ಸಂಶೋಧನೆ ನಡೆಸಿದರು.

ಇದನ್ನೂ ಓದಿ: ಜಾನ್ ಹಾಪ್‌ಫೀಲ್ಡ್ & ಜೆಫ್ರಿ ಹಿಂಟನ್ ಅವರಿಗೆ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ

ಪ್ರೊ. ವಿಕ್ಟರ್ ಆಂಬ್ರೋಸ್ ಅವರು ಸಿ. ಎಲಿಗೆನ್ಸ್‌ನಲ್ಲಿಯ ಜೀನ್‌ಅನ್ನು ಕ್ಲೋನ್ ಮಾಡಿದರು. ಅಂತಹ ಕ್ಲೋನ್ ಮಾಡಿದ ಜೀನ್ ಉದ್ದಳತೆ ತೀರಾ ಚಿಕ್ಕದಾಗಿತ್ತು. ಅದನ್ನು ಮೈಕ್ರೋ ಆರ್‌ಎನ್‌ಎ ಎಂದು ಕರೆದರು. ಪ್ರೊ. ಗ್ಯಾರಿ ರವ್ಕಿನ್ ಅವರು ಎಂಐಟಿಯಲ್ಲಿ ತಳಿವಿಜ್ಞಾನದ ಪ್ರಯೋಗಾಲಯ ಸ್ಥಾಪಿಸಿದ್ದ ರಾಬರ್ಟ್ ಹೊರ್ವಿಟ್ಜ್ ಅವರ ಶಿಷ್ಯ. ರವ್ಕಿನ್ ಅವರು ಮ್ಯುಟೇಷನ್‌ಗೊಳಿಸಿದ ಸೀನೋರಾಬ್ಡಿಟಿಸ್ ಎಲಿಗೆನ್ಸ್‌ನಲ್ಲಿ ಮೈಕ್ರೋ ಆರ್‌ಎನ್‌ಎನಿಂದಾಗುವ ಜೀನ್ ನಿಗ್ರಹ ಗುಣವನ್ನು ಅಧ್ಯಯನ ಮಾಡಿದರು. ಇವರಿಬ್ಬರ ಸಂಶೋಧನಾ ಲೇಖನಗಳು ಮೊಟ್ಟಮೊದಲಿಗೆ 1993ರಲ್ಲಿ ಸೆಲ್ (Cell) ಜರ್ನಲ್‌ನಲ್ಲಿ ಪ್ರತ್ಯೇಕವಾಗಿ ಅಕ್ಕಪಕ್ಕದ ಪುಟಗಳಲ್ಲಿ ಪ್ರಕಟವಾದವು.

ಮೈಕ್ರೋ ಆರ್‌ಎನ್‌ಎ ಕುರಿತ ಮಾಹಿತಿಯು 2000ನೇ ಇಸವಿಯ ನಂತರ ಪ್ರಕಟಗೊಂಡ ಅಂತಾರಾಷ್ಟ್ರೀಯ ಗುಣಮಟ್ಟದ ಪಠ್ಯಪುಸ್ತಕಗಳಲ್ಲಿ ಜಾಗ ಪಡೆದುಕೊಂಡಿತು. ಶಿಕ್ಷಕರು ಈ ಕುರಿತು ಬೋಧಿಸತೊಡಗಿದರು. ಆದರೆ, ಈ ವಿಶಿಷ್ಟ ಸಂಶೋಧನೆಗೆ ನೊಬೆಲ್ ಸಿಕ್ಕಿದ್ದು ಇದೀಗ 2024ರಲ್ಲಿ.

ಮೈಕ್ರೋಆರ್‌ಎನ್‌ಎದಿಂದಾಗುವ ಬಹುಪಯೋಗಿ ಕಾರ್ಯಗಳು

ಜೀನ್‌ಗಳ ಅಭಿವ್ಯಕ್ತಿ (Gene Expression) ಕಾರ್ಯವನ್ನು ಮೈಕ್ರೋ ಆರ್‌ಎನ್‌ಎ ನಿಗ್ರಹಿಸುತ್ತದೆ. ಎಂಆರ್‌ಎನ್‌ಎ ಜೊತೆಗೆ ಕೂಡಿಕೊಂಡು ಸಸಾರಜನಕದ ಉತ್ಪತ್ತಿಯನ್ನು ಹದ್ದುಬಸ್ತಿನಲ್ಲಿಡುತ್ತದೆ. ಕೊಂಚ ಪ್ರಮಾಣದಲ್ಲಿ ಎಂಆರ್‌ಎನ್‌ಎ ಅವನತಿಗೆ ಕಾರಣವಾಗುತ್ತದೆ. ಜೀವಕೋಶಗಳ ಉತ್ಪತ್ತಿ ಮತ್ತು ಅಭಿವೃದ್ಧಿಯನ್ನು ತಕ್ಕಮಟ್ಟಿಗೆ ನಿಗ್ರಹಿಸುತ್ತದೆ. ಜೀವಕೋಶಗಳು ಸಾಯುವಂತೆ (ಅಪಾಪ್ಟೋಸಿಸ್) ಮಾಡುತ್ತದೆಯಾದ್ದರಿಂದ ಕ್ಯಾನ್ಸರ್ ಬರದಂತೆ ತಡೆಯಲು ಉಪಕಾರಿ. ದೇಹದ ಚಯಾಪಚಯ ಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತದೆ. ಕೋಶಗಳಲ್ಲಿ ಸಮತೋಲನದ ಶಕ್ತಿ ಪರಿಸರವನ್ನು ಕಾಪಾಡುತ್ತದೆ. ಒಟ್ಟಿನಲ್ಲಿ ಮೈಕ್ರೋ ಆರ್‌ಎನ್‌ಎ ಕಾರ್ಯವು ಎಂಆರ್‌ಎನ್‌ಎ ವಿರುದ್ಧವಾಗಿರುತ್ತದೆ (ಮೈಕ್ರೋ ಆರ್‌ಎನ್‌ಎ ವರ್ಸಸ್ ಎಂಆರ್‌ಎನ್‌ಎ). ಅವು ಒಂದಕ್ಕೊಂದು ಶತ್ರುಗಳು. ಇದನ್ನು ಪೋಸ್ಟ್ ಟ್ರಾನ್ಸ್-ಕ್ರಿಪ್ಷನಲ್ ಜೀನ್ ರೆಗ್ಯುಲೇಷನ್ ಎಂದು ಕರೆಯಲಾಗಿದೆ. ಮೈಕ್ರೋ ಆರ್‌ಎನ್‌ಎ ಹಲವು ಶರೀರಕ್ರಿಯೆಗಳನ್ನು ಸಮತೋಲನದಲ್ಲಿಡಲು ಅಗತ್ಯವಾಗಿದೆ.

ಸುಮಾರು 400 ರೀತಿಯ ಸಸಾರಜನಕಗಳ ಉತ್ಪತ್ತಿಯನ್ನು ಮೈಕ್ರೋಆರ್‌ಎನ್‌ಎ ನಿಗ್ರಹಿಸುತ್ತದೆ. ಹೀಗೆ ನಿಗ್ರಹಿಸಲಿಲ್ಲವೆಂದರೆ, ಅನಗತ್ಯವಾಗಿ ಯಥೇಚ್ಛವಾಗಿ ಸಸಾರಜನಕ, ಕಿಣ್ವ, ಪ್ರೋಟೀನ್ ಹಾರ್ಮೋನುಗಳು ತಯಾರಾಗಿ ಶರೀರಕ್ರಿಯೆಗಳು ಹಾಗೂ ಜೀವರಾಸಾಯನಿಕ ಕ್ರಿಯೆಗಳು ಹಾದಿ ತಪ್ಪುತ್ತವೆ. ಕನಿಷ್ಠ ಒಂದು ಸಾವಿರ ವಿವಿಧ ರೀತಿಯ ಮೈಕ್ರೋಆರ್‌ಎನ್‌ಎಗಳು ಪ್ರಾಣಿಗಳಲ್ಲಿ ಅಷ್ಟೇ ಅಲ್ಲದೆ ಸಸ್ಯಗಳಲ್ಲೂ ತಯಾರಾಗುತ್ತವೆ.

ಭ್ರೂಣಾವಸ್ಥೆಯಲ್ಲಿಯೂ ಕೂಡ ಈ ಮೈಕ್ರೋಆರ್‌ಎನ್‌ಎಗಳು ವಿವಿಧ ಕೋಶಗಳಲ್ಲಿ ತಯಾರಾಗಿ ಅಂಗ ರಚನೆಗೆ ಪೂರಕವಾಗಿ ವರ್ತಿಸುತ್ತವೆ. ಒಂದು ನಿರ್ದಿಷ್ಟ ಮೈಕ್ರೋಆರ್‌ಎನ್‌ಎ ಆಣ್ವಿಕವು ಒಂದಕ್ಕಿಂತ ಹೆಚ್ಚು ರೀತಿಯ ಎಂಆರ್‌ಎನ್‌ಎವನ್ನು ನಿಗ್ರಹಿಸುತ್ತವೆ.

ವೈದ್ಯಕೀಯ ನೊಬೆಲ್ ಬಹುಮಾನ ಪಡೆದ ಪ್ರೊ. ವಿಕ್ಟರ್ ಆಂಬ್ರೋಸ್ ಅವರಿಗೀಗ 71 ವರ್ಷ ವಯಸ್ಸು. ಜಗತ್ತಿನಲ್ಲಿಯೇ ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿದೆ ಎಂಬ ಖ್ಯಾತಿಯನ್ನು ಗಳಿಸಿರುವ ಅಮೆರಿಕದ ಮೆಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ಡಾಕ್ಟೊರಲ್ ಪದವಿ ಪಡೆದು ಅಲ್ಲಿಯೇ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನೂ ಕೈಗೊಂಡರು. ತದನಂತರ ಹಾರ್ವರ್ಡ್ ವಿವಿಯಲ್ಲಿ ಸಂಶೋಧನೆ ಮುಂದುವರಿಸಿದರು. ಈಗ ತಮ್ಮ ಮಾತೃಸಂಸ್ಥೆಯಾದ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಪ್ರೊ. ಗ್ಯಾರಿ ರವ್ಕಿನ್ ಅವರಿಗೆ 72 ವರ್ಷ ವಯಸ್ಸು. ಹಾರ್ವರ್ಡ್ ವಿವಿಯಿಂದ ಡಾಕ್ಟೋರಲ್ ಪದವಿ ಪಡೆದು ಎಂಐಟಿಯಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನು ಪ್ರೊ. ವಿಕ್ಟರ್ ಆಂಬ್ರೋಸ್ ಅವರೊಂದಿಗೆ ಕೈಗೊಂಡರು. ಅವರೀಗ ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ತಳಿವಿಜ್ಞಾನದ ಪ್ರಾಧ್ಯಾಪಕರು.

ಉಪಸಂಹಾರ: ನಮ್ಮ ದೇಹದ ಪ್ರತಿ ಜೀವಕೋಶದಲ್ಲಿ ತಯಾರಾಗಿ, ಆರ್‌ಎನ್‌ಎವನ್ನು ತಹಬಂದಿಯಲ್ಲಿಟ್ಟು, ವಂಶವಾಹಿಗಳನ್ನು ನಿಗ್ರಹಿಸುವ ಮೈಕ್ರೋಆರ್‌ಎನ್‌ಎ ಎಂಬ ಆಣ್ವಿಕವು ನಮ್ಮ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಆಣ್ವಿಕವಾಗಿದೆ. ಮೈಕ್ರೋಆರ್‌ಎನ್‌ಎ ಕ್ರಿಯೆಗಳ ಜ್ಞಾನವನ್ನಾಧರಿಸಿ ಹಲವು ಕಾಯಿಲೆಗಳಿಗೆ ಹೊಸ ಔಷಧಿಗಳನ್ನು ಆವಿಷ್ಕರಿಸುವ ಪ್ರಯತ್ನವು ಒಂದು ದಶಕದಿಂದ ನಡೆಯುತ್ತಿದೆ. ಕ್ಲಿನಿಕಲ್ ಟ್ರಯಲ್‌ಗಳಲ್ಲಿರುವ ಹೊಸ ಔಷಧಗಳು ಮುಂದೊಂದು ದಿನ ಹಲವು ಕಾಯಿಲೆಗಳಿಗೆ ದಿವ್ಯ ಔಷಧಿಗಳಾಗಬಹುದಾಗಿವೆ.

ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ
ಹಿರಿಯ ಪ್ರಾಧ್ಯಾಪಕರು ಪಶುವೈದ್ಯಕೀಯ ಮಹಾವಿದ್ಯಾಲಯ ಹೆಬ್ಬಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...