ಜೈಲಿನಲ್ಲಿರುವ ಬೆಲರೂಸಿಯನ್ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್ ಬೈಲ್ಯಾಟ್ಸ್ಕಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಂದಿದೆ. ಬೆಲಾರಸ್‌ನಲ್ಲಿರುವ ಎಲ್ಲಾ ರಾಜಕೀಯ ಕೈದಿಗಳಲ್ಲಿ ಅಲೆಸ್ ಒಬ್ಬರಾಗಿದ್ದಾರೆ ಎಂದು ಬೆಲರೂಸಿಯನ್ ವಿರೋಧ ಪಕ್ಷದ ರಾಜಕಾರಣಿ ಪಾವೆಲ್ ಲತುಷ್ಕೊ ಶುಕ್ರವಾರ ಹೇಳಿದ್ದಾರೆ.
ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್ ಮತ್ತು ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ಜೊತೆಗೆ ಶುಕ್ರವಾರ ಬೈಲ್ಯಾಟ್ಸ್ಕಿ ಅವರಿಗೂ ಪ್ರಶಸ್ತಿ ನೀಡಲಾಗಿದೆ.
“ಇದು ಅವರಿಗೆ ಮಾತ್ರವಲ್ಲ, ಈಗ ಬೆಲಾರಸ್‌ನಲ್ಲಿರುವ ಎಲ್ಲಾ ರಾಜಕೀಯ ಕೈದಿಗಳಿಗೆ ಸಂದ ಪ್ರಶಸ್ತಿ” ಎಂದು ಲತುಷ್ಕೊ ಅಭಿಪ್ರಾಯಪಟ್ಟಿದ್ದಾರೆ. “ಇದು ನಮ್ಮೆಲ್ಲರನ್ನು ಹೋರಾಟಕ್ಕೆ ಪ್ರೇರೇಪಿಸುತ್ತದೆ. ನಾವು (ಅಲೆಕ್ಸಾಂಡರ್) ಲುಕಾಶೆಂಕೊ ಅವರ ಸರ್ವಾಧಿಕಾರವನ್ನು ಸೋಲಿಸುತ್ತೇವೆ ಎಂಬುದು ಖಚಿತವಾಗಿದೆ” ಎಂದು ತಿಳಿಸಿದ್ದಾರೆ.
ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್‌ಗೆ ಪ್ರಶಸ್ತಿ
ಖ್ಯಾತ ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಅವರು 2022ರ ನೋಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂದು ತೀರ್ಪುಗಾರರು ಗುರುವಾರ ಹೇಳಿದ್ದಾರೆ. ಲೇಖಕಿಯು ವರ್ಗ ಮತ್ತು ಲಿಂಗ ತಾರತಮ್ಯದ ಬಗೆಗಿನ ಕಾದಂಬರಿಗಳಿಗೆ ಹೆಸರುವಾಸಿಯಾಗಿದ್ದಾರೆ.
82 ವರ್ಷದ ಎರ್ನಾಕ್ಸ್ ಅವರ ಧೈರ್ಯ ಮತ್ತು ಅವರ ಚಿಕಿತ್ಸಕ ದೃಷ್ಟಿಕೋನದ ಚುರುಕುತನಕ್ಕಾಗಿ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ತೀರ್ಪುಗಾರರು ಹೇಳಿದ್ದಾರೆ. ವಿಜೇತ ನೊಬೆಲ್ ಪ್ರಶಸ್ತಿಯು ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 7.5 ಕೋಟಿ) ಮೊತ್ತವನ್ನು ಹೊಂದಿದೆ.
ಕಳೆದ ವರ್ಷ ಈ ಪ್ರಶಸ್ತಿಯು ಟಾಂಜೇನಿಯಾ ಮೂಲದ ಕಾದಂಬರಿಕಾರ ಅಬ್ದುಲ್ ರಜ್ಝಾಕ್ ಗುರ್ನಾ ಅವರಿಗೆ ನೀಡಲಾಗಿತ್ತು. ಅವರ ಸಾಹಿತ್ಯವು ನಿರಾಶ್ರಿತರು ಮತ್ತು ಗಡಿಪಾರು ಆಗಿರುವವರು, ವಸಾಹತುಶಾಹಿ ಮತ್ತು ವರ್ಣಭೇದ ನೀತಿಯ ಮೇಲೆ ಕೇಂದ್ರೀಕರಿಸಿತ್ತು.
ಹಲವಾರು ವರ್ಷಗಳಿಂದ ನೊಬೆಲ್ ಸ್ಪರ್ಧೆಯಲ್ಲಿ ಎರ್ನಾಕ್ಸ್ ಅವರ ಹೆಸರು ಕೇಳುತ್ತಲೆ ಬಂದಿದೆ. 1901 ರಲ್ಲಿ ಪ್ರಾರಂಭವಾದ ನೊಬೆಲ್ ಪ್ರಶಸ್ತಿಗಳಲ್ಲಿ 119 ಜನರಿಗೆ ಸಾಹಿತ್ಯ ನೋಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಮಹಿಳೆಯರಲ್ಲಿ ಅನ್ನಿ ಎರ್ನಾಕ್ಸ್ 17 ನೇ ಮಹಿಳೆಯಾಗಿದ್ದಾರೆ.
ಆಲ್ಟ್‌ನ್ಯೂಸ್‌ನ ಪ್ರತೀಕ್, ಜುಬೇರ್ ನಾಮನಿರ್ದೇಶನ
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕರು ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಪತ್ರಕರ್ತರಾದ ಮೊಹಮ್ಮದ್ ಝುಬೇರ್ ಹಾಗೂ ಪ್ರತೀಕ್ ಸಿನ್ಹಾ ಅವರು 2022ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವವರನ್ನು ಸಮಿತಿಯು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್, ಪೋಪ್ ಫ್ರಾನ್ಸಿಸ್, ಟುವಾಲು ವಿದೇಶಾಂಗ ಸಚಿವ ಸೈಮನ್ ಕೋಫೆ ಸೇರಿ ಹಲವರು ನಾಮನಿರ್ದೇಶನಗೊಂಡಿದ್ದಾರೆ ಎಂದು ತಿಳಿದುಬಂದಿದೆ.
2022ರ ನೊಬೆಲ್ ಶಾಂತಿ ಪ್ರಶಸ್ತಿ ಸ್ಪರ್ಧೆ ಪಟ್ಟಿಯಲ್ಲಿ ಸುಮಾರು 343 ಅಭ್ಯರ್ಥಿಗಳಿದ್ದಾರೆ. ಈ ಪೈಕಿ 251 ವ್ಯಕ್ತಿಗಳು ಮತ್ತು 92 ಸಂಸ್ಥೆಗಳನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಪಟ್ಟಿಯಲ್ಲಿ ಝುಬೇರ್ ಮತ್ತು ಪ್ರತೀಕ್ ಸಿನ್ಹಾ ಹೆಸರು ಸೇರಿರುವುದು ವಿಶೇಷ.


