ಭೂ ಪರಿಹಾರ ಮತ್ತು ಇತರ ಬೇಡಿಕೆಗಳಿಗಾಗಿ ದೆಹಲಿಗೆ ಪಾದಯಾತ್ರೆ ನಡೆಸುತ್ತಿರುವ ರೈತರನ್ನು ನೋಡ್ಯಾದ ‘ದಲಿತ ಪ್ರೇರಣಾ ಸ್ಥಳ’ದಲ್ಲಿ ಬಂಧಿಸಲಾಗಿದೆ. ಭಾರತೀಯ ಕಿಸಾನ್ ಪರಿಷತ್ ಅಧ್ಯಕ್ಷ ಸುಖಬೀರ್ ಖಲೀಫಾ ಸೇರಿದಂತೆ 160 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾದ ಕರೆ ಮೇರೆಗೆ ಸೋಮವಾರ ಉತ್ತರ ಪ್ರದೇಶದ ವಿವಿಧ ಭಾಗಗಳಿಂದ ಜಮಾಯಿಸಿದ ಪ್ರತಿಭಟನಾಕಾರರು ಏಳು ದಿನಗಳಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಷ್ಟ್ರ ರಾಜಧಾನಿಗೆ ತಮ್ಮ ಮೆರವಣಿಗೆಯನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಸೆಕ್ಷನ್ 170 ರ ಅಡಿಯಲ್ಲಿ ಮಧ್ಯಾಹ್ನ 1.30 ರ ಸುಮಾರಿಗೆ 160 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಶಿವ ಹರಿ ಮೀನಾ ತಿಳಿಸಿದ್ದಾರೆ.
ಈ ನಿಬಂಧನೆಯು, ನಿರೀಕ್ಷಿತ ಅಪರಾಧಗಳನ್ನು ತಡೆಗಟ್ಟಲು ಬಂಧನಗಳನ್ನು ಕೈಗೊಳ್ಳಲು ಪೊಲೀಸರಿಗೆ ಅವಕಾಶ ನೀಡುತ್ತದೆ. ಬಂಧಿತರಲ್ಲಿ ಮಹಿಳೆಯರು ಮತ್ತು ಭಾರತೀಯ ಕಿಸಾನ್ ಯೂನಿಯನ್ (ಪಶ್ಚಿಮ ಉತ್ತರ ಪ್ರದೇಶ) ರಾಜ್ಯ ಅಧ್ಯಕ್ಷರಾದ ಖಲೀಫಾ ಮತ್ತು ಪವನ್ ಖತಾನಾ ಅವರಂತಹ ಹಲವಾರು ರೈತ ಮುಖಂಡರು ಸೇರಿದ್ದಾರೆ.
ಪ್ರತಿಭಟನಾಕಾರರನ್ನು ನೋಯ್ಡಾದ ಲುಕ್ಸರ್ ಜೈಲಿಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟವನ್ನು ಮುಂದುವರೆಸುವುದಾಗಿ ಖಲೀಫಾ ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರೈತರ ಬಂಧನವನ್ನು ಖಂಡಿಸಿ ನರೇಶ್ ಟಿಕಾಯತ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ ಮುಜಾಫರ್‌ನಗರದಲ್ಲಿ ‘ಮಹಾ ಪಂಚಾಯತ್’ ಕರೆದಿದೆ.
ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಸೋಮವಾರ ಮಹಾಮಾಯಾ ಮೇಲ್ಸೇತುವೆ ಬಳಿ ರೈತರು ಜಮಾಯಿಸಿ ದೆಹಲಿಗೆ ತೆರಳಿದ್ದರು. ಆದರೆ, ಅವರನ್ನು ದಲಿತ ಪ್ರೇರಣಾ ಸ್ಥಳದ ಬಳಿ ಪೊಲೀಸರು ತಡೆದರು, ನಂತರ ಅವರು ಅಲ್ಲಿ ಧರಣಿ ಕುಳಿತರು.
ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಹೊಂದಿಕೆಯಾಗುವ ಮೆರವಣಿಗೆಯನ್ನು ತಡೆಯಲು ಪೊಲೀಸರು ಬಹು ಪದರಗಳ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿ ಭಾರೀ ಭದ್ರತೆಯನ್ನು ನಿಯೋಜಿಸಿದ್ದರಿಂದ ದೆಹಲಿ-ನೋಯ್ಡಾ ಗಡಿಯನ್ನು ದಾಟುವ ಪ್ರಯಾಣಿಕರಿಗೆ ಭಾರಿ ಟ್ರಾಫಿಕ್ ದಟ್ಟಣೆಯು ಅನಾನುಕೂಲತೆಯನ್ನು ಉಂಟುಮಾಡಿತು.
ಇದನ್ನೂ ಓದಿ; ಭೋಪಾಲ್ ಅನಿಲ ದುರಂತದ 40ನೇ ವರ್ಷಾಚರಣೆ: ಸಂತ್ರಸ್ತರು-ಚೇತರಿಸಿಕೊಂಡವರಿಂದ ನ್ಯಾಯಕ್ಕಾಗಿ ಮೆರವಣಿಗೆ


