ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ದತ್ತಿ ಕಾಯಿದೆ 2002 ರ ಪ್ರಕಾರ ಹಿಂದೂಯೇತರರು ಹಿಂದೂ ಧಾರ್ಮಿಕ ಸಂಸ್ಥೆಗಳ ಆವರಣದಲ್ಲಿ ಮತ್ತು ಸುತ್ತಮುತ್ತ ವ್ಯಾಪಾರ ಮಾಡುವಂತಿಲ್ಲ ಎಂದು ಕರ್ನಾಟಕ ಸರ್ಕಾರ ಬುಧವಾರ ವಿಧಾನಸಭೆಗೆ ತಿಳಿಸಿದೆ.
ವಿಧಾನಸಭೆಯಲ್ಲಿ, ಹಿಂದೂಯೇತರರ ಅಂಗಡಿಗಳನ್ನು ಖಾಲಿ ಮಾಡುವಂತೆ ಮತ್ತು ದೇವಾಲಯದ ಹೊರಗೆ ವ್ಯಾಪಾರ ಮಾಡದಂತೆ ಧಾರ್ಮಿಕ ಸ್ಥಳಗಳಲ್ಲಿ ಬ್ಯಾನರ್ ಮತ್ತು ಪೋಸ್ಟರ್ ಇರುವುದರ ಕುರಿತು ಕಾಂಗ್ರೆಸ್ ಶಾಸಕರಾದ ಯು.ಟಿ.ಖಾದರ್ ಮತ್ತು ರಿಜ್ವಾನ್ ಅರ್ಷದ್ ಅವರು ಶೂನ್ಯವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, “ಹಾಗೆ ಮಾಡದಂತೆ ಕಾನೂನು ಇದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಉಡುಪಿ: ಕಾಪು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿದ ದೇವಸ್ಥಾನ ಸಮಿತಿ; ‘ಸಹಬಾಳ್ವೆ ಉಡುಪಿ’ ವಿರೋಧ
“ಅಧಿನಿಯಮದ ಅಡಿಯಲ್ಲಿ ನಿಯಮ ಸಂಖ್ಯೆ 12 ರ ಪ್ರಕಾರ, ಹಿಂದೂಯೇತರರು ಆವರಣದಲ್ಲಿ ಮತ್ತು ಸುತ್ತಮುತ್ತ ವ್ಯಾಪಾರ ಮಾಡಲು ಆವರಣದಿಂದ ನಿರ್ಬಂಧಿಸಲಾಗಿದೆ. ಆದರೆ, ಹಿಂದೂ ಧಾರ್ಮಿಕ ಕ್ಷೇತ್ರವನ್ನು ಮೀರಿ ಈ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಹಾಕುವವರ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಆದರೆ, ಪ್ರಾಮಾಣಿಕವಾಗಿ ಜೀವನ ನಡೆಸುತ್ತಿರುವ ರಸ್ತೆ ಬದಿ ವ್ಯಾಪಾರಿಗಳನ್ನೂ ಗುರಿಯಾಗಿಸಿಕೊಂಡು ಬ್ಯಾನರ್, ಭಿತ್ತಿಪತ್ರಗಳು ರಾರಾಜಿಸುತ್ತಿವೆ ಎಂದು ಖಾದರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
“ಇಂತಹ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳು ನಮ್ಮ ಸಮಾಜದಲ್ಲಿ ವೈಷಮ್ಯವನ್ನು ಸೃಷ್ಟಿಸುತ್ತಿದ್ದು, ಕೋಮು ಸೌಹಾರ್ದವನ್ನು ಹಾಳು ಮಾಡುತ್ತಿವೆ. ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಖಾದರ್ ಹೇಳಿದ್ದಾರೆ.
ಇದನ್ನೂ ಓದಿ: ಕೋಮು ದ್ವೇಷ ಹೆಚ್ಚುತ್ತಿರುವ ಹಿನ್ನಲೆ: ರಾಜ್ಯ ಮಟ್ಟದ ಸೌಹಾರ್ದ ಸಮಾವೇಶಕ್ಕೆ ಸಜ್ಜಾಗುತ್ತಿರುವ ಉಡುಪಿ!
ಇದಕ್ಕೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಈಗಾಗಲೇ ಕಾನೂನು ಜಾರಿಯಲ್ಲಿದ್ದು, ಈ ಬಗ್ಗೆ ಸರಕಾರ ಪರಿಶೀಲನೆ ನಡೆಸಲಿದೆ ಎಂದು ಹೇಳಿದ್ದಾರೆ.
“ಜಾತ್ರೆ (ದೇವಾಲಯದ ಉತ್ಸವ) ಸಮಯದಲ್ಲಿ, ಬಹಳಷ್ಟು ಅಂಗಡಿಗಳನ್ನು ಹಿಂದೂಯೇತರರಿಗೆ ವ್ಯಾಪಾರಕ್ಕಾಗಿ ಉಪ-ಗುತ್ತಿಗೆಗೆ ನೀಡಲಾಗುತ್ತದೆ. ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳ ಆಡಳಿತ ಮಂಡಳಿಯಿಂದ ಗುತ್ತಿಗೆ ತೆಗೆದುಕೊಳ್ಳುತ್ತಿದ್ದ ಗುತ್ತಿಗೆದಾರರು ತುಸು ಹೆಚ್ಚು ಹಣವನ್ನು ಗಳಿಸಲು ಹೀಗೆ ಮಾಡುತ್ತಿದ್ದರು. ಇವು ವ್ಯಾಪಾರ ವಹಿವಾಟಾಗಿದ್ದು ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಅಂತಹ ಪ್ರಕರಣಗಳಲ್ಲಿ ನಾವು ಕಾನೂನನ್ನು ಪರಿಶೀಲಿಸುತ್ತೇವೆ. ಪ್ರಕರಣಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸುತ್ತೇವೆ” ಎಂದು ಬೊಮ್ಮಾಯಿ ಹೇಳಿದ್ದಾರೆ.
ಕರಾವಳಿ ಮತ್ತು ಮಲೆನಾಡಿನಲ್ಲಿ ನಡೆಯುತ್ತಿರುವ ಜಾತ್ರೆಗಳಲ್ಲಿ ಹಿಂದೂಯೇತರರು, ಮುಖ್ಯವಾಗಿ ಮುಸ್ಲಿಂ ಸಮುದಾಯದ ವ್ಯಾಪಾರಿಗಳು ದೇವಸ್ಥಾನದ ಆವರಣ ಮತ್ತು ಸುತ್ತಮುತ್ತ ವ್ಯಾಪಾರ ಮಾಡುವಂತಿಲ್ಲ ಎಂದು ಬಿಜೆಪಿ ಬೆಂಬಲಿತ ಸಂಘಟನೆಗಳು ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಹಾಕಿದ್ದು ಇತ್ತೀಚೆಗೆ ವರದಿಯಾಗಿತ್ತು. ಇದು ರಾಜ್ಯದಲ್ಲಿ ಕೋಮು ದ್ವೇಷವನ್ನು ಉತ್ತೇಜಿಸುವ ಮೂಲಕ ಮತ ದ್ರುವೀಕರಣಕ್ಕೆ ಬಿಜೆಪಿಯೆ ಮಾಡುತ್ತಿರುವ ಕೃತ್ಯ ಎಂದು ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದ ಆದಿವಾಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಒಟ್ಟು 15 ಆರೋಪಿಗಳ ಬಂಧನ



ಇದು ಯಾವ ಸರಕಾರ ಮಾಡಿದ ಕಾನೂನು ಸಾರ್