ಉತ್ತರಾಖಂಡದ ರುದ್ರಪಯಾಗ್ ಜಿಲ್ಲೆಯಾದ್ಯಂತ ಹಲವೆಡೆ ‘ಹಿಂದೂಯೇತರರು, ರೋಹಿಂಗ್ಯಾ ಮುಸ್ಲಿಮರು ಮತ್ತು ಬೀದಿ ಬದಿ ವ್ಯಾಪಾರಿ’ಗಳ ಪ್ರವೇಶವನ್ನು ನಿಷೇಧಿಸುವ ಫಲಕವನ್ನು ಹಾಕಲಾಗಿದೆ ಎಂದು ವರದಿಯಾಗಿದೆ. ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಫಲಕವೊಂದರ ಫೋಟೋ ಹರಿದಾಡಿದೆ.
“ಹಿಂದೂಯೇತರರು, ರೋಹಿಂಗ್ಯಾ ಮುಸ್ಲಿಮರು ಮತ್ತು ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡುವುದನ್ನು ಮತ್ತು ಗ್ರಾಮದಲ್ಲಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಗ್ರಾಮದಲ್ಲಿ ಎಲ್ಲಿಯಾದರೂ ಕಂಡು ಬಂದರೆ ದಂಡದ ಕ್ರಮ ಕೈಗೊಳ್ಳಲಾಗುವುದು” ಎಂದು ಫಲಕದಲ್ಲಿ ಬರೆಯಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿದೆ.
⚡️Signboards banning the entry of “non-Hindus” in Rudraprayag district of Uttarakhand
“It is prohibited for non-Hindus/Rohingya Muslims and hawkers to do business/roam around in the village. If found anywhere in the village, punitive action will be taken,” the text on the… pic.twitter.com/z9r1DOk3jK
— TIND Posting (@tindposting) September 8, 2024
ಆರಂಭದಲ್ಲಿ, ಸೂಚನಾ ಫಲಕ ಅಳವಡಿಸಲು ಗ್ರಾಮ ಪಂಚಾಯತ್‌ನಿಂದ ನಿರ್ದೇಶನ ಬಂದಿದೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತು ಮಾತನಾಡಿರುವ ನ್ಯಾಲ್ಸು ಗ್ರಾಮದ ಮುಖ್ಯಸ್ಥ ಪ್ರಮೋದ್ ಸಿಂಗ್, “ಗ್ರಾಮಸ್ಥರು ತಮ್ಮ ಗ್ರಾಮದ ಹೊರಗೆ ಸೂಚನಾ ಫಲಕ ಅಳವಡಿಸಿದ್ದಾರೆ. ಗ್ರಾಮ ಪಂಚಾಯಿತಿ ಅಲ್ಲ” ಎಂದು ಹೇಳಿದ್ದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ತಿಳಿಸಿದೆ.
ಶೇರ್ಸಿ, ಗೌರಿಕುಂಡ್, ತ್ರಿಯುಗಿನಾರಾಯಣ, ಸೋನ್‌ಪ್ರಯಾಗ, ಬರಸು, ಜಾಮು, ಆರಿಯಾ, ರವಿಗ್ರಾಮ್ ಮತ್ತು ಮೈಖಂಡ ಸೇರಿದಂತೆ ಉತ್ತರಾಖಂಡದ ಬಹುತೇಕ ಎಲ್ಲಾ ಹಳ್ಳಿಗಳಲ್ಲಿ ಇದೇ ರೀತಿಯ ಸೂಚನಾ ಫಲಕಗಳನ್ನು ಹಾಕಲಾಗಿದೆ ಎಂದು ವರದಿ ಹೇಳಿದೆ.
ಮುಸ್ಲಿಂ ಸೇವಾ ಸಂಘಟನೆ ಮತ್ತು ಎಐಎಂಐಎಂನಿಂದ ಎರಡು ಮುಸ್ಲಿಂ ನಿಯೋಗಗಳು ಸೆಪ್ಟೆಂಬರ್ 5ರಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಭಿನವ್ ಕುಮಾರ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಹೆಚ್ಚುತ್ತಿರುವ ಅಲ್ಪಸಂಖ್ಯಾತ ವಿರೋಧಿ ಘಟನೆಗಳ ಬಗ್ಗೆ ತಮ್ಮ ಕಳವಳವನ್ನು ತಿಳಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ವಿವಾದಾತ್ಮಕ ಸೂಚನಾ ಫಲಕಗಳ ಪೈಕಿ ಹಲವನ್ನು ತೆಗೆಯಲಾಗಿದೆ. ಇನ್ನೂ ಕೆಲವು ತೆರವುಗೊಳಿಸಲು ಬಾಕಿಯಿದೆ. ಫಲಕ ಅಳವಡಿಸಿದ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ರುದ್ರಪ್ರಯಾಗ ಸರ್ಕಲ್ ಅಧಿಕಾರಿ ಪ್ರಬೋಧ್ ಕುಮಾರ್ ಗಿಲ್ಡಿಯಾಲ್ ಹೇಳಿದ್ದಾರೆ.
ಈ ನಡುವೆ, ಎಲ್ಲೆಲ್ಲಿ ವಿವಾದಾತ್ಮಕ ಫಲಕಗಳನ್ನು ಅಳವಡಿಸಲಾಗಿದೆ ಎಂದು ಪರಿಶೀಲಿಸಲು ಸ್ಥಳೀಯ ಪೊಲೀಸ್ ಮತ್ತು ಗುಪ್ತಚರ ಘಟಕಗಳಿಗೆ ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಭಿನವ್ ಕುಮಾರ್ ಅವರು ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಯುಪಿ ಪೊಲೀಸರಿಂದ ‘ಯಾದವ ವ್ಯಕ್ತಿ’ಯ ಎನ್‌ಕೌಂಟರ್ : “ಜಾತಿಯ ಕಾರಣಕ್ಕೆ ಕೊಲ್ಲಲಾಗಿದೆ” ಎಂದ ಅಖಿಲೇಶ್ ಯಾದವ್


