ನಕ್ಸಲೀಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಹಲವಾರು ಸುಳ್ಳುಕೇಸುಗಳಲ್ಲಿ ಸಿಕ್ಕಿಕೊಂಡು ಭೂಗತರಾಗಿದ್ದವರು ನೂರ್ ಶ್ರೀಧರ್. 2013-14ರ ಅವಧಿಯಲ್ಲಿ ದೊರೆಸ್ವಾಮಿ, ಗೌರಿಲಂಕೇಶ್ ಮತ್ತು ದಿವಗಂತ ಎ.ಕೆ ಸುಬ್ಬಯ್ಯನವರ ಪ್ರಯತ್ನದ ಫಲವಾಗಿ ಸರ್ಕಾರದ ಜೊತೆಗಿನ ಮಾತುಕತೆಯಂತೆ ಮುಖ್ಯವಾಹಿನಿಗೆ ಮರಳಿದ್ದ ನೂರ್ ಶ್ರೀಧರ್ ಮೇಲಿದ್ದ ಎಲ್ಲಾ ಕೇಸುಗಳು ಐದು ವರ್ಷಗಳ ನಂತರ ಖುಲಾಸೆಗೊಂಡಿದ್ದು ಅವರೀಗ ದೋಷಮುಕ್ತರಾಗಿದ್ದಾರೆ.
2014ರ ಡಿಸೆಂಬರ್ 08ರಂದು ತಮ್ಮ ಸಹ ಹೋರಾಟಗಾರ ಸಿರಿಮನೆ ನಾಗರಾಜುರವರೊಡನೆ ಮುಖ್ಯವಾಹಿನಿಗೆ ಮರಳಿದ್ದ ಅವರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದು 2015ರ ಜನವರಿ 15 ರಂದು ಬಂಧಮುಕ್ತರಾಗಿದ್ದರು. ಅದಾದ ನಾಲ್ಕೂವರೆ ವರ್ಷಗಳ ನಂತರ ಇಂದು ದೋಷಮುಕ್ತರೆಂದು ಕೋರ್ಟ್ ಹೇಳಿದೆ. ನೂರ್ ಶ್ರೀಧರ್‌ರವರಿಗೆ ಸಾಮಾಜಿಕ ಮನ್ನಣೆ ಈಗಾಗಲೇ ಸಿಕ್ಕಿತ್ತು. ಇಂದಿನಿಂದ ಅವರಿಗೆ ಕಾನೂನಿನ ಮನ್ನಣೆಯು ಸಿಕ್ಕಿದೆ.

ಚಿಕ್ಕಮಗಳೂರು ಕೋರ್ಟ್‌ನಲ್ಲಿ ಅವರ ಮೇಲೆ ಇದ್ದ 02 ಕೇಸುಗಳು ಒಂದು ವರ್ಷದ ಹಿಂದೆಯೇ ಮುಗಿದಿದ್ದವು. ನಂತರ ಉಡುಪಿ ಕೋರ್ಟ್‌ನಲ್ಲಿದ್ದ 02 ಕೇಸುಗಳಲ್ಲಿ ಒಂದು ಆರು ತಿಂಗಳ ಹಿಂದೆ ಮುಗಿದಿದ್ದು ಈಗ ಕೊನೆಯ ಕೇಸ್ ಕೂಡ ಮುಗಿದಿದ್ದರಿಂದ ಅವರು ನಿರಾಳರಾಗಿದ್ದಾರೆ.
ಇವರು ಯಾವುದೇ ಅಪರಾಧಗಳಲ್ಲಿ ಪಾಲ್ಗೊಂಡಿಲ್ಲ, ಆ ರೀತಿಯ ಯಾವುದೇ ಸಾಕ್ಷಿಗಳ ಇಲ್ಲವೆಂದು ಕೋರ್ಟ್ ತೀರ್ಪು ನೀಡಿದೆ. ನೂರ್ ಶ್ರೀಧರ್‌ರವರೊಂದಿಗೆ ಆನಂತರ ಮುಖ್ಯವಾಹಿನಿಗೆ ಬಂದಿದ್ದ ಪದ್ಮನಾಭ್ 07 ಕೇಸುಗಳಲ್ಲಿ ಇದುವರೆಗೂ 05 ಕೇಸುಗಳಲ್ಲಿ ದೋಷಮುಕ್ತರಾಗಿದ್ದಾರೆ. ಇಂದು 03 ಪ್ರಕರಣಗಳಲ್ಲಿ ಅವರನ್ನು ದೋಷಮುಕ್ತರೆಂದು ಕೋರ್ಟ್ ಘೋಷಿಸಿದೆ.

ವಿದ್ಯಾರ್ಥಿ ದಿಸೆಯಿಂದಲೂ ಹೋರಾಟನಿರತರಾಗಿದ್ದ ನೂರ್ ಶ್ರೀಧರ್‌ರವರು, ಮುಖ್ಯವಾಹಿನಿಗೆ ಬಂದನಂತರ ಭೂಮಿ ವಸತಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ದಿಡ್ಡಳ್ಳಿ ಆದಿವಾಸಿಗಳ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಲ್ಲಾ ಜನಪರ ಚಳವಳಿಗಳ ಜೊತೆ ಸಾವಯವ ಸಂಬಂಧ ಹೊಂದಿದ್ದಾರೆ.
ನಕ್ಸಲೈಟ್ ಚಳವಳಿಯ ಮೂಲಕ ಭೂಗತರಾಗಿದ್ದ ಹೋರಾಟಗಾರನ ಮೇಲಿನ ಎಲ್ಲಾ ಕೇಸುಗಳು ಖುಲಾಸೆಯಾಗಿ ಬಂಧಮುಕ್ತರಾಗಿರುವ ಸಂದರ್ಭದಲ್ಲಿಯೇ ಮುಖ್ಯವಾಹಿನಿ ಚಳವಳಿಯಲ್ಲಿದ್ದ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ಹಳೆಯ ಸುಳ್ಳು ಕೇಸಿನಲ್ಲಿ ರಾಯಚೂರು ಪೊಲೀಸರು ಬಂಧಿಸಿರುವುದು ವಿಪರ್ಯಾಸವೇ ಸರಿ.



ದೊಡ್ಡಿಪಾಳ್ಯ ನರಸಿಂಹಮೂರ್ತಿ ಯವರು ಆದಷ್ಟು ಬೇಗ ಬಿಡುಗಡೆ ಆಗಬೇಕು. ಈ ನಿಟ್ಟಿನಲ್ಲಿ ವಿಚಾರವಂತರು ಮತ್ತು ಸಾಮಾಜಿಕ ಹೋರಾಟಗಾರರು ನಿರಂತರ ಪ್ರಯತ್ನ ಮಾಡಬೇಕು.