ಸರ್ಕಾರಿ ಬಸ್ಸೊಂದರಿಂದ ‘ಮಣಿಪುರ’ಎಂಬ ಹೆಸರನ್ನು ತೆಗೆದು ಹಾಕಿದ್ದನ್ನು ಖಂಡಿಸಿ ಮೈತೇಯಿ ಸಂಘಟನೆಯಾದ ಕೋ- ಆರ್ಡಿನೇಟಿಂಗ್ ಕಮಿಟಿ ಆನ್ ಮಣಿಪುರ್ ಇಂಟಗ್ರಿಟಿ (ಕೊಕೊಮಿ) ಕರೆ ನೀಡಿರುವ 48 ಗಂಟೆಗಳ ರಾಜ್ಯವ್ಯಾಪಿ ಬಂದ್‌ನಿಂದಾಗಿ ಮಣಿಪುರದ ಐದು ಜಿಲ್ಲೆಗಳಲ್ಲಿ ಸತತ ಎರಡನೇ ದಿನವಾದ ಶುಕ್ರವಾರವೂ (ಮೇ.23) ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ವ್ಯಾಪಾರ ಸಂಸ್ಥೆಗಳು, ಸರ್ಕಾರಿ, ಖಾಸಗಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಉಖ್ರುಲ್ ಜಿಲ್ಲೆಯ ‘ಶಿರುಯಿ ಲಿಲಿ’ ಉತ್ಸವಕ್ಕೆ ಪ್ರಯಾಣಿಸುವವರಿಗೆ ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ, ಖಾಸಗಿ ವಾಹನಗಳ ಸಂಚಾರವನ್ನೂ ನಿರ್ಬಂಧಿಸಲಾಗಿದೆ.
ಬಿಷ್ಣುಪುರ ಮತ್ತು ತೌಬಲ್ ಜಿಲ್ಲೆಗಳಲ್ಲಿ ಬಂದ್ ಬೆಂಬಲಿಸಿ ಮಹಿಳೆಯರು ಕೇಂದ್ರ ಭದ್ರತಾ ಪಡೆ ವಾಹನಗಳನ್ನು ತಡೆದು ‘ಮಣಿಪುರ/ಕಾಂಗ್ಲೇಪಾಕ್’ ಎಂಬ ಸ್ಟಿಕರ್ ಅನ್ನು ಅವುಗಳ ವಿಂಡ್‌ಶೀಲ್ಡ್‌ಗಳಿಗೆ ಅಂಟಿಸಿಸಿದ್ದಾರೆ. ಕಾಂಗ್ಲೇಪಾಕ್ ಎಂಬುವುದು ಮಣಿಪುರದ ಐತಿಹಾಸಿಕ ಹೆಸರನ್ನು ಸೂಚಿಸುತ್ತದೆ.
ಶುಕ್ರವಾರ ಮುಂಜಾನೆ, ಇಂಫಾಲ್ ಪೂರ್ವ ಜಿಲ್ಲೆಯ ಆಂಡ್ರೊ ಪಾರ್ಕಿಂಗ್, ಕೊಂಗ್ಬಾ ಮತ್ತು ಖುರೈ ಪ್ರದೇಶಗಳಲ್ಲಿನ ರಸ್ತೆಬದಿಯ ತರಕಾರಿ ಮಾರಾಟಗಾರರಿಗೆ ಪ್ರತಿಭಟನಾಕಾರರು ಅಡ್ಡಿಪಡಿಸಿದ್ದಾರೆ. ವ್ಯಾಪಾರ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಉರಿಪೋಕ್, ಸಿಂಗ್ಜಮೈ ಮತ್ತು ಕ್ವಾಕಿಥೆಲ್‌ನಲ್ಲಿಯೂ ಸಂಪೂರ್ಣ ಬಂದ್ ಪರಿಸ್ಥಿತಿಯಿದೆ ಎಂದು ವರದಿ ಹೇಳಿದೆ.
ಗುರುವಾರ ರಾತ್ರಿ 2 ಕಿಲೋಮೀಟರ್ ಪಂಜಿನ ಮೆರವಣಿಗೆ ನಡೆಸಿದ ಬಂದ್ ಪ್ರತಿಭಟನಾಕಾರರು “ಮಣಿಪುರವನ್ನು ಅಳಿಸಿಹಾಕಲು ಸಾಧ್ಯವಿಲ್ಲ” ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಭದ್ರತಾ ದೃಷ್ಟಿಯಿಂದ ರಾಜಭವನಕ್ಕೆ ಹೋಗುವ ಆಯಕಟ್ಟಿನ ಸ್ಥಳಗಳಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ.
ಶಿರುಯಿ ಲಿಲಿ ಉತ್ಸವಕ್ಕೆ ಪತ್ರಕರ್ತರನ್ನು ಸಾಗಿಸುತ್ತಿದ್ದ ಬಸ್‌ನಲ್ಲಿದ್ದ ‘ಮಣಿಪುರ’ ರಾಜ್ಯದ ಹೆಸರನ್ನು ಭದ್ರತಾ ಸಿಬ್ಬಂದಿ ತೆಗೆದು ಹಾಕಿದ್ದಾರೆ ಎಂಬ ಆರೋಪದ ಬಗ್ಗೆ ರಾಜ್ಯ ಸರ್ಕಾರ ಬುಧವಾರ ತನಿಖೆ ಆರಂಭಿಸಿದೆ.
ಮಂಗಳವಾರ ಉಖ್ರುಲ್ ಜಿಲ್ಲಾ ಪ್ರವಾಸೋದ್ಯಮ ಉತ್ಸವಕ್ಕೆ ಅಥವಾ ಶಿರುಯಿ ಲಿಲಿ ಉತ್ಸವಕ್ಕೆ ಪತ್ರಕರ್ತರನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಬಸ್ ಅನ್ನು ತಡೆದ ಭದ್ರತಾ ಪಡೆಗಳು ಮಣಿಪುರ ಹೆಸರಿಗೆ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಡಿಐಪಿಆರ್ ಸಿಬ್ಬಂದಿ ವಿಂಡ್‌ಸ್ಕ್ರೀನ್‌ನಲ್ಲಿದ್ದ ರಾಜ್ಯದ ಹೆಸರನ್ನು ಬಿಳಿ ಕಾಗದದಿಂದ ಮರೆಮಾಡಬೇಕಾಯಿತು ಎಂದು ವರದಿಗಳು ಹೇಳಿವೆ.
ಈ ಬಗ್ಗೆ ತನಿಖೆ ಮಾಡಲು ರಾಜ್ಯ ಸರ್ಕಾರ ಇಬ್ಬರು ಸದಸ್ಯರ ಸಮಿತಿ ರಚಿಸಿದೆ. ಏನು ತಪ್ಪಾಗಿದೆ ಎಂಬುವುದರ ಬಗ್ಗೆ ಸಮಿತಿ ತನಿಖೆ ಮಾಡುತ್ತದೆ ಮತ್ತು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯಲು ಶಿಫಾರಸ್ಸುಗಳನ್ನು ನೀಡಲಿದೆ ಎಂದು ಸರ್ಕಾರ ಹೇಳಿದೆ.
ಆಯುಕ್ತರ ಎನ್. ಅಶೋಕ್ ಕುಮಾರ್ ಮತ್ತು ಕಾರ್ಯದರ್ಶಿ ಟಿ ಕಿರಣ್‌ಕುಮಾರ್ ಸಿಂಗ್ ಅವರನ್ನೊಳಗೊಂಡ ಸಮಿತಿಯು 15 ದಿನಗಳಲ್ಲಿ ತನಿಖಾ ವರದಿ ಸಲ್ಲಿಸಲಿದೆ.
ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರ ಕ್ಷಮೆಯಾಚನೆ ಮತ್ತು ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಡಿಜಿಪಿ ರಾಜೀವ್ ಸಿಂಗ್ ಹಾಗೂ ಮುಖ್ಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಸಿಂಗ್ ಅವರ ರಾಜೀನಾಮೆಗೆ ಒತ್ತಾಯಿಸಿ ಕೊಕೊಮಿ ಸಂಘಟನೆ ಬುಧವಾರ ಮಧ್ಯರಾತ್ರಿಯಿಂದ 48 ಗಂಟೆಗಳ ಸಾರ್ವತ್ರಿಕ ಮುಷ್ಕರವನ್ನು ಪ್ರಾರಂಭಿಸಿದೆ.
“ರಾಜ್ಯದ ಬಸ್‌ನಿಂದ ಮಣಿಪುರ ಹೆಸರನ್ನು ತೆಗೆದುಹಾಕಿದ ಕ್ರಮ ಮಣಿಪುರ ವಿರೋಧಿ ನಡೆಯಾಗಿದೆ. ಇದು ಮಣಿಪುರದ ಕಲ್ಪನೆ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಗುರುತಿನ ಪ್ರಶ್ನೆಯಾಗಿದೆ” ಎಂದು ಕೊಕೊಮಿ ಸಂಚಾಲಕ ಖುರೈಜಮ್ ಅಥೌಬಾ ಹೇಳಿದ್ದಾರೆ.
“ಯಾರ ಅದೇಶ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಣಿಪುರದ ಜನರಿಗೆ ಗೊತ್ತಾಗಬೇಕು. 48 ಗಂಟೆಗಳ ಒಳಗೆ ಸಾರ್ವಜನಿಕರಿಗೆ ಇದನ್ನು ಸ್ಪಷ್ಟಪಡಿಸಬೇಕು” ಎಂದು ಅಥೌಬಾ ಆಗ್ರಹಿಸಿದ್ದಾರೆ.
ಮಣಿಪುರದಲ್ಲಿ ಎರಡು ವರ್ಷಗಳ ನಂತರ ಶಿರುಯಿ ಲಿಲಿ ಉತ್ಸವ ಪುನರಾರಂಭಗೊಂಡಿದೆ. ಎನ್ ಬಿರೇನ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಮೈತೇಯಿ ಮತ್ತು ಕುಕಿ-ಝೋ ಸಮುದಾಯಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳಿಗೆ ಸಾಕ್ಷಿಯಾದ ರಾಜ್ಯ ಈಗ ರಾಷ್ಟ್ರಪತಿ ಆಳ್ವಿಕೆಯಲ್ಲಿದೆ.


