ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಆಸ್ತಿ ನಷ್ಟವಾದವರಿಗೂ ಪರಿಹಾರ ನೀಡಲಾಗುವುದು. ಪ್ರವಾಹದಲ್ಲಿ ಮೃತರಾದವರಿಗೆ ಐದು ಲಕ್ಷ ರೂ ಪರಿಹಾರ ನೀಡಲಾಗುವುದು.
ಇವಿಷ್ಟು ಇಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ನಡೆಸಿದ ಸುದ್ದಿಗೋಷ್ಟಿಯ ಮುಖ್ಯಾಂಶಗಳು. ಇನ್ನು ಸಚಿವ ಸಂಪುಟ ರಚನೆಯಾಗಿಲ್ಲದ ಕಾರಣ, ಪ್ರವಾಹ ಪರಿಸ್ಥಿತಿ ನಿಬಾಯಿಸಲು ಜಗದೀಶ್ ಶೆಟ್ಟರ್, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಕೋಟಾ ಶ್ರೀನಿವಾಸ ಪೂಜಾರಿ, ಪ್ರತಾಪ್ ಸಿಂಹ, ಬಿ.ವೈ.ರಾಘವೇಂದ್ರ, ಸಿ.ಎಂ.ಉದಾಸಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಇನ್ನೂ ಮೂರು ದಿನ ಉತ್ತರ ಕರ್ನಾಟಕದಲ್ಲೇ ವಾಸ್ತವ್ಯ ಮಾಡಲಿದ್ದು ಪ್ತವಾಹ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗುವುದು. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾರೆ.
ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೂರವಾಣಿ ಕರೆ ಮಾಡಿದ್ದು ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ. ಸೇನಾ ಹೆಲಿಕಾಪ್ಟರ್ ಹಾಗೂ ಅಗತ್ಯ ಕೇಂದ್ರ ರಕ್ಷಣಾ ತಂಡಗಳನ್ನು ರಾಜ್ಯಕ್ಕೆ ಇಂದು ಸಂಜೆಯೊಳಗೆ ಕಳುಹಿಸುವುದಾಗಿ ಭರವಸೆ ನೀಡಿದ್ದು, ಸೇನೆಯ ಹತ್ತು ಹೆಲಿಕಾಪ್ಟರ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ಗೆ ಕಳುಹಿಸುವ ಸಂಭವವಿದೆ ಎನ್ನಾಲಗುತ್ತಿದೆ.


