ಎಲ್ಗರ್ ಪರಿಷತ್ ಪ್ರಕರಣದಲ್ಲಿ ಸುದೀರ್ಘ ಸೆರೆವಾಸ ಅನುಭವಿಸುತ್ತಿರುವ ಏಳು ಮಂದಿ ಮಾನವ ಹಕ್ಕುಗಳ ಹೋರಾಟಗಾರರು ಶುಕ್ರವಾರದಿಂದ (ಅ.18) ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಪ್ರಕರಣದ ಕಳೆದ ಮೂರು ವಿಚಾರಣೆಗಳಿಗೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಭದ್ರತೆಯ ನೆಪವೊಡ್ಡಿ ತಲೋಜಾ ಕೇಂದ್ರ ಕಾರಾಗೃಹದಿಂದ ದಕ್ಷಿಣ ಮುಂಬೈನಲ್ಲಿರುವ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ಕರೆದೊಯ್ಯುವಲ್ಲಿ ನವ ಮುಂಬೈ ಪೊಲೀಸರು ವಿಫಲರಾಗಿದ್ದಾರೆ ಎಂದು ವರದಿಯಾಗಿದ್ದು, ಇದರ ವಿರುದ್ದ ಆರೋಪಿಗಳು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಎಲ್ಗರ್ ಪರಿಷತ್ ಪ್ರಕರಣದಲ್ಲಿ ಒಟ್ಟು 16 ಜನರು ಬಂಧಿತರಾಗಿದ್ದರು. ಈ ಪೈಕಿ ಒಬ್ಬರು ಸಾವನ್ನಪಿದ್ದು, 7 ಮಂದಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಉಳಿದ ಏಳು ಮಂದಿ ಪುರುಷರು ಮತ್ತು ಒಬ್ಬರು ಮಹಿಳೆ ಸೇರಿ 8 ಮಂದಿ ಇನ್ನೂ ಜೈಲಿನಲ್ಲಿದ್ದಾರೆ.
ಮಾನವ ಹಕ್ಕುಗಳ ವಕೀಲ ಸುರೇಂದ್ರ ಗ್ಯಾಡ್ಲಿಂಗ್, ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಹನಿ ಬಾಬು, ಕೈದಿಗಳ ಹಕ್ಕುಗಳ ಹೋರಾಟಗಾರ ರೋನಾ ವಿಲ್ಸನ್, ಸಾಂಸ್ಕೃತಿಕ ಕಾರ್ಯಕರ್ತರಾದ ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್, ವಿದ್ರೋಹಿ ನಿಯತಕಾಲಿಕದ ಸಂಪಾದಕ ಮತ್ತು ಲೇಖಕ ಸುಧೀರ್ ಧಾವಳೆ ಮತ್ತು ಬುಡಕಟ್ಟು ಹಕ್ಕುಗಳ ಹೋರಾಟಗಾರ ಮಹೇಶ್ ರಾವುತ್ ಪ್ರಸ್ತುತ ತಲೋಜಾ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾಗಿ ಬೈಕುಲ್ಲಾ ಮಹಿಳಾ ಜೈಲಿನಲ್ಲಿರುವ ಹೋರಾಟಗಾರ್ತಿ ಜ್ಯೋತಿ ಜಗತಾಪ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣದ ಎಲ್ಲಾ 16 ಆರೋಪಿಗಳನ್ನು “ನಗರ ನಕ್ಸಲರು” ಎಂದು ಆರೋಪಿಸಲಾಗಿದೆ. ಅವರ ವಿರುದ್ದ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಹಬ್ಬಗಳು, ಚುನಾವಣೆಗಳು ಮತ್ತು ವಿಐಪಿ ಭೇಟಿಗಳ ಕಾರಣ ಜೈಲಿನಿಂದ ನ್ಯಾಯಾಲಯಕ್ಕೆ ಅಥವಾ ಆಸ್ಪತ್ರೆಗೆ ಸೆರೆವಾಸದಲ್ಲಿರುವವರನ್ನು ಕರೆದೊಯ್ಯಲು ಭದ್ರತಾ ಸಿಬ್ಬಂದಿಗಳ ಕೊರತೆಯಿದೆ ಎಂದು ಹೇಳಲಾಗಿದೆ.
ಜೈಲಿನಲ್ಲಿರುವವರಲ್ಲಿ, ಸುರೇಂದ್ರ ಗ್ಯಾಡ್ಲಿಂಗ್ ಅವರು ನ್ಯಾಯಾಲಯದಲ್ಲಿ ತನ್ನ ಪರ ತಾನೇ ವಾದ ಮಾಡುತ್ತಿದ್ದಾರೆ. ಆದ್ದರಿಂದ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸದಿದ್ದರೆ, ಅವರು ಯಾವುದೇ ಅರ್ಜಿಗಳನ್ನು ಸಲ್ಲಿಸಲು ಅಥವಾ ವಾದ ಮಂಡಿಸಲು ಸಾಧ್ಯವಿಲ್ಲ.
ಕೊನೆಯ ವಿಚಾರಣೆಯಲ್ಲಿ, ಗ್ಯಾಡ್ಲಿಂಗ್ ಮತ್ತು ಇತರರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ವ್ಯಕ್ತಿಗಳನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು. ಪೊಲೀಸರು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ನಾಡಗೀತೆ ವಿವಾದ | ತಮಿಳುನಾಡು ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರಕ್ಕೆ ಸ್ಟಾಲಿನ್ ಆಗ್ರಹ


