ಗೃಹ ಸಚಿವ ಅಮಿತ್ ಶಾ ಅವರು “ನಾನು ಆರೋಗ್ಯವಾಗಿದ್ದೇನೆ ಮತ್ತು ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂದು ಶನಿವಾರ ಮಧ್ಯಾಹ್ನ ಘೋಷಿಸಿದ್ದಾರೆ. ಆ ಮೂಲಕ ಅವರ ಆರೋಗ್ಯದ ಸುತ್ತ ಹರಡಿರುವ ಎಲ್ಲಾ ವದಂತಿಗಳನ್ನು ಅಲ್ಲಗೆಳೆದಿದ್ದಾರೆ.
ಬಹಳಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಅಮಿತ್ ಶಾರವರ ಆರೋಗ್ಯ ತೀರಾ ಹದೆಗೆಟ್ಟಿದೆ, ಅವರಿಗೆ ಮೂಳೆ ಕ್ಯಾನ್ಸರ್ ರೋಗವಿದೆ ಎಂಬೆಲ್ಲ ವದಂತಿಗಳನ್ನು ಹಬ್ಬಿಸಿದ್ದರು. ಅವರು ಸಣ್ಣಗಾಗಿದ್ದಾರೆ, ತಲೆ ಕೂದಲೆಲ್ಲಾ ಉದುರಿಹೋಗಿದೆ, ಅದಕ್ಕಾಗಿಯೇ ಅವರು ಇತ್ತೀಚೆಗೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದೆಲ್ಲಾ ಸುದ್ದಿ ಹರಡಿದ್ದರು.
ಈ ಕುರಿತು ವಿವರವಾದ ಟ್ವಿಟ್ಟರ್ ಪೋಸ್ಟ್ ಮಾಡಿರುವ ಅವರು “ಕಳೆದ ಹಲವಾರು ದಿನಗಳಿಂದ, ಕೆಲವರು ನನ್ನ ಆರೋಗ್ಯದ ಬಗ್ಗೆ ಅನೇಕ ವದಂತಿಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡಿದ್ದಾರೆ, ನನ್ನ ಸಾವಿಗೆ ಪ್ರಾರ್ಥಿಸುವುದಾಗಿ ಅನೇಕ ಜನರು ಟ್ವೀಟ್ ಮಾಡಿದ್ದಾರೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
“ದೇಶವು ಪ್ರಸ್ತುತ ಕರೋನದಂತಹ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ ಮತ್ತು ನಾನು ದೇಶದ ಗೃಹ ಸಚಿವರಾಗಿ ಕಾರ್ಯನಿರತರಾಗಿರುವುದರಿಂದ, ನಾನು ಈ ಎಲ್ಲದರ ಬಗ್ಗೆ ಗಮನ ಹರಿಸಲಿಲ್ಲ. ನಿನ್ನೆ ತಡರಾತ್ರಿಯಲ್ಲಿ ಇದು ನನ್ನ ಗಮನಕ್ಕೆ ಬಂದಾಗ, ಈ ಜನರೆಲ್ಲರೂ ತಮ್ಮ ಕಾಲ್ಪನಿಕ ಆಲೋಚನೆಗಳನ್ನು ಆನಂದಿಸಬೇಕು ಎಂದು ನಾನು ಭಾವಿಸಿದೆ. ಹಾಗಾಗಿ ನಾನು ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
“ಆದರೆ ಕಳೆದ ಎರಡು ದಿನಗಳಿಂದ ನನ್ನ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಮತ್ತು ನನ್ನ ಹಿತೈಷಿಗಳು ಸಾಕಷ್ಟು ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಕಾಳಜಿಯನ್ನು ನಾನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ನನಗೆ ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂದು ನಾನು ಇಂದು ಸ್ಪಷ್ಟಪಡಿಸಲು ಬಯಸುತ್ತೇನೆ ”ಎಂದು ಶಾ ಹೇಳಿದ್ದಾರೆ.
मेरे स्वास्थ्य की चिंता करने वाले सभी लोगों को मेरा संदेश। pic.twitter.com/F72Xtoqmg9
— Amit Shah (@AmitShah) May 9, 2020
ನನ್ನ ಆರೋಗ್ಯದ ಬಗ್ಗೆ ತಮ್ಮ ಕಾಳಜಿಯನ್ನು ತೋರಿಸಿದ್ದಕ್ಕಾಗಿ ಹಿತೈಷಿಗಳು ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಗೃಹ ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.
“ಈ ವದಂತಿಗಳನ್ನು ಹರಡಿದ ಜನರ ಬಗ್ಗೆ ನನಗೆ ಯಾವುದೇ ದ್ವೇಷಭಾವನೆ ಅಥವಾ ಕೋಪ ಇಲ್ಲ. ನಿಮಗೂ ಧನ್ಯವಾದಗಳು” ಎಂದು ಶಾರವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಹಿಂದೂ ನಂಬಿಕೆಗಳ ಪ್ರಕಾರ ಇಂತಹ ವದಂತಿಗಳು ಒಬ್ಬರ ಆರೋಗ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನಂಬಲಾಗಿದೆ. “ಆದ್ದರಿಂದ, ಅಂತಹ ಎಲ್ಲಾ ಜನರು ಈ ಅರ್ಥಹೀನ ಕೆಲಸಗಳನ್ನು ಬಿಟ್ಟು ನನ್ನ ಕೆಲಸವನ್ನು ಮಾಡಲು ಅವಕಾಶ ಮಾಡಿಕೊಡುತ್ತಾರೆ ಮತ್ತು ಅವರ ಸ್ವಂತ ಕೆಲಸವನ್ನು ಸಹ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಕೇರಳದಲ್ಲೀಗ ಕೇವಲ 16 ಕೊರೊನಾ ಸೋಂಕಿತರು: ಸಚಿವ ಥಾಮಸ್ ಐಸಾಕ್
Also Read: COVID-19: Chronicle of the world’s largest lockdown


