ವಕ್ಫ್ (ತಿದ್ದುಪಡಿ) ಮಸೂದೆ, 2025ರ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದ 24 ಜನರಿಗೆ ಉತ್ತರ ಪ್ರದೇಶದ ಮುಝಫ್ಫರ್‌ನಗರ ಜಿಲ್ಲೆಯ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ತಲಾ 2 ಲಕ್ಷ ರೂಪಾಯಿ ಬಾಂಡ್ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಶನಿವಾರ (ಏ.5) ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ (ನಗರ) ಸತ್ಯನಾರಾಯಣ್ ಪ್ರಜಾಪತ್, “ಸಿಸಿಟಿವಿ ದೃಶ್ಯಾವಳಿಗಳ ಮೂಲಕ 24 ಜನರನ್ನು ಗುರುತಿಸಲಾಗಿದ್ದು, ನಂತರ ಅವರಿಗೆ ನೋಟಿಸ್ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
ಪೊಲೀಸರ ವರದಿಯ ಆಧಾರದ ಮೇಲೆ, ನಗರ ಮ್ಯಾಜಿಸ್ಟ್ರೇಟ್ ವಿಕಾಸ್ ಕಶ್ಯಪ್ ಅವರು ನೋಟಿಸ್ ಜಾರಿ ಮಾಡಲು ಸೂಚಿಸಿದ್ದಾರೆ. ಏಪ್ರಿಲ್ 16ರಂದು ಈ 24 ಜನರು ನ್ಯಾಯಾಲಯಕ್ಕೆ ಹಾಜರಾಗುವಂತೆ ಮತ್ತು ಶಾಂತಿ ಕಾಪಾಡುವ ಸಲುವಾಗಿ ತಲಾ 2 ಲಕ್ಷ ರೂಪಾಯಿ ಬಾಂಡ್ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ ಎಂದು ವರದಿಗಳು ಹೇಳಿವೆ.
ರಂಝಾನ್ ತಿಂಗಳ ಕೊನೆಯ ಶುಕ್ರವಾರ (ಜುಮಾಅತುಲ್ ವಿದಾ) ಮಾರ್ಚ್ 28 ರಂದು ವಕ್ಫ್ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ಮುಸ್ಲಿಮರು ತಮ್ಮ ತೋಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಅದರಂತೆ, ಮುಝಪ್ಪರ್‌ನಗರದ ಮಸೀದಿಗಳಲ್ಲೂ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ. ಅಂತವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ (ಎಐಎಂಪಿಎಲ್‌ಬಿ) ನಿರ್ದೇಶನದಂತೆ ಜನರು ಕಪ್ಪುಪಟ್ಟಿ ಧರಿಸಿ ಮೌನವಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದರು.
“ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಅಥವಾ ಉದ್ವಿಗ್ನತೆಯನ್ನು ಸೃಷ್ಟಿಸುವ ಉದ್ದೇಶವಿಲ್ಲದೆ, ಶಾಂತಿಯುತ ಮತ್ತು ಪ್ರಜಾಪ್ರಭುತ್ವದ ರೀತಿಯಲ್ಲಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಮಾತ್ರ ಕಪ್ಪುಪಟ್ಟಿಗಳನ್ನು ಧರಿಸಿದ್ದೆವು” ಎಂದು ನೋಟಿಸ್ ಸ್ವೀಕರಿಸಿದವರು ಹೇಳಿದ್ದಾರೆ ಎಂದು ವರದಿಯಾಗಿದೆ.
ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯು ಬುಧವಾರ ಲೋಕಸಭೆಯಲ್ಲಿ ಮಂಡನೆಯಾಗಿ ಅಂಗೀಕಾರಗೊಂಡಿದೆ. ಮರುದಿನ, ಗುರುವಾರ ರಾಜ್ಯಸಭೆಯಲ್ಲೂ ಅಂಗೀಕಾರ ಪಡೆದುಕೊಂಡಿದೆ. ಇನ್ನು ರಾಷ್ಟ್ರಪತಿಗಳ ಸಹಿ ಬೀಳಲು ಬಾಕಿಯಿದೆ.
ಈ ನಡುವೆ ಮಸೂದೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೆದ್, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಮತ್ತು ಎಎಪಿ ಸಂಸದ ಅಮಾನತುಲ್ಲಾ ಖಾನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
‘ನಕ್ಸಲರ ಹತ್ಯೆಯಾದಾಗ ಯಾರೂ ಖುಷಿ ಪಡುವುದಿಲ್ಲ, ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬನ್ನಿ’: ಅಮಿತ್ ಶಾ ಕರೆ


