ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರದ ಬಳಿಕ ಅಲ್ಲಿಯ ಮುಸ್ಲಿಮರ ಆರ್ಥಿಕ ಬಹಿಷ್ಕಾರದ ಕರೆಗಳು “ಸ್ವೀಕಾರಾರ್ಹವಲ್ಲ” ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಟೀಕಿಸಿದೆ.
ಹರಿಯಾಣ ಹಿಂಸಾಚಾರದ ಬಗ್ಗೆ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು, ಹಿಂಸಾಚಾರದ ನಂತರ ವರದಿಯಾಗಿರುವ ದ್ವೇಷ ಭಾಷಣದ ದೂರುಗಳನ್ನು ಪರಿಶೀಲಿಸಲು ಹರಿಯಾಣ ಪೊಲೀಸ್ ಮಹಾನಿರ್ದೇಶಕರ ನೇತೃತ್ವದ ಸಮಿತಿಯನ್ನು ರಚಿಸುವಂತೆ ಸೂಚಿಸಿದೆ.
ಆರೋಪಗಳು ನಿಜವೆಂದು ಕಂಡುಬಂದರೆ, ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಬಹುದು ಎಂದು ನ್ಯಾಯಾಧೀಶರು ಹೇಳಿದರು.
”ಸಮಸ್ಯೆಯೆಂದರೆ, SHO [ಠಾಣೆಯ ಗೃಹ ಅಧಿಕಾರಿ] ಮಟ್ಟದಲ್ಲಿ ಅಥವಾ ಪೊಲೀಸ್ ಠಾಣೆಯ ಮಟ್ಟದಲ್ಲಿನ ಸಿಬ್ಬಂದಿಗೆ ಕಾನೂನಿನ ಸೂಕ್ಷ್ಮತೆಗಳು ಹಾಗೂ ಸಂವೇದನಾಶಿಲತೆಯು ಕಡಿಮೆ ಇದೆ ಹಾಗಾಗಿ ಹಿರಿಯ ಅಥವಾ ಮಧ್ಯಮ ಮಟ್ಟದ ಅಧಿಕಾರಿಗಳು … ಅವರನ್ನು ಸಂವೇದನಾಶೀಲಗೊಳಿಸಬಹುದು” ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.
ಜುಲೈ 31ರಂದು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯ ಮೆರವಣಿಗೆ ಆಯೋಜಿಸಿದ್ದರು. ಈ ವೇಳೆ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಘರ್ಷಣೆಗಳು ಆರಂಭವಾದವು. ಆ ಬಳಿಕ ತ್ವರಿತವಾಗಿ ನುಹ್‌ನ ಆಚೆಗೆ ಗಲಾಟೆಗಳು ಶುರುವಾದವು.
ಗುರುಗ್ರಾಮ್‌ನಲ್ಲಿ ಹಿಂದುತ್ವವಾದಿ ಗುಂಪುಗಳು ಅತಿರೇಕಕ್ಕೆ ಹೋದವು. ಸೆಕ್ಟರ್ 57ರಲ್ಲಿ ಮಸೀದಿಯನ್ನು ಸುಟ್ಟುಹಾಕಿದರು, ಅದರ ಉಪ ಇಮಾಮ್ ಅನ್ನು ಕೊಂದರು ಮತ್ತು ಮರುದಿನ ಸೆಕ್ಟರ್ 70ರಲ್ಲಿ ಮುಸ್ಲಿಂ ವಲಸೆ ಕಾರ್ಮಿಕರ ಅಂಗಡಿಗಳು ಮತ್ತು ಗುಡಿಸಲುಗಳಿಗೆ ಬೆಂಕಿ ಹಚ್ಚಿದರು.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ವಿಳಂಬ ತನಿಖೆಗೆ ಸುಪ್ರೀಂ ಬೇಸರ
ಪತ್ರಕರ್ತ ಶಹೀನ್ ಅಬ್ದುಲ್ಲಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಈ ಹಿಂಸಾಚಾರದ ನಂತರ ರಾಜ್ಯದ ವಿವಿಧ ಕಡೆ 27ಕ್ಕೂ ಹೆಚ್ಚು ರ್ಯಾಲಿಗಳನ್ನು ಆಯೋಜಿಸಲಾಗಿದೆ ಮತ್ತು ದ್ವೇಷದ ಭಾಷಣವನ್ನು ಮಾಡಿದ್ದಾರೆ ತಿಳಿಸಿದ್ದಾರೆ.
”ಆಗಸ್ಟ್ 2ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗಿತ್ತು. ವಿಡಿಯೋದಲ್ಲಿ, ಸಂಹಸ್ತ್ ಹಿಂದೂ ಸಮಾಜದವರು ಹರಿಯಾಣದ ಹಿಸಾರ್‌ನಲ್ಲಿ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ, ಅಲ್ಲಿಯ ಎರಡು ದಿನಗಳಲ್ಲಿ ಇಲ್ಲಿ ಯಾವುದೇ ಮುಸ್ಲಿಮರು ಅಂಗಡಿಗಳನ್ನು ನಡೆಸುವಂತಿಲ್ಲ, ಮುಸ್ಲಿಮರ ಬಹಿಷ್ಕರಿಸಬೇಕು ಎಂದು ಅಲ್ಲಿಯ ನಿವಾಸಿಗಳಿಗೆ ತಿಳಿಸಲಾಗಿದೆ.
ಶುಕ್ರವಾರದ ವಿಚಾರಣೆಯಲ್ಲಿ, ಅಬ್ದುಲ್ಲಾ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸುಪ್ರೀಂ ಕೋರ್ಟ್ ಜನರನ್ನು ರಕ್ಷಿಸಬೇಕು ಮತ್ತು ಈ ರೀತಿಯ ಅನಿಯಂತ್ರಿತವಾಗಿ ದೌರ್ಜನ್ಯ ನಡೆಯಲು ಬಿಡಬಾರದು ಎಂದು ಹೇಳಿದರು.
ನ್ಯಾಯಮೂರ್ತಿ ಖನ್ನಾ ಅವರು ಸಮುದಾಯಗಳ ನಡುವೆ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ”ಈ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಯಾರೂ ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಮಾತನಾಡಿ, ದ್ವೇಷಪೂರಿತ ಭಾಷಣದ ಸಮಸ್ಯೆ ನಿವಾರಣೆಗೆ ಕಾನೂನಿನಡಿ ಈಗಾಗಲೇ ಯಾಂತ್ರಿಕ ವ್ಯವಸ್ಥೆ ಇದ್ದರೂ ಕೆಲವೆಡೆ ಅದು ಕಾರ್ಯನಿರ್ವಹಿಸುತ್ತಿಲ್ಲ ಎಂದರು.
ಸಮಿತಿಯನ್ನು ರಚಿಸುವ ಆಲೋಚನೆಯ ಬಗ್ಗೆ ಪೀಠವು ಸಿಬಲ್ ಅವರನ್ನು ಕೇಳಿದಾಗ, ಅವರು, ”ನನ್ನ ಸಮಸ್ಯೆ ಏನೆಂದರೆ ಇನ್ನೆರಡು ದಿನಗಳಲ್ಲಿ ಬೆದರಿಕೆ ಹಾಕಿ ಮುಸ್ಲಿಮರನ್ನು ಹೊರಹಾಕಿದಾಗ, ಈ ಸಮಿತಿಯು ಸಹಾಯ ಮಾಡಲು ಹೋಗುವುದಿಲ್ಲ” ಎಂದರು.
”ಎಫ್‌ಐಆರ್ ದಾಖಲಾದ ನಂತರ ಪೊಲೀಸರು ಅಪರಾಧಿಗಳನ್ನು ಬಂಧಿಸುವುದಿಲ್ಲ. ಎಫ್‌ಐಆರ್ ದಾಖಲಾದರೂ ಕೂಡ ಅವರ ವಿರುದ್ಧ ಯಾವುದೇ ಕ್ರಮ ಆಗುವುದಿಲ್ಲ ಎಂದರೆ ಎಫ್‌ಐಆರ್ ದಾಖಲಾಗಿದೆ ಎಂದು ಹೇಳುವುದರ ಅರ್ಥವೇನು?” ಎಂದು ಸಿಬಲ್ ಕೇಳಿದರು.
ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 18 ರಂದು ನಡೆಯಲಿದೆ.


