ನವದೆಹಲಿ: ಅಡಕೆ ಕ್ಯಾನ್ಸರ್‌ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ವರದಿ ಪುನರುಚ್ಚರಿಸಿರುವುದು ವಿವಾದಕ್ಕೀಡಾಗಿರುವುದರಿಂದ ಕೇಂದ್ರವು ಅಡಕೆಯ ಆರೋಗ್ಯದಿಂದಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಮುಂದಾಗಿದೆ.
ಮಂಗಳವಾರ ಲೋಕಸಭೆಯಲ್ಲಿ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಭಗೀರಥ ಚೌಧರಿ ಅವರು ಲಿಖಿತ ಉತ್ತರ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯಡಿ ಕಾರ‍್ಯ ನಿರ್ವಹಿಸುವ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರೀಸರ್ಚ್ ಆನ್ ಕ್ಯಾನ್ಸರ್ (ಐಎಆರ್‌ಸಿ) ಪ್ರಕಟಿಸಿದ ಸಂಶೋಧನಾ ಲೇಖನದಲ್ಲಿ ಅಡಕೆಯಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದಿತ್ತು. ಇದರ ಕುರಿತು ವೈಜ್ಞಾನಿಕ ಅಧ್ಯಯನ ನಡೆಯಲಿ ಎಂದು ಅಡಕೆ ಬೆಳೆಗಾರ ಸಂಘಟನೆಗಳು ಒತ್ತಾಯಿಸಿದ್ದವು.
ಅಡಕೆ ಬೆಳೆಗಾರರು ಈಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸರ್ಕಾರಕ್ಕೆ ಅರಿವು ಇದೆ ಎಂದು ಹೇಳಿರುವ ಕೇಂದ್ರ ಕೃಷಿ ಸಚಿವರು, ಅಡಕೆ ಆರೋಗ್ಯದ ಪರಿಣಾಮ ಕುರಿತ ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿರುವ ಕೆಲವು ಸಂಶೋಧನಾ ಪ್ರಬಂಧಗಳು ಸತ್ಯಾಸತ್ಯತೆಯನ್ನು ತಿಳಿಯಲು ಅಧ್ಯಯನ ನಡೆಸುತ್ತೇವೆ ಎಂದಿದ್ದಾರೆ.
ಈ ವರದಿಯಲ್ಲಿ ಹುಡಿ ಅಡಕೆ ಮತ್ತು ಗುಟ್ಕಾದಂತಹ ಮಿಶ್ರಣಗಳಿಂದ ಆರೋಗ್ಯದ ಮೇಲಿನ ಪರಿಣಾಮಗಳನ್ನು ಉಲ್ಲೇಖಿಸಿದೆ. ಅದರಲ್ಲಿ ಇತರೆ ಪದಾರ್ಥಗಳ ಜೊತೆ ಅಡಕೆಯನ್ನು ಹೆಸರಿಸಲಾಗಿದೆ. ಅಡಕೆ ಪ್ರತ್ಯೇಕ ಸೇವನೆಯಿಂದ ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿಲ್ಲಎಂದು ಸಚಿವರು ಮಾಹಿತಿ ನೀಡಿದ್ದಾರೆ.
2023ರ ನವೆಂಬರ್‌ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್), ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(ಸಿಪಿಸಿಆರ್‌ಐ) ಕೈಗೊಂಡಿರುವ ಅಧ್ಯಯನದ ಪ್ರಕಾರ, ಅಡಕೆಯಲ್ಲಿ ಅರೆಕೋಲಿನ್ ಅಂಶ ಇರುವುದನ್ನು ವರದಿಗಳು ಬಹಿರಂಗಪಡಿಸಿವೆ. ಈ ಪ್ರಯೋಗದಲ್ಲಿ ಬಳಸಲಾದ ಅರೆಕೋಲಿನ್ ಅಂಶದ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಆದರೆ ಕಡಿಮೆ ಪ್ರಮಾಣದಲ್ಲಿ ಅರೆಕೋಲಿನ್ ಬಳಕೆ ಮಾಡಿದರೆ ಹಾನಿಕಾರದ ಅಂಶವನ್ನು ತಡೆಯುತ್ತದೆ ಎಂಬ ವರದಿ ಇದೆ ಎಂದು ಸಿಪಿಸಿಆರ್‌ಐ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಅಡಕೆಯ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆಸಲು ಆಸಕ್ತಿ ಹೊಂದಿದೆ. ಅಡಕೆ ಮತ್ತು ಮಾನವನ ಆರೋಗ್ಯದ ವೈಜ್ಞಾನಿಕ ಸಂಶೋಧನೆ ಶೀರ್ಷಿಕೆಯಡಿ ಅಧ್ಯಯನ ಕೈಗೊಳ್ಳಲು ಈಗಾಗಲೇ ಚಿಂತನೆ ನಡೆಸಲಾಗಿದೆ. ಈ ಅಧ್ಯಯನವು ಸುಮಾರು 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳ ಮೂಲಕ ನಡೆಯಲಿದೆ ಎಂದು ಸಚಿವರು ಲೋಕಸಭೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ….ದಲಿತರಿಂದ ದೇವಾಲಯ ಪ್ರವೇಶ: ಪೂಜೆ ಸ್ಥಗಿತ


