Homeಅಂಕಣಗಳುಈ ಯುಗಧರ್ಮದ – zeitgeistಗೆ ಪ್ರತಿಚಿಂತನೆಗಳನ್ನು ಬೆಳೆಸೋಣ!

ಈ ಯುಗಧರ್ಮದ – zeitgeistಗೆ ಪ್ರತಿಚಿಂತನೆಗಳನ್ನು ಬೆಳೆಸೋಣ!

- Advertisement -
- Advertisement -

29 ಸೆಪ್ಟೆಂಬರ್ ಇದೇ ಹೊತ್ತಿಗೆ ಗಾಂಧಿ ಸಂಚಿಕೆಯ ಕೆಲಸವನ್ನು ಮುಗಿಸಿದ್ದೆವು. ಹದಿನಾರು ಪುಟಗಳ ನಮ್ಮ ಪುಟ್ಟ ವಾರಪತ್ರಿಕೆಯಲ್ಲಿ ಸುಮಾರು ಹತ್ತು ಪುಟಗಳಷ್ಟು ಗಾಂಧಿ ನೆನಪಿಗೆ ಮೀಸಲಿಟ್ಟಿದ್ದೆವು. ಇಂದಿನ ಕಾಲಧರ್ಮಕ್ಕೆ ಗಾಂಧಿ ಚಿಂತನೆಗಳ ಪ್ರಸ್ತುತತೆಯನ್ನು ಚರ್ಚೆ ಮಾಡುವುದು ಅದರ ಉದ್ದೇಶ ಆಗಿತ್ತು. ವಿಶ್ವದೆಲ್ಲೆಡೆ ಬಿಕ್ಕಟ್ಟು ಎದುರಿಸುತ್ತಿರುವ ಸ್ಟೇಟ್ ಅಥವಾ ಪ್ರಭುತ್ವ ಅಥವಾ ಆಡಳಿತ ವ್ಯವಸ್ಥೆಯ ಪರಿಕಲ್ಪನೆಯ ಬಗ್ಗೆ, ಆರ್ಥಿಕ ವ್ಯವಸ್ಥೆ ಬಗ್ಗೆ ಗಾಂಧಿ ಅವರ ಚಿಂತನೆಗಳು ಇಂದಿಗೆ ಹೊಸ ಹೊಳಹುಗಳನ್ನು ನೀಡಬಲ್ಲವೇ ಎಂಬುದರ ಬಗ್ಗೆ ನ್ಯಾಯಪಥದ ಹಲವು ಲೇಖಕರು ಚರ್ಚಿಸಿದ್ದರು.

ಗಾಂಧಿ ಚಿಂತನೆಗಳ ಬಗ್ಗೆ ದೇಶದೆಲ್ಲೆಡೆ ನಡೆಯುವ ಇಂತಹ ಹುಡುಕಾಟದಲ್ಲಿ ನಾವೂ ಭಾಗಿಯಾಗಿದ್ದ ಸಮಯದಲ್ಲಿ ಆ ದಿನದಿಂದ ಮುಂದಿನ ಒಂದು ವಾರ ನಡೆದ ಸಂಗತಿಗಳು ಇವತ್ತಿನ ಯುಗಧರ್ಮದ ಬಗ್ಗೆ ಇನ್ನಷ್ಟು ಆತಂಕಕ್ಕೀಡಾಗುವಂತೆ ಮಾಡಿವೆ. zeitgeist ಎಂಬ ಪದ ಈ ದಿನಗಳಲ್ಲಿ ಬಹಳ ಪ್ರಚಲಿತದಲ್ಲಿ ಇದೆ. ಶಬ್ದಕೋಶದ ಪ್ರಕಾರ ಒಂದು ನಿರ್ದಿಷ್ಟ ಕಾಲದ ಚಿಂತನೆಗಳು ಮತ್ತು ನಂಬಿಕೆಗಳ ಅನುಗುಣವಾಗಿ ಜನರು ಒಟ್ಟಾರೆಯಾಗಿ ಪ್ರತಿನಿಧಿಸುವ ಮನೋಧರ್ಮ. ಈ zeitgeist ಮೇಲೆ ಆರೋಪಿಸಿ ಅದರ ಹಿಂದೆ ಅವಿತು ಆತಂಕಕ್ಕೀಡುಮಾಡಿದ ಆ ಸಂಗತಿಗಳನ್ನು ಉಪೇಕ್ಷೆ ಮಾಡಿ ಸುಮ್ಮನಿದ್ದುಬಿಡಬಹುದೇ?

photo courtesy : Het Parool

ಗಾಂಧಿ ಜಯಂತಿಗೆ ಇನ್ನು ಎರಡು ದಿನ ಇದೆ ಎನ್ನುವಾಗ ಹೊರಬಿದ್ದ ಬಾಬ್ರಿ ಮಸೀದಿ ಧ್ವಂಸದ ಕ್ರಿಮಿನಲ್ ಪ್ರಕರಣದ ತೀರ್ಪು ಸಂಘಪರಿವಾರ ಮತ್ತು ಬಿಜೆಪಿ ಪಕ್ಷಗಳು ತಾವು ಬಹು ದಿನಗಳಿಂದ ಪ್ರತಿಪಾದಿಸಿಕೊಂಡು ಬಂದಿದ್ದ ತಿರುಚಿದ ಇತಿಹಾಸಕ್ಕೆ ಸಿಕ್ಕ ಜಯ ಎಂಬಂತೆ ವಿಜಯೋತ್ಸವ ಆಚರಿಸುವುದರೊಂದಿಗೆ ತಣ್ಣಗೆ ಕಳೆದುಹೋಯಿತು. ಬಾಬ್ರಿ ಮಸೀದಿ ಧ್ವಂಸ ಮಾಡುವುದರ ಹಿಂದೆ ಇದ್ದ ಸಂಚಿನ ಬಗ್ಗೆ ಇದ್ದ ಎಷ್ಟೋ ಲಕ್ಷ ಪುಟಗಟ್ಟಲೆ ದಾಖಲೆಗಳು, ವಿಡಿಯೋ ದೃಶ್ಯಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆದವು. ಈ ತೀರ್ಪಿನ ನಂತರ ನಮ್ಮ ಮಾಧ್ಯಮಗಳಲ್ಲಿ ಅಂತಹ ನಿರೀಕ್ಷಿತ ಆಕ್ರೋಶ ಏನಾದರು ಕಂಡಿತೇ? ಲಂಕೇಶ್, ಪುತಿನರಂತಹ ಸಾಹಿತಿಗಳು ಒಂದು ಧರ್ಮದ ಪ್ರಾರ್ಥನಾ ಮಂದಿರ ಉರುಳಿಸುವುದರ ವಿರುದ್ಧ ಕನ್ನಡ ಮನಸ್ಸುಗಳಿಗೆ ತಿಳಿಸಿಕೊಟ್ಟಿದ್ದ ವಿವೇಕವನ್ನು ಇಂದು ಚಾಲ್ತಿಯಲ್ಲಿರುವ ಅದೆಷ್ಟು ಜನಪ್ರಿಯ ಸಾಹಿತಿಗಳು- ಕಲಾವಿದರು ಈ ಸಮಯದಲ್ಲಿ ನೆನಪಿಸಿಕೊಂಡರು? ಅವರಲ್ಲಿ ಅದೆಷ್ಟು ಜನ ತಮ್ಮ ಪ್ರಭಾವ ಬಳಸಿಕೊಂಡು ಸಾಮಾನ್ಯ ಜನತೆಗೆ ಇದರ ಬಗ್ಗೆ ತಿಳಿವು ಮೂಡಿಸಲು ಪ್ರಯತ್ನ ಮಾಡಿದರು? ಇದು zeitgeist ಮೊಮೆಂಟ್ ಎಂದು ಆಲಕ್ಷಿಸಬೇಕೇ? ಸುಪ್ರೀಂ ಕೋರ್ಟ್ ಮತ್ತು ಲಿಬರ್ಹಾನ್ ಆಯೋಗ ಈ ಹಿಂದೆಯೇ ಹೇಳಿರುವಂತೆ ಮಸೀದಿ ಉರುಳಿಸುವುದು ಪೂರ್ವನಿಯೋಜಿತ ಸಂಚಾಗಿತ್ತು ಎಂಬುದನ್ನು ನೆನಪಿಸಿ ಇದರ ವಿರುದ್ಧ ಧ್ವನಿಯೆತ್ತುವಂತೆ ಮತ್ತು ಈ ತೀರ್ಪಿನ ವಿರುದ್ಧ ಸಿಬಿಐ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ಒತ್ತಡ ತರಲು ಜನಾಂದೋಲನ ಸೃಷ್ಟಿಸಲು ಸಾಧ್ಯವಾಗುವ ಕಾಲದಲ್ಲಿ ನಾವು ಬದುಕಿದ್ದೇವೆಯೇ?

ಅಕ್ಟೋಬರ್ ಎರಡು – ಗಾಂಧಿ ಜಯಂತಿ ದಿನ. ಗಾಂಧಿ ಜಯಂತಿಯಂದು, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನವೂ ಆಗಿರುವುದರಿಂದ, ಅವರನ್ನು ಗಾಂಧಿ ವಿರೋಧಿಯಾಗಿ ಚಿತ್ರಿಸಿ, ಶಾಸ್ತ್ರಿ ಅವರ ಜನ್ಮದಿನವನ್ನು ನಾವು ದೊಡ್ಡದಾಗಿ ಆಚರಿಸಬೇಕು ಎಂದು ತಮ್ಮ ಗಾಂಧಿ ವಿರೋಧಿತನವನ್ನು – ಗೋಡ್ಸೆ ಪ್ರೀತಿಯನ್ನು ನಾಜೂಕಾಗಿ ಪ್ರದರ್ಶನ ಮಾಡುತ್ತಿದ್ದ ಸಂಘಪರಿವಾರ, ಈಗ ತಮ್ಮ ನೆಚ್ಚಿನ ಪಕ್ಷ ಅಧಿಕಾರದಲ್ಲಿ ಇರುವಾಗ ಮಹಾತ್ಮ ಗಾಂಧಿ ಹಂತಕ ನಾಥೂರಾಮ ಗೋಡ್ಸೆ ಪ್ರೀತಿಯನ್ನು ಕದ್ದುಮುಚ್ಚಿ ಪ್ರದರ್ಶನ ಮಾಡುವ ಹಂತವನ್ನು ಮೀರಿ ಬೆಳೆದಿದೆ. ಟ್ವಿಟ್ಟರ್ ನಲ್ಲಿ ‘#ನಾಥೂರಾಮ್ ಗೋಡ್ಸೆ ಜಿಂದಾಬಾದ್’ ಎಂಬ ಹ್ಯಾಷ್ ಟ್ಯಾಗ್ ಬಳಸಿ ಹಲವು ಗಂಟೆಗಳ ಕಾಲ ಅದು ಟ್ರೆಂಡಿಂಗ್‍ನಲ್ಲಿ ಇರುವಂತೆ ಸಂಘ ಪರಿವಾರದ ಸದಸ್ಯರು ನೋಡಿಕೊಂಡರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಕ್ಷದ ಸಂಸದರಾದ ಸಾಕ್ಷಿ ಮಹರಾಜ್, ಸಾಧ್ವಿ ಪ್ರಾಗ್ಯ ಮುಂತಾದವರು ಬಹಿರಂಗವಾಗಿಯೇ ಗೋಡ್ಸೆಯನ್ನು ಹೊಗಳಿ ಕೊಂಡಾಡಿದ್ದಾರೆ. ಅವರು ಇಂದಿಗೂ ಬಿಜೆಪಿ ಸಂಸದರಾಗಿ ಮುಲಾಜಿಲ್ಲದೆ ಮುಂದುವರೆದಿದ್ದಾರೆ. ಹೋದ ವರ್ಷದ ಗಾಂಧಿ ಜಯಂತಿಯ ದಿನ ಗೋಡ್ಸೆ ಪರವಾಗಿ ಮೂಡಿದ್ದ ಟ್ವೀಟ್‍ಗಳ ಸಂಖ್ಯೆಗೆ ಹೋಲಿಸಿದರೆ ಈ ವರ್ಷ ಟ್ರೆಂಡ್ ಇನ್ನೂ ದೊಡ್ಡದಾಗಿ ಬೆಳೆದಿದೆ. ಇದರಿಂದ ಉತ್ತೇಜಿತರಾಗಿ ಹಿಂದೂ ಮಹಾಸಭಾನವರು ಗೋಡ್ಸೆಗಾಗಿಯೇ ಒಂದು ನೂತನ ಯುಟ್ಯೂಬ್ ಚಾನೆಲ್ ತೆರೆಯಲು ಮುಂದಾಗಿರುವ ಸುದ್ದಿ ಕೂಡ ಬಂದಿದೆ. ಗೋಡ್ಸೆಯನ್ನು ಸಾರ್ವಜನಿಕವಾಗಿ ಮತ್ತು ಬಹಿರಂಗವಾಗಿ ಸಂಭ್ರಮಿಸುವ ಹೊಸ ಸಹಜ ಮನೋಧರ್ಮವನ್ನು zeitgeist ಎಂದು ಎಣಿಸಿದರೂ ಕೈಕಟ್ಟಿ ಕೂರುವ ಆಯ್ಕೆ ಒಂದೇ ಉಳಿದಿರುವುದಾ? ‘ತಟ್ಟು ಚಪ್ಪಾಳೆ ಪುಟ್ಟ ಮಗು ಗಾಂಧಿಗಿಂದು ಜನ್ಮದಿನ’ ಎಂಬ ಸಾಲುಗಳು ಮತ್ತೆ ಎಳೆಯ ಮಕ್ಕಳ ನಡುವೆ ರಿಂಗಣಿಸಿ, ಯುವಕರಿಗೆ ಗೋಡ್ಸೆಯ ಚಿಂತನೆಗಳ ಅಪಾಯವನ್ನು ತಿಳಿಯುವಂತೆ ಮಾಡಿ, ವಿಶಾಲವಾಗಿ ಹರಡಿ ಟ್ರೆಂಡ್ ಮಾಡುವುದು ಹೇಗೆ?

ಮತಾಂಧ ಉಗ್ರಗಾಮಿ ಗಾಂಧಿಯವರನ್ನು ಕೊಂದ ನಂತರದ, ಮಹಾತ್ಮ ಗಾಂಧಿಯವರ ಶವದ ಮೆರವಣಿಗೆಯಲ್ಲಿ ಅಂತಿಮ ನಮನ ಸಲ್ಲಿಸಲು ನೆರೆದಿದ್ದ ಅಪಾರ ಜನಸ್ತೋಮ ಹಾಗೂ ಸಾಗರದಂತೆ ನೆರೆದಿರುವ ಜನಸಂಖ್ಯೆಯ ಮಧ್ಯೆ ನಡೆಯುತ್ತಿರುವ ಗಾಂಧಿಯವರ ಅಂತಿಮ ಶವ ಸಂಸ್ಕಾರದ ಫೋಟೋಗಳು ಪೀಳಿಗೆಯಿಂದ ಪೀಳಿಗೆಗೆ ಮಹಾತ್ಮ ಸೃಷ್ಟಿಸಿದ್ದ ಮೌಲ್ಯಗಳ ಬಗ್ಗೆ ಹೇಳಿಕೆಯನ್ನು ನೀಡುತ್ತಿವೆ (ಕಾರ್ಟಿಯರ್-ಬ್ರೆಸ್ಸೋ ಫೋಟೋ). ಅಷ್ಟು ಜನರ ಆಕ್ರಂದನದ ನಡುವೆ ಶವ ಬೂದಿಯಾಗುತ್ತಿರುವ ದೃಶ್ಯ ಮನುಷ್ಯತ್ವವನ್ನು ಕೊಂದ ಉಗ್ರನ ಕಹಿ ನೆನಪನ್ನ ಜನಕ್ಕೆ ಮರುಕಳಿಸದೆ ಇರದು. ಇದೇ ಗಾಂಧಿ ಜಯಂತಿಗೆ ಎರಡು ದಿನದ ಹಿಂದೆ, ಅಂದರೆ ಬಾಬ್ರಿ ಮಸೀದಿ ಧ್ವಂಸ ಪೂರ್ವನಿಯೋಜಿತ ಅಲ್ಲ ಎಂಬ ತೀರ್ಪು ಕೊಟ್ಟು ಎಲ್ಲಾ ಆಪಾದಿತರನ್ನು ಖುಲಾಸೆ ಮಾಡಿದ ದಿನವೇ ಮತ್ತೊಂದು ಸುದ್ದಿ ಇಡೀ ದೇಶವನ್ನು ಬೆಚ್ಚಿಬೀಳಿಸಬೇಕಿತ್ತು. ಉತ್ತರ ಪ್ರದೇಶದ ಹಾಥ್ರಸ್‍ನಲ್ಲಿ ದಲಿತ ಬಾಲಕಿಯನ್ನು ಅಲ್ಲಿನ ಪ್ರಬಲ ಮತ್ತು ಶೋಷಕ ಜಾತಿಯ ಯುವಕರು ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪದ ನಡುವೆಯೇ, ಅಲ್ಲಿನ ಆಡಳಿತ ವ್ಯವಸ್ಥೆ ಆ ಬಾಲಕಿಯ ಕುಟುಂಬ ವರ್ಗಕ್ಕೂ ಅವಕಾಶ ನೀಡದೆ ರಹಸ್ಯವಾಗಿ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿತ್ತು. ಇಂಡಿಯಾ ಟುಡೆ ಮಾಧ್ಯಮ ಸಂಸ್ಥೆಯ ಪತ್ರಕರ್ತೆಯೊಬ್ಬರು ಆ ಮಧ್ಯರಾತ್ರಿಯಲ್ಲಿ ಪೊಲೀಸರ ಬೆದರಿಕೆಗೆ ಜಗ್ಗದೆ ತೆಗೆದ ಆ ಫೋಟೋ – ಶೋಷಕ ಜಾತಿಯ ಯುವಕರಿಂದ ಮೊದಲು ದೌರ್ಜನ್ಯಕ್ಕೆ ಒಳಗಾಗಿ – ಕೊಲೆಯಾಗಿ, ನಂತರ ಆಡಳಿತ ವ್ಯವಸ್ಥೆಯಿಂದ ಎರಡನೇ ಬಾರಿ ದೌರ್ಜನ್ಯಕ್ಕೆ ಒಳಗಾಗಿ ಅನಾಥ ಶವವಾಗಿ ಸುಡಲ್ಪಡುತ್ತಿದ – ಆ ಶವಸಂಸ್ಕಾರದ ಫೋಟೋ ಗಾಂಧಿ ಶವಸಂಸ್ಕಾರದ ಫೋಟೋದಷ್ಟೇ ಸಶಕ್ತವಾದ ಹೇಳಿಕೆ ಕೊಡುತ್ತಿದೆ. ಆದರೆ ಇವತ್ತಿನ ಕಾಲಧರ್ಮದ ಧೋರಣೆಯನ್ನು ಪ್ರತಿನಿಧಿಸಿದೆ. ಇನ್ನೂ ಹೆಚ್ಚು ಆತಂಕಮಯವಾಗಿದೆ. ಈ ಫೋಟೋ ಕೂಡ, ದಲಿತ ಬಾಲಕಿಯನ್ನು ದಮನಿಸಿದ, ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಹತ್ತಿರದವರಿಗೂ ಅವಕಾಶ ನೀಡದ ಆಡಳಿತ ವ್ಯವಸ್ಥೆಯ ಉಗ್ರತ್ವದ ಬಗ್ಗೆ ಮುಂದಿನ ಪೀಳಿಗೆಗಳಿಗೆ ನೆನಪು ಮಾಡಬಲ್ಲದೇ? ಈ ಸಂಗತಿ ಜನಸಾಮಾನ್ಯರಲ್ಲಿ ಆಕ್ರೋಶ ಹುಟ್ಟಿಸಿತೇ? ಅದರಿಂದ ಉತ್ತರಪ್ರದೇಶ ಆಡಳಿತ ಕೊಂಚವಾದರೂ ಬೆದರಿತೇ? ಸಂತ್ರಸ್ತೆಯ ಇಡೀ ಕುಟುಂಬವನ್ನು ಇನ್ನೂ ದಿಗ್ಭಂದನದಲ್ಲಿ ಇರಿಸಿ ಪ್ರಕರಣದ ಹಾದಿ ತಪ್ಪಿಸುವ ಕೆಲಸ ಆಗುತ್ತಿರುವುದು ದಟ್ಟವಾಗಿ ಗೋಚರಿಸುತ್ತಿದೆಯಲ್ಲವೇ? ಗಾಯದ ಮೇಲೆ ಬರೆ ಎಳೆದಂತೆ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಶೋಷಕ ಜಾತಿಯ ಜನರು ಖಾಪ್ ಪಂಚಾಯಿತಿಗಳನ್ನು ನಡೆಸಿ, ಜಾತಿ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳುವ ಸಂಗತಿಗಳು ನಡೆಯುತ್ತಿವೆ.

photo courtesy : India Today

ಇಲ್ಲಿಬರಲಿಸಂ, ಬಹುಸಂಖ್ಯಾತ ಕೋಮುವಾದ, ಧಾರ್ಮಿಕ ಮತ್ತು ಆರ್ಥಿಕ ಅಲ್ಪಸಂಖ್ಯಾತರನ್ನು ಕೃತಕವಾಗಿ ಕೇಡಿಗಳನ್ನಾಗಿಸಿ – ಅದನ್ನು ಪ್ರಚಾರ ಮಾಡಿ ಸಂಭ್ರಮಿಸುವ ಮನೋಭಾವ, ಪ್ರಾಚೀನದ ಪೊಳ್ಳು ಧಾರ್ಮಿಕ ವ್ಯವಸ್ಥೆಯಿಂದ ಸಿಕ್ಕಿರುವ ಪ್ರಿವಿಲೆಜ್ ಅನ್ನು ಬಿಟ್ಟುಕೊಡಲು ತಯಾರು ಆಗದ ಮನಸ್ಥಿತಿ, ಸಮತಾವಾದದ ಬಗ್ಗೆ ಕೆಟ್ಟ ಧೋರಣೆ, ಆರ್ಥಿಕ ಅಸಮಾನತೆಯನ್ನು ಸಮರ್ಥಿಸಿಕೊಳ್ಳುವ ಮತ್ತು ಅದಕ್ಕೆ ಅವಕಾಶ ಕೊಡುವ ದೊಡ್ಡ ಕಾರ್ಪೋರೆಟ್‍ಗಳ ತಾಳಕ್ಕೆ ಕುಣಿಯುವ ಸಂಕಲ್ಪ – ಇವೆಲ್ಲಾ ಯಾವುದೇ ಅಂಕೆಯಿಲ್ಲದೆ ಬೆಳೆದಿರುವುದು ಇವತ್ತಿನ zeitgeist. ಕೆಡುಕಿನ ಲಕ್ಷಣಗಳು ಎಲ್ಲರಿಗೂ ತಿಳಿದಿವೆ. ಆ ಕಾಲದ ಜಾತ್ಯತೀತತೆಯ, ತಮ್ಮ ಜಾತಿಯ-ಧರ್ಮದ-ಜನಾಂಗದ ಪ್ರಿವಿಲೆಜ್ ತೊರೆದು ಸಮ ಸಮಾಜದ ಕನಸು ಕಾಣುವ, ದುರ್ಬಲ ಮತ್ತು ಅವಕಾಶವಂಚಿತ ಜನರ ಒಳಿತಿಗಾಗಿ ಕೆಲಸ ಮಾಡುವ, ದೌರ್ಜನ್ಯದ ಆಡಳಿತ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವ zeitgeist ಈ ದೇಶದಲ್ಲಿ ಎಂದಾದರೂ ಇತ್ತೆ? ಅದು ಮತ್ತೆ ಮರುಕಳಿಸಬಹುದೇ? ಇಂದು ವ್ಯಾಕವಾಗಿರುವ zeitgeist ಅನ್ನು ಒಪ್ಪಿಕೊಳ್ಳದ, ಅದನ್ನು ಮುಖಾಮುಖಿಯಾಗಿ ಬದಲಿಗಳನ್ನು ಹುಡುಕುವಲ್ಲಿ ಬಹುಶಃ ವಿವೇಕದ ಸಮಾಜವನ್ನು ಮರುಕಟ್ಟುವ ಯಶಸ್ಸು ಅಡಗಿದೆ.

ಈ ಎಲ್ಲಾ ನಿರಾಶವಾದದ ನಡುವೆ ಭರವಸೆಯ ಕಿರಣಗಳು ಇನ್ನೂ ಅಲ್ಲಲ್ಲಿ ಉಳಿದಿವೆ. ಈ ಸರ್ವಾಧಿಕಾರಿ ಪರಿಸ್ಥಿತಿಯನ್ನು ವ್ಯಂಗ್ಯ ಮಾಡಿ ‘ದ ಕಾಕ್ ಇಸ್ ದ ಕಲ್ಪ್ರಿಟ್’ (ಪ್ರತಿ ಪೂವಂಕೋಳಿ) ಎಂಬ ನೀಳ್ಗತೆ ಬರೆದ ಮಲಯಾಳಂ ಸಾಹಿತಿ ಉನ್ನಿ. ಆರ್ ಇದ್ದಾರೆ. ಮಲಯಾಳಂನಲ್ಲಿ ಆ ಪುಸ್ತಕ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನ ಕೊಂಡು ಓದಿದವರಿದ್ದಾರೆ. ಕೇಂದ್ರ ಸರ್ಕಾರ ರೈತ, ಕಾರ್ಮಿಕ ಮತ್ತು ಜನಸಾಮಾನ್ಯರ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿರುವುದರ ಬಗ್ಗೆ ಹಲವು ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿವೆ. ಹಲವು ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಐಕ್ಯಹೋರಾಟ ನಡೆಸಿವೆ. ಈ ಹೋರಾಟವನ್ನು ಕವರ್ ಮಾಡುವಂತೆ ಯಾತಾಸ್ಥಿತಿವಾದದ ಪ್ರತಿಪಾದಕ ಮಾಧ್ಯಮಗಳ ಮೇಲೆ ಒತ್ತಡ ಹಾಕಲು ಸಫಲವಾಗಿವೆ. ಉತ್ತರ ಪ್ರದೇಶದ ಸರ್ಕಾರ ಸೃಷ್ಟಿಸಿರುವ ರಿಪ್ರೆಸಿವ್ ವಾತಾವರಣದ ನಡುವೆಯೂ ಕೆಲವೇ ಕೆಲವು ಪತ್ರಕರ್ತೆಯರಾದರೂ ಪೊಲೀಸರಿಗೆ ಸವಾಲೆಸೆದು ರೇಪ್ ಸಂತ್ರಸ್ತೆಯ ಕುಟುಂಬದವರ ಸಂಪರ್ಕ ಸಾಧಿಸಲು ಯಶಸ್ವಿಯಾಗಿದ್ದಾರೆ. ಪೊಲೀಸರ ಎದುರೇ ಒಬ್ಬಂಟಿಯಾಗಿ ಧರಣಿ ಕುಳಿತವರಿದ್ದಾರೆ. ವಿರೋಧ ಪಕ್ಷದ ಮುಖಂಡರಾದ ಪ್ರಿಯಾಂಕ ಮತ್ತು ರಾಹುಲ್ ಗಾಂಧಿಯವರನ್ನು ಮೊದಲ ಬಾರಿಗೆ ಪೊಲೀಸರು ತಡೆದು ಬಂಧಿಸಿ ದೆಹಲಿಗೆ ವಾಪಸ್ ಕಳಿಸಿದ್ದರೂ ವಿಚಲಿತರಾಗದೆ ಮತ್ತೆ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಆಗಿ ಸಾಂತ್ವನ ಹೇಳಿದ್ದಾರೆ. ಉತ್ತರ ಪ್ರದೇಶದ ಯುವ ರಾಜಕಾರಣಿ ಚಂದ್ರಶೇಖರ್ ಆಜಾದ್ ನಿಷೇಧದ ನಡುವೆಯೂ ಐದಾರು ಕಿಲೋಮೀಟರ್ ದೂರ ನಡೆದು ಸಂತ್ರಸ್ತೆಯ ಪೋಷಕರನ್ನು ಭೇಟಿಯಾಗಿ ಆಡಳಿತ ವ್ಯವಸ್ಥೆಯ ದೌರ್ಜನ್ಯಕ್ಕೆ ಸವಾಲೆಸಿದಿದ್ದಾರೆ. ಟ್ವಿಟ್ಟರ್ – ಫೇಸ್‍ಬುಕ್ – ಇಂಸ್ಟಾಗ್ರಾಮ್‍ಗಳು ಸಮಾಜದಲ್ಲಿ ಸೃಷ್ಟಿ ಮಾಡುತ್ತಿರುವ ಒಡಕಿನ ಧ್ರುವೀಕರಣಕ್ಕೆ ಬೇಸತ್ತು ಆ ಸಾಮಾಜಿಕ ಮಾಧ್ಯಮಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದ ತಂತ್ರಜ್ಞರು, ಇಂಜಿನಿಯರ್ ಗಳು ಹೊರನಡೆದು ‘ಸೋಶಿಯಲ್ ಡಿಲೆಮಾ’ ತರಹದ ಸಾಕ್ಷ್ಯಚಿತ್ರಗಳಲ್ಲಿ ತಾವೆಸಗಿದ ತಪ್ಪನ್ನು ನಿವೇದಿಸಿಕೊಂಡು ಸುಧಾರಣೆಗೆ ಮುಂದಾಗಲು ಅಲೋಚಿಸುತ್ತಿದ್ದಾರೆ – ಪ್ರೇರೇಪಿಸುತ್ತಿದ್ದಾರೆ.

ಇಂತಹ ಪ್ರತಿರೋಧಗಳು- ಪ್ರತಿಚಿಂತನೆಗಳು ನಾಳೆ ನಾಡಿದ್ದೇ ಬದಲಾವಣೆ ತರದೇ ಹೋದರೂ, ಬುದ್ಧ – ಬಸವ – ಗಾಂಧಿ – ಅಂಬೇಡ್ಕರ್ – ಟ್ಯಾಗೋರ್ – ನೆಹರೂ – ಕುವೆಂಪು ಇಂತಹ ಮಾನವತಾವಾದಿಗಳು ಕಟ್ಟಿಕೊಟ್ಟಿದ್ದ ಅತ್ಯುತ್ತಮ ಚಿಂತನೆಗಳನ್ನು ಸಿಂಥೆಸೈಸ್ ಮಾಡಿದ ಅಲೋಚನೆಗಳು ಜನರನ್ನು ಪ್ರೇರೇಪಿಸುವ ದಿನಗಳನ್ನು ಪ್ರತಿನಿಧಿಸುವ zeitgeist ಮೊಮೆಂಟ್‍ಗಳ ಬಗ್ಗೆ ಚರ್ಚಿಸುವ ದಿನಗಳ ಬರವನ್ನು ತಡವಾಗಿಯಾದರೂ ನಿರೀಕ್ಷಿಸಬಹುದೇನೋ!


ಇದನ್ನೂ ಓದಿ: ಹತ್ರಾಸ್‌: ಬಂಧಿತ ಪತ್ರಕರ್ತನ ಮೇಲೆ “ಭಯೋತ್ಪಾದನೆ ನಿಗ್ರಹ” ಕಾನೂನಿನಡಿಯಲ್ಲಿ FIR!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...