ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆ’ಯನ್ನು ಬದಲಿಸಿ ಸೋಮವಾರದಿಂದ ದೇಶದಲ್ಲಿ ಜಾರಿಗೆ ಬಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹಲವು ಸಲಹೆಗಳನ್ನು ಕಳುಹಿಸಿದ್ದಾರೆ. ಇದಲ್ಲದೆ, ರಾಜ್ಯ ಮಟ್ಟದಲ್ಲಿ ಕಾನೂನುಗಳ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಈ ಮೂರು ಕಾನೂನುಗಳ (ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್) ಸಲಹೆ ಮತ್ತು ವಿಶ್ಲೇಷಣೆಯು ಕರ್ನಾಟಕ ಸರ್ಕಾರವು ರಚಿಸಿರುವ ತಜ್ಞರ ಸಮಿತಿಯ ಪರಿಶೀಲನಾ ವರದಿಯ ಫಲಿತಾಂಶವಾಗಿದೆ.
ಕರ್ನಾಟಕ ಸರ್ಕಾರದಿಂದ ಕೇಂದ್ರಕ್ಕೆ ಸಲಹೆಗಳು:
1. ಸಂವಿಧಾನದ ಆರ್ಟಿಕಲ್ 348 ಆದೇಶದ ಪ್ರಕಾರ, ಎಲ್ಲ ಕಾನೂನುಗಳ ಹೆಸರುಗಳು ಇಂಗ್ಲಿಷ್‌ನಲ್ಲಿರಬೇಕು. ಆದರೆ, ಕಾನೂನುಗಳ ಹೆಸರುಗಳು ಹಿಂದಿಯಲ್ಲಿರುವುದರಿಂದ ಈ ಬೇಡಿಕೆ ಇಡಲಾಗಿದೆ.
2. ಎಲ್ಲ ಮೂರು ಕಾನೂನುಗಳಲ್ಲಿ, ‘ಐಪಿಸಿ’ಯಲ್ಲಿನ ಬಹುಪಾಲು ನಿಬಂಧನೆಗಳನ್ನು ಉಳಿಸಿಕೊಳ್ಳಲಾಗಿದೆ ಮತ್ತು ಸಂಖ್ಯೆಗಳನ್ನು ಮರುನಿಗದಿ ಮಾಡಲಾಗಿದೆ. ಅನಗತ್ಯ ಗೊಂದಲಗಳನ್ನು ತಪ್ಪಿಸಲು, ಕಾನೂನು ನಿರಂತರತೆಯನ್ನು ಕಾಪಾಡಲು ಮತ್ತು ಹೊಸ ಚೌಕಟ್ಟಿಗೆ ಸುಗಮ ಸ್ಥಿತ್ಯಂತರವನ್ನು ಖಚಿತಪಡಿಸಿಕೊಳ್ಳಲು ಅಸ್ತಿತ್ವದಲ್ಲಿರುವ ಸಂಖ್ಯೆಗಳು ಮತ್ತು ಐಪಿಸಿಯಲ್ಲಿನ ವಿಭಾಗಗಳ ಯೋಜನೆಯನ್ನು ಉಳಿಸಿಕೊಳ್ಳಲು ಕರ್ನಾಟಕ ಸರ್ಕಾರವು ಸೂಚಿಸಿದೆ.
3. ಮೂರು ಹೊಸ ಕ್ರಿಮಿನಲ್ ನ್ಯಾಯ ಕಾನೂನುಗಳಲ್ಲಿ ಹಳೆಯ ನಿಬಂಧನೆಗಳ ಬಹುಪಾಲು ಉಳಿಸಿಕೊಂಡಿದೆ ಮತ್ತು ಕೆಲವೇ ನಿಬಂಧನೆಗಳನ್ನು ಪರಿಚಯಿಸಲಾಗಿದೆ, ಹೊಸ ಕಾಯಿದೆಗಳನ್ನು ಜಾರಿಗೊಳಿಸುವ ಬದಲು ಸೂಕ್ತ ತಿದ್ದುಪಡಿಗಳ ಮೂಲಕ ಉದ್ದೇಶವನ್ನು ಸಾಧಿಸಬಹುದು ಎಂದು ಸಲಹೆ ನೀಡಿದೆ.
ಸಾಂವಿಧಾನಿಕ ಹಕ್ಕು ಬಳಸಿಕೊಂಡಿ ತಿದ್ದುಪಡಿಗೆ ಚಿಂತನೆ
ಈ ಬೆಳವಣಿಗೆಗಳ ನಡುವೆ, ಸಿದ್ದರಾಮಯ್ಯ ನೇತೃತ್ವದ ಆಡಳಿತವು ಪ್ರಸ್ತುತ ಹೊಸ ರೂಪದಲ್ಲಿರುವ ಕಾನೂನನ್ನು ಸಂಪೂರ್ಣವಾಗಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕಾರಣ, ಭಾರತೀಯ ನ್ಯಾಯ ಸಂಹಿತೆಯನ್ನು ತಿದ್ದುಪಡಿ ಮಾಡಲು ಚಿಂತನೆ ನಡೆಸುತ್ತಿದೆ.
ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹವನ್ನು ಅಪರಾಧವೆಂದು ಪರಿಗಣಿಸುವುದು, ಆದರೆ ಆತ್ಮಹತ್ಯೆ ಅಲ್ಲದಂತಹ ನಿಬಂಧನೆಗಳನ್ನು ರಾಜ್ಯ ಸರ್ಕಾರ ಪ್ರಶ್ನಿಸಿದೆ. ಕಳೆದ ವರ್ಷ ಕರ್ನಾಟಕ ಸರ್ಕಾರ ಅಮಿತ್ ಶಾ ಅವರಿಗೆ 23 ಸಲಹೆಗಳನ್ನು ಕಳುಹಿಸಿತ್ತು. ಆದಾಗ್ಯೂ, ಯಾವುದೇ ಶಿಫಾರಸುಗಳನ್ನು ಪರಿಗಣನೆಗೆ ತೆಗೆದುಕೊಂಡು ಹೊಸ ಕಾನೂನುಗಳಲ್ಲಿ ಅಳವಡಿಸಲಾಗಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರದ ಮುಂದಿನ ನಡೆ ಕುರಿತು ಸಿದ್ದರಾಮಯ್ಯ ಮತ್ತು ರಾಜ್ಯ ಸಚಿವ ಸಂಪುಟ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಈ ಕುರಿತು ಮಾತನಾಡಿದ ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, “ಈ ಹಿಂದೆ ಭಾರತದ ಕೇಂದ್ರ ಗೃಹ ಸಚಿವರು ಕೇಳಿದಾಗ ಕರ್ನಾಟಕ ಸರ್ಕಾರ ಕೆಲವು ಶಿಫಾರಸುಗಳನ್ನು ಮಾಡಿತ್ತು. ನಮ್ಮ ಮುಖ್ಯಮಂತ್ರಿಗಳು ಸುಮಾರು 23 ಸಲಹೆಗಳನ್ನು ಬರೆದಿದ್ದಾರೆ. ಆದರೆ, ಕೇಂದ್ರವು ಆ ಸಲಹೆಗಳನ್ನು ನಿರ್ಲಕ್ಷಿಸಿದೆ, ಅದಕ್ಕಾಗಿಯೇ ನಾವು ನಮ್ಮ ಕಾರ್ಯಾಚರಣೆಯ ಪ್ರದೇಶ ಅಥವಾ ನ್ಯಾಯವ್ಯಾಪ್ತಿಗೆ ಸಂಬಂಧಿಸಿದಂತೆ ತಿದ್ದುಪಡಿಗಳನ್ನು ಪರಿಚಯಿಸಲು ಯೋಜಿಸುತ್ತಿದ್ದೇವೆ, ಇದು 7 ನೇ ವಿಧಿ, ಪಟ್ಟಿ 3 ರ ಅಡಿಯಲ್ಲಿ ನಾವು ತಿದ್ದುಪಡಿಗಳನ್ನು ಮಾಡುತ್ತೇವೆ. ನಮ್ಮ ಸರ್ಕಾರವು ಜುಲೈ 4 ರಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಈ ಕಾನೂನುಗಳಿಗೆ ತಿದ್ದುಪಡಿಗಳನ್ನು ತರಲು ಗಂಭೀರವಾಗಿ ಪರಿಗಣಿಸುತ್ತಿದೆ ಮತ್ತು ಈ ಅಧಿವೇಶನದಲ್ಲಿಯೇ ಅವುಗಳನ್ನು ಪರಿಚಯಿಸುತ್ತದೆ” ಎಂದಿದ್ದಾರೆ.
ಎಚ್‌ಕೆ ಪಾಟೀಲ್ ಅವರು ನಿಬಂಧನೆಗಳನ್ನು ಪ್ರಶ್ನಿಸಿದ್ದು, 90 ದಿನಗಳ ಪೊಲೀಸ್ ಕಸ್ಟಡಿಯು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಪಾದಿಸಿದರು.
90 ದಿನ ಪೊಲೀಸ್ ಕಸ್ಟಡಿಗೆ ಕೊಟ್ಟಿದ್ದಾರೆ, ಇಷ್ಟು ದಿನ ಪೊಲೀಸ್ ಕಸ್ಟಡಿಯಲ್ಲಿ ಇರೋದು ಹೇಗೆ? ಇದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೇ? ನ್ಯಾಯಾಂಗ ಹಸ್ತಕ್ಷೇಪವಿಲ್ಲದೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಪೊಲೀಸರಿಗೆ ನೀಡಿದ್ದಾರೆ; ಇದು ಪ್ರಜಾಸತ್ತಾತ್ಮಕವಲ್ಲ. ಈ ಕಾನೂನು ನ್ಯಾಯಾಂಗಕ್ಕೆ ಮತ್ತು ರಾಷ್ಟ್ರಗೀತೆ, ರಾಷ್ಟ್ರಪಿತ ಅಥವಾ ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ ಎಂದು ಅವರು ಹೇಳಿದರು.
ಸಂವಿಧಾನದ ಪ್ರಕಾರ, ಅಂತಹ ಕಾಯಿದೆಗಳು, ವಿಶೇಷವಾಗಿ ಪೋಷಕ ಕಾಯಿದೆಗಳು “ಇಂಗ್ಲಿಷ್‌ನಲ್ಲಿರಬೇಕು” ಎಂದು ಅವರು ಸೂಚಿಸಿದರು.
“ನಾವು ತಿದ್ದುಪಡಿಗಳನ್ನು ಮಾಡಲು ಗಂಭೀರವಾಗಿ ಯೋಚಿಸುತ್ತಿದ್ದೇವೆ. ಈ ಕಾನೂನುಗಳನ್ನು ಹಿಂಪಡೆಯಲು, ಬದಲಾವಣೆಗಳನ್ನು ಮಾಡಲು ಮತ್ತು ಅವುಗಳನ್ನು ಮತ್ತೆ ಜಾರಿಗೆ ತರಲು ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ; ‘ನಾವು ಸತ್ಯದೊಂದಿಗೆ ನಿಂತು, ಅಹಿಂಸಾ ಮಾರ್ಗ ಅನುಸರಿಸಬೇಕು’: ರಾಹುಲ್ ಗಾಂಧಿ


