ಗಣರಾಜ್ಯೋತ್ಸವದಂದು ಜಿಲ್ಲೆಯಾದ್ಯಂತ ಮಾಂಸಾಹಾರಿ ವಸ್ತುಗಳ ಮಾರಾಟವನ್ನು ನಿಷೇಧಿಸಿ ಒಡಿಶಾದ ಕೊರಾಪುಟ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜನವರಿ 26, ಗಣರಾಜ್ಯೋತ್ಸವದಂದು ಮಾಂಸ, ಕೋಳಿ, ಮೊಟ್ಟೆ, ಮೀನು ಮತ್ತು ಇತರ ಮಾಂಸಾಹಾರಿ ವಸ್ತುಗಳ ಮಾರಾಟವನ್ನು ನಿಷೇಧಿಸುವ ಆದೇಶವನ್ನು ಹೊರಡಿಸುವಂತೆ ಜಿಲ್ಲಾಧಿಕಾರಿ ಮನೋಜ್ ಸತ್ಯವಾನ್ ಮಹಾಜನ್ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು, ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.
ಮಾಂಸಾಹಾರಿ ವಸ್ತುಗಳ ಮಾರಾಟದ ಮೇಲಿನ ನಿಷೇಧದ ಹಿಂದಿನ ತಾರ್ಕಿಕತೆಯನ್ನು ಜಿಲ್ಲಾಧಿಕಾರಿಯ ಆದೇಶವು ವಿವರಿಸಿಲ್ಲ. ಗಣರಾಜ್ಯೋತ್ಸವದಂದು ಜಿಲ್ಲೆಯಾದ್ಯಂತ ಹೋಟೆಲ್‌ಗಳಲ್ಲಿ ಮಾಂಸಾಹಾರಿ ವಸ್ತುಗಳ ನಿಷೇಧ ಅನ್ವಯವಾಗುತ್ತದೆಯೇ? ಎಂಬುದು ಕೂಡ ಸ್ಪಷ್ಟಪಡಿಸಿಲ್ಲ ಎನ್ನಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜನರ ಆಹಾರ ಆಯ್ಕೆಯ ಮೇಲೆ ಸರ್ಕಾರ ಹೇಗೆ ನಿರ್ಬಂಧಗಳನ್ನು ವಿಧಿಸಬಹುದು ಎಂದು ಕೆಲವರು ಪ್ರಶ್ನಿಸಿದ್ದಾರೆ.
“ಸಂವಿಧಾನದ ಜಾರಿಯಾದ ದಿನವೇ ಯಾವುದೋ ಅನ್ಯಾಯ ಅಥವಾ ತಾರ್ಕಿಕವಲ್ಲದ ನಿಯಮವನ್ನು ಜಾರಿಗೊಳಿಸುತ್ತಿದ್ದಾರೆ. ನಿಮ್ಮಲ್ಲಿ ಸಂವಿಧಾನದ ನೈತಿಕತೆ ಎಲ್ಲಿದೆ? ಜನರ ಮೂಲಭೂತ ಹಕ್ಕುಗಳನ್ನು ಏಕೆ ಉಲ್ಲಂಘಿಸುತ್ತಿದ್ದೀರಿ? ಇದು ಕೇವಲ ಒಂದು ದಿನದ ಸಮಸ್ಯೆಯಲ್ಲ. ಇದು ನಮ್ಮೆಲ್ಲರ ಹಕ್ಕುಗಳ ಬಗ್ಗೆಯೇ ದೊಡ್ಡ ಪ್ರಶ್ನೆ!” ಎಂದು ಶೋಭಂಗಂ ಮೊಹಂತಿ ಎಂಬವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
“ಜನರಿಗೆ ಉತ್ತಮ ರಸ್ತೆಗಳು, ಸ್ವಚ್ಛ ನೀರು, ವಿದ್ಯುತ್, ಆಸ್ಪತ್ರೆಗಳು ಮುಂತಾದ ಒಳ್ಳೆಯ ಮೂಲಸೌಕರ್ಯ ಕೊಡೋದಕ್ಕಿಂತ, ಭ್ರಷ್ಟಾಚಾರ ಇಲ್ಲದ ಸೇವೆಗಳನ್ನು ಕೊಡೋದಕ್ಕಿಂತ ಹೆಚ್ಚಾಗಿ ಸರ್ಕಾರ/ಅಧಿಕಾರಿಗಳು ನಾವು ಏನು ತಿನ್ನುತ್ತೇವೆ, ಏನು ಉಟ್ಟುಕೊಳ್ಳುತ್ತೇವೆ ಅಂತದ್ದರ ಮೇಲೆ ಗಮನಹರಿಸುತ್ತಿದ್ದಾರೆ. ಭಾರತದ ಅಧಿಕಾರಶಾಹಿ ದೊಡ್ಡ ವೈಫಲ್ಯ. ನಾವು ಕಟ್ಟುತ್ತಿರುವ ತೆರಿಗೆ ಹಣ ಏನೂ ಪ್ರಯೋಜನ ಇಲ್ಲದೆ ವ್ಯರ್ಥವಾಗ್ತಿದೆ. ಸಾಮಾನ್ಯ ಜನರಿಗೆ ಏನೂ ವಾಪಸ್ ಸಿಗುತ್ತಿಲ್ಲ. ಎಲ್ಲವೂ ದೇವರ ಮೇಲೆ ಬಿಟ್ಟಿದ್ದೇವೆ” ಎಂದು ಮತ್ತೊಬ್ಬರು ಎಕ್ಸ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಒಂದು ತಿಂಗಳ ಹಿಂದೆ ನಡೆದ ಜಿಲ್ಲಾಡಳಿತದ ಗಣರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯ ಆಧಾರದ ಮೇಲೆ ಮಾಂಸಹಾರಿ ವಸ್ತುಗಳ ಮೇಲೆ ನಿಷೇಧ ಹೇರಲಾಗಿದ ಎಂದು ಮೂಲಗಳು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.


