ಕೋವಿಡ್ -19 ಲಾಕ್‌ಡೌನ್ ಅನ್ನು ಒಡಿಶಾ ರಾಜ್ಯ ಎಪ್ರಿಲ್ 30 ರ ವರೆಗೆ ವಿಸ್ತರಿಸಿದೆ. ಆ ಮೂಲಕ 21 ದಿನಗಳ ಲಾಕ್ ಡೌನ್ ಅನ್ನು ವಿಸ್ತರಿಸಿದ ಮೊದಲನೇ ರಾಜ್ಯ ಒಡಿಶಾವಾಗಿದೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಜ್ಯ ಸಚಿವ ಸಂಪುಟದ ಸಭೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಏಪ್ರಿಲ್ 30 ರವರೆಗೆ ರೈಲು ಮತ್ತು ವಾಯು ಸೇವೆಗಳನ್ನು ಪುನರಾರಂಭಿಸದಂತೆ ಒಡಿಶಾ ಕೇಂದ್ರವನ್ನು ವಿನಂತಿಸಲಾಗುವುದು ಎಂದು ಹೇಳಿದ್ದಾರೆ.
ಲಾಕ್‌ಡೌನ್ ವಿಸ್ತರಣೆಯ ಕುರಿತು ಎಲ್ಲ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 11ರಂದು ವೀಡಿಯೊ ಸಮ್ಮೇಳನ ನಡೆಸಿದ್ದಾರೆ. ಅದಕ್ಕೂ ಮುಂಚಿತವಾಗಿ ಲಾಕ್‌ಡೌನ್ ವಿಸ್ತರಿಸಿದ ಮೊದಲ ರಾಜ್ಯ ಒಡಿಶಾವಾಗಿದೆ. ಜೂನ್ 17 ರವರೆಗೆ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಡುತ್ತವೆ ಎಂದು ನವೀನ್ ಪಟ್ನಾಯಕ್ ಹೇಳಿದರು.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಒಡಿಶಾದಲ್ಲಿ ಇದುವರೆಗೆ 42 ದೃಡೀಕರಿಸಿದ ಕೋವಿಡ್ -19 ಪ್ರಕರಣಗಳು ವರದಿಯಾಗಿದೆ. ಕೊರೊನ ವೈರಸ್ ಸೋಂಕಿನಿಂದ ಒಡಿಶಾದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಏಪ್ರಿಲ್ 3 ರಂದು, ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ 1.5 ಕಿ.ಮೀ ಉದ್ದ ಮತ್ತು 800 ಮೀಟರ್ ಅಗಲವಿರುವ ಸುಮಾರು ಆಯತಾಕಾರದ ಪ್ರದೇಶವನ್ನು “ಕಂಟೈನ್‌ಮೆಂಟ್ containment ವಲಯ” ವನ್ನು ರಚಿಸುವುದಾಗಿ ಘೋಷಿಸಿದೆ. ಇದು 18 ಕೊರೊನ ಪ್ರಕರಣಗಳ ಕೇಂದ್ರ ಬಿಂದುವಾದ ವಸತಿ ಸಂಕೀರ್ಣವನ್ನು ಕೇಂದ್ರೀಕರಿಸಿದೆ.
ಟ್ವಿಟ್ಟರ್‌ನಲ್ಲಿ ನಗರದ ಪುರಸಭೆಯು ಕಟಕ್-ಪುರಿ ರಸ್ತೆಯ ಉದ್ದಕ್ಕೂ ಕಪ್ಪು ಚುಕ್ಕೆಗಳ ರೇಖೆಯನ್ನು ತೋರಿಸುವ ನಕ್ಷೆಯನ್ನು ಬಿಡುಗಡೆ ಮಾಡಿತು, ಇದು ವಲಯದ ಬಾಹ್ಯರೇಖೆಗಳನ್ನು ಸೂಚಿಸುತ್ತದೆ, ಇಲ್ಲಿ ಕಂಟೈನ್‌ಮೆಂಟ್ ಆದೇಶಗಳು ಇರುವವರೆಗೂ ಯಾರೂ ಪ್ರವೇಶಿಸಲು ಅಥವಾ ನಿರ್ಗಮಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಭುವನೇಶ್ವರದಲ್ಲಿ 72 ವರ್ಷದ ನಿವೃತ್ತ ಸರ್ಕಾರಿ ನೌಕರರೊಬ್ಬರು ಏಮ್ಸ್ ನಲ್ಲಿ ಸಾವನ್ನಪ್ಪಿದ ನಂತರ ಕೋವಿಡ್ -19 ಮೇಲೆ ಕಣ್ಗಾವಲು ಮತ್ತು ಪರೀಕ್ಷೆಯನ್ನು ಚುರುಕುಗೊಳಿಸಿದ್ದಾರೆ.


