ಒಡಿಸ್ಸಾದ ಸುಂದರ್‌ಗರ್ ಜಿಲ್ಲೆಯಲ್ಲಿನ ಕುಲ್ಡ ಗಣಿಗಾರಿಕೆ ವಿಸ್ತರಣೆಯ ವಿರುದ್ಧ ಪ್ರತಿಭಟಿಸುತ್ತಿದ್ದ 16 ಆದಿವಾಸಿಗಳು ಮತ್ತು ಮುಖಂಡರನ್ನು ಫೆಬ್ರವರಿ 14 ರಂದು ಬಂಧಿಸಲಾಗಿದೆ ಎಂದು ನ್ಯೂಸ್‌ಕ್ಲಿಕ್ ವರದಿ ಮಾಡಿದೆ.
ರಾಜ್ಯದ ತಾಪ್ರಿಯ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಆದಿವಾಸಿ ಸಮುದಾಯಗಳು ವಾಸವಿದ್ದರೂ ಸಹ ಅಲ್ಲಿ ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿಗಾರಿಕೆಗೆ ಅವಕಾಶ ನೀಡುತ್ತಿದೆ. ಇದರಿಂದ ಸುತ್ತಲಿನ ಪ್ರದೇಶಗಳಲ್ಲಿ ತೀವ್ರ ವಾಯುಮಾಲಿನ್ಯ, ಅಂತರ್ಜಲ ನಾಶವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಪ್ರದೇಶವು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ನೆಲೆಯಾಗಿದೆ. ಅವರು ಜನವರಿ 19 ರಿಂದ ಗಣಿಗಳ ವಿಸ್ತರಣೆಯನ್ನು ವಿರೋಧಿಸುತ್ತಿದ್ದಾರೆ. ಆದರೆ ಆ ಜನರನ್ನೇ ಅಲ್ಲಿಂದ ತೆರವುಗೊಳಿಸುವ ಸುದ್ದಿ ಬಂದ ನಂತರ ಈ ಪ್ರದೇಶದ 18 ಹಳ್ಳಿಗಳಲ್ಲಿ ಪ್ರತಿಭಟನೆಗಳು ಜೋರಾಗಿವೆ. ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ರಾಜ್ಯ ಸರ್ಕಾರ ಸೆಕ್ಷನ್ 144 ಅನ್ನು ಜಾರಿಗೊಳಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ನಮ್ಮೆಲ್ಲರನ್ನೂ ತಡೆಯುವ ಉದ್ದೇಶದಿಂದ 16 ಜನರನ್ನು ಬಂಧಿಸಲಾಗಿದೆ. ಪ್ರತಿಭಟನಾ ನಿರತ ಕಾರ್ಯಕರ್ತರ ಮೇಲೆ ಪೊಲೀಸ್ ಪಡೆಗಳು ಹಲ್ಲೆ ನಡೆಸಿವೆ. ಪ್ರತಿಭಟನೆ ನಿಲ್ಲಿಸದಿದ್ದರೆ ಅವರನ್ನು ಕೊಲ್ಲಲಾಗುತ್ತದೆ ಎಂದು ಬೆದರಿಸಲಾಗಿದೆ. ಅಲ್ಲದೆ ಕೊಲೆ ಯತ್ನ ಆರೋಪದ ಸೆಕ್ಷನ್ 307 ಅನ್ನು ಕಾರ್ಯಕರ್ತರ ಮೇಲೆ ದಾಖಲಿಸಲಾಗಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದೇವೆ” ಎಂದು ಪ್ರತಿಭಟನಾನಿರತ ಕಾರ್ಯಕರ್ತರು ತಿಳಿಸಿದ್ದಾರೆ.
ಈ ಹಳ್ಳಿಗಳು ಖಾದಿಯಾ ಬುಡಕಟ್ಟು ಸಮುದಾಯ ಮತ್ತು ಇತರ ಬುಡಕಟ್ಟು ಜನಾಂಗಗಳಾದ ಓರಂ ಮತ್ತು ಗೋಂಡ್ ಸಮುದಾಯಗಳಿಗೆ ನೆಲೆಯಾಗಿದೆ. ಈ ಗಣಿಯಿಂದ ಛತ್ತಿಸ್‌ಗಡಕ್ಕೆ ಸಾಗಿಸುವ ಕಲ್ಲಿದ್ದಲು ಮತ್ತು ಅದರಿಂದ ಉತ್ಪತ್ತಿಯಾಗುವ ನೊಣ ಬೂದಿ ತಮ್ಮ ಕೃಷಿ ಭೂಮಿಗಳನ್ನು ಮತ್ತು ಅವುಗಳ ಜಲಮೂಲಗಳನ್ನು ಕಲುಷಿತಗೊಳಿಸಿದೆ. ಅವರ ಮನೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿನ ಕುಡಿಯುವ ನೀರಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಆದಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಗಣಿ ಸಾಮರ್ಥ್ಯವು ಪ್ರಸ್ತುತ 14 ದಶಲಕ್ಷ ಟನ್‌ಗಳಷ್ಟು (ಎಂಟಿಪಿಎ) ಇದ್ದು, ಅದನ್ನು 19.60 ಎಂಟಿಪಿಎ ಸಾಮರ್ಥ್ಯಕ್ಕೆ ಹೆಚ್ಚಿಸಲು ಸಿದ್ದತೆ ನಡೆದಿದೆ ಎನ್ನಲಾಗಿದೆ. ಇದನ್ನು ವಿರೋಧಿಸಿ ತಿಂಗಳಿನಿಂದಲೂ ಆದಿವಾಸಿಗಳು ಹೋರಾಟ ನಡೆಸುತ್ತಿದ್ದಾರೆ. ಈ ಗಣಿಯನ್ನು 2007 ರಿಂದ ಮಹಾನದಿ ಕೋಲ್ಫೀಲ್ಡ್ಸ್ ಲಿಮಿಟೆಡ್ (ಎಂಸಿಎಲ್) ನಡೆಸುತ್ತಿದೆ. ಕಳೆದ ವರ್ಷ ಹಳ್ಳಿಗಳಲ್ಲಿನ ಜನರ ವಿರೋಧದ ನಡುವೆಯೂ ಮುಂದಿನ 30 ವರ್ಷಗಳವರೆಗೆ ಕಾರ್ಯನಿರ್ವಹಣೆಯ ವಿಸ್ತರಣೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ; ಕೊಸೊವೊ ಚುನಾವಣೆ: ಎಡಪಕ್ಷ ವೆಟೆವೆಂಡೋಸ್ಜೆಗೆ ಭರ್ಜರಿ ಜಯ


