ಕೋವಿಡ್ ವೇಳೆ ಕರ್ತವ್ಯ ನಿರ್ವಹಿಸಿ ಮರಣ ಹೊಂದಿದ ಸಾರಿಗೆ ನೌಕರರ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು. ಕೋವಿಡ್ ಕರ್ತವ್ಯ ವೇಳೆ ಜೀವ ಕಳೆದುಕೊಂಡ 368 ಮಂದಿ ಸಾರಿಗೆ ನೌಕರರಲ್ಲಿ 11 ಮಂದಿಗೆ ಮಾತ್ರ ಪರಿಹಾರ ಧನ ದೊರೆತಿದೆ ಎಂಬುದು ಬೆಳಕಿಗೆ ಬಂದಿದೆ.
ಎಷ್ಟು ಮಂದಿಗೆ ಪರಿಹಾರ ದೊರೆತಿದೆ ಎಂದು ಆರ್‌ಟಿಐ ಮೂಲಕ ಕೇಳಲಾಗಿತ್ತು. ಸರ್ಕಾರ ಬಹಿರಂಗಪಡಿಸಿರುವ ಮಾಹಿತಿಯು ಟೈಮ್ಸ್ ನೌ ನೆಟ್‌ವರ್ಕ್‌ಗೆ ಲಭ್ಯವಾಗಿದ್ದು, 11 ಮಂದಿಗೆ ಮಾತ್ರ ಈವರೆಗೆ ಪರಿಹಾರ ದೊರೆತಿದೆ ಎಂಬುದು ತಿಳಿದುಬಂದಿದೆ.
ಕೋವಿಡ್ ಎಲ್ಲೆಡೆ ಆತಂಕ ಸೃಷ್ಟಿಸಿ, ಜೀವಕ್ಕೆ ಅಪಾಯ ತಂದಿದ್ದ ಸಂದರ್ಭದಲ್ಲಿ ಜನರಿಗಾಗಿ ಸೇವೆ ಸಲ್ಲಿಸಿದ ಕೋವಿಡ್ ವಾರಿಯರ್‌ಗಳಲ್ಲಿ ಸಾರಿಗೆ ಸಿಬ್ಬಂದಿಗಳು ಸೇರಿದ್ದಾರೆ. ಜನರು ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣ ಬೆಳೆಸಲು ಒದ್ದಾಡುತ್ತಿದ್ದ ಸಂದರ್ಭದಲ್ಲಿ, ಊರಿಗೆ ಮರಳಲು ಸಾಧ್ಯವಾಗದೆ ಕಾರ್ಮಿಕರು ಕಾಲ್ನಡಿಗೆ ಆರಂಭಿಸಿದ್ದಾಗ ಸಾರಿಗೆ ನೌಕರರ ಸೇವೆಯು ಮಹತ್ವದ್ದಾಗಿತ್ತು.
ಶಾಸಕರಿಗೆ ಬೇಕಾದದ್ದನ್ನು ಮಾಡಿಕೊಳ್ಳುವ ಸರ್ಕಾರ, ಸಾರ್ವಜನಿಕ ಸೇವೆಯಲ್ಲಿರುವವರ ಸಾವಿಗೆ ಪರಿಹಾರ ನೀಡುವುದನ್ನು ಮರೆತಿದೆ. ಕೋವಿಡ್ ವೇಳೆ ಸೇವೆ ಸಲ್ಲಿಸಿದ ಸಾರಿಗೆ ಸಿಬ್ಬಂದಿಗೆ ಸಾವನ್ನಪ್ಪಿದರೆ 30 ಲಕ್ಷ ರೂ. ನೀಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಎರಡು ವರ್ಷಗಳಾದರೂ ಪರಿಹಾರ ಧನ ಬಿಡುಗಡೆಯಾಗಿಲ್ಲ.
ಟೈಮ್ಸ್‌ನೌ ನೆಟ್‌ವರ್ಕ್‌ಗೆ ಲಭ್ಯವಾಗಿರುವ ಮಾಹಿತಿಯಲ್ಲಿ ಸರ್ಕಾರದ ನಿರ್ಲಕ್ಷ್ಯ ಹೊರಬಂದಿದ್ದು, “ಇದು ನಿಜಕ್ಕೂ ದುರಂತ. ಸರ್ಕಾರ ಇದಕ್ಕೆ ನೇರ ಹೊಣೆ. ಇದು ಸರ್ಕಾರದಿಂದ ಆದ ಕೊಲೆಯಲ್ಲದೆ ಮತ್ತೇನೂ ಅಲ್ಲ. ಜಾಹೀರಾತು ಹಾಗೂ ಇತರೆ ಮುಖ್ಯವಲ್ಲದ ವಿಚಾರಗಳಿಗೆ ಸರ್ಕಾರ ಹಣ ವಿನಿಯೋಗಿಸುತ್ತಿದೆ. ಆದರೆ ಇಂತಹ ಸಂಗತಿಗಳಿಗೆ ಆದ್ಯತೆ ನೀಡಬೇಕಿದೆ” ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಆರ್‌ಟಿಐ ಕಾರ್ಯಕರ್ತ ತಾಹಿರ್ ಹುಸೇನ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿರಿ: ನೀಟ್ ವಿರೋಧಿಸಿ SFI ಯಿಂದ ದೇಶಾದ್ಯಂತ ಪ್ರತಿಭಟನೆ
#Exclusive: RTI documents accessed by @timesnow shows that in the past two years 368 KSRTC employees have died due to #COVID. However, compensation has been paid only to 11 by #Karnataka govt. https://t.co/0YiWQt1JAr
— Imran Khan (@KeypadGuerilla) October 26, 2021
ಕಾಂಗ್ರೆಸ್ ಮುಖಂಡ ಬ್ರಿಜೇಶ್ ಕಾಳಪ್ಪ ಪ್ರತಿಕ್ರಿಯಿಸಿ, “ಕೆಲವೇ ಕೆಲವರಿಗೆ ಮಾತ್ರ ಸರ್ಕಾರ ಪರಿಹಾರ ನೀಡಿದೆ ಎಂಬುದು ಆತಂಕಕಾರಿ ಸಂಗತಿ. ಇದು ಅಪರಾಧ ಕೃತ್ಯವೂ ಹೌದು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದ್ದಾರೆ.
ಶ್ರೀರಾಮುಲು ಪ್ರತಿಕ್ರಿಯೆ
ಟೈಮ್ಸ್‌ನೌಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು, “ಸೇವೆಯಲ್ಲಿದ್ದಾಗ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆಯೇ ಅಥವಾ ಮನೆಯಲ್ಲಿದ್ದು ಸಾವನ್ನಪ್ಪಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಎಲ್ಲ ಎಂ.ಡಿ.ಗಳಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಶೀಘ್ರವಾಗಿ ಪರಿಹಾರ ನೀಡಲಾಗುವುದು” ಎಂದು ತಿಳಿಸಿದ್ದಾರೆ.
ತಾಹೀರ್ ಹುಸೇನ್ ಅವರು ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳಿಗೂ ಆರ್‌ಟಿಐ ಅರ್ಜಿ ಸಲ್ಲಿಸಿ ಪಡೆದಿರುವ ಮಾಹಿತಿಯನ್ನು ‘ನಾನುಗೌರಿ.ಕಾಂ’ ಕಲೆ ಹಾಕಿದೆ.
ಕಲಬುರಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಗೆ ಸಲ್ಲಿಸಿರುವ ಅರ್ಜಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ, “ಕೋವಿಡ್‌ನಿಂದ ಸಾವನ್ನಪ್ಪಿದ 24 ಸಿಬ್ಬಂದಿಯ ದಾಖಲೆಗಳು ಸಲ್ಲಿಕೆಯಾಗಿವೆ. ಪರಿಹಾರದ ಮೊತ್ತದ ಕ್ರಮ ಪರಿಶೀಲನೆಯಲ್ಲಿದೆ” ಎಂದು ತಿಳಿಸಲಾಗಿದೆ.

***
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು ಕೇಂದ್ರ ಕಚೇರಿಗೆ ಸಲ್ಲಿಸಿರುವ ಅರ್ಜಿಗೆ ಬಂದಿರುವ ಉತ್ತರದಲ್ಲಿ, “ಮೊದಲನೇ ಅಲೆಯಲ್ಲಿ 39 ಮಂದಿ, ಎರಡನೇ ಅಲೆಯಲ್ಲಿ 57 ಮಂದಿ ಸಿಬ್ಬಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಅವರಲ್ಲಿ 7 ಮಂದಿಯ ಕುಟುಂಬಗಳಿಗೆ ಮಾತ್ರ ಪರಿಹಾರ ವಿತರಿಸಲಾಗಿದೆ” ಎಂದು ತಿಳಿಸಲಾಗಿದೆ.

***
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ನೀಡಿರುವ ಮಾಹಿತಿಯಲ್ಲಿ, “ಮಾರ್ಚ್ 2020ರಿಂದ ಮಾರ್ಚ್ 2021ರವರೆಗೆ ಒಟ್ಟು 32 ಸಿಬ್ಬಂದಿ, ಏಪ್ರಿಲ್ 2021ರಿಂದ ಜೂನ್ 21ರವರೆಗಿನ ಅವಧಿಯಲ್ಲಿ ಒಟ್ಟು 48 ಸಿಬ್ಬಂದಿ ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ. ಸದರಿ ಪ್ರಕರಣಗಳಲ್ಲಿ ನೌಕರರ ಅವಲಂಬಿತರಿಗೆ ಯಾವುದೇ ಪರಿಹಾರ ದೊರೆತ್ತಿಲ್ಲ” ಎಂದು ತಿಳಿಸಲಾಗಿದೆ.

***
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೀಡಿರುವ ಮಾಹಿತಿಯಲ್ಲಿ, “ಮಾರ್ಚ್ 2020ರಿಂದ ಜುಲೈ 2021ರ ಅವಧಿಯಲ್ಲಿ ಬಿಎಂಟಿಸಿಯ 108 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ಕು ಜನರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ” ಎಂದು ತಿಳಿಸಲಾಗಿದೆ.

ಇದನ್ನೂ ಓದಿರಿ: ದೀಪಾವಳಿ: ದೇವಾಲಯಗಳಾದ್ಯಂತ ‘ಗೋ ಪೂಜೆ’ ಮಾಡಲು ಆದೇಶಿಸಿದ ರಾಜ್ಯ ಸರ್ಕಾರ


