ಅಧಿಕೃತ ರಹಸ್ಯ ಕಾಯ್ದೆಯಡಿ ನಡೆದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಕ್ಷಣಾ ಸಂಬಂಧಿತ ವರ್ಗೀಕೃತ ದಾಖಲೆಗಳನ್ನು ಹೊಂದಿದ್ದರೆಂದು ಆರೋಪಿಸಿ, ಸ್ವತಂತ್ರ ಪತ್ರಕರ್ತರಾದ ರಾಜೀವ್ ಶರ್ಮಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
“ಅವರು ಕೆಲವು ರಕ್ಷಣಾ ಸಂಬಂಧಿತ ವರ್ಗೀಕೃತ ದಾಖಲೆಗಳನ್ನು ಹೊಂದಿದ್ದರೆಂದು ತಿಳಿದುಬಂದಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಮತ್ತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು” ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಸೆಲ್) ಸಂಜೀವ್ ಕುಮಾರ್ ಯಾದವ್ ಹೇಳಿದ್ದಾರೆ.
“ಸೆಪ್ಟೆಂಬರ್ 14 ರಂದು ಶರ್ಮಾ ಅವರನ್ನು ಬಂಧಿಸಿ, ಮರುದಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ನ್ಯಾಯಾಲಯವು ಪತ್ರಕರ್ತನನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿತು. ದೆಹಲಿ ಪೊಲೀಸರು ಆತನ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಅವರ ಕರೆಯ ದಾಖಲೆಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ” ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ.
ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ: ಮಾಜಿ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಬಂಧನ
ಶರ್ಮಾ ಅವರು ‘ರಾಜೀವ್ ಕಿಷ್ಕಿಂಧಾ’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದು, ಇದರಲ್ಲಿ ಸಾವಿರಾರು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಬಂಧನದ ದಿನ ಅವರು ಎರಡು ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ. ವಿದೇಶಾಂಗ ಮಂತ್ರಿಗಳ ಮಟ್ಟದಲ್ಲಿ ಉಭಯ ದೇಶಗಳ ನಡುವೆ ಮಾತುಕತೆ ನಡೆಸಿದರೂ, ಚೀನಾ ಇನ್ನೂ ಕಿಡಿಗೇಡಿತನ ಮಾಡುತ್ತದೆ ಎಂದು ವೀಡಿಯೊವೊಂದರಲ್ಲಿ ಹೇಳಿದ್ದಾರೆ. ಇನ್ನೊಂದು ವೀಡಿಯೋದಲ್ಲಿ ದೇಶದಲ್ಲಿನ ಪತ್ರಿಕೋದ್ಯಮದ ಪರಿಸ್ಥಿತಿಯ ಕುರಿತು ಮಾತನಾಡಿದ್ದರು.
5,300 ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಇವರ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಲಾಗಿದೆ. ಸೆಪ್ಟೆಂಬರ್ 7 ರಂದು, ಶರ್ಮಾ ಚೀನಾದ ಸರ್ಕಾರಿ ದಿನಪತ್ರಿಕೆ ಗ್ಲೋಬಲ್ ಟೈಮ್ಸ್‌ಗಾಗಿ ಲೇಖನವೊಂದನ್ನು ಬರೆದಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಬಂಧನ ಕೇಂದ್ರವಾಗಿ SC/ST ಹಾಸ್ಟೆಲ್: ಯೋಜನೆ ಕೈಬಿಟ್ಟ ಯುಪಿ ಸರ್ಕಾರ


