ಹರಿಯಾಣ ಸರ್ಕಾರ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದ್ದು, ಇದರಲ್ಲಿ ತಮ್ಮ ಗ್ರಾಮಗಳಿಗೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸುವ ನಿರ್ಣಯಗಳನ್ನು ಅಂಗೀಕರಿಸಿದ್ದಕ್ಕಾಗಿ ರೇವಾರಿಯಲ್ಲಿನ ಕೆಲ ಸರಪಂಚ್‌ಗಳು(ಪಂಚಾಯತ್ ಮುಖ್ಯಸ್ಥರು) ಮತ್ತು ಪಂಚಾಯತ್ ಸದಸ್ಯರಿಗೆ ನೋಟಿಸ್ ಜಾರಿಗೊಳಿಸಿದ್ದ ಐಎಎಸ್ ಅಧಿಕಾರಿ ಮೊಹಮ್ಮದ್ ಇಮ್ರಾನ್ ರಾಝಾ ಅವರು ಕೂಡ ಸೇರಿದ್ದಾರೆ.
ಸರಕಾರ 7 ಜಿಲ್ಲೆಗಳ ಉಪ ಆಯುಕ್ತರು ಮತ್ತು ಕೆಲವು ಜಿಲ್ಲೆಗಳ ಮುನ್ಸಿಪಲ್ ಕಮಿಷನರ್‌ಗಳು ಸೇರಿದಂತೆ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಏಪ್ರಿಲ್‌ನಲ್ಲಿ ರಾಝಾ ಅವರು ರೇವಾರಿಯ ಡೆಪ್ಯುಟಿ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಅವರನ್ನು ಜಿಂದ್‌ನ ಡೆಪ್ಯುಟಿ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ.
ಇದು IAS ಮತ್ತು ಹರಿಯಾಣ ನಾಗರಿಕ ಸೇವಾ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಎಂದು ರಾಜ್ಯ ಸರ್ಕಾರ ಹೇಳಿದೆ. ಹರ್ಯಾಣ ಮುಖ್ಯ ಕಾರ್ಯದರ್ಶಿ ಸಂಜೀವ್ ಕೌಶಲ್ ಶನಿವಾರ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
ಇಮ್ರಾನ್ ರಾಝಾ ಅವರನ್ನು ಹೊರತುಪಡಿಸಿ, ಸುಶೀಲ್ ಸರ್ವಾನ್ ಅವರನ್ನು ಪಂಚಕುಲ ಡಿಸಿ ಮತ್ತು ಪಂಚಕುಲದಲ್ಲಿರುವ ಶ್ರೀ ಮಾತಾ ಮಾನಸ ದೇವಿ ಶ್ರೈನ್ ಬೋರ್ಡ್‌ನ ಮುಖ್ಯ ಆಡಳಿತಾಧಿಕಾರಿಯಾಗಿ ನೇಮಿಸಲಾಯಿತು. ಮನೋಜ್ ಕುಮಾರ್ ಅವರನ್ನು ಯಮುನಾನಗರದ ಡಿಸಿಯಾಗಿ ನಿಯೋಜಿಸಲಾಗಿದೆ. ಮನದೀಪ್ ಕೌರ್ ಚಾರ್ಖಿ ದಾದ್ರಿ ಡಿಸಿಯಾಗಿ ನೇಮಿಸಲಾಗಿದೆ. ಸೋನಿಪತ್ ಡಿಸಿಯಾಗಿ ಮನೋಜ್ ಕುಮಾರ್, ರೇವಾರಿ ಡಿಸಿಯಾಗಿ ರಾಹುಲ್ ಹೂಡಾ ಮತ್ತು ಫತೇಹಾಬಾದ್ ಡಿಸಿಯಾಗಿ ಪ್ರಶಾಂತ್ ಪನ್ವಾರ್ ಅವರನ್ನು ನೇಮಿಸಲಾಗಿದೆ.
ಸಂಜಯ್ ಜೂನ್ ಅವರನ್ನು ಹರಿಯಾಣ ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಸೈನಿಕ ಮತ್ತು ಅರೆ ಸೈನಿಕ ಕಲ್ಯಾಣ ನಿಗಮಕ್ಕೆ ಮಹಾನಿರ್ದೇಶಕರಾಗಿ ನೇಮಿಸಲಾಗಿದೆ.
ಇದನ್ನು ಓದಿ: ಶಿವಮೊಗ್ಗ: ಗಾಂಧಿ ಪ್ರತಿಮೆ ಧ್ವಂಸ; ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ ಸಿಎಂ


