ಅನಧಿಕೃತವಾಗಿ ಮದ್ರಸಾ ನಿರ್ಮಿಸಲಾಗುತ್ತಿದೆ ಎಂಬ ವದಂತಿ ಹರಡಿದ ಹಿನ್ನೆಲೆ ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡವನ್ನು ಅಧಿಕಾರಿಗಳು ಬುಲ್ಡೋಝರ್ ಬಳಸಿ ಕೆಡವಿದ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಧಾಬಾ ಗ್ರಾಮದಲ್ಲಿ ಶಾಲೆಯನ್ನು ನಿರ್ಮಿಸಲು ಅಬ್ದುಲ್ ನಯೀಮ್ ಎಂಬ ನಿವಾಸಿ ಸುಮಾರು 20 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದ ಹಣ ಮತ್ತು ಕುಟುಂಬದ ಉಳಿತಾಯದಿಂದ ಹೂಡಿಕೆ ಮಾಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಸಾಲವಾಗಿ ಪಡೆದ 20 ಲಕ್ಷ ರೂಪಾಯಿ ಮತ್ತು ಕುಟುಂಬದ ಉಳಿತಾಯ ಹಣವನ್ನು ವ್ಯಯಿಸಿ ಧಾಬಾ ಗ್ರಾಮದಲ್ಲಿ ಅಬ್ದುಲ್ ನಯೀಮ್ ಎಂಬವರು ಶಾಲೆ ನಿರ್ಮಿಸುತ್ತಿದ್ದರು. ಧಾಬಾ ಗ್ರಾಮ ಮತ್ತು ಸುತ್ತಮುತ್ತಲಿನ ಆದಿವಾಸಿ ಹಳ್ಳಿಗಳ ಕುಟುಂಬಗಳು ತಮ್ಮ ಮಕ್ಕಳನ್ನು ಹಲವಾರು ಕಿಲೋಮೀಟರ್ ದೂರದ ಶಾಲೆಗಳಿಗೆ ಕಳುಹಿಸಬೇಕಾಗಿರುವುದರಿಂದ, ನಯೀಮ್ ಅವರು ನರ್ಸರಿಯಿಂದ 8 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ಶಾಲೆಯನ್ನು ನಿರ್ಮಿಸುತ್ತಿದ್ದರು. ಡಿಸೆಂಬರ್ 30ರಂದು ಅವರು ರಾಜ್ಯ ಶಾಲಾ ಶಿಕ್ಷಣ ಇಲಾಖೆಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ಕಳೆದ ವಾರದಿಂದ ಆ ಪ್ರದೇಶದಲ್ಲಿ ಮದ್ರಸಾ ನಿರ್ಮಿಸಲಾಗುತ್ತಿದೆ ಎಂಬ ವದಂತಿ ಹರಡಲು ಪ್ರಾರಂಭಿಸಿದ್ದವು ಎಂದು ವರದಿ ಉಲ್ಲೇಖಿಸಿದೆ.
“ನನ್ನ ಹಳ್ಳಿಯ ಪ್ರಗತಿ ಮತ್ತು ಮಕ್ಕಳಿಗೆ ಅಧ್ಯಯನ ಮಾಡಲು ಸುಲಭವಾಗಲೆಂದು ನನ್ನ ಖಾಸಗಿ ಭೂಮಿಯಲ್ಲಿ ಶಾಲೆ ನಿರ್ಮಿಸಲು ನಿರ್ಧರಿಸಿದ್ದೆ. ಆದರೆ, ನಾವು ಇಲ್ಲಿ ಅಕ್ರಮ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿ ಮದ್ರಸಾ ನಿರ್ಮಿಸಲಾಗುತ್ತಿದೆ ಎಂಬ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ. ಗ್ರಾಮದಲ್ಲಿ ಕೇವಲ 3 ಮುಸ್ಲಿಂ ಮನೆಗಳಿವೆ. ಹೀಗಿರುವಾಗ ಇಲ್ಲಿ ಮದ್ರಸಾ ನಿರ್ಮಿಸಲು ಹೇಗೆ ಸಾಧ್ಯ? ಇನ್ನು ಇಲ್ಲಿ ಕಟ್ಟಡದ ಕೆಲಸ ಪೂರ್ಣಗೊಂಡಿರಲಿಲ್ಲ. ತರಗತಿ ಪ್ರಾರಂಭಗೊಂಡು, ಮಕ್ಕಳೂ ಇರಲಿಲ್ಲ” ಎಂದು ನಯೀಮ್ ಹೇಳಿದ್ದಾರೆ.
ಭಾನುವಾರ, ಪಂಚಾಯತ್ ನಯೀಮ್‌ಗೆ ಶಾಲೆಯನ್ನು ಕೆಡವಲು ಆದೇಶಿಸಿ ನೋಟಿಸ್ ನೀಡಿತ್ತು. ಕಟ್ಟಡವನ್ನು ನಿರ್ಮಿಸಲು ನಿಮಗೆ ಅನುಮತಿ ಇಲ್ಲ ಎಂದು ಹೇಳಿತ್ತು. ಪಂಚಾಯತ್ ಕಚೇರಿಯ ಅಧಿಕಾರಿಗಳು ಅವರ ಪ್ರತಿಕ್ರಿಯೆಯನ್ನು ಸ್ವೀಕರಿಸಲು ನಿರಾಕರಿಸಿದ್ದರು ಮತ್ತು ಹಿಂತಿರುಗಲು ಹೇಳಿದ್ದರು ಎಂದು ಆರೋಪಿಸಲಾಗಿದೆ.
ಸ್ಥಳೀಯ ನಿವಾಸಿಗಳ ಪ್ರತಿಭಟನೆಯ ನಂತರ, ಪಂಚಾಯತ್ ಸೋಮವಾರ ಶಾಲೆಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ. ನಿರ್ಮಾಣವಾಗುತ್ತಿದ್ದ ಕಟ್ಟಡ ಅನಧಿಕೃತ ಮದ್ರಸಾ ಎಂದು ಆರೋಪಿಸಿ ಯಾವುದೇ ದೂರುಗಳು ಬಂದಿಲ್ಲ ಎಂದು ಸರ್ಪಂಚ್ ಹೇಳಿದ್ದರು ಎಂದಿದೆ.
ಆದಾಗ್ಯೂ, ಮಂಗಳವಾರ, ನಯೀಮ್ ಮತ್ತು ಕೆಲವು ಗ್ರಾಮಸ್ಥರು ಈ ವಿಷಯದ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಹೋದಾಗ, ಪಂಚಾಯತ್ ಆಡಳಿತವು ಶಾಲಾ ಕಟ್ಟಡದ ಕೆಲ ಭಾಗಗಳನ್ನು ಕೆಡವಿದೆ.
ಅತಿಕ್ರಮಣ ಮತ್ತು ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಪಂಚಾಯತ್ ನೀಡಿದ ದೂರಿನ ಮೇರೆಗೆ ಆಡಳಿತವು ಕ್ರಮ ಕೈಗೊಂಡಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಜಿತ್ ಮರಾವಿ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
“ಪರಿಶೀಲನೆಯಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಒಂದು ಭಾಗ ಅತಿಕ್ರಮಣ ಎಂದು ಕಂಡುಬಂದಿದೆ” ಎಂದು ಮರಾವಿ ಹೇಳಿದ್ದಾರೆ. “ಇಡೀ ಕಟ್ಟಡವನ್ನು ಕೆಡವಿಲ್ಲ, ಅಕ್ರಮ ಭಾಗವನ್ನು ಮಾತ್ರ ತೆಗೆದುಹಾಕಲಾಗಿದೆ” ಎಂದು ಮರಾವಿ ತಿಳಿಸಿದ್ದಾರೆ. ಎಲ್ಲಾ ಅನುಮತಿಗಳನ್ನು ಪಡೆಯಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ನನ್ನ ಬಳಿ ಪಂಚಾಯತ್ ಎನ್‌ಒಸಿ ಇತ್ತು” ಎಂದು ನಯೀಮ್ ಹೇಳಿರುವುದಾಗಿ ವರದಿಯಾಗಿದೆ. ಅವರು ಶಾಲೆಯ ಅನುಮೋದನೆಗೆ ಅರ್ಜಿ ಸಲ್ಲಿಸಿದ್ದರು ಎಂದು ವರದಿ ಹೇಳಿದೆ.
ಪಂಚಾಯತ್ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡದ ಕಾರಣ ಕಟ್ಟಡವನ್ನು ಕೆಡವಲಾಗುವುದು ಎಂದು ತಿಳಿಸಲಾಗಿತ್ತು ಎಂದು ನಯೀಮ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.


