“ಲವ್ ಜಿಹಾದ್ ಎನ್ನುವುದು ಅಸ್ತಿತ್ವದಲ್ಲಿಯೇ ಇಲ್ಲ; ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಲುವಾಗಿ ಸಂಘಪರಿವಾರ ಇದನ್ನು ಪ್ರೊಪಗಂಡಾ ಮಾಡುತ್ತಿದೆ” ಎಂದು ಕೇರಳದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎ ವಿಜಯರಾಘವನ್ ಹೇಳಿದ್ದಾರೆ.
ಕೇರಳವು ಲವ್ ಜಿಹಾದ್ ಅನ್ನು ಪ್ರೋತ್ಸಾಹಿಸುತ್ತಿದೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ವಿಜಯರಾಘವನ್, “ಲವ್ ಜಿಹಾದ್ ಎನ್ನುವುದು ಸಂಘಪರಿವಾರದ ಸೃಷ್ಟಿಯಾಗಿದ್ದು, ಇದನ್ನು ಕೆಲವು ಸಮುದಾಯಗಳನ್ನು ಗುರಿಯಾಗಿಸಲು ಬಳಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಬಿಜೆಪಿಯ ಚುನಾವಣಾ ಸಮಾವೇಶದಲ್ಲಿ ಆದಿತ್ಯನಾಥ್ ತಮ್ಮ ಕೋಮು ಅಜೆಂಡಾವನ್ನು ಘೊಷಿಸಿದ್ದಾರೆ. ಲವ್ ಜಿಹಾದ್ ಎನ್ನುವುದು ಸಂಘಪರಿವಾರ ರಚಿಸಿದ ಕ್ಯಾಂಪೈನ್ ಟೂಲ್. ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ಆಡಳಿತದ ಕೆಲವು ರಾಜ್ಯಗಳು ಲವ್ ಜಿಹಾದ್ ನಿಷೇಧಕ್ಕೆ ಕಾನೂನನ್ನು ಜಾರಿಗೊಳಿಸಿವೆ. ಆದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂತಹ ಅನಾಗರಿಕ ಕಾನೂನುಗಳನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದರು. ಅಷ್ಟೆ ಅಲ್ಲದೆ ಸಿಎಎ ಅನುಷ್ಠಾನದ ಬಗ್ಗೆ ನಿರ್ದಿಷ್ಟ ನಿಲುವನ್ನು ತೆಗೆದುಕೊಂಡಿದ್ದಾರೆ” ಎಂದು ವಿಜಯರಾಘವನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ನಾಯಕರು ಯಾವಾಗಲೂ ವಾಸ್ತವಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಆರೋಪಿಸಿರುವ ಅವರು, “ದೇಶದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ. ನಿರುದ್ಯೋಗ ದರವು ಸಾರ್ವಕಾಲಿಕ ಗರಿಷ್ಟ ಮಟ್ಟದಲ್ಲಿದೆ. ಆದರೂ ಬಿಜೆಪಿ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ‘ಅಗತ್ಯ ಬಿದ್ದರೆ, ಕಳೆದ ವರ್ಷ ಮಾಡಿದ್ದನ್ನು ಮತ್ತೆ ಮಾಡುತ್ತೇನೆ: ಕಪಿಲ್ ಮಿಶ್ರಾ ವಿವಾದಾತ್ಮಕ ಹೇಳಿಕೆ


