ವಿಶ್ವದಲ್ಲಿ ಓಮಿಕ್ರಾನ್ ರೂಪಾಂತರದ ಆತಂಕ ಹಬ್ಬುತ್ತಿರುವ ಹಿನ್ನೆಲೆಯಲ್ಲಿಯೇ ದೇಶದಲ್ಲಿ ಇದುವರೆಗೆ ಯಾವುದೇ ಹೊಸ ಕೋವಿಡ್ ರೂಪಾಂತರ ‘ಓಮಿಕ್ರಾನ್’ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸ್ಪಷ್ಟಪಡಿಸಿದ್ದಾರೆ.
“ಭಾರತದಲ್ಲಿ ಇಲ್ಲಿಯವರೆಗೆ ಕೊರೊನಾ ರೂಪಾಂತರದ ಓಮಿಕ್ರಾನ್‌ನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ” ಎಂದು ಸಚಿವ ಮಾಂಡವಿಯಾ ಇಂದು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದ್ದಾರೆ.
“ನಾವು ಅನುಮಾನಾಸ್ಪದ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದೇವೆ. ಅವುಗಳ ಜೀನೋಮ್ ಸೀಕ್ವೇನ್ಸಿಂಗ್ ನಡೆಸುತ್ತಿದ್ದೇವೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಬಹಳಷ್ಟು ಕಲಿತಿದ್ದೇವೆ. ಹೀಗಾಗಿ ಇಂದು, ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳು ಮತ್ತು ಪ್ರಯೋಗಾಲಯಗಳಿವೆ. ನಾವು ಯಾವುದೇ ಪರಿಸ್ಥಿತಿಯನ್ನು ಕೂಡ ನಿರ್ವಹಿಸಬಹುದು. ಸೋಂಕು ದೇಶವನ್ನು ಪ್ರವೇಶಿಸುವುದನ್ನು ತಡೆಯಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಶ್ವದೆಲ್ಲೆಡೆ ಕೊರೊನಾ ಹೊಸ ರೂಪಾಂತರ ‘ಓಮಿಕ್ರಾನ್’ ಆತಂಕ: ತಜ್ಞರು ಹೇಳುವುದೇನು?
ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ಕೊರೊನಾ ರೂಪಾಂತರ B.1.1.529 ಅನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ‘Omicron’ ಎಂದು ಹೆಸರಿಸಿದೆ. ಜೊತೆಗೆ ಈ ಹೊಸ ರೂಪಾಂತರ ಪತ್ತೆಯಾದ ದೇಶಗಳಿಗೆ ಎಚ್ಚರಿಕೆ ನೀಡಿದೆ.
ಸಾರ್ವಜನಿಕ ಆರೋಗ್ಯ ಸಿದ್ಧತೆ ಮತ್ತು ವ್ಯಾಕ್ಸಿನೇಷನ್-ಸಂಬಂಧಿತ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆತಲ್ಲಿ ಸಭೆ ನಡೆದಿದೆ. “ಅಪಾಯದಲ್ಲಿರುವ ದೇಶಗಳ ಮೇಲೆ ನಿರ್ದಿಷ್ಟ ಗಮನವನ್ನು ಕೇಂದ್ರೀಕರಿಸಿ, ಎಲ್ಲಾ ಮಾರ್ಗಸೂಚಿಗಳ ಪ್ರಕಾರ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲ್ವಿಚಾರಣೆ, ಕೊರೊನಾ ಪರೀಕ್ಷೆಯ ಅಗತ್ಯದ ಕುರಿತು ಪ್ರಧಾನಿ ಮಾತನಾಡಿದ್ದಾರೆ. ಜೊತೆಗೆ ಅಂತರರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳನ್ನು ಮಾಡುವ ಯೋಜನೆಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇನ್ನು ಕೊರೊನಾ ರೂಪಾಂತರ ಓಮಿಕ್ರಾನ್ ಕಂಡು ಬಂದಿರುವ ದೇಶಗಳಿಂದ ವಿಮಾನಯಾನವನ್ನು ನಿರ್ಬಂಧಿಸುವಂತೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.


