Homeಅಂಕಣಗಳುದೇವಸ್ಥಾನಗಳ ಮೇಲೆ ಸರ್ಕಾರದ ನಿಯಂತ್ರಣ ಕೊನೆ ಮಾಡುವ ಹುನ್ನಾರದ ಸುತ್ತ..

ದೇವಸ್ಥಾನಗಳ ಮೇಲೆ ಸರ್ಕಾರದ ನಿಯಂತ್ರಣ ಕೊನೆ ಮಾಡುವ ಹುನ್ನಾರದ ಸುತ್ತ..

- Advertisement -
- Advertisement -

ಧರ್ಮ ಗುರುಗಳು ನೇರವಾಗಿ ರಾಜಕಾರಣ ಮಾಡಬಾರದು ಅನ್ನುವುದು ಎಲ್ಲರೂ ಒಪ್ಪಿಕೊಂಡಿರುವ ವಿಷಯ. ಅವರು ಪರೋಕ್ಷವಾಗಿ ರಾಜಕಾರಣ ಮಾಡುವುದನ್ನು ಕೆಲವರು ಒಪ್ಪಿಕೊಂಡಿದ್ದರೆ, ಇನ್ನೂ ಕೆಲವರು ಸಹಿಸಿಕೊಂಡಿದ್ದಾರೆ.

ಇದು ಪ್ರಜಾಸತ್ತೆಯ ನಿಯಮ ಅಂತ ಆಗಿದ್ದು ಸಕಲ ಕಲಾವಲ್ಲಭ ಎಂದು ಹೆಸರು ಪಡೆದಿದ್ದ 16ನೇ ಶತಮಾನದ ಬ್ರಿಟಿಷ್ ಸಾಮ್ರಾಟ ಎಂಟನೇ ಹೆನ್ರಿಯ ಕಾಲದಲ್ಲಿ. ಅದಕ್ಕೆ ಒಂದು ಆಸಕ್ತಿಕರವಾದ ಕಾರಣ ಇದೆ. ಒಂದೇ ಕುಟುಂಬದ ಮೂವರು ಅಕ್ಕತಂಗಿಯರನ್ನು ಮೋಹಿಸಿ ಮದುವೆಯಾಗಿದ್ದ ಶ್ರೀಮನ್ ಮಹಾರಾಜರು ಗಂಡು ಮಗುವಿನ ಆಸೆಗಾಗಿ ಇನ್ನೂ ಮೂರು ಮದುವೆಯಾದರು. ಮೂರನೇ ಮದುವೆಯಾಗುವ ಕಾಲಕ್ಕೆ ಅವರಿಗೆ ಒಂದು ಕ್ಲಿಷ್ಟ ಆಯ್ಕೆ ಎದುರಾಯಿತು. ಮೊದಲ ಹೆಂಡತಿಗೆ ವಿಚ್ಛೇದನ ಕೊಡುವುದೋ? ಅಥವಾ ಅವಳನ್ನು ಅರಮನೆ ಬಿಟ್ಟು ಓಡಿಸಿ ವಿಶ್ರಾಂತಿ ಧಾಮಕ್ಕೆ ಕಳಿಸುವುದೋ? ಅಥವಾ ಮೊದಲ ಇಬ್ಬರು ಹೆಂಡಿರನ್ನು ಒಲಿಸಿ ಮೂರನೆಯವಳನ್ನು ಮಾಡಿಕೊಳ್ಳುವುದೋ? ಇವುಗಳಲ್ಲಿ ಅವರು ಒಂದನೆಯದನ್ನು ಆರಿಸಿಕೊಂಡರು. ಆವಾಗ ಇಂಗ್ಲೆಂಡಿನ ಮುಖ್ಯ ಪಾದ್ರಿ ಅವರು ಕ್ರಿಶ್ಚಿಯನ್ ಕಾಯಿದೆಗಳಲ್ಲಿ ವಿಚ್ಛೇದನ ಇಲ್ಲ. ಬೈಬಲ್‌ನಲ್ಲಿ ಅದು ನಿಷಿದ್ಧ ಎಂದು ಹೇಳಿದರು. ವ್ಯಾಟಿಕನ್‌ನಲ್ಲಿ ಕುಳಿತ ಪೋಪ್ ಅವರು ಸಹಿತ ರಾಜನ ಪರವಾಗಿ ನ್ಯಾಯ ನಿರ್ಣಯ ಮಾಡಲಿಲ್ಲ.

ವಿಚ್ಛೇದನ ಪಡೆಯಲೇಬೇಕು ಎನ್ನುವ ದೃಢ ನಿರ್ಧಾರ ಮಾಡಿದ್ದ ಹೆನ್ರಿ, ಬ್ರಿಟಿಷ್ ಸಾಮ್ರಾಜ್ಯದ ಧಾರ್ಮಿಕ ನಾಯಕ ನಾನು ಎಂದು ಘೋಷಿಸಿಕೊಂಡ. ಅದೇ ವರ್ಷ ತಮ್ಮ ಸಾಮ್ರಾಜ್ಯದ ಎಲ್ಲಾ ಧರ್ಮ ಗುರುಗಳನ್ನು ಕಾಯಿದೆಬಾಹಿರ ಎಂದು ಘೋಷಿಸಿ ಎಲ್ಲಾ ಚರ್ಚುಗಳ ಆದಾಯವನ್ನು ರಾಜ್ಯದ ಖಜಾನೆಗೆ ಸೇರಿಸಿಕೊಂಡ. ಚರ್ಚುಗಳು-ಪೋಪ್ ಅವರಿಗೆ ನೀಡುತ್ತಿದ್ದ ವಾರ್ಷಿಕ ಹಮ್ಮಿಣಿಯನ್ನು ನಿಲ್ಲಿಸಿದ. ಇದನ್ನು ಜನಕಲ್ಯಾಣದ ಕೆಲಸಗಳಿಗೆ ನೀಡಲಾಗುವುದು ಎಂದು ನಿರ್ಧಾರ ಮಾಡಿದ. ಅವು ಉದ್ದೇಶಶುದ್ಧಿ ಇಲ್ಲದೆ ಮಾಡಿದ ಕೆಲಸಗಳು ಆದರೂ ಅವನ ನಿರ್ಧಾರಗಳ ಪರಿಣಾಮ ತುಂಬ ಧನಾತ್ಮಕವಾಯಿತು.

ಕೆಲ ಇತಿಹಾಸಕಾರರ ಪ್ರಕಾರ ಹುಚ್ಚು ದೊರೆ ಎಂದು ಹೆಸರು ಗಳಿಸಿದ ಹೆನ್ರಿಯ ನಿರ್ಧಾರಗಳು ಇಡೀ ಯುರೋಪಿನ ಹಾಗೂ ನಂತರದ ಶತಮಾನಗಳಲ್ಲಿ ಇಡೀ ಜಗತ್ತಿನ ಇತಿಹಾಸವನ್ನು ಬದಲು ಮಾಡಿದವು. ಧರ್ಮ ನಿರಪೇಕ್ಷತೆ ಆಡಳಿತದ ಮೂಲತತ್ವ ಎನ್ನುವ ಬುನಾದಿಯನ್ನು ಹಾಕಿದವು. ಪ್ರಜಾಸತ್ತೆಯ ವಿಷಯದಲ್ಲಂತೂ ಜಾತ್ಯತೀತತೆಯನ್ನು ಬಿಟ್ಟು ಬೇರೆ ದಾರಿ ಇಲ್ಲ ಎನ್ನುವುದನ್ನು ಅವು ಸಾಬೀತು ಮಾಡಿದವು. ಪ್ರಜಾಸತ್ತೆ ಎನ್ನುವುದು ಬಹುಸಂಖ್ಯಾತರ ಆಡಳಿತ ಅಲ್ಲ. ಮತವನ್ನು ಹೊರತುಪಡಿಸಿ, ಇತರ ವಿಷಯಗಳಲ್ಲಿ ಜನರನ್ನು ಪ್ರತಿನಿಧಿಸುವ ನಾಯಕರನ್ನು ಶಾಸನಸಭೆಗೆ ಕಳುಹಿಸಬೇಕು. ಎಲ್ಲರ ಬೆಂಬಲ ಹಾಗೂ ಪ್ರಾತಿನಿಧ್ಯ, ಸರ್ವ ಜನಾಂಗದ ಅಭಿವೃದ್ಧಿ ಹಾಗೂ ಸರ್ವೋದಯದ ತತ್ವದ ಮೇಲೆ ಆಡಳಿತ ಅವಲಂಬಿತವಾಗಿರಬೇಕು. ಅವರಿಗೆ ಮತ ಹಾಕಲು ನಮ್ಮನ್ನು ನಮ್ಮ ಮತ ಪ್ರೇರೇಪಿಸಬಾರದು, ಎನ್ನುವುದು ಸರ್ವಸಮ್ಮತವಾಗಿ ಜಾರಿಗೆ ಬಂತು.

ಇನ್ನೊಂದು ಆಸಕ್ತಿದಾಯಕ ಬೆಳವಣಿಗೆ ಅಂದರೆ ಡೊನಾಲ್ಡ್ ಟ್ರಂಪ್ ಅವರ ಕಾಲದಲ್ಲಿ ಅಮೆರಿಕದಲ್ಲಿ ‘ಟ್ಯಾಕ್ಸ್ ದಿ ಚರ್ಚಸ್’ ಅಂತ ಒಂದು ದೊಡ್ಡ ಅಭಿಯಾನ ಶುರು ಆಯಿತು. ಒಂದು ಲೆಕ್ಕದ ಪ್ರಕಾರ ಅಮೆರಿಕದಲ್ಲಿ ಚರ್ಚ್‌ಗಳು ಸುಮಾರು 750 ಬಿಲಿಯನ್ ಡಾಲರ್‌ಗಳಷ್ಟು (ಸುಮಾರು 55 ಲಕ್ಷ ಕೋಟಿ ರೂಪಾಯಿ) ಆಸ್ತಿ ಹಾಗೂ ವರಮಾನವನ್ನು ಗಳಿಸಿದರೂ ಸಹಿತ ಯಾವುದೇ ತೆರಿಗೆ ಕಟ್ಟೋದಿಲ್ಲ. ಅಮೆರಿಕದ ಅತಿ ಹೆಚ್ಚಿನ ತೆರಿಗೆ ದರ ಶೇ.37. ಆದರೆ ಈ ಚರ್ಚುಗಳಿಗೆ ಕೇವಲ ಶೇ.10 ತೆರಿಗೆ ವಿಧಿಸಿದರೂ ಸಹಿತ ಅವು ಸುಮಾರು 5.5 ಲಕ್ಷ ಕೋಟಿ ರೂಪಾಯಿ ಪಾವತಿಸಿದಂತೆ ಆಗುತ್ತದೆ. ಇದರಿಂದ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಕಮ್ಮಿ ಆಗುತ್ತದೆ. ಅಮೆರಿಕದ ಜನಸಾಮಾನ್ಯರು ಕೇವಲ ಐದು ಶೇಕಡಾ ತೆರಿಗೆ ನೀಡುವಂತೆ ಆಗುತ್ತದೆ. ಸರಕಾರದ ಎಲ್ಲ ರೀತಿಯ ಖರ್ಚು ಸಹಿತ ತೂಗಿ ಹೋಗುತ್ತದೆ ಎಂದು ಅರ್ಥಶಾಸ್ತ್ರಜ್ಞರು ವಾದ ಮಾಡಿದರು.

ಇದು ಆರಂಭ ಆಗಿದ್ದು 1980ರ ದಶಕದಲ್ಲಿ. ಪಡ್ಡೆ ಹುಡುಗರ ಆರಾಧ್ಯ ದೈವ ಆಗಿದ್ದ ಪಾಪ್ ಗಾಯಕ ಫ್ರಾಂಕ್ ಜಾಪಾ ಇದನ್ನೇ ಹೇಳಿದ: ‘ನಿಮ್ಮ ಡಾಲರ್‌ಗಳು ಸ್ವರ್ಗಕ್ಕೆ ಹೋಗುತ್ತವೆ’ ಎಂಬ ಹಾಡಿನಿಂದ. ಆ ನಂತರ ಶ್ರೇಷ್ಠ ವ್ಯಂಗ್ಯ ಸಾಹಿತಿ ಮಾರ್ಕ್ ಟ್ವೇನ್, ‘ಸರ್ವೇ ಸಾಧಾರಣ ನಾನು ಚರ್ಚುಗಳಿಗೆ ಹೋಗುವುದಿಲ್ಲ. ಯೇಸು ಸ್ವಾಮಿ ಬಡವರನ್ನು ರಕ್ಷಿಸಿದರೆ, ಈಗಿನ ಚರ್ಚುಗಳು ಕೇವಲ ಶ್ರೀಮಂತರನ್ನು ರಕ್ಷಿಸುತ್ತವೆ’ ಎಂದು ಕಟಕಿಯಾಡಿದ.

ಸಾಮಾಜಿಕ ಸಮಸ್ಯೆಗಳಿಗೆ ಜನ ಬೆಂಬಲ ರೂಪಿಸುವ ’ಚೇಂಜ್’ ಎಂಬ ಜಾಲತಾಣದಲ್ಲಿ ಕೆಲವು ಯುವಜನರು ಹುಟ್ಟು ಹಾಕಿದ ‘ಚರ್ಚುಗಳಿಗೆ ತೆರಿಗೆ ಹಾಕಿ’ ಎನ್ನುವ ಮನವಿ ಮೂರು ಕೋಟಿ ಜನರ ಬೆಂಬಲ ಪಡೆಯಿತು.

ಈಗ ನಮ್ಮ ಕರುನಾಡ ಘನ ಸರಕಾರ ದೇವಸ್ಥಾನಗಳ ಮೇಲೆ ಹಿಂದಿಲ್ಲದ ಕರುಣೆ ತೋರುವ ಮಾತಾಡಿದೆ. ಹಿಂದೆ ರಾಜ್ಯದಲ್ಲಿ ಆಡಳಿತ ಮಾಡಿದ ಸರಕಾರಗಳೆಲ್ಲವೂ- ತಮ್ಮ ಪಕ್ಷದ ಸರಕಾರವೂ ಸೇರಿದಂತೆ, ದೇವಸ್ಥಾನಗಳನ್ನು ಕಾಯಿದೆ-ಕಟ್ಟಳೆಗಳಲ್ಲಿ ಬಂಧಿಯಾಗಿಸಿಬಿಟ್ಟಿದ್ದಾಗಿಯೂ ತಾವು ಈಗ ಅವುಗಳನ್ನು ಬಂಧಮುಕ್ತರಾಗಿಸುವುದಾಗಿಯೂ, ಇನ್ನು ಮುಂದೆ ಅವು ಯಾರ ನಿರ್ಬಂಧವೂ ಇಲ್ಲದೆ, ಸ್ವಚ್ಛಂದವಾಗಿರಬಹುದು ಎಂಬುದಾಗಿ ರಾಜಾಜ್ಞೆ ಹೊರಡಿಸಲು ಸಿದ್ಧವಾಗುತ್ತಿದೆ.

ಇದಕ್ಕೆ ಮೂಲಕಾರಣ ನಮ್ಮ ಹೆಮ್ಮೆಯ ಆರ್ಯಾವರ್ತವನ್ನು ಹಿಂದೂಸ್ತಾನವನ್ನಾಗಿಸದೆ ಇಂಡಿಯಾ ಆಗಿಸಿಬಿಟ್ಟ ಸಂವಿಧಾನವಾಗಿದೆ ಎಂದು ನಮ್ಮ ಸರಕಾರದ ಸಾರಥಿಗಳು ನಂಬಿಬಿಟ್ಟಿದ್ದಾರೆ. ಅಂತೆಯೇ ನಮ್ಮನ್ನು ನಂಬಿಸಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ. ತಮ್ಮವರು ಮಾಡಲಾಗದ ಕೆಲಸವನ್ನು ರೋಯಿಸ್ಟ್ (Roy-ist) ಸೋಮಪ್ಪ ರಾಯಪ್ಪ ಬೊಮ್ಮಾಯಿ ಅವರ ಮಗ ಬಸವರಾಜ ಬೊಮ್ಮಾಯಿ ಅವರ ಕಡೆಯಿಂದ ಮಾಡಲು ಹವಣಿಸುತ್ತಿದ್ದಾರೆ.

ಸಂವಿಧಾನದ 35ನೆ ವಿಧಿಯ ಪ್ರಕಾರ ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕೆಲವು ವಿಶೇಷ ಹಕ್ಕುಗಳು ಇವೆ. ಅವು ಬೇಕಿಲ್ಲ. ಅವರೂ ನಮ್ಮಂತೆಯೇ ಇರಬೇಕು ಅಂತ ಹಿಂದೂಸ್ತಾನದ ಕೆಲವು ಬಹುಸಂಖ್ಯಾತರು ವಾದಿಸುತ್ತಾ ಇದ್ದಾರೆ. ಇದು ಸರಿ ಅಂತ ಆದರೆ, ಪಾಕಿಸ್ತಾನದ ಹಿಂದೂಗಳಿಗೆ ಸಹಿತ ವಿಶೇಷ ಹಕ್ಕುಗಳು ಬೇಕಾಗಿಲ್ಲ. ಅವರೂ ಸಹಿತ ಅಲ್ಲಿನ ಬಹುಸಂಖ್ಯಾತರಂತೆ ಇರಬೇಕು. ಅವರಂತೆಯೇ ಉಡಬೇಕು, ಉಣಬೇಕು, ಪ್ರಾರ್ಥಿಸಬೇಕು ಎಂದು ಯಾರಾದರೂ ಹೇಳಿದರೆ ನಾವೆಲ್ಲ ಸುಮ್ಮನೇ ಒಪ್ಪಬೇಕಾಗುತ್ತದೆ.

ಮಹಾರಾಜರ ಆಸ್ಥಾನಿಕರು ಇನ್ನೊಂದು ಹಸಿಹಸಿ ಸುಳ್ಳನ್ನು ಉಣಬಡಿಸುತ್ತಿದ್ದಾರೆ. “ದೇವಸ್ಥಾನಗಳ ಹುಂಡಿಯ ಹಣವನ್ನು ಮಸೀದಿ ಹಾಗೂ ಚರ್ಚುಗಳಿಗೆ ಕೊಡಲಾಗುತ್ತಿದೆ. ಆ ಸಮುದಾಯದವರ ಕಲ್ಯಾಣಕ್ಕೆ ಖರ್ಚು ಮಾಡಲಾಗುತ್ತದೆ ಎಂದು ಆಧಾರರಹಿತ ಆರೋಪ ಮಾಡುತ್ತಿದ್ದಾರೆ”. ‘ಎ’ ಹಾಗೂ ‘ಬಿ’ ಶ್ರೇಣಿಯ ಹಿಂದು ಧಾರ್ಮಿಕ ಕೇಂದ್ರಗಳಿಂದ ಬರುವ ಹಣ ‘ಸಿ’ ಶ್ರೇಣಿಯ ದೇವಸ್ಥಾನಗಳಿಗೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಕೆಲವು ಸರ್ಕಾರಿ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತದೆ.

ಹಿಂದೂಯೇತರ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿ ಹಾಗೂ ಅಲ್ಲಿನ ವಿಧಿಬೋಧಕ, ಧರ್ಮ ಗುರು, ಆಡಳಿತಗಾರರು ಮತ್ತು ಇತರರಿಗೆ ಕೊಡಲಾಗುವ ಮಾಸಾಶನ, ತಸ್ತೀಕು, ಅನುದಾನ ಇತ್ಯಾದಿ ನೀಡುವುದು ಸರಕಾರದ ಖಜಾನೆಯಿಂದ. ಅದರಲ್ಲಿ ಎಲ್ಲರ ತೆರಿಗೆಯ ದುಡ್ಡು ಇದೆ. ಅದು ಭಾರತದ ಕ್ರೋಢೀಕರಿಸಲಾದ ಧನರಾಶಿ (ಕನ್‌ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾ) ಎಂದು ಪರಿಗಣಿಸಲ್ಪಡುತ್ತದೆ. ಇದರ ಮೇಲೆ ಎಲ್ಲರ ಹಕ್ಕೂ ಇದೆ.

ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಸರಕಾರ ನೀಡಿದ ಉತ್ತರಗಳ ಪ್ರಕಾರ ರಾಜ್ಯ ಸರಕಾರ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ವಾರ್ಷಿಕ 145 ಕೋಟಿಗೂ ಹೆಚ್ಚು ಕೊಟ್ಟರೆ ಹಿಂದೂಯೇತರ ಸಂಸ್ಥೆಗಳಿಗೆ ಸುಮಾರು ನಾಲ್ಕು ಕೋಟಿ ನೀಡುತ್ತದೆ. ಸುಮಾರು 30,000 ಹಿಂದೂ ಸಂಸ್ಥೆಗಳಿಗೆ ಅನುದಾನ ನೀಡಿದರೆ ಸುಮಾರು 875 ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ವರ್ಷಾಸನ ಮತ್ತು ತಸ್ತೀಕ್ ನೀಡುತ್ತದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೆಲವು ಗಂಭೀರ ಆರೋಪ ಮಾಡಿದ್ದಾರೆ. ಅದರಲ್ಲಿ ಒಂದು ರಾಜ್ಯ ಸರಕಾರದ ಕೆಲವು ಮಂತ್ರಿ ಹಾಗೂ ಬಿಜೆಪಿ ನಾಯಕರ ಕಣ್ಣು ದೇವಸ್ಥಾನಗಳ ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ಮೇಲೆ ಬಿದ್ದಿದೆ ಎನ್ನುವುದು. ಇಡೀ ಸಮಾಜದ ಎಲ್ಲ ವರ್ಗದ ಜನರು ದೇಣಿಗೆ ನೀಡಿದ ಹುಂಡಿಯ ಹಣವನ್ನು ಕೇವಲ ಮೇಲುಜಾತಿಯವರು ಬಾಚಲು ಯತ್ನಿಸುತ್ತಿದ್ದಾರೆ ಎಂದು ಅವರ ಆರೋಪ.

ಮುಜರಾಯಿ ಇಲಾಖೆಯ ಅಧೀನದಲ್ಲಿ ಸುಮಾರು 34,550 ದೇವಾಲಯಗಳು ಇವೆ. ಇವುಗಳಲ್ಲಿ ಶೇ.99ರಷ್ಟು ’ಸಿ’ ವರ್ಗದ ದೇವಸ್ಥಾನಗಳು. ಅವುಗಳು ಗಳಿಸುವ ವಾರ್ಷಿಕ ಆದಾಯದ ಮೇಲೆ ಅವುಗಳನ್ನು ’ಎ’ ಗುಂಪಿನ 205, ’ಬಿ’ ಗುಂಪಿನ 139 ಮತ್ತು ’ಸಿ’ ಗುಂಪಿನ 34,214 ದೇವಸ್ಥಾನಗಳು ಎಂದು ವಿಂಗಡಿಸಲಾಗಿದೆ.

ಸರಕಾರ ನೀಡಿದ ಮಾಹಿತಿ ಪ್ರಕಾರ ’ಎ’ ಗುಂಪಿನ ದೇವಾಲಯಗಳ ಬಳಿ ಒಟ್ಟು ರೂ.1,580 ಕೋಟಿ ಹಾಗೂ ’ಬಿ’ ಗುಂಪಿನ ದೇವಾಲಯಗಳ ಬಳಿ ರೂ.98.67 ಕೋಟಿ ಹಣವಿದೆ. ಇವೆಲ್ಲವುಗಳ ಒಟ್ಟು ಚರಾಸ್ತಿಯ ಮೊತ್ತ ಒಂದು ಲಕ್ಷ ಕೋಟಿ ಎಂದು ಹೇಳಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ಇರುವ ಈ ಆಸ್ತಿಯನ್ನು ಸರ್ಕಾರಿ ವಲಯಕ್ಕೆ, ಆ ಮೂಲಕ ಆಳುವ ಪಕ್ಷದ ಆಧೀನಕ್ಕೆ ಒಳಪಡಿಸುವ ಹುನ್ನಾರ ಇದೆ ಎಂತಲೂ ಹೇಳಲಾಗುತ್ತಿದೆ. ಸರ್ಕಾರದ ಅಧಿಕೃತ ನಿಯಂತ್ರಣ ಕಳೆದು ದುರ್ಬಳಕೆಯಾಗವ ಲಕ್ಷಣ ಇದು ಎನ್ನಲಾಗುತ್ತಿದೆ.

ಈ ದುರಿತ ಕಾಲದಲ್ಲಿ ನೆನಪಾಗುವುದು ಯುವ ಪತ್ರಿಕೋದ್ಯಮಿ ಮ್ಯಾಕ್ಸ್ ನೆಡನೋವಿಚ್ ಅವರ ಎಚ್ಚರಿಕೆಯ ಮಾತುಗಳು.

“ಅಮೆರಿಕದಲ್ಲಿಯೇ ಆಗಲಿ, ಬೇರೆ ಯಾವುದೇ ದೇಶಗಳಲ್ಲಿ ಆಗಲಿ ಚರ್ಚುಗಳೇ ಆಗಲಿ, ಇತರ ಧಾರ್ಮಿಕ ಸಂಸ್ಥೆಗಳೇ ಆಗಲಿ ಪಾರದರ್ಶಕವಾಗಿರಬೇಕು. ಇಲ್ಲದಿದ್ದರೆ ದೊಡ್ಡ ಗಂಡಾಂತರವಾದೀತು. ಅಮೆರಿಕದಲ್ಲಿ ಚರ್ಚುಗಳಿಗೆ ತೆರಿಗೆ ಇಲ್ಲ, ವಾರ್ಷಿಕ ಆದಾಯದ ಲೆಕ್ಕಪತ್ರ ಘೋಷಿಸುವ ಗೋಜು ಅವರಿಗೆ ಇಲ್ಲ. ಇದರಿಂದ ತೆರಿಗೆ ತಪ್ಪಿಸುವ ಚಾಳಿ ಬೆಳೆಯುತ್ತದೆ. ಚರ್ಚುಗಳು ಕಪ್ಪು ಹಣದ ಕೂಪಗಳಾಗಿಬಿಡುತ್ತವೆ. ಇದು 1894ರಲ್ಲಿ ಅಮೆರಿಕ ಸರಕಾರ ನೀಡಿದ ಸವಲತ್ತು. ಈಗ ಪರಿಸ್ಥಿತಿ ಬದಲಾಗಿದೆ. ಈ ಕಾನೂನು ಈಗ ಬೇಕಿಲ್ಲ. ಇದರ ದುರುಪಯೋಗ ನಡೆಯುತ್ತಿದೆ. ಹೂಸ್ಟನ್ ರಾಜ್ಯದ ಜೋಲ್ ಒಸಟಿನ ಎನ್ನುವ ಪಾದ್ರಿ ಒಬ್ಬ ವಾರದ ಪ್ರಾರ್ಥನೆ ನಡೆಸಲು 45,000 ಜನ ಕುಳಿತುಕೊಳ್ಳುವಷ್ಟು ದೊಡ್ಡ ಸ್ಟೇಡಿಯಂನಂತೆ ಇರುವ ಚರ್ಚು ಕಟ್ಟಿದ್ದಾನೆ. ಅವರು ಪ್ರತಿ ವರ್ಷ ಸುಮಾರು 70 ಮಿಲಿಯನ್ ಡಾಲರ್ ಗಳಿಸಿದರೂ ಒಂದು ರೂಪಾಯಿ ತೆರಿಗೆ ಕೊಡೋದಿಲ್ಲ. ಇವನನ್ನು ನೋಡಿ ಅನೇಕ ಅಧಾರ್ಮಿಕ ಸಂಸ್ಥೆಗಳು ಸಹಿತ ತಮ್ಮನ್ನು ತಾವು ಚರ್ಚುಗಳು ಎಂದು ನೋಂದಣಿ ಮಾಡಿಸಿಕೊಂಡಿವೆ. ತಮ್ಮ ಮನೆಯಲ್ಲಿ ಒಂದು ರೇಡಿಯೋ ಕೇಂದ್ರ ನಡೆಸುತ್ತಿದ್ದ ’ಫೋಕಸ್ ಆನ್ ದಿ ಫ್ಯಾಮಿಲಿ’ ಎನ್ನುವ ಸಂಸ್ಥೆ ಸಹಿತ ತಾನು ಒಂದು ಚರ್ಚು ಎಂದು ನೋಂದಣಿ ಮಾಡಿಕೊಂಡು ತೆರಿಗೆಯಿಂದ ತಪ್ಪಿಸಿಕೊಂಡಿದೆ. ಇಂತ ಅಪಾರದರ್ಶಕ ಕೇಂದ್ರಗಳು ಕೆಲವು ಅನೈತಿಕ ವ್ಯವಹಾರ ನಡೆಸುತ್ತವೆ. ‘ಕೆಕೆಕೆ’ ಎನ್ನುವ ನೀಗ್ರೋ ವಿರೋಧಿ ಗುಂಪು ಸಹಿತ ತಾನು ಬೈಬಲ್ ಓದುಗರ ಚರ್ಚು ಎಂದು ಘೋಷಿಸಿಕೊಂಡು ಟ್ರಂಪ್ ಅವರ ಪಕ್ಷದ ಚುನಾವಣೆ ಪ್ರಚಾರ ನಡೆಸಿತು. ನೀಗ್ರೋಗಳನ್ನು ಬಹಿಷ್ಕರಿಸಿ ಎಂದು ಬಹಿರಂಗ ಕರೆಕೊಟ್ಟಿತು. ಅಲ್ಲಿನ ಹುಂಡಿಯ ಹಣ ಅಲ್ಲಿಗೇ ಮೀಸಲು ಎನ್ನುವ ನಿಯಮದ ಪ್ರಕಾರ ಸರಕಾರ ಸುಮ್ಮನೆ ಇದ್ದಿತು. ಅವರು ತಮ್ಮಲ್ಲಿ ಭಾಷಣ ಮಾಡಿದ ರಕ್ತಪಿಪಾಸುಗಳಿಗೆ ಸಂಪನ್ಮೂಲ ವ್ಯಕ್ತಿಗಳು ಎಂದು ಪರಿಗಣಿಸಿ ಸಂಭಾವನೆ ಕೊಟ್ಟಿತು. ನೀಗ್ರೋ ವಿರೋಧಿ ಗುಂಪುಗಳಿಂದ ನಾಟಕ ಮಾಡಿಸಿ ಅವರಿಗೆ ಹಣ ಕೊಟ್ಟಿತು. ಇವು ಬೇರೆ ದೇಶದ ಸಮಸ್ಯೆಗಳಲ್ಲ, ಮಧ್ಯಕಾಲಿನ ಕಾಯಿಲೆಗಳಲ್ಲ. ಇಂದಿನ ಸಮಸ್ಯೆಗಳು. ಇವುಗಳಿಗೆ ನಾವು ಔಷಧಿ ತೆಗೆದುಕೊಳ್ಳದಿದ್ದರೆ ನಾವೆಲ್ಲ ಮಾನಸಿಕ ರೋಗದಿಂದ ಬಳಲಿ ಸರ್ವನಾಶವಾಗುತ್ತೇವೆ”.

ಕರ್ನಾಟಕ ಮೂಲದವರಾಗಿದ್ದ ನ್ಯಾಯಮೂರ್ತಿ ಗಜೇಂದ್ರಗಡ್ಕರ್ ಅವರು ಹೇಳಿದರು ಎನ್ನಲಾದ ಮಾತು ಒಂದು ಈ ಕಾಲದಲ್ಲಿ ನಮ್ಮನ್ನು ಕಾಯಲಿ – “ಜಗತ್ತಿನಲ್ಲಿ ವ್ಯಾಪಕವಾಗಿ ಇರುವ ಕತ್ತಲೆಯೆ ಅನೇಕ ರೋಗಗಳಿಗೆ ಮೂಲ. ಆದರೆ ಇದರ ಮದ್ದು ಸುಲಭ. ಸೂರ್ಯ ಕಿರಣಗಳೇ ಕತ್ತಲೆಗೆ ಔಷಧಿ. ಅದು ನಮಗೆ ಪ್ರತಿ ದಿನವೂ ಸಿಗುತ್ತದೆ. ಅದು ನಮ್ಮ ಒಳಗೆ ಸೇರುವುದು ಬೆಳಕಿಂಡಿಗಳಿಂದ. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಯೇ ಬೆಳಕಿಂಡಿ”.

ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ‘ಧೀರ ಭಗತ್ ರಾಯ್‌’ ಮೂಲಕ ಮೀಸಲು ಕ್ಷೇತ್ರದ ರಾಜಕೀಯ ಕಥೆಯನ್ನು ಹೇಳಲು ಹೊರಟಿರುವ ನಿರ್ದೇಶಕ ಕರ್ಣನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....