Homeಅಂಕಣಗಳು’ವಿಷವಟ್ಟಿ ಸುಡುವಲ್ಲಿ': ರಾಜ್ಯವನ್ನು ಉಳಿಸಲು ಬುದ್ಧಿಜೀವಿಗಳು ವಿಷ ಕುಡಿಯಬಲ್ಲರೆ?

’ವಿಷವಟ್ಟಿ ಸುಡುವಲ್ಲಿ’: ರಾಜ್ಯವನ್ನು ಉಳಿಸಲು ಬುದ್ಧಿಜೀವಿಗಳು ವಿಷ ಕುಡಿಯಬಲ್ಲರೆ?

- Advertisement -
- Advertisement -

ಶ್ರೀಪಾದ ಭಟ್ ಅವರ ಇತ್ತೀಚಿನ ಕನ್ನಡ ಪುಸ್ತಕ ’ವಿಷವಟ್ಟಿ ಸುಡುವಲ್ಲಿ: ಪಠ್ಯಪುಸ್ತಕ ಮತೀಯವಾದೀಕರಣ ಮತ್ತು ಇತಿಹಾಸದ ತಿರುಚುವಿಕೆ’ಯು ಕರ್ನಾಟಕದಲ್ಲಿ ಶಿಕ್ಷಣದ ಕೋಮುವಾದೀಕರಣದ ಹಿಂದುತ್ವದ ಯೋಜನೆಗೆ ಬುದ್ಧಿಜೀವಿಯೊಬ್ಬರ ಪ್ರತಿಕ್ರಿಯೆಯಾಗಿದೆ. ಹಿಂದಿನ ಬಿಜೆಪಿ ಸರಕಾರವು- ದೇಶದಾದ್ಯಂತ ಸಂಘ ಪರಿವಾರ ಮುಂದೆಮಾಡಿದ್ದ ವ್ಯಾಪಕ ಹಿಂದುತ್ವ ಸಿದ್ಧಾಂತದ ಯೋಜನೆಗೆ ಪೂರಕವಾಗಿ- ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಗಾಗಿ ಪೊಸಿಷನ್ ಪೇಪರ್‌ಗಳನ್ನು ಸಿದ್ಧಪಡಿಸುವುದು, ತರಗತಿ ಕೊಠಡಿಗಳಿಗೆ ಮರುಬಣ್ಣ ಬಳಿಯುವ ಪ್ರಸ್ತಾಪವೇ ಮುಂತಾದ ಹಲವು ಕ್ರಮಗಳ ಮೂಲಕ- ಹಿಂದುತ್ವವನ್ನು ತುರುಕುವ ಪ್ರಯತ್ನಗಳ ಸರಣಿಯನ್ನೇ ಪಠ್ಯಪುಸ್ತಕಗಳ ಪರಿಷ್ಕರಣೆಯ ಮಾರುವೇಷದಲ್ಲಿ ಕೈಗೊಂಡಿತ್ತು. ಈ ಪುಸ್ತಕವು, ದೇಶದಲ್ಲಿ ಆಗಿರುವ ಹಿಂದುತ್ವದ ಶೈಕ್ಷಣಿಕ ಯೋಜನೆಯ ಐತಿಹಾಸಿಕ ಹಿನ್ನೆಲೆಯನ್ನು ಒದಗಿಸುತ್ತದೆ ಮತ್ತು ಅದರ ಮೂಲಕ ಸಮಕಾಲೀನ ಬೆಳವಣಿಗೆಗಳನ್ನು ಹೆಚ್ಚು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಿದೆ. ಈ ಪುಸ್ತಕದ ಗಮನಾರ್ಹ ಕೊಡುಗೆಯು- ಬ್ರಾಹ್ಮಣ್ಯ ವಿರೋಧಿ ನಿಲುವುಗಳನ್ನು ಒಳಗೊಳ್ಳುವ ಮತ್ತು ಜಾತ್ಯತೀತತೆಯ ಕಲ್ಪನೆಯನ್ನು ಬೆಂಬಲಿಸುವ ಕರೆಯಲ್ಲಿ ಅಡಗಿದೆ.

ಪುಸ್ತಕದ ಶೀರ್ಷಿಕೆಯೇ- ಬ್ರಾಹ್ಮಣ್ಯವನ್ನು ತಿರಸ್ಕರಿಸಿ, ಒಂದು ಸಮದೃಷ್ಟಿಯ ಸಮಾಜದ ನಿರ್ಮಾಣದ ಸಲುವಾಗಿ, ಸಮಾಜದ ವಿವಿಧ ಸ್ತರಗಳ ಜನರನ್ನು ಲಿಂಗಾಯತ ಸೂರಿನ ಅಡಿಯಲ್ಲಿ ತಂದ 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರು ಬರೆದ ವಚನಗಳ ಸಾರದ ನೇರ ಉಲ್ಲೇಖವಾಗಿದೆ. ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು ಪುಸ್ತಕದ ಮುನ್ನುಡಿಯಲ್ಲಿ ವಿವರಿಸಿರುವಂತೆಯೇ, ಪುರಾಣದ ಒಂದು ಸಂದರ್ಭವನ್ನು ಶೀರ್ಷಿಕೆಯು ಉಲ್ಲೇಖಿಸುತ್ತದೆ. ಅದರಲ್ಲಿ ಸುರರು (ದೇವತೆಗಳನ್ನು ಪ್ರತಿನಿಧಿಸುವವರು) ಮತ್ತು ಅಸುರರು (ದುಷ್ಟತೆಯನ್ನು ಪ್ರತಿನಿಧಿಸುವವರು) ಅಮೃತವನ್ನು ಹುಡುಕುವ ಸಲುವಾಗಿ ಸಮುದ್ರಮಥನ ನಡೆಸುತ್ತಾರೆ. ಆಗ ಹುಟ್ಟಿದ್ದು ಹಾಲಾಹಲ (ವಿಷ). ಆಗ ಸುರರು ಅಲ್ಲಿಂದ ಓಡಿಹೋಗುತ್ತಾರೆ. ಪ್ರಪಂಚವನ್ನು ಉಳಿಸುವ ಸಲುವಾಗಿ ಶಿವನು ವಿಷವನ್ನು ಕುಡಿದು ವಿಷಕಂಠ, ನೀಲಕಂಠ ಎಂದು ಕರೆಸಿಕೊಳ್ಳುತ್ತಾನೆ.

ದೇಶದಾದ್ಯಂತ ಜನರು ಶಿಕ್ಷಣದ ಪ್ರವೇಶಕ್ಕೆ ಮತ್ತು ಶಿಕ್ಷಣ ಪಡೆಯಲು ಹೆಣಗಾಡುತ್ತಿರುವ ಹೊತ್ತಿನಲ್ಲಿ, ಅದನ್ನು ಭರವಸೆಯ ಕೊನೆಯ ಆಶ್ರಯತಾಣವೆಂದು ನೋಡುತ್ತಿರುವ ಹೊತ್ತಿನಲ್ಲಿ- ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ)- 2020, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್), ಅದರ ಸ್ಥಿತಿಪತ್ರಗಳು (Position Papers), ಜೊತೆಗೆಯೇ ಶಿಕ್ಷಣ ಕ್ಷೇತ್ರದ ಆಡಳಿತಗಾರರು ಕಾಲಕಾಲಕ್ಕೆ ಹೊರಡಿಸುತ್ತಿರುವ ರಾಶಿರಾಶಿ ಸುತ್ತೋಲೆಗಳು, ಮಾರುವೇಷದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತರಲಾಗುತ್ತಿರುವ ಸರ್ವಾಧಿಕಾರಿ ಬದಲಾವಣೆಗಳು- ಇವೆಲ್ಲಾ ಇಂದು ಕೇವಲ ವಿಷವಾಗಿರುವ ಕಾಲದಲ್ಲಿ ಇದಕ್ಕಿಂತ ಉತ್ತಮವಾದ ರೂಪಕವಿರುವುದು ಸಾಧ್ಯವಿಲ್ಲ ಅನ್ನಿಸುತ್ತದೆ.

ಪುಸ್ತಕವು ನಾಲ್ಕು ಭಾಗಗಳನ್ನು ಹೊಂದಿದ್ದು, ಶಿಕ್ಷಣ ವಲಯದಲ್ಲಿ ಸಂಘ ಪರಿವಾರ ಮತ್ತದರ ಅಧೀನ ಸಂಘಟನೆಗಳ ಕೋಮುವಾದಿಹಿಂದುತ್ವವಾದಿ ಮತ್ತು ಬ್ರಾಹ್ಮಣ್ಯದ ಕಾರ್ಯಕ್ರಮದ ನುಸುಳುವಿಕೆಯನ್ನು ಸಮಗ್ರವಾಗಿ ದಾಖಲಿಸುತ್ತದೆ. ಮೊದಲ ಭಾಗದಲ್ಲಿ- ದೇಶದಾದ್ಯಂತ ಶಿಕ್ಷಣ ವಲಯದಲ್ಲಿ ತನ್ನದೇ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸುವ ಸಂಘಪರಿವಾರದ ಪ್ರಯತ್ನಗಳನ್ನು ಚರ್ಚಿಸಿ, ನಂತರ, ಎಳೆಯ ಮನಸ್ಸುಗಳನ್ನು ದ್ವೇಷದಿಂದ ತುಂಬಿಸುವ ಕಾರ್ಯಕ್ರಮ ಹೊಂದಿರುವ ಪುಸ್ತಕಗಳು ಹಾಗೂ ಸಾಹಿತ್ಯದ ಪ್ರಕಟಣೆಯಲ್ಲಿ ಗೀತಾ ಪ್ರೆಸ್‌ನ ಪಾತ್ರವನ್ನು ದಾಖಲಿಸುತ್ತದೆ.

ಎರಡನೇ ಭಾಗವು- ಸಂಘಪರಿವಾರಕ್ಕೆ ಭಾಗಶಃ ಆಧೀನವಾಗಿರುವ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿದಂದಿನಿಂದ ನಡೆಯುತ್ತಾಬಂದಿರುವ, ಶಿಕ್ಷಣದ ಕೋಮುವಾದೀಕರಣ ಮತ್ತು ಬ್ರಾಹ್ಮಣೀಕರಣ ಮಾಡುವ ಪ್ರಯತ್ನಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ್ ಎಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ)ಯ ಮೇಲೆ ತನ್ನ ಸರ್ವಾಧಿಕಾರಿ ನಿಯಂತ್ರಣ ಸಾಧಿಸಿದ ಮತ್ತು ಪಠ್ಯಪುಸ್ತಕಗಳಲ್ಲಿ ಮಾಡಲಾದ ಬದಲಾವಣೆಗಳ ಕಾರಣದಿಂದಾಗಿ, ಶತಮಾನದ ತಿರುವಿನಲ್ಲಿ ಕೇಂದ್ರ ಶಿಕ್ಷಣ ಮಂತ್ರಿಯಾಗಿದ್ದ ಮುರಳೀಮನೋಹರ ಜೋಶಿ ಅವರ ಅವಧಿಯನ್ನು ಭಾರತದ ಶಿಕ್ಷಣದಲ್ಲೇ ಅತ್ಯಂತ ಕರಾಳ ಸಮಯವೆಂದು ಗುರುತಿಸಲಾಗುತ್ತದೆ. ಇದೆಲ್ಲಾ ನಡೆಯುತ್ತಿರುವಾಗ, ಅದರ ಪರಿಣಾಮಗಳಿಗೆ ಮತ್ತು ಇಂತಹ ಕ್ರಮಗಳಿಗೆ ಎದುರಾದ ಪ್ರತಿರೋಧಗಳು- ಇಂಗ್ಲಿಷ್ ಭಾಷಾ ಶೈಕ್ಷಣಿಕ ವಲಯಗಳಲ್ಲಿ ಚೆನ್ನಾಗಿ ದಾಖಲೆಯಾಗಿವೆಯಾದರೂ, ವಿದ್ವಾಂಸರ ಗಮನದಿಂದ ತಪ್ಪಿಹೋಗಿರುವುದು ಎಂದರೆ, ಈ ಎಲ್ಲಾ ಕ್ರಮಗಳನ್ನು ಈಗ ರಾಜ್ಯಗಳ ಮಟ್ಟದಲ್ಲಿ ಕೂಡಾ ಪುನರಾವರ್ತಿಸುವ ವಿಷಯದಲ್ಲಿ ಸಂಘಪರಿವಾರ ಮತ್ತು ಅದರ ಅಧೀನ ಸಂಸ್ಥೆಗಳು ಹಿಂದೆಂದಿಗಿಂತಲೂ ಹೆಚ್ಚಿನ ವಿಶ್ವಾಸ ಹೊಂದಿವೆ ಎಂಬುದು.

ಇದನ್ನೂ ಓದಿ: ಮಂಪರು: ಸ್ತ್ರೀಸಂವೇದನೆ ಹಾಗೂ ಮೈಮನಗಳ ಉಭಯ ಸಂಕಟ

ಕರ್ನಾಟಕದಲ್ಲಿ 2006-12ರಲ್ಲಿ ಮತ್ತು 2018-23ರಲ್ಲಿ ಅನುಸರಿಸಿದ್ದು ಇದೇ ಮಾದರಿಯಾಗಿದೆ. (ಒಮ್ಮೆ ಜೆಡಿಎಸ್ ಜೊತೆಗೆ ಮೈತ್ರಿಕೂಟ ಹೊಂದಿದ್ದಾಗ, ಮತ್ತೊಮ್ಮೆ ಸ್ವಂತವಾಗಿ.) ಈ ಪ್ರಯತ್ನಗಳ ಕುರಿತು ಲೇಖಕರ ದಾಖಲೀಕರಣವು, ಪಠ್ಯಪುಸ್ತಕಗಳ ಕೋಮುವಾದೀಕರಣದದ ಮೇಲಿನ ಸಂಶೋಧನೆಗೆ ಮಹತ್ವದ ಸೇರ್ಪಡೆಯಾಗಿದೆ.

ಪಠ್ಯಪುಸ್ತಕಗಳ ಬ್ರಾಹ್ಮಣ್ಯೀಕರಣಕ್ಕೆ ರಾಜ್ಯದಲ್ಲಿ ಎದುರಾದ ಬುದ್ಧಿಜೀವಿಗಳ ಪ್ರತಿರೋಧದ ದಾಖಲೀಕರಣವು ಇಲ್ಲಿ ಬಿಟ್ಟುಹೋಗಿದ್ದರೂ, ಎರಡು ಕಾರಣಗಳಿಗಾಗಿ ಈ ಪುಸ್ತಕವು ಮುಂದಿನ ಕೆಲವು ವರ್ಷಗಳ ತನಕ ಮೌಲ್ಯಯುತವಾಗಬಹುದು. ಮೊದಲನೆಯದಾಗಿ, ರಾಜ್ಯ ಮಟ್ಟದಲ್ಲಿ ಪಠ್ಯಪುಸ್ತಕಗಳನ್ನು ಮತ್ತು ಸಾಮಾನ್ಯವಾಗಿ ಶಿಕ್ಷಣವನ್ನೇ ಕೋಮುವಾದೀಕರಣಗೊಳಿಸುವ ಹಲವು ಪ್ರಯತ್ನಗಳ ಹೊರತಾಗಿಯೂ, ಅದರ ಬಗ್ಗೆ ವ್ಯವಸ್ಥಿತ ದಾಖಲೀಕರಣ ಇದ್ದಿರಲಿಲ್ಲ. ಎರಡನೆಯದಾಗಿ, ಅದು ರಾಜ್ಯಮಟ್ಟದಲ್ಲಿ ಪಠ್ಯಪುಸ್ತಕಗಳಿಗೆ ತರಲಾಗುತ್ತಿರುವ ಬದಲಾವಣೆಗಳತ್ತ ಗಮನ ಹರಿಸುವಂತೆ ಶೈಕ್ಷಣಿಕ ಪ್ರಪಂಚಕ್ಕೆ ನೆನಪಿಸುತ್ತದೆ ಮತ್ತು ಎನ್‌ಸಿಇಆರ್‌ಟಿ ಮತ್ತು ದಿಲ್ಲಿ ರಾಜ್ಯ ಶಿಕ್ಷಣ ಮಂಡಳಿಯ ಪಠ್ಯಪುಸ್ತಕಗಳ ಕುರಿತು ತಮ್ಮ ಗೀಳನ್ನು ಮೀರಿ ಮುನ್ನಡೆಯುವಂತೆ ಶಿಕ್ಷಣತಜ್ಞರಿಗೆ ಕರೆ ನೀಡುತ್ತದೆ. ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಐಜಿಸಿಎಸ್‌ಇ ಮಂಡಳಿಗಳ ಕುರಿತು ನಗರಗಳ ಪ್ರತಿಷ್ಠಿತರು ಮತ್ತು ಮಧ್ಯಮವರ್ಗಗಳ ಒಲವು ಹೆಚ್ಚುತ್ತಿರುವುದರ ನಡುವೆ, ದೇಶದಾದ್ಯಂತದ ಹೆಚ್ಚಿನ ವಿದ್ಯಾರ್ಥಿಗಳು ರಾಜ್ಯ ಮಂಡಳಿಗಳ ಪಠ್ಯ ಮತ್ತು ಶಿಕ್ಷಣ ಕ್ರಮಗಳನ್ನು ಕಲಿಯುತ್ತಿದ್ದಾರೆ ಎಂಬುದನ್ನು ಗಮನಿಸಿದಲ್ಲಿ, ಇದು ವಿಶೇಷವಾಗಿ ಮುಖ್ಯ ಎನಿಸುತ್ತದೆ.

ಇತಿಹಾಸದ ಬೋಧನೆಯ ಕುರಿತು ಗಮನಹರಿಸುವ ಮೂರನೇ ಭಾಗವು, ಐತಿಹಾಸಿಕ ಸಂಶೋಧನೆಯ ಮೇಲೆ ಹಿಂದುತ್ವದ ಯೋಜನೆ ನಡೆಸಿದ ಸರಣಿ ದಾಳಿಗಳ ವಿಧಾನಗಳ ಕುರಿತು ಒಳನೋಟಗಳನ್ನು ಒದಗಿಸುತ್ತದೆ. ಹೀಗಿದ್ದರೂ, ತಾರ್ಕಿಕವಾಗಿ ಪುಸ್ತಕದ ಅತಿಮುಖ್ಯ ಭಾಗವು ಮುಂದಿನ ಹಾದಿಯ ಕುರಿತ ಚರ್ಚೆಗಳನ್ನು ಒಳಗೊಂಡಿದೆ. ದೇಶದಲ್ಲಿ ಜಾತಿ ಅಸ್ಮಿತೆ ಅಥವಾ ಗುರುತುಗಳ ಆಧಾರದಲ್ಲಿ ವಿಭಜನೆಗೊಳ್ಳುವುದು ಮುಂದುವರಿದಿರುವಾಗ, ಒಂದು ಶೈಕ್ಷಣಿಕ ಕಾರ್ಯಕ್ರಮವಾಗಿ ’ಜಾತ್ಯತೀತತೆ’ಯ ಆದರ್ಶ ಕಲ್ಪನೆಯ ಅಸ್ಥಿರತೆಯನ್ನು ಲೇಖಕರು ಬೆಟ್ಟುಮಾಡಿ ತೋರಿಸುತ್ತಾರೆ. ರಾಜಕೀಯ ಮತ್ತು ಧಾರ್ಮಿಕ ಕಾರಣಗಳಿಗಾಗಿ ಮಾತ್ರವೇ ಅಗತ್ಯ ಬಿದ್ದಿರುವ ಜಾತ್ಯತೀತತೆಯ ಅನುಸರಣೆಯೂ ನಮ್ಮನ್ನು ವಿಫಲಗೊಳಿಸುವುದು ನಿಶ್ಚಿತ ಎಂದು ಲೇಖಕರು ವಾದಿಸುತ್ತಾರೆ. ಹೀಗಿದ್ದರೂ, ಒಂದು ತತ್ವಶಾಸ್ತ್ರೀಯ ಪ್ರಶ್ನೆಯಾಗಿ ಮತ್ತು ಒಬ್ಬ ವ್ಯಕ್ತಿಯ ಅಸ್ಮಿತೆ ಅಥವಾ ಗುರುತಿನಲ್ಲಿ ಆಳವಾಗಿ ಬೇರೂರಿರುವ ಸಂಗತಿಯಾಗಿ ಜಾತ್ಯತೀತತೆಯನ್ನು ಅನುಸರಿಸುವುದು- ಅದನ್ನು ಒಂದು ಸಮಾಜೋ-ಸಾಂಸ್ಕೃತಿಕ ವಿದ್ಯಮಾನವಾಗಿ ಅರ್ಥಮಾಡಿಕೊಳ್ಳಲು ನಮಗೆ ಅದು ಸಾಧ್ಯವಾಗಿಸುತ್ತದೆ. ಜಾತಿ ಹೆಮ್ಮೆ ಮತ್ತು ಬ್ರಾಹ್ಮಣ್ಯದ ಸಿದ್ಧಾಂತದ ಪರಿಣಾಮವಾಗಿ ಹುಟ್ಟುವ ದೌರ್ಜನ್ಯ ಮತ್ತು ತಾರತಮ್ಯವನ್ನು ಪರಿಹರಿಸುವ ರೀತಿಯಲ್ಲಿ ನಾವು ಜಾತ್ಯತೀತತೆಯನ್ನು ಪುನರ್‌ರಚಿಸಲು ಸಾಧ್ಯವಾಗುವ ತನಕ, ಕೋಮುವಾದಿ ಶಕ್ತಿಗಳು- ಜಾತ್ಯತೀತತೆಯ ಈ ಅಸ್ಥಿರತೆ ಅಥವಾ ದೌರ್ಬಲ್ಯದ ದುರುಪಯೋಗ ಮಾಡುವುದನ್ನು ತಡೆಯಲು ನಾವು ಶಕ್ತರಾಗುವುದಿಲ್ಲ ಎಂದು ಅವರು ವಾದಿಸುತ್ತಾರೆ. ಇದು ತತ್ವಶಾಸ್ತ್ರೀಯ ಮಟ್ಟದಲ್ಲಿ ಒಂದು ಅಂಗೀಕಾರಾರ್ಹ ಪ್ರಸ್ತಾಪವಾಗಿ ಕಾಣಬಹುದಾದರೂ, ವಾಸ್ತವದಲ್ಲಿ 150 ಪುಟಗಳ ಪಠ್ಯಪುಸ್ತಕದೊಳಗೆ ಅದನ್ನು ಹೇಗೆ ತರಬೇಕು ಎಂಬ ಪ್ರಶ್ನೆಗೆ, ಸಾಮೂಹಿಕ ಪ್ರಯತ್ನಗಳಲ್ಲಿ ಮಾತ್ರವೇ ಉತ್ತರವಿರಲು ಸಾಧ್ಯ.

ಪಠ್ಯಪುಸ್ತಕಗಳ ಕೋಮುವಾದೀಕರಣದ ಕುರಿತ ಹೆಚ್ಚಿನ ಶೈಕ್ಷಣಿಕ ಅಧ್ಯಯನಗಳು- ಆ ಘಟನೆಗಳನ್ನು ದಾಖಲಿಸುವುದು ಅಥವಾ ಅವುಗಳ ಹಿಂದಿನ ತಾತ್ವಿಕ ಚರ್ಚೆಗಳ ಕುರಿತು ಮಾತ್ರವೇ ಸಂಕುಚಿತವಾಗಿ ಗಮನಹರಿಸಿರುವಾಗ, ರಾಜ್ಯದಲ್ಲಿ ಶೈಕ್ಷಣಿಕ ಹಕ್ಕುಗಳ ರಕ್ಷಣೆಯ ಹೋರಾಟದ ಮುಂಚೂಣಿಯಲ್ಲಿರುವ ಲೇಖಕರು, ಇವುಗಳನ್ನು ಜೊತೆಗೆ ಬೆಸೆದು, ಒಂದು ಆಳವಾದ ಮತ್ತು ಸಮಗ್ರವಾದ ಒಳನೋಟದ ಪ್ರಸ್ತುತಿಯನ್ನು ಮುಂದಿಡಲು ಶಕ್ತರಾಗಿದ್ದಾರೆ. ಸಮಯದ ವಿಷಯಕ್ಕೆ ಸಂಬಂಧಿಸಿ ತುಂಬಾ ದೀರ್ಘಕಾಲವನ್ನು (1925-2023) ಒಳಗೊಳ್ಳುವ ಪ್ರಯತ್ನ ಮತ್ತು ತಾನು ಚರ್ಚಿಸಲು ಇಚ್ಛಿಸುವ ಶಿಕ್ಷಣದ ಹಂತಗಳನ್ನು ಪರಿಗಣಿಸಿದಲ್ಲಿ, ಈ ಪುಸ್ತಕವು ಸಾಕಷ್ಟನ್ನು ಸಾಧಿಸಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ತಿರಸ್ಕರಿಸಿದೆ ಮತ್ತು ರಾಜ್ಯಕ್ಕೆ ಹೊಸ ಶಿಕ್ಷಣ ನೀತಿಯನ್ನು ರೂಪಿಸಲು ಪ್ರೊ. ಸುಖದೇವ್ ಥೋರಟ್ ಸಮಿತಿಯನ್ನು ನೇಮಿಸಿದೆ. ಜೊತೆಗೆಯೇ ದೀರ್ಘಕಾಲ ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವಿರುವ ವಿವಿಧ ಕ್ಷೇತ್ರಗಳ ಕೆಲವು ವಿಶ್ವಾಸಾರ್ಹ ವಿಷಯ ತಜ್ಞರು ಮತ್ತು ಬುದ್ಧಿಜೀವಿಗಳನ್ನು ಈ ಸಮಿತಿ ಒಳಗೊಂಡಿದೆ. ಶಿಕ್ಷಕರು, ಪ್ರಿನ್ಸಿಪಾಲರು, ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆಗಳ (ಡಿಐಇಟಿ) ಪ್ರತಿನಿಧಿಗಳನ್ನು ಕಣ್ಣಿಗೆ ರಾಚುವಂತೆ ಕೈಬಿಡಲಾಗಿರುವುದರ ಹೊರತಾಗಿಯೂ- ಯಾವುದೇ ಅರ್ಹತೆ ಇಲ್ಲದ, ಬಿಜೆಪಿ ಕಾಲದ ಬಲಪಂಥೀಯ ಸಿದ್ಧಾಂತಿ ಸಮಿತಿಗೆ ಹೋಲಿಸಿದಾಗ, ಪ್ರಸಕ್ತ ಸಮಿತಿಯ ನಿಜವಾಗಿಯೂ ಒಳ್ಳೆಯ ಕೆಲಸ ಮಾಡಲಿದೆ ಎಂಬ ಬಗ್ಗೆ ಯಾವ ಅನುಮಾನವೂ ಇಲ್ಲ. ಸದರಿ ಸಮಿತಿಯ ಸದಸ್ಯರು ಕರ್ನಾಟಕದ ಜಾತ್ಯತೀತ ಸಂರಚನೆಯನ್ನು ಪ್ರತಿನಿಧಿಸುತ್ತಾ ಬಂದಿರುವವರಾಗಿದ್ದಾರೆ. ಆದರೆ, ಶಿಕ್ಷಣದಲ್ಲಿ ಕ್ಷೆಭೆಯುಂಟುಮಾಡುವಂತೆ ಹುಟ್ಟಿಸಲಾಗುತ್ತಿರುವ ಕೋಮುವಾದಿ-ಬ್ರಾಹ್ಮಣ್ಯವಾದಿ ವಿಷವನ್ನು ನುಂಗಿ ರಾಜ್ಯವನ್ನು ರಕ್ಷಿಸುವ ಧೈರ್ಯ ಅವರು ಮಾಡಬಲ್ಲರೇ? ಈ ನಿರ್ಣಾಯಕ ಕಾಲದಲ್ಲಿ ಈ ಪುಸ್ತಕವು ಎತ್ತುವ ಪ್ರಶ್ನೆಯೇ ಇದಾಗಿದೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಶಶಾಂಕ್ ಎಸ್. ಆರ್
ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ ಸ್ಟಡೀಸ್‌ನಲ್ಲಿ ಸಂಶೋಧನಾರ್ಥಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...