Homeಕರ್ನಾಟಕವೈರುಧ್ಯಗಳ ನಡುವೆ ’ಪರ್ಯಾಯವಾಗಲು ಹೆಣಗುತ್ತಿರುವ’ ಕಾಂಗ್ರೆಸ್; ’ಪ್ರಾದೇಶಿಕ ಪಕ್ಷವಾಗದ’ ಜೆಡಿಎಸ್

ವೈರುಧ್ಯಗಳ ನಡುವೆ ’ಪರ್ಯಾಯವಾಗಲು ಹೆಣಗುತ್ತಿರುವ’ ಕಾಂಗ್ರೆಸ್; ’ಪ್ರಾದೇಶಿಕ ಪಕ್ಷವಾಗದ’ ಜೆಡಿಎಸ್

- Advertisement -

ಸೆಪ್ಟೆಂಬರ್ 28ರಂದು ಕಾಂಗ್ರೆಸ್‌ಗೆ ಸಂಬಂಧಿಸಿದಂತೆ ಎರಡು ಬೆಳವಣಿಗೆಗಳಾದವು. ಒಂದೆಡೆ ಕನ್ಹಯ್ಯ ಕುಮಾರ್ ಕಾಂಗ್ರೆಸ್ಸಿಗೆ ಸೇರಿ, ಜಿಗ್ನೇಶ್ ಮೇವಾನಿ ಕಾಂಗ್ರೆಸ್‌ಗೆ ಅಧಿಕೃತ ಬೆಂಬಲ ಸೂಚಿಸಿದ ಪತ್ರಿಕಾಗೋಷ್ಠಿಯನ್ನು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದರು. ಇನ್ನೊಂದೆಡೆ ಕಳೆದ ವಾರವಷ್ಟೇ ಪಂಜಾಬ್ ಮುಖ್ಯಮಂತ್ರಿಯ ಬದಲಾವಣೆಗೆ ಕಾರಣವಾಗಿದ್ದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೇ, ಮೂರು ದಿನಗಳ ಕೆಳಗೆ ಹೊಸದಾಗಿ ಮಂತ್ರಿಯಾಗಿದ್ದ ಸಿಧು ಬೆಂಬಲಿಗ ಸಚಿವೆಯ ಕೈಲೂ ರಾಜೀನಾಮೆ ನೀಡಿಸಿದರು.

ನೀಲಿ ಬಣ್ಣದ ಅಂಗಿ ತೊಟ್ಟ ಜಿಗ್ನೇಶ್, ಕೆಂಪು ಅಂಗಿ ತೊಟ್ಟಿದ್ದ ಕನ್ಹಯ್ಯ ಮತ್ತು ಬಿಳಿ ಬಟ್ಟೆ ತೊಟ್ಟಿದ್ದ ರಾಹುಲ್ ಕಾಂಗ್ರೆಸ್‌ನ ಇಂದಿನ ರಂಗುಗಳನ್ನು ಸೂಚಿಸುತ್ತಾರೆ, ಇದು ಹೊಸ ಮನ್ವಂತರಕ್ಕೆ ನಾಂದಿ ಎಂದೆಲ್ಲಾ ಒಂದಷ್ಟು ಕಾಂಗ್ರೆಸ್ಸಿಗರು ಸಂಭ್ರಮಿಸಿದರು; ಬಿಜೆಪಿ ಆರೆಸ್ಸೆಸ್‌ನ ಕಟುವಿರೋಧಿಗಳಾಗಿದ್ದು, ಕಾಂಗ್ರೆಸ್ಸಿನ ಕುರಿತು ಮೆದುವಾಗಿರುವ ಹಲವರು ಇದನ್ನು ಒಂದು ಭರವಸೆಯಂತೆಯೂ ಕಂಡರು. ಅದೇ ಹೊತ್ತಿನಲ್ಲಿ ಇದೇ ಕಾಂಗ್ರೆಸ್ಸಿನ ಪಂಜಾಬಿನ ಕೋಟೆಯು ಏನೆಲ್ಲಾ ಪ್ರಯತ್ನಗಳ ಹೊರತಾಗಿಯೂ ಉರುಳುತ್ತಿರುವುದನ್ನು ಹೇಗೆ ಅರ್ಥ ಮಾಡಿಕೊಳ್ಳುವುದೋ ಗೊತ್ತಾಗದೇ ಗೊಂದಲಕ್ಕೂ ಬಿದ್ದರು.

ಕಾಂಗ್ರೆಸ್‌ನ ಒಳಗೆ ಬಿಚ್ಚಿಕೊಳ್ಳುತ್ತಿರುವ ಒಂದು ವಿದ್ಯಮಾನದ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳನ್ನು ಗಮನಿಸಬೇಕು. ರಾಹುಲ್‌ಗಾಂಧಿ ಟೀಂ (ಅಂದರೆ ಅದರಲ್ಲಿ ಪ್ರಮುಖವಾಗಿ ಪ್ರಿಯಾಂಕಾಗಾಂಧಿಯೂ ಸೇರುತ್ತಾರೆ) ಹಾಗೂ ಕಾಂಗ್ರೆಸ್‌ನ ಹಳೆಯ ತಲೆಗಳ ನಡುವೆ ಒಂದು ಬಿಕ್ಕಟ್ಟು ಸಾಕಷ್ಟು ಹಿಂದಿನಿಂದಲೇ ಶುರುವಾಗಿ ದೊಡ್ಡದಾಗುತ್ತಾ ಬರುತ್ತಿದೆ. ಜಿ23 ಎಂದು ಕರೆಸಿಕೊಳ್ಳಲ್ಪಟ್ಟ, ಕಾಂಗ್ರೆಸ್‌ಗೊಬ್ಬ ಚುನಾಯಿತ ಪೂರ್ಣಾವಧಿ ಅಧ್ಯಕ್ಷರು ಬೇಕು ಎಂದು ಪತ್ರ ಬರೆದ ’ಹಿರಿಯ ನಾಯಕರು’, ಪ್ರಯೋಜನಕ್ಕಿಲ್ಲದವರು, ಪಕ್ಷದ ಪುನಶ್ಚೇತನಕ್ಕೆ ಅಡ್ಡಿಯಾಗಿರುವವರು, ಆರೆಸ್ಸೆಸ್‌ನ ವಿರುದ್ಧ ಹೋರಾಡುವ ಸೈದ್ಧಾಂತಿಕ ಬದ್ಧತೆ ಮತ್ತು ಇಚ್ಛಾಶಕ್ತಿ ಇಲ್ಲದವರು, ಜನಬಲವಿಲ್ಲದವರು ಎಂಬುದು ಆರ್‌ಜಿ ಟೀಂನ ಅಭಿಪ್ರಾಯ. ಈ ಆರ್‌ಜಿ ಟೀಂ ಎಂಬುದೂ ಎನ್‌ಜಿಓಗಳ ರೀತಿಯಲ್ಲಿ ಕೆಲಸ ಮಾಡುವ, ಯಾವುದೇ ಜನನಾಯಕರಿಲ್ಲದ, ಕಾಂಗ್ರೆಸ್‌ನ ಸೆಂಟ್ರಿಸ್ಟ್ ನಿಲುವಿನಿಂದ ಬದಿಗೆ ಸರಿದು ಲೆಫ್ಟ್ ಆಫ್ ದಿ ಸೆಂಟರ್ (ಸ್ವಲ್ಪ ಎಡಪಂಥೀಯ) ಕಡೆಗೆ ಎಳೆದಿರುವ, ಅಸಲೀ ರಾಜಕಾರಣ ಗೊತ್ತಿರದ ಅಪ್ರಬುದ್ಧ ಯುವಕ ಯುವತಿಯರದ್ದು ಎಂಬುದು ಉಳಿದವರ ಅಭಿಪ್ರಾಯ. ಆ ಉಳಿದವರಲ್ಲಿ ಸೋನಿಯಾ ಗಾಂಧಿಯವರ ರಾಜಕೀಯ ಸಲಹೆಗಾರ ದಿವಂಗತ ಅಹ್ಮದ್ ಪಟೇಲ್ ಸಹಾ ಇದ್ದರು ಎಂಬ ವದಂತಿಗಳಿದ್ದವು.

ಹೊಸ ಟೀಂ ಕಟ್ಟಿಕೊಳ್ಳಲು ನಾಯಕ ಅಥವಾ ನಾಯಕಿಯೊಬ್ಬರು ತೀರ್ಮಾನಿಸಿದ ತಕ್ಷಣ ಸಾಕಾರವಾಗಬೇಕೆಂದರೆ, ಅವರು ಸ್ವಂತ ಬಲದಲ್ಲಿ ದೊಡ್ಡ ಸಾಧನೆ ಮಾಡಿದ್ದು ಉಳಿದವರಲ್ಲಿ ಹೆದರಿಕೆ ಹುಟ್ಟಿಸಬೇಕು ಅಥವಾ ಗೌರವ ಹುಟ್ಟಿಸಬೇಕು. ರಾಹುಲ್ ಗಾಂಧಿಯ ಜನಪರ ಆಲೋಚನೆ ಹಾಗೂ ಮೋದಿಯನ್ನು ಎದುರು ಹಾಕಿಕೊಳ್ಳುವ ಧೈರ್ಯ ಹಾಗೂ ಆರೆಸ್ಸೆಸ್‌ನ ವಿರುದ್ಧದ ಸೈದ್ಧಾಂತಿಕ ನಿಲುವೇ ಅಂತಹ ಹೆದರಿಕೆ ಅಥವಾ ಗೌರವವನ್ನು ಹುಟ್ಟಿಸಲಿಲ್ಲ. ಹಾಗಾಗಿ 2019ರ ಚುನಾವಣೆಗೆ ಮುಂಚಿನಿಂದಲೇ ಕಾಂಗ್ರೆಸ್ ಒಂದೇ ಸಂಘಟನಾ ಹಾಗೂ ರಾಜಕೀಯ ಬಲದೊಂದಿಗೆ ಕೆಲಸ ಮಾಡುತ್ತಿಲ್ಲ. 2019ರ ಚುನಾವಣೆಯ ಭೀಕರ ಸೋಲಿನ ನಂತರ ರಾಹುಲ್‌ಗಾಂಧಿ ’ನೈತಿಕ ಹೊಣೆ ಹೊತ್ತು’ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರಾದರೂ, ವಾಸ್ತವದಲ್ಲಿ ಅವರು ಮಿಕ್ಕವರ ಮೇಲೆ ಸೋಲಿನ ಹೊಣೆಗಾರಿಕೆ ಹಾಕಲು ಮುಂದಾದಂತೆ ತೋರುತ್ತಿತ್ತು. ಅಂದರೆ ಮೋದಿ, ಆರೆಸ್ಸೆಸ್‌ಅನ್ನು ಸೋಲಿಸಲು ನಾವು ತಳಮಟ್ಟದಿಂದ ಭಿನ್ನ ರೀತಿಯ ಪಕ್ಷವನ್ನು ಕಟ್ಟಬೇಕು ಮತ್ತು ಅವರನ್ನು ಎದುರಿಸಲು ಬೇಕಾದ ಗಟ್ಟಿತನವನ್ನು ತೋರಿಸಬೇಕು – ಅದಕ್ಕೆ ಈ ಹಳೆಯ ತಲೆಗಳು ಅವಕಾಶ ಕೊಡದ್ದರಿಂದ ಹಾಗೂ ಎಡಬಿಡಂಗಿತನ ತೋರುತ್ತಿರುವುದರಿಂದಲೇ ನಮಗೆ ಈಗಲೂ ಇಂತಹ ಸೋಲಾಯಿತು ಮತ್ತು ಮುಂದಿನ ದಿನಗಳಲ್ಲೂ ಮೇಲೇರಲು ಸಾಧ್ಯವಿಲ್ಲ ಎಂಬುದು ರಾಹುಲ್ ಟೀಂನ ಅನಿಸಿಕೆಯಾಗಿತ್ತು. ಅದನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲೇ ಬಿರುಸಾಗಿ ಆಡಿದ್ದು, ಹೊಸ ಪ್ರಧಾನ ಕಾರ್ಯದರ್ಶಿಗಳಲ್ಲೊಬ್ಬರಾದ ಪ್ರಿಯಾಂಕಾ ಗಾಂಧಿ.

ದುರಂತವೆಂದರೆ, ರಾಹುಲ್‌ಗಾಂಧಿಯ ಅಧ್ಯಕ್ಷ ಸ್ಥಾನದ ಪದತ್ಯಾಗವು ಇತರರಲ್ಲಿ ನೈತಿಕ ಪ್ರಶ್ನೆಗಳನ್ನೂ ಎಬ್ಬಿಸಲಿಲ್ಲ; ಕಾಂಗ್ರೆಸ್ಸಿಗೆ ಹೊಸತನವನ್ನೂ ತರಲಿಲ್ಲ. ಏಕೆಂದರೆ ’ತಾತ್ಕಾಲಿಕ’ ಅಧ್ಯಕ್ಷೆಯಾಗಿ ಸೋನಿಯಾಗಾಂಧಿಯವರನ್ನೇ ಅಲ್ಲಿ ಕೂರಿಸಲಾಯಿತು ಮತ್ತು ಇದುವರೆಗೆ (ಕನ್ಹಯ್ಯ ಕುಮಾರ್‌ರನ್ನು ಕಾಂಗ್ರೆಸ್ಸಿಗೆ ಬರಮಾಡಿಕೊಳ್ಳುವ ಕೆಲಸದಿಂದ ಹಿಡಿದು, ಪಂಜಾಬಿನ ನಾಯಕತ್ವ ಬದಲಾವಣೆಯವರೆಗೆ) ಎಲ್ಲಾ ತೀರ್ಮಾನಗಳನ್ನೂ ರಾಹುಲ್ ಗಾಂಧಿಯೇ ತೆಗೆದುಕೊಳ್ಳುತ್ತಾರೆ. ಇದಕ್ಕೆ ಕಾರಣವೇನೆಂದರೆ, ಹಂತಹಂತವಾಗಿ ಎಲ್ಲಾ ರಾಜ್ಯಗಳಲ್ಲೂ ಮೇಲ್ನೋಟಕ್ಕೆ ಅಷ್ಟು ಅಗ್ರೆಸ್ಸಿವ್ ಎಂದು ತೋರದ ರೀತಿಯಲ್ಲಿ ಹಳೆಯ ನಾಯಕತ್ವವನ್ನು ಹಿಂದೆ ಸರಿಸುತ್ತಾ ತನ್ನದೇ ಹೊಸ ತಂಡವನ್ನು ಕಟ್ಟಿಕೊಳ್ಳಲು ಟೀಂ ಆರ್‌ಜಿ ತೀರ್ಮಾನಿಸಿದೆ. ಅಗ್ರೆಸಿವ್ ಆಗಿ ಮಾಡಿದರೆ ಡ್ಯಾಮೇಜ್ ಹೆಚ್ಚಾಗಬಹುದು ಎಂಬುದು ಅವರ ಲೆಕ್ಕಾಚಾರ.

ಕೇಂದ್ರದ ಮೇಲೆ ಒತ್ತಡ ತರಲು ಪ್ರತಿಭಟನೆಯನ್ನು ದೆಹಲಿಗೆ ವರ್ಗಾಯಿಸಿ: ರೈತರಲ್ಲಿ ಅಮರಿಂದರ್ ಸಿಂಗ್ ಮನವಿ

ಪಂಜಾಬಿನಲ್ಲಿ ಅಮರಿಂದರ್ ಸಿಂಗ್‌ರನ್ನು ತೆಗೆದದ್ದು ಯಾವ ದಿಕ್ಕಿನಿಂದ ನೋಡಿದರೂ ಸಮಂಜಸವಾಗಿತ್ತು. ಕಾಂಗ್ರೆಸ್ಸಿನಲ್ಲಿದ್ದರು ಎಂಬುದನ್ನು ಬಿಟ್ಟರೆ, ಈ ಅಮರಿಂದರ್ ಬಿಜೆಪಿ, ಅಕಾಲಿದಳ ಅಥವಾ ಇನ್ನಾವುದೇ ಪಕ್ಷದಲ್ಲೂ ಇರಬಹುದಾದ (ಹಿಂದೆ ಅಕಾಲಿದಳದಲ್ಲೂ ಇದ್ದ, ಜನಸಂಘದಿಂದಲೂ ಬೆಂಬಲ ತೆಗೆದುಕೊಂಡಿದ್ದ) ಒಬ್ಬ ಅಧಿಕಾರದಾಹಿ ರಾಜಕಾರಣಿ ಬಿಟ್ಟರೆ ಅವರದ್ಯಾವ ಸಾಧನೆಯೂ ಇಲ್ಲ. ಆದರೆ ಕಾಂಗ್ರೆಸ್ಸಿನಲ್ಲಿ ಅಂತಹ ವ್ಯಕ್ತಿಯನ್ನು ತೆಗೆದು ನಿಜಕ್ಕೂ ಐತಿಹಾಸಿಕವಾದ (ದೇಶದಲ್ಲೇ ಅತಿ ಹೆಚ್ಚು ದಲಿತ ಸಮುದಾಯವಿರುವ ರಾಜ್ಯದಲ್ಲಿ) ದಲಿತ ಮುಖ್ಯಮಂತ್ರಿಯೊಬ್ಬರನ್ನು ಪ್ರತಿಷ್ಠಾಪಿಸಲು ಬೇಕಾದ ನಿರ್ಣಯವನ್ನು ತೆಗೆದುಕೊಂಡು ದಕ್ಕಿಸಿಕೊಳ್ಳಬಹುದಾದ ಪರಿಸ್ಥಿತಿ ಇಲ್ಲ. ಹೊಸ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿಯವರ ನೇತೃತ್ವದಲ್ಲೇ ಸದ್ಯದಲ್ಲೇ ಬರಲಿರುವ ಚುನಾವಣೆಯನ್ನೆದುರಿಸಿದರೆ, ನಂತರದ ಅವಧಿಯ ಮೊದಲ ವರ್ಷದಲ್ಲೇ ತಾನು ಸಿಎಂ ಆಗಲಾರೆ ಎಂದು ಒಂದು ವಾರ ಕಳೆದ ನಂತರ ಜ್ಞಾನೋದಯವಾಗಿಸಿಕೊಂಡ ನವಜೋತ್ ಸಿಂಗ್ ಸಿಧು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಬಿಟ್ಟರು.

ಹಾಗಾದರೆ ಅದೇ ದಿನ ಕಾಂಗ್ರೆಸ್ ಸೇರಿದ ಕನ್ಹಯ್ಯ ಕುಮಾರ್ ಯಾವ ಭರವಸೆಯ ಮೇಲೆ ಕಾಂಗ್ರೆಸ್ ಸೇರಿದರು? ಇದಕ್ಕೆ ಉತ್ತರವನ್ನು ಅವರು ಮತ್ತು ಜಿಗ್ನೇಶ್ ಈಗಾಗಲೇ ನೀಡಿದ್ದಾರೆ. ಆದರೆ ಅಂತಹ ಭರವಸೆಯನ್ನು ಕಾಂಗ್ರೆಸ್ ಒಳಗಿನ ಹಲವು ಯುವ ರಾಜಕಾರಣಿಗಳು ಹೊಂದಿಲ್ಲ. ಬಿಜೆಪಿ, ಕಾಂಗ್ರೆಸ್ ಹೊರತಾಗಿ ದೇಶದಲ್ಲಿರುವುದು ಬಹುತೇಕ ಪ್ರಾದೇಶಿಕ ಪಕ್ಷಗಳೇ (ಎಡಪಕ್ಷಗಳು ಕೇರಳದ ಹೊರಗೆ ದೊಡ್ಡ ಶಕ್ತಿ ಎಂದು ಮತ್ತೊಮ್ಮೆ ಸಾಬೀತುಪಡಿಸಬೇಕಿದೆ) ಆಗಿವೆ. ಹಾಗಾಗಿ ಬಿಜೆಪಿಯನ್ನು ಎದುರಿಸಬಯಸುವ ಯುವ ರಾಜಕಾರಣಿಗಳಿಗೆ ಕಾಂಗ್ರೆಸ್‌ನ ಹೊರತಾಗಿ ಬೇರೊಂದು ಪರ್ಯಾಯವಿಲ್ಲವಲ್ಲಾ ಎಂಬ ಪ್ರಶ್ನೆಗೆ ಉತ್ತರಗಳು ಸಿಗುತ್ತಿವೆ. ಅದರಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ಥರದವರು ಬಿಜೆಪಿಗೇ ಹೋಗುವಷ್ಟು ಅವಕಾಶವಾದಿತನ ತೋರಿದರೆ, ಕಾಂಗ್ರೆಸ್‌ನ ವಕ್ತಾರೆಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಿಯಾಂಕಾ ಚತುರ್ವೇದಿ ಇನ್ನೊಂದು ಮತೀಯವಾದಿ ಪಕ್ಷ ಶಿವಸೇನೆಗೆ ಹೋದರು.

ಇವರಿಬ್ಬರೂ ’ರಾಹುಲ್‌ಗಾಂಧಿ ಟೀಂ’ನಲ್ಲಿದ್ದರು ಎಂಬುದನ್ನು ನೆನಪಿನಲ್ಲಿಡಬೇಕು. ಅದೇ ಟೀಂನ ಇನ್ನೊಬ್ಬ ಸದಸ್ಯೆ ಸುಷ್ಮಿತಾ ದೇವ್ ಟಿಎಂಸಿಗೆ ಹೋದರು. ಸುಷ್ಮಿತಾ ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆಯಾಗಿದ್ದ ಯುವತಿ. ಅಸ್ಸಾಂ ಮತ್ತು ತ್ರಿಪುರಾಗಳೆರಡರಲ್ಲೂ ಆಕ್ರಮಣಕಾರಿ ಆಡಳಿತ ಪಕ್ಷವಾಗಿರುವ ಬಿಜೆಪಿಯನ್ನು ಅಷ್ಟೇ ಆಕ್ರಮಣಕಾರಿಯಾಗಿ ಎದುರಿಸಲು ಟಿಎಂಸಿ ತೀರ್ಮಾನಿಸಿದ ಹೊತ್ತಿನಲ್ಲಿ ಸುಷ್ಮಿತಾ ದೇವ್ ಅದಕ್ಕೆ ವಲಸೆ ಹೋಗಿದ್ದಲ್ಲದೇ, ಎರಡು ದಿನಗಳ ಕೆಳಗೆ ಪ.ಬಂಗಾಳದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಅಧಿಕಾರವನ್ನೂ ಪಡೆದುಕೊಂಡರು. ಸುಷ್ಮಿತಾಗೆ ಜಾಗ ಮಾಡಿಕೊಡಲು ತೃಣಮೂಲ ಕಾಂಗ್ರೆಸ್‌ನ ಎಂಪಿಯೊಬ್ಬರಿಂದ ರಾಜೀನಾಮೆ ಪಡೆಯಲಾಗಿತ್ತು!

ಪೂರ್ವ ಭಾರತದ ಅಸ್ಸಾಂ ಮತ್ತು ತ್ರಿಪುರಾಗಳು ಪ.ಬಂಗಾಳಕ್ಕೆ ಹತ್ತಿರದಲ್ಲಿವೆ ಮತ್ತು ಬಂಗಾಳಿಗಳ ಛಾಯೆ ಆ ಎರಡೂ ರಾಜ್ಯಗಳ ಮೇಲೂ ಇವೆ. ಆದರೆ ಬಂಗಾಳದಿಂದ ವಲಸೆ ಹೋದವರದ್ದೇ ಭಾಷೆಯೆಂದು ಹೇಳಲಾಗುವ ಕೊಂಕಣಿಯನ್ನಾಡುವ ಪಶ್ಚಿಮ ಕರಾವಳಿಯ ಗೋವಾದಲ್ಲೂ ಟಿಎಂಸಿ ಕಾಲಿಡಲು ಸಜ್ಜಾಗಿದೆ. ಇದೇ ದಿನ ಗೋವಾದ ಮಾಜಿ ಮುಖ್ಯಮಂತ್ರಿ ಲೂಜಿನ್ಹೋ ಫಲೇರ್ ಕಾಂಗ್ರೆಸ್ಸಿಗೆ ರಾಜೀನಾಮೆ ಕೊಟ್ಟು ಟಿಎಂಸಿ ಸೇರಲೆಂದು ತೀರ್ಮಾನಿಸಿ, ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಲು ಕೊಲ್ಕೊತ್ತಾ ವಿಮಾನ ಹತ್ತಿದ್ದಾರೆ.

ವಂಶಾಡಳಿತದ ಕುಡಿ ಮತ್ತು ಇನ್ನೂ ಹಲವು ಮಿತಿಗಳನ್ನು ಹೊಂದಿದ್ದರೂ ರಾಹುಲ್ ಗಾಂಧಿ ಭಾರತದ ಇಂದಿನ ರಾಜಕಾರಣಕ್ಕೆ ಬೇಕಾದ ಹಲವು ಮೌಲ್ಯಗಳನ್ನು ಹೊತ್ತಿರುವಂತೆ ತೋರುತ್ತಾರೆ. ಹಾಗೆ ನೋಡಿದರೆ ಮಮತಾ ಬ್ಯಾನರ್ಜಿಯಲ್ಲಾಗಲೀ, ಅಶ್ವಮೇಧದ ಕುದುರೆ ಹತ್ತಿ ಹೊರಟಿರುವ ಆಕೆಯ ಅಳಿಯ ಅಭಿಷೇಕ್ ಬ್ಯಾನರ್ಜಿಯಲ್ಲಾಗಲೀ ಆ ಮೌಲ್ಯಗಳು ಕಾಣುತ್ತಿಲ್ಲ. ಆದರೆ, ರಾಹುಲ್ ಗಾಂಧಿಗೆ ಕಾಂಗ್ರೆಸ್‌ನಂತಹ ಒಂದು ದೊಡ್ಡ ಪಕ್ಷದ ಬಲ ಮತ್ತು ದೌರ್ಬಲ್ಯಗಳು ಹಾಗೂ ಆ ಪಕ್ಷ ಮತ್ತು ನೆಹರೂ-ಗಾಂಧಿ ಕುಟುಂಬದ ಹೊರೆ ದೊಡ್ಡ ಅಡ್ಡಿಯಾಗಿವೆ.

ನಾಲ್ಕು ದಿನಗಳ ಹಿಂದೆ ಮುಗಿದ ಕರ್ನಾಟಕ ವಿಧಾನಸಭಾ ಅಧಿವೇಶನದ ಉದಾಹರಣೆಯ ಜೊತೆಗೆ ಇದನ್ನು ವಿವರಿಸಬಹುದು. ನೆಹರೂ-ಗಾಂಧಿ ಕುಟುಂಬದ ನೆಚ್ಚಿನ ನಾಯಕರಲ್ಲೊಬ್ಬರಾದ ಡಿ.ಕೆ.ಶಿವಕುಮಾರ್, ಬಿಜೆಪಿ ಸರ್ಕಾರವು ಹೊರತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ’ನಾಗಪುರ ಶಿಕ್ಷಣ ನೀತಿ’ ಎಂದು ಅಧಿವೇಶನದಲ್ಲಿ ಟೀಕಿಸಿದರು. ಅದರ ವಿರುದ್ಧ ಬಿಜೆಪಿಯ ಸದಸ್ಯರು ಎದ್ದು ನಿಂತು ಕೂಗುತ್ತಾ ಹೋಗಿ, ನಿಮಗೆ ’ಇಟಲಿಯ ಶಿಕ್ಷಣ ನೀತಿ’ ಬೇಕೇ ಎಂದು ಕೇಳಿದರು. ಕಾಂಗ್ರೆಸ್ ಎಂದರೆ ಇಟಲಿಯ ನೀತಿ ಎಂದು ಸೋನಿಯಾ ಗಾಂಧಿಯವರ ಮೂಲವನ್ನು ಅವಹೇಳನಕಾರಿ ಸಂಗತಿಯನ್ನಾಗಿ ಬಳಸಿಕೊಳ್ಳಲು ಸಲೀಸಾಗಿ ಸಾಧ್ಯವಾಗುವ ಮಟ್ಟಕ್ಕೆ ಅದನ್ನು ಬಿಜೆಪಿಯು ಸ್ಥಾಪಿಸಿಬಿಟ್ಟಿದೆ.

ಅಲ್ಲಿಂದ ಮುಂದಕ್ಕೆ ಹೋಗಿ ಸಿದ್ದರಾಮಯ್ಯನವರು ’ಆರೆಸ್ಸೆಸ್ ಅಜೆಂಡಾ ಹೇರಲು ಹೊರಟಿದ್ದೀರಿ’ ಎಂದಾಗ, ’ಹೌದು ಆರೆಸ್ಸೆಸ್ಸೇ, ಏನೀಗ?’ ಎಂದು ಸಭಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಬ್ಬರೂ ದಬಾಯಿಸಿ ನಿಂತರು. ದೇಶದ ರಾಜಕಾರಣದಲ್ಲಿ ಉಳಿದವರಿಗಿಂತ ಹೆಚ್ಚು ಘನತೆಯಿಂದ ನಡೆದುಕೊಂಡಿರುವ ಸೋನಿಯಾಗಾಂಧಿಯವರನ್ನು ಸಮರ್ಥವಾಗಿ ಸಮರ್ಥನೆ ಮಾಡಿಕೊಳ್ಳುವುದಾಗಲೀ, ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂರನ್ನು ಸಮರ್ಥಿಸಿಕೊಳ್ಳುವುದಾಗಲೀ ಕಾಂಗ್ರೆಸ್ಸಿಗೆ ಆಗಿಲ್ಲ. ಹೀಗಾಗಿ ಇದನ್ನೇ ಕೇಳುತ್ತಾ ಬೆಳೆದಿರುವ ಹೊಸತಲೆಮಾರಿರಲಿ, ಹಳೆಯ ತಲೆಮಾರೂ ಹೊಸ ಸುಳ್ಳುಗಳನ್ನು ನಂಬಿಬಿಡುವ ಪ್ರಮಾಣಕ್ಕೆ ಪ್ರೊಪಗಾಂಡಾ ಬೆಳೆದು ನಿಂತಿದೆ.

PC : The Indian Express

ಇವೆಲ್ಲಕ್ಕೆ ಬೇಕಾದ ಪ್ರತಿಕ್ರಿಯೆಯನ್ನು ನೀಡುವುದರಲ್ಲಿ ’ಕೋಮುವಾದವನ್ನು ಹೊರತುಪಡಿಸಿ ಉಳಿದ ಹಲವು ವಿಚಾರಗಳಲ್ಲಿ ಬಿಜೆಪಿಯಂತೆಯೇ ಇರುವ’ ಟಿಎಂಸಿಯೇ ಪ್ರಬಲ ಸ್ಫರ್ಧಿಯಾಗಿ ಹೊರಹೊಮ್ಮಬಹುದು ಎಂಬ ಆತಂಕಕಾರಿ ಪರಿಸ್ಥಿತಿ ದೇಶದಲ್ಲಿದೆ. ಕೆಲವು ವಾರಗಳ ಕೆಳಗೆ ಎನ್‌ಸಿಪಿಯ ನಾಯಕ ಶರದ್ ಪವಾರ್ ಕಾಂಗ್ರೆಸ್ಸಿನ ಬಗ್ಗೆ ಒಂದು ಮಾತನ್ನು ಹೇಳಿದ್ದರು. ’ಈ ಪಕ್ಷವು ಬಹುತೇಕ ಜಮೀನನ್ನು ಕಳೆದುಕೊಂಡರೂ, ಈಗಲೂ ಹಿಂದಿನ ವೈಭೋಗದ ನೆನಪಿನಲ್ಲೇ ಬದುಕುತ್ತಾ, ಅದನ್ನು ನಿಜವೆಂದು ತಾವೂ ನಂಬಿಕೊಂಡಿರುವ ಉತ್ತರಪ್ರದೇಶದ ಹಳೆಯ ಜಮೀನ್ದಾರರಂತೆ’ ಎಂದು. ಹಾಗೆ ನೋಡಿದರೆ ಒಂದೇ ಒಂದು ಹೊಸ ಪ್ರದೇಶದಲ್ಲಾದರೂ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ಸಾಧ್ಯತೆ ಕಾಂಗ್ರೆಸ್ಸಿಗಿದ್ದಂತೆ ಕಾಣುವುದಿಲ್ಲ. ಗುಜರಾತಿನಲ್ಲಿ ಇರುವುದನ್ನು ಉಳಿಸಿಕೊಳ್ಳಲು ಜಿಗ್ನೇಶ್-ಹಾರ್ದಿಕ್ ಪಟೇಲ್ ನೆರವಾಗಬಹುದಾದರೂ, ಬಿಹಾರದಲ್ಲಿ ಆರ್‌ಜೆಡಿಯನ್ನು ದಾಟಿ ಕಾಂಗ್ರೆಸ್ ಬೆಳೆಸಲು ಕನ್ಹಯ್ಯಗೆ ಸಾಧ್ಯವಾಗುವುದು ಅನುಮಾನವೇ. ತೆಲಂಗಾಣದಲ್ಲೂ ರೇವಂತ್ ರೆಡ್ಡಿ ಎಂಬ ಮಾಜಿ ಟಿಡಿಪಿ ಲೀಡರ್‌ಗೆ ನಾಯಕತ್ವ ವಹಿಸಲಾಗಿದ್ದು, ಬಿಜೆಪಿ ಹಾಗೂ ಹೊಸದಾಗಿ ಹುಟ್ಟಿಕೊಂಡಿರುವ ವೈಎಸ್‌ಆರ್‌ಟಿ ಪಕ್ಷಗಳಿಂದ ಡ್ಯಾಮೇಜಿಗೆ ಒಳಗಾಗದೇ ಟಿಆರ್‌ಎಸ್ಸನ್ನೂ ಸೋಲಿಸುವ ಸವಾಲು ಅವರ ಮೇಲಿದೆ. ಒರಿಸ್ಸಾದಲ್ಲಿ ಎರಡನೆಯ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದರೆ, ಆಂಧ್ರದಲ್ಲಿದ್ದ ಇಡೀ ಬೇಸ್ ಜಗನ್‌ರೆಡ್ಡಿಯ ಜೊತೆಗಿದೆ.

ಹೀಗಾಗಿ ಈಗಿನ ಪ್ರಶ್ನೆ ಇರುವುದು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಒಂದು ಅಥವಾ ಎರಡನೇ ಸ್ಥಾನದಲ್ಲಿರುವುದು ಮತ್ತು ಉಳಿದ ಕಡೆಗಳಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಡದೇ ಇರುವುದು ಹೇಗೆಂದು ನೋಡುವುದು. ಇಂತಹ ದುಸ್ಥಿತಿಯ ಹೊತ್ತಿನಲ್ಲೇ ಹೊಸ ಪ್ರಯೋಗಗಳಿಗೆ ಮುಂದಾಗಿರುವ ರಾಹುಲ್ ಗಾಂಧಿ ಅಧಿಕೃತವಾಗಿ ಪಕ್ಷದಲ್ಲಿ ಯಾವ ದೊಡ್ಡ ಸ್ಥಾನವನ್ನೂ ಹೊಂದದೇ ದೊಡ್ಡ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ. ಇನ್ನು ಉತ್ತರ ಪ್ರದೇಶದ ಉಸ್ತುವಾರಿ ಹೊಂದಿದ್ದರೂ ಅಲ್ಲಿಗಿಂತ ಉಳಿದ ಕಡೆಯ ವಿಚಾರಗಳಿಗೇ ಸುದ್ದಿಯಾಗುತ್ತಿರುವ ಪ್ರಿಯಾಂಕಾ ಗಾಂಧಿಯೂ ಸೇರಿದಂತೆ, ಹೊಸದಾಗಿ ಮರುರೂಪ ಪಡೆದುಕೊಳ್ಳುತ್ತಿರುವ ’ಟೀಂ ಆರ್‌ಜಿ’ ಬಿಜೆಪಿಗೊಂದು ಪರ್ಯಾಯವನ್ನು ಕಟ್ಟಲು ಸಾಧ್ಯವಾದರೆ ಅದೊಂದು ಪವಾಡವೇ ಸರಿ.

ಕರ್ನಾಟಕದಲ್ಲಿ ವಿರೋಧ ಪಕ್ಷ ಹಾಗೂ ವಿರೋಧ ಪಕ್ಷದ ವಿರೋಧ ಪಕ್ಷಗಳ ವಿಪರ್ಯಾಸ

ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು 20 ತಿಂಗಳಿರುವಾಗ, ಆಡಳಿತಾರೂಢ ಬಿಜೆಪಿ ಅಷ್ಟೇನೂ ಒಳ್ಳೆಯ ಸ್ಥಿತಿಯಲ್ಲಿಲ್ಲ ಎಂಬುದು ಬಿಜೆಪಿಗೂ ಗೊತ್ತು; ಕಾಂಗ್ರೆಸ್ ಜೆಡಿಎಸ್‌ಗಳಿಗೂ ಗೊತ್ತು. ಆದರೆ ಈ ಹೊತ್ತಿಗೂ ಅತ್ಯುತ್ತಮ ಚುನಾವಣಾ ಯಂತ್ರಾಂಗವಿರುವುದು, ಹಣ ಹಾಗೂ ಜಾತಿ ಲೆಕ್ಕಾಚಾರಗಳಲ್ಲಿ ಮೇಲುಗೈ ಸಾಧಿಸಿರುವುದು ಬಿಜೆಪಿಯೇ. ಹಣ ಹಾಗೂ ಜಾತಿಗಳನ್ನು ಮೀರಿದ ರಾಜಕಾರಣವನ್ನು ಉಳಿದ ಪಕ್ಷಗಳೂ ಮಾಡಹೊರಟಿಲ್ಲ. ಯಡಿಯೂರಪ್ಪನವರೂ ಸೇರಿದಂತೆ ಬಿಜೆಪಿ ಒಟ್ಟಿಗಿದ್ದರೆ ಅತೀ ದೊಡ್ಡ ಪಕ್ಷವಾಗಿ ಅದೇ ಬರುವ ಸನ್ನಿವೇಶವಿದ್ದರೂ, ಕಾಂಗ್ರೆಸ್‌ನ ಕೆಲ ನಾಯಕರು ಆಗಲೇ ಮುಂದಿನ ಮುಖ್ಯಮಂತ್ರಿಯಾಗಲು ಬೇಕಾದ ಪಟ್ಟುಗಳನ್ನು ಹಾಕಹೊರಟಿದ್ದಾರೆ.

ಉತ್ತರ ಕರ್ನಾಟಕ, ಮಲೆನಾಡು, ಮಧ್ಯಕರ್ನಾಟಕ ಹಾಗೂ ಕರಾವಳಿಗಳಲ್ಲಿ ಹೆಚ್ಚಿನ ಸೀಟು ಗೆದ್ದರೂ ದಕ್ಷಿಣದಲ್ಲಿ ಜೆಡಿಎಸ್ ತೀರಾ ನಗಣ್ಯವಾಗಿಬಿಟ್ಟರೆ ಅದರ ಲಾಭ ತನಗಿಂತ ಕಾಂಗ್ರೆಸ್ಸಿಗೇ ಹೆಚ್ಚು ಎಂಬುದು ಬಿಜೆಪಿಯ ಆತಂಕ. ಕಾಂಗ್ರೆಸ್ ಸೇರಿಬಿಟ್ಟಿರುವ ಮಧು ಬಂಗಾರಪ್ಪ, ಈಗಾಗಲೇ ಒಂದು ಕಾಲು ಕಾಂಗ್ರೆಸ್ಸಿನಲ್ಲಿಟ್ಟಿರುವ ಮೈಸೂರಿನ ಜಿ.ಟಿ.ದೇವೇಗೌಡ ಹಾಗೂ ಕೋಲಾರದ ಶ್ರೀನಿವಾಸಗೌಡರಲ್ಲದೇ ಮಂಡ್ಯ, ತುಮಕೂರು, ಬೆಂಗಳೂರುಗಳ ಹಲವು ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳೂ ಆ ಕಡೆ ಸಾಲುಗಟ್ಟಿರುವ ಚಿಂತೆ ಜೆಡಿಎಸ್ಸಿಗೂ ಇದೆ. ಹೀಗಾಗಿ ಮಿಕ್ಕೆಲ್ಲರಿಗಿಂತ ಬೇಗನೇ ಚುನಾವಣೆಗೆ ಬೇಕಾದ ತಯಾರಿಯನ್ನು ಅದು ಮಾಡಲು ಹೊರಟಿದೆ.

ವಿಪರ್ಯಾಸವೆಂದರೆ, ಇಂತಹ ತಯಾರಿಯನ್ನು ಮಾಡಲು ಶುರು ಹಚ್ಚಿಕೊಂಡಿರುವ ಜೆಡಿಎಸ್ ಆಡಳಿತ ಪಕ್ಷದ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿರುವುದು ಮತ್ತು ಅದರ ಹೆಚ್ಚಿನ ವಿರೋಧ, ವಿರೋಧ ಪಕ್ಷದ ವಿರುದ್ಧ ಇರುವುದು. ಮಿಷನ್ 123, ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಪ್ರಯತ್ನ ಇತ್ಯಾದಿ ಏನೇ ಹೇಳಿದರೂ, ತುಂಗಭದ್ರಾ ನದಿಯ ಆಚೆಗೆ ಅದರ ಪ್ರಯತ್ನ ಮುಸ್ಲಿಂ ಕ್ಯಾಂಡಿಡೇಟುಗಳನ್ನು ಹಾಕುವ ಮಟ್ಟಕ್ಕೆ ಸೀಮಿತವಾಗಿರುವುದು ವಿಪರ್ಯಾಸ. ಬಸವಕಲ್ಯಾಣದಲ್ಲಿ ಮಾತ್ರವಲ್ಲದೇ, ಈಗ ಹಾನಗಲ್ಲಿಗೂ ಮುಸ್ಲಿಂ ಅಭ್ಯರ್ಥಿಯನ್ನು ಅದು ಈಗಾಗಲೇ ಘೋಷಿಸಿದೆ. ಇನ್ನು ಮುಸ್ಲಿಮರು ತಮಗಲ್ಲದೇ ಮತ್ಯಾರಿಗೆ ಮತ ಹಾಕಬೇಕು ಎಂಬ ಧಾರ್ಷ್ಟ್ಯ ಹೊಂದಿರುವ ಹಾಗೂ ಗಣನೀಯ ಪ್ರಮಾಣದ ಮುಸ್ಲಿಮರಿರುವ ಕಡೆಯಲ್ಲೂ ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸುವ ರಾಜಕಾರಣ ಮಾಡಲಾಗದ ಕಾಂಗ್ರೆಸ್ ಇದನ್ನು ’ಮತ ವಿಭಜಕ’ ತಂತ್ರವೆಂದಷ್ಟೇ ನೋಡುತ್ತದೆ.

ತಮಾಷೆಯ ಸಂಗತಿಯೆಂದರೆ ತನ್ನ ಅಭ್ಯರ್ಥಿಗಳಿಗೆ ’ಕಾರ್ಪೊರೇಟ್ ತರಬೇತಿ’ ಕೊಡಹೊರಟಿರುವ ಜೆಡಿಎಸ್ ಮತ್ತೊಮ್ಮೆ ತನ್ನನ್ನು ತಾನು ಪ್ರಾದೇಶಿಕ ಪಕ್ಷವೆಂದು ಕರೆದುಕೊಳ್ಳಲು ಹೊರಟಿದೆ. ರಾಷ್ಟ್ರೀಯ ಅಧ್ಯಕ್ಷರಿದ್ದೂ ಪ್ರಾದೇಶಿಕ ಪಕ್ಷವಾಗುವ, ರಾಜ್ಯದಲ್ಲೂ ಒಂದು ಪ್ರದೇಶಕ್ಕೆ ಸೀಮಿತವಾಗುವ, ಆ ಪ್ರದೇಶದಲ್ಲೂ ಯಶಸ್ವಿಯಾಗಿ ಜಾತಿ ರಾಜಕೀಯ ಮಾಡುವ ಜೆಡಿಎಸ್‌ಗೆ ಇನ್ನೂ ಹಲವು ವಿಶಿಷ್ಟ ಗುಣಗಳಿವೆ. ಅದೇನೆಂದರೆ ಇನ್ನಿದರ ಕಥೆ ಮುಗಿಯಿತು ಎಂದು ಭಾವಿಸಿದಾಗಲೆಲ್ಲಾ ಮತ್ತೆ ಮತ್ತೆ ’ತಾನಿಲ್ಲದೇ ಸರ್ಕಾರ ರಚಿಸಲಾಗದಷ್ಟಾದರೂ’ ಬಲವನ್ನು ಸಂಚಯಿಸಿಕೊಳ್ಳುವ ಅವಕಾಶ ಅದಕ್ಕೆ ಒದಗಿ ಬರುತ್ತಿದೆ. ಕರ್ನಾಟಕದ ’ಪ್ರಾದೇಶಿಕ ರಾಜಕಾರಣ’ವಾಗಿರುವುದಕ್ಕೆ ಇರುವ ಕಾರಣ ಇದೊಂದೇ. ನಿಜಾರ್ಥದಲ್ಲಿ ಪ್ರಾದೇಶಿಕ ಪಕ್ಷವೊಂದು ಹುಟ್ಟಲು ಬೇಕಾದ ಸಾಧ್ಯತೆಗಳಿದ್ದೂ, ಕರ್ನಾಟಕದಲ್ಲಿ ಅಂತಹ ಗಂಭೀರ ಪ್ರಯತ್ನ ನಡೆಯದೇ ಇರುವುದು. ಅದಾದ ದಿನ, ಕರ್ನಾಟಕದ ರಾಜಕಾರಣದ ದಿಕ್ಕೂ ಬದಲಾಗುತ್ತದೆ.


ಇದನ್ನೂ ಓದಿ: ಕಾಂಗ್ರೆಸ್ ಎಂಬುದು ಕೇವಲ ಒಂದು ಪಕ್ಷವಲ್ಲ, ಅದೊಂದು ಆದರ್ಶ: ಕನ್ಹಯ್ಯ ಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial