Homeಮುಖಪುಟಇಲ್ಲಿ ಎಲ್ಲವೂ, ಎಲ್ಲರೂ ಸೌಖ್ಯ; ಪ್ರಭುತ್ವದ ಹಿಂಸೆ ಕೂಡ ಪ್ರಜೆಗಳ ಉದ್ಧಾರಕ್ಕಾಗಿ; ಹಾಗಾಗಿ ’ದೇರ್ ಇಸ್...

ಇಲ್ಲಿ ಎಲ್ಲವೂ, ಎಲ್ಲರೂ ಸೌಖ್ಯ; ಪ್ರಭುತ್ವದ ಹಿಂಸೆ ಕೂಡ ಪ್ರಜೆಗಳ ಉದ್ಧಾರಕ್ಕಾಗಿ; ಹಾಗಾಗಿ ’ದೇರ್ ಇಸ್ ನೊ ಈವಿಲ್’

- Advertisement -

’ದೇರ್ ಇಸ್ ನೊ ಈವಿಲ್’ ಬಗ್ಗೆ ನನ್ನ ಅನಿಸಿಕೆ ಹಂಚಿಕೊಳ್ಳುವ ಮೊದಲು ಈ ಸಿನಿಮಾದ ನಿರ್ದೇಶಕನ ಬಗ್ಗೆ ಕೆಲವು ಮಾತುಗಳು. ಮೊಹಮ್ಮದ್ ರಸೊಲಫ್ ಒಬ್ಬ ಸ್ವತಂತ್ರ ಸಿನಿಮಾ ನಿರ್ದೇಶಕ, ನಿರ್ಮಾಪಕ ಮತ್ತು ಬರೆಹಗಾರ. ಇವನ ’ಗುಡ್ ಬೈ’, ’ಮ್ಯಾನ್ ಆಫ್ ಇಂಟಗ್ರಿಟಿ’, ’ಐರನ್ ಐಲ್ಯಾಂಡ್’ ಇನ್ನೂ ಮುಂತಾದ ಸಿನಿಮಾಗಳು ಜಾಗತಿಕವಾಗಿ ಜನಮನ್ನಣೆ ಪಡೆದಿವೆ. ಕಲೆಯ ಉದ್ದೇಶವಾದರೂ ಏನು? ಒಬ್ಬ ಕಲಾವಿದನಾಗಿ ನನ್ನ ಜವಾಬ್ದಾರಿ ಯಾವುದು? ಸಮುದಾಯದ ಒಳಗಿನ ವ್ಯಕ್ತಿಯಾಗಿ ನಾನು ಸೃಜಿಸುವ ಕಲೆ ಯಾವುದಕ್ಕೆ ಧ್ವನಿಯಾಗಬೇಕು? ಈ ಎಲ್ಲದಕ್ಕೂ ಮೊಹಮ್ಮದ್ ರಸೊಲಫ್ ಜೀವನ ಮತ್ತು ಆತನ ಸಿನಿಮಾ ಬಹಳ ಅದ್ಭುತ ಉದಾಹರಣೆಗಳಂತೆ ನಿಲ್ಲುತ್ತವೆ.

ಮೊಹಮ್ಮದ್ ರಸೊಲಫ್

ಸರ್ವಾಧಿಕಾರದ ಇರಾನ್‌ನಲ್ಲಿ ಅಲ್ಲಿನ ಜನ ಸಮುದಾಯ ಸ್ವತಂತ್ರಹೀನರಾಗಿ ಸಣ್ಣಸಣ್ಣ ಖಾಸಗಿ ಸಂಗತಿಗಳಲ್ಲೂ ಪ್ರಭುತ್ವದ ಹಸ್ತಕ್ಷೇಪದಿಂದ ನಲುಗುತ್ತಿದ್ದಾರೆ. ಈ ತರದ ದಬ್ಬಾಳಿಕೆ, ದೌರ್ಜನ್ಯ ಮತ್ತು ಉಸಿರುಗಟ್ಟುವಂತಹ ವಾತಾವರಣವನ್ನು ರಸೊಲಫ್ ತನ್ನ ಸಿನಿಮಾಗಳಲ್ಲಿ ಪ್ರತಿಬಿಂಬಿಸುತ್ತಾನೆ. ಈ ಕಾರಣವಾಗಿ ಅಲ್ಲಿನ ಸರ್ಕಾರ, ರಾಷ್ಟ್ರದ ಭದ್ರತೆ ಮತ್ತು ದೇಶದ ವಿರುದ್ಧ ಪ್ರಪೊಗಾಂಡ ನಡೆಸುತ್ತಿದ್ದಾನೆ ಎಂದು ಹಲವಾರು ಬಾರಿ ರಸೊಲಫ್ ಮೇಲೆ ಪ್ರಕರಣ ದಾಖಲಿಸಿ, ಜೈಲು ಶಿಕ್ಷೆ ನೀಡಿ, ಸುಮಾರು ವರ್ಷಗಳ ಕಾಲ ಸಿನಿಮಾ ಮಾಡುವುದರಿಂದ ಮತ್ತು ದೇಶದ ಹೊರಹೋಗುವುದರಿಂದ ನಿಷೇಧವನ್ನು ಹೇರಿದೆ. 2020ರ ಒಂದು ಪ್ರಕರಣದಲ್ಲಿ ಅಲ್ಲಿನ ನ್ಯಾಯಾಲಯ ರಸೊಲಫ್‌ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೋವಿಡ್ ಕಾರಣವಾಗಿ ಆ ಶಿಕ್ಷೆಯನ್ನು ಜಾರಿ ಮಾಡಲಾಗಿಲ್ಲ. ತಮ್ಮ ದಿನಚರಿ ಶುರುವಾಗುವುದು ತನ್ನ ಜೈಲು ಶಿಕ್ಷೆಯ ಬಗ್ಗೆ ಏನಾದ್ರೂ ಸಂದೇಶ ಬಂದಿದೆಯಾ ಎಂದು ನೋಡುವುದರ ಮೂಲಕ ಎನ್ನುತ್ತಾರೆ ರಸೊಲಫ್.

’ದೇರ್ ಇಸ್ ನೊ ಈವಿಲ್’

’ದೇರ್ ಇಸ್ ನೊ ಈವಿಲ್’ ನಾಲ್ಕು ಬಿಡಿ ಕಥೆಗಳ ಗುಚ್ಛ. ಆದರೆ, ಒಂದು ಕಥೆಗೂ ಮತ್ತೊಂದಕ್ಕೂ ಸಾವಯವ ಸಂಬಂಧವಿದೆ. ನಾಲ್ಕು ಕಥೆಗಳ ಮೂಲ ವಸ್ತು ಒಂದೇ ಆದರೂ, ಕಥಾ ಪರಿಸರ, ಅದರ ಭಾಗವಾಗಿರುವ ಸಮುದಾಯ ಮತ್ತು ಅವರ ಅಲೋಚನೆಗಳು ತುಸು ಭಿನ್ನ. ಇರಾನ್‌ನಲ್ಲಿ ಪ್ರಸ್ತುತ ಇರುವ ಮರಣದಂಡನೆ ಶಿಕ್ಷೆ ಮತ್ತು ಕಡ್ಡಾಯ ಮಿಲಿಟರಿ ಸೇವೆ ಸಿನಿಮಾದ ಪ್ರಧಾನ ವಸ್ತು.

ಮೊದಲ ಕಥೆ/ಭಾಗ: There is no evil

ಸ್ವೀಡಿಷ್ ದೇಶದ ಪ್ರಸಿದ್ಧ ನಿರ್ದೇಶಕ ಮೈಕಲ್ ಹನೆಕೆ ತನ್ನ ’ದ ಹಿಡನ್’ ಸಿನಿಮಾದಲ್ಲಿ ಪ್ರಭುತ್ವವೊಂದು, ಸಮಾಜದಲ್ಲಿ ಹಿಂಸೆಯನ್ನು ಹೇಗೆ ಸಾರ್ವತ್ರಿಕಗೊಳಿಸಿ ಸಮ್ಮತವಾಗಿಸಿಬಿಡುತ್ತೆ ಎಂಬುದನ್ನು ತಾತ್ವಿಕವಾಗಿ ನಿರೂಪಿಸುತ್ತಾನೆ. ರಸೊಲಫ್ ಕೂಡ ಪ್ರಸ್ತುತ ಸಿನಿಮಾದ ಮೊದಲ ಕಥೆ/ಭಾಗದಲ್ಲಿ ಇದೇ ರೀತಿಯ ತಾತ್ವಿಕ ಪ್ರಶ್ನೆಯನ್ನು ಚರ್ಚಿಸುತ್ತಾನೆ. ಪ್ರಭುತ್ವ ತನ್ನ ಸಹಪ್ರಜೆಗಳು ಮೇಲೆ ನಡೆಸುವ ಸ್ವಾತಂತ್ರ್ಯ ಹರಣ, ಅವರ ಮೇಲೆ ಹೇರುವ ಮನುಷ್ಯ ವಿರೋಧಿ ಕಾನೂನುಗಳು/ಪಾಲಿಸಿಗಳು, ಮತ್ತು ಇವೆಲ್ಲ ಸೃಷ್ಟಿ ಮಾಡುವ ಹಿಂಸೆಗಳನ್ನು ಲೆಕ್ಕಿಸದೆ-ವಿರೋಧಿಸದೆ, ಎಲ್ಲವನ್ನು ಸಹಜವಾಗಿ ಸ್ವೀಕರಿಸಿ, ಎಲ್ಲರೂ/ಎಲ್ಲವೂ ಸೌಖ್ಯ ಎಂದು ಸಹಜವಾಗಿ ತನ್ನ ಕುಟುಂಬದೊಂದಿಗೆ ಬದುಕುವ ಇರಾನ್ ದೇಶದ ಸಾಮಾನ್ಯ ನಾಗರಿಕ, ಹೇಗೆ ಪ್ರಭುತ್ವ ನಡೆಸುವ ಹಿಂಸೆಯ ಭಾಗವಾಗುತ್ತಾನೆ ಎಂಬುದನ್ನು ಇಲ್ಲಿ ನಿರ್ದೇಶಕ ಶೋಧಿಸುತ್ತಾರೆ. ಪ್ರಭುತ್ವ ವಿಧಿಸುವ ನಿಯಮಗಳನ್ನು ಹೇಗೆ ಅಪ್ರಜ್ಞಾಪೂರ್ವಕವಾಗಿ ನಿರ್ವಹಿಸುತ್ತಾನೆ ಹಾಗು ತನ್ನ ದಿನನಿತ್ಯದ ಖಾಸಗಿ ಬದುಕಿನಲ್ಲಿರುವ ನೈತಿಕ ಪ್ರಜ್ಞೆಗೂ, ಪ್ರಭುತ್ವದ ಪರವಾಗಿ ತಾನು ನಿರ್ವಹಿಸುವ ಕಾರ್ಯಗಳಿಗೂ ಯಾವ ಸಂಬಂಧವನ್ನೂ ಅವಲೋಕಿಸಿಕೊಳ್ಳದೆ ಏಕೆ ಮುಂದುವರೆಯುತ್ತಾನೆ ಎಂಬ ತಾತ್ವಿಕ ಪ್ರಶ್ನೆಯನ್ನು ರಸೊಲಫ್ ಪ್ರೇಕ್ಷಕರ ಮುಂದಿಡುತ್ತಾನೆ.

ಎರಡನೇ ಕಥೆ/ಭಾಗ: ‘She Said: you can do it’

ಎರಡನೇ ಕಥೆ/ಭಾಗದಲ್ಲಿ ನಾಗರಿಕ ಸಮಾಜವೊಂದರಲ್ಲಿ ಕಾಣೆಯಾದ ನೈತಿಕ/ತಾತ್ವಿಕ ಸಂಘರ್ಷವನ್ನ ಕಾಣುತ್ತೇವೆ. ಮಿಲಿಟರಿ ಸೇವೆಯಲ್ಲಿರುವ ಒಬ್ಬ ಸೈನಿಕ ತನ್ನ ಕರ್ತವ್ಯದ ಭಾಗವಾಗಿ ಒಬ್ಬ ಖೈದಿಯನ್ನು ನೇಣಿಗೆ ಏರಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಆ ಸೈನಿಕನಿಗೆ ಒಪ್ಪಿಗೆಯಿಲ್ಲ. ಈ ಕರ್ತವ್ಯ ನಿರ್ವಹಿಸಿದರೆ ಮಾತ್ರ ಅವನ ಎರಡು ವರ್ಷದ ಮಿಲಿಟರಿ ಸೇವೆ ಪೂರ್ಣಗೊಳ್ಳುವುದು ಮತ್ತು ಅವನ ಸಹಜ ಬದುಕು ಬದುಕಲು ಸಾಧ್ಯವಾಗುವುದಕ್ಕೆ ಅವಕಾಶ ಸಿಗುವುದು. ಈ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು? ಇದು ಅವನನ್ನು ಮಾನಸಿಕವಾಗಿ ತೊಳಲಾಡಿಸುತ್ತದೆ. ಈ ಕುರಿತು ಅವನ ಸಹೋದ್ಯೋಗಿಗಳಲ್ಲಿ ನಡೆಯುವ ಚರ್ಚೆ ಬಹಳ ಸ್ವಾರಸ್ಯಕರವಾಗಿದೆ. ಇವನ ಬದಲಾಗಿ ಸಹೋದ್ಯೋಗಿಯೊಬ್ಬ ಖೈದಿಯನ್ನು ನೇಣಿಗೇರಿಸಲು ಸಿದ್ಧವಿರುವುದಾಗಿ ಮತ್ತು ಅದಕ್ಕೆ ಪರ್ಯಾಯವಾಗಿ ಆತನ ಹಣದ ತುರ್ತನ್ನು ಪೂರೈಸಲು ನಿಯೋಜಿತ ಸೈನಿಕ ಮುಂದಾಗಬೇಕೆಂದು, ಮತ್ತೊಬ್ಬ ಸೈನಿಕ ಇವರ ನಡುವೆ ಮಧ್ಯಸ್ಥಿಕೆ ವಹಿಸುತ್ತಾನೆ. ಈ ಪರಿಹಾರಕ್ಕೆ ಮೊದಲ ನಿಯೋಜಿತ ಸೈನಿಕ ಒಪ್ಪುತ್ತಾನೆ. ರಸೊಲಫ್ ಇಲ್ಲಿ ಮತ್ತೊಂದು ತಾತ್ವಿಕತೆ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಡುತ್ತಾನೆ. ನೆಲದ ಕಾನೂನನ್ನು ಜಾರಿಗೊಳಿಸುವ ಕಾರಣವಾಗಿ ಒಬ್ಬನನ್ನು ಕೊಲ್ಲಲು ಒಪ್ಪದ ಮನಸ್ಸು ಅದೇ ಕೆಲಸವನ್ನು ಅವನ ಪರವಾಗಿ ಮತ್ತೊಬ್ಬ ಮಾಡುತ್ತಾನೆ ಎಂದಾಗ ಒಪ್ಪಲು ಸಾಧ್ಯವಾಗುವುದಾದರೂ ಹೇಗೆ? ’ಇದು ಅವನೇ ನೇಣಿಗೇರಿಸುವುದಕ್ಕಿಂತ ಮಹಾ ಪಾಪ’; ಈ ಮಾತನ್ನ ಮತ್ತೊಬ್ಬ ಸೈನಿಕನ ಹತ್ತಿರ ನಿರ್ದೇಶಕ ಹೇಳಿಸುತ್ತಾನೆ.

ಮೂರನೇ ಕಥೆ/ಭಾಗ: ‘Birthday’

ರಸೊಲಫ್ ಮೊದಲ ಎರಡು ಕಥೆಗಳನ್ನು ಮೀರಿ ಮೂರನೆಯದರಲ್ಲಿ, ಪ್ರಭುತ್ವದ ಹಿಡಿತ/ಹಿಂಸೆಯ ವಿರುದ್ಧದ ಪ್ರತಿರೋಧದ ಪ್ರಜ್ಞೆ ವೈಯಕ್ತಿಕ ಮಟ್ಟದಿಂದ ಸಮುದಾಯದ ಪ್ರಜ್ಞೆಯಾಗುವುದರ ಬೆಳವಣಿಗೆಯನ್ನ ಸೂಚಿಸುತ್ತಾನೆ. ಜಾವದ್ ತನ್ನ ಪ್ರಿಯತಮೆ ನಾನಳ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ನೀಡಲು, ತನ್ನ ಎರಡು ವರ್ಷದ ಕಡ್ಡಾಯ ಮಿಲಿಟರಿ ಸೇವೆ ಮಧ್ಯೆ 3 ದಿನಗಳ ರಜೆ ಮೇಲೆ ಬಂದಿದ್ದಾನೆ. ನಾನಳಿಗೆ ಇವನನ್ನು ನೋಡಿ ಎಲ್ಲಿಲ್ಲದ ಸಡಗರ. ಆ ಸಡಗರದ ನಡುವೆ ಆಳದಲ್ಲಿರುವ ನೋವನ್ನ ಜಾವದ್ ಗುರುತಿಸುತ್ತಾನೆ. ನಾನಳ ಕುಟುಂಬದ ಸ್ನೇಹಿತ ಕಿವಾನ್‌ನನ್ನು ಪ್ರಭುತ್ವ ನೇಣಿಗೆ ಏರಿಸಿರುತ್ತದೆ. ಇಡೀ ಕುಟುಂಬದಲ್ಲಿ ಆ ಸಾವಿನ ನೋವು ಮಡುಗಟ್ಟಿರುತ್ತದೆ. ಕಿವಾನ್ ಯಾರು ಎಂಬುದು ಜಾವದ್‌ಗೆ ತಿಳಿದಿರುವುದೇ ಇಲ್ಲ. ಕಿವಾನ್ ಫೋಟೋ ನೋಡಿದ ತಕ್ಷಣ ಜಾದವ್ ಆಘಾತಕ್ಕೆ ಒಳಗಾಗುತ್ತಾನೆ. ಜ್ವರದಿಂದ ನರಳುತ್ತಾನೆ. ಆ ಆಘಾತದಲ್ಲೆ ಜಾದವ್ ನಾನಳಿಗೆ ’ಕಿವಾನ್‌ನನ್ನು ಕೊಂದಿದ್ದು ನಾನೆ… ಅವನು ನೇಣಿಗೇರಿದ ಕುರ್ಚಿಯನ್ನು ಒದ್ದಿದ್ದು ನಾನೆ, ಆ ಕಾರಣವಾಗಿಯೇ ನನಗೆ ಮೂರು ದಿನ ರಜೆ ಸಿಕ್ಕಿದ್ದು’ ಎಂದು ಹೇಳುತ್ತಾನೆ. ನಾನ ಕೊಂಚ ವಿಚಲಿತಳಾದರೂ ಸಾವರಿಸಿಕೊಂಡು ಅವನನ್ನು ಸಂತೈಸುತ್ತಾಳೆ. ಅವರಿಬ್ಬರ ನಡುವೆ ಮದುವೆ ನಿಶ್ಚಯ ಆಗುತ್ತದೆ. ಆದರೆ ನಾನ ಜಾದವ್‌ಗೆ ’ನಾನು ನಿನ್ನನ್ನು ಅಪಾರವಾಗಿ ಪ್ರೀತಿಸುತ್ತೇನೆ, ಆದರೆ ನಿನ್ನನ್ನು ಕಳೆದುಕೊಳ್ಳುತ್ತಿದ್ದೇನೆ’ ಎಂದು ಹೇಳುತ್ತಾ ಅವನಿಂದ ದೂರವಾಗಿಬಿಡುತ್ತಾಳೆ.

ನಾಲ್ಕನೆ ಕಥೆ/ಭಾಗ: Kiss me

ರಸೊಲಪ್ ತನ್ನ ಈ ಸಿನಿಮಾದಲ್ಲಿ ಒಂದು ಕಥೆಯಿಂದ ಮತ್ತೊಂದು ಕಥೆಗೆ ತನ್ನ ಅಲೋಚನೆ ಮತ್ತು ಆಶಯವನ್ನು ಬೆಳೆಸಿದ್ದಾನೆ. ಅದೇ ರೀತಿ ದೃಶ್ಯ ಕಟ್ಟುವಿಕೆಯಲ್ಲಿ, ಆ ಕಥಾಭಾಗ ಯಾವ ತಾತ್ವಿಕತೆಯನ್ನ ಪ್ರಸ್ತುತಪಡಿಸುತ್ತದೆಯೋ, ಅದಕ್ಕೆ ಪೂರಕವಾದ ಕಥಾ ಪರಿಸರವನ್ನು ಕೂಡ ಆಯ್ಕೆ ಮಾಡಿಕೊಂಡಿದ್ದಾನೆ ಅನಿಸುತ್ತದೆ. ಮೊದಲ ಕಥೆಯಲ್ಲಿ ಟೆಹರಾನ್ ನಗರದ ಜನಜಂಗುಳಿ, ಏಕಾತನತೆ, ಇಕ್ಕಟ್ಟಾದ ಪ್ರದೇಶವನ್ನು ಕಟ್ಟಿಕೊಟ್ಟರೆ, ನಾಲ್ಕನೆ ಕಥೆಗೆ ಬರುವಷ್ಟರಲ್ಲಿ ವಿಶಾಲವಾದ ಭೂ ಪ್ರದೇಶವನ್ನು ಕಟ್ಟಿಕೊಡುತ್ತಾನೆ. ಆ ಜಾಗದಲ್ಲಿ ಪ್ರಭುತ್ವದ ಹಸ್ತಕ್ಷೇಪದ ಯಾವ ಕುರುಹು ಇಲ್ಲ. ನಾಲ್ಕನೇ ಕಥೆ ಎರಡನೆ ಕಥೆಯ ಮುಂದುವರೆದ ಭಾಗ ಅಂತಲೂ ಊಹಿಸಬಹುದು. ಬಹಳ ವರ್ಷಗಳ ಹಿಂದೆ ಬಹ್ರಾಮ್ ತನ್ನ ಎದೆಯ ದನಿಗೆ ಓಗೊಟ್ಟು ಪ್ರಭುತ್ವದ ಆಜ್ಞೆಯನ್ನು ನಿರಾಕರಿಸಿದವನು. ಆ ಕಾರಣವಾಗಿ ಅವನು ತನ್ನ ಹೆಂಡತಿ ಮಗುವನ್ನು ದೂರ ಮಾಡಿಕೊಂಡು ದೇಶಾಂತರ ತಲೆಮರೆಸಿಕೊಂಡು ಬದುಕಬೇಕಾಗುತ್ತದೆ. ಪ್ರಸ್ತುತ ಅವನಿಗೆ ಒಬ್ಬ ಸಂಗಾತಿ ಇದ್ದಾಳೆ. ಈಗ ಸಾವಿನ ಅಂಚಿನಲ್ಲಿರುವ ಬಹ್ರಾಮ್‌ಗೆ, ತಾನು ಬಿಟ್ಟುಬಂದಿರುವ ಮಗಳಿಗೆ, ನಾನೇ ನಿನ್ನ ನಿಜವಾದ ತಂದೆ ಎಂದು ತಿಳಿಸುವ ಅಭಿಲಾಶೆ. ಮಗಳನ್ನು ತನ್ನಲ್ಲಿಗೆ ಕರೆಯಿಸಿಕೊಂಡು ಈ ಸತ್ಯವನ್ನ ಅವಳಲ್ಲಿ ಹೇಳುತ್ತಾನೆ ಕೂಡ. ಆದರೆ ಮಗಳು ಸ್ವೀಕರಿಸುವ ಬಗೆ ಅವನ ನಿರೀಕ್ಷೆಗೂ ಮೀರಿ ಬೇರೆಯದ್ದಾಗಿರುತ್ತದೆ.

ಸರ್ವಾಧಿಕಾರ ಮತ್ತು ಮೂಲಭೂತವಾದವನ್ನು ಪ್ರತಿಪಾದಿಸುವಂತಹ ಇರಾನ್‌ನಂತಹ ದೇಶಗಳಲ್ಲಿ ಕಲೆಯಲ್ಲಿ ಸತ್ಯದ ಸಾಧ್ಯತೆ ಕಂಡುಕೊಳ್ಳುವುದು ಕಷ್ಟಸಾಧ್ಯ. ಜಾಫರ್ ಫನಾಹಿ, ಮೊಹಮ್ಮದ್ ರಸೊಲಫ್ ಅಂತ ಬಂಡುಕೋರರು ಪ್ರಭುತ್ವದ ಬೆದರಿಕೆಗಳಿಗೆ ಸೆಡ್ಡುಹೊಡೆದು ತಮ್ಮ ಸಿನಿಮಾಗಳಲ್ಲಿ ಸತ್ಯವನ್ನು ಬಿಂಬಿಸಲು ಪ್ರಯತ್ನಿಸುತ್ತಾರೆ. ಅಲ್ಲಿನ ಸೆನ್ಸಾರ್ ಮಂಡಳಿಯ ನಿರ್ಬಂಧದ ನಡುವೆಯೂ ಸತ್ಯ ಹೇಳುವ ಹೊಸ ಹೊಸ ಸಾಧ್ಯತೆಗಳನ್ನ ದೃಶ್ಯ ಮಾಧ್ಯಮದ ಮೂಲಕ ಶೋಧಿಸುತ್ತಾರೆ. ಇದು ಜಗತ್ತಿಗೆ ತಿಳಿದಾಗ ಅಲ್ಲಿನ ಪ್ರಭುತ್ವ ಇವರನ್ನು ಹೆದರಿಸುತ್ತದೆ, ಬಂಧಿಸುತ್ತದೆ, ಸಿನಿಮಾ ಮಾಡದಂತೆ ನಿಷೇಧ ಹೇರುತ್ತದೆ. ಇವರು ಮತ್ತೆ ಮತ್ತೆ ಪುಟಿದೇಳುತ್ತಾರೆ. ಪ್ರಭುತ್ವದ ಹಿಂಸೆಯ ವಿರುದ್ಧದ ತಮ್ಮ ಅಸಮ್ಮತಿಯನ್ನು ಎದೆಯ ದನಿಯನ್ನು ಬಹಳ ಗಟ್ಟಿಯಾಗಿ ಜಗತ್ತಿಗೆ ಕೂಗಿ ಹೇಳುತ್ತಾರೆ.

ಕೊನೆಯ ಮಾತು

ಇತ್ತೀಚಿನ ವರ್ಷಗಳಲ್ಲಿ ಇರಾನ್ ಪರಿಸ್ಥಿತಿಗೂ ಭಾರತದ ಪರಿಸ್ಥಿತಿಗೂ ಹೆಚ್ಚು ವ್ಯತ್ಯಾಸ ಕಾಣುತ್ತಿಲ್ಲ. ಪ್ರಭುತ್ವ ನಡೆಸುವ ಹಿಂಸೆಯ ಭೂತದ ನರ್ತನಕ್ಕೆ ನಮ್ಮ ಪ್ರತಿಸ್ಪಂದನೆ, ’ದೇರ್ ಇಸ್ ನೊ ಈವಿಲ್’. ಇಲ್ಲಿ ಎಲ್ಲವು.. ಎಲ್ಲರೂ ಸೌಖ್ಯ ಮತ್ತು ಸುಭಿಕ್ಷ. ಇದನ್ನ ಒಂದು ಪ್ರಪೊಗಾಂಡವಾಗಿ ಈ ದೇಶದ ಬಹುಸಂಖ್ಯಾತರ ಪ್ರಜ್ಞೆಯಾಗಿಸಲು, ಕೆಲವು ವರ್ಗದ ಜನರು ಮತ್ತು ಇಲ್ಲಿನ ಮಾರಿಕೊಂಡ ಮಾಧ್ಯಮಗಳು ಹಗಲಿರುಳು ಶ್ರಮಿಸುತ್ತಿವೆ. ಈ ಸಿನಿಮಾ ಕುರಿತ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳುವ ಹೊತ್ತಿಗೆ ಕರ್ನಾಟಕದಲ್ಲಿಯೇ ನಡೆದ ಒಂದು ಘಟನೆ: ಕನ್ನಡದ ಪ್ರಸಿದ್ಧ ಸಿನಿಮಾ ಸಾಹಿತ್ಯ ಮತ್ತು ಸಂಗೀತ ನಿರ್ದೇಶಕರೊಬ್ಬರು ಒಂದು ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಸಹಜ ಮನುಷ್ಯತ್ವದ ಕಾಳಜಿಯಿಂದ ವ್ಯಕ್ತಪಡಿಸಿದ ಅಭಿಪ್ರಾಯದ ಸಲುವಾಗಿ ಅವರನ್ನು ಟಿ ವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಕೆಟ್ಟ ಭಾಷೆಗಳಿಂದ ಟ್ರೋಲ್ ಮಾಡಲಾಯಿತು. ಎಷ್ಟರಮಟ್ಟಿಗೆ ಅಂದರೆ, ಆ ಸಂಗೀತ ನಿರ್ದೇಶಕರು ತಮ್ಮದೇ ಅಭಿಪ್ರಾಯಕ್ಕೆ ವಿರುದ್ಧವಾದ ಹೇಳಿಕೆಯೊಂದನ್ನು ಕೊಟ್ಟು ಕ್ಷಮಾಪಣೆ ಕೇಳುವ ಮಟ್ಟಕ್ಕೆ. ಇದಕ್ಕೆ ಎರಡು ದಿನಗಳ ಹಿಂದೆ, ಹಿಂದಿ ಸಿನಿಮಾದ ಒಬ್ಬ ನಟಿ ವೇದಿಕೆಯೊಂದರಲ್ಲಿ ’1947ರಲ್ಲಿ ಈ ದೇಶ ಪಡೆದ ಸ್ವಾತಂತ್ರ್ಯ ಭಿಕ್ಷೆಯದು’ ಎಂದು ಕೊಟ್ಟ ಹೇಳಿಕೆಗೆ ಇದೇ ಟ್ರೋಲಿಗರಿಂದ ಯಾವ ಪ್ರತಿರೋಧವು ಬರಲಿಲ್ಲ. ಆದರೆ, ಆ ನಟಿ ತನ್ನ ಹೇಳಿಕೆಗೆ ತಾನು ಬದ್ಧ, ಇದನ್ನು ವಿರೋಧಿಸುವರು ಅದಕ್ಕೆ ದಾಖಲೆ ನೀಡಿ ಎಂದು ಅಷ್ಟೇ ದ್ರಾಷ್ಟ್ಯದಿಂದ ಪ್ರತಿಯಾಗಿ ಟ್ವೀಟ್ ಮಾಡಿದರು. ಇದು ಇಂದಿನ ಭಾರತದ ಸ್ಥಿತಿ: ದೇರ್ ಇಸ್ ನೋ ಈವಿಲ್?

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

ಯದುನಂದನ್ ಕೀಲಾರ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial