ಜಾನಪದ ತಜ್ಞ ಹಿ.ಶಿ ರಾಮಚಂದ್ರೇಗೌಡರೆ, ಸ್ನೇಹಿತರಾದ ನಟರಾಜ್ ಹುಳಿಯಾರ್, ಅಗ್ರಹಾರ ಕೃಷ್ಣಮೂರ್ತಿಯವರೆ, ಕವಿಮಿತ್ರ ಗೋವಿಂದಯ್ಯನವರೆ, ಎಲ್ಲಾ ಸ್ನೇಹಿತರೆ,
ಕಪ್ಪಡಿ ಕ್ಷೇತ್ರದಲ್ಲಿ ನಾವಿಂದು ಮಂಟೇಸ್ವಾಮಿ ಪರಂಪರೆ ಕುರಿತು ಚಿಂತನೆ ನಡೆಸ್ತಿದ್ದೇವೆ. ನನಗೆ ಮೊದಲು ಈ ಮಂಟೇಸ್ವಾಮಿ ಕಾವ್ಯ ಪರಿಚಯವಾದದ್ದು ಜಿ.ಶಂ. ಪರಮಶಿವಯ್ಯನವರು ಸಂಪಾದಿಸಿದ “ಮಂಟೇಸ್ವಾಮಿ ಕಾವ್ಯ” ಪುಸ್ತಕದಿಂದ. ಆನಂತರ ವೆಂಕಟೇಶ ಇಂದ್ವಾಡಿ, ಹಿ.ಚಿ. ಬೋರಲಿಂಗಯ್ಯನವರ ಪುಸ್ತಕಗಳು ನನಗೆ ಈ ಮಂಟೇಸ್ವಾಮಿ ಪರಂಪರೆ ಬಗ್ಗೆ ಪರಿಚಯ ಮಾಡಿಕೊಟ್ಟವು. ಮಂಟೇಸ್ವಾಮಿ ಕಾವ್ಯ ಹಾಡುವ ಗಾಯಕ ಮಳವಳ್ಳಿ ಮಾದೇವ್ ಅವರಿಂದಲೂ ನಾನು ಈ ಕಾವ್ಯದ ಆಕರ್ಷಣೆಗೆ ಒಳಗಾದವನು.
ಈ ಪರಂಪರೆ ಬಗ್ಗೆ ಯೋಚಿಸುವಾಗ ಕುವೆಂಪು ಅವರ ಒಂದು ಮಾತು ಜ್ಞಾಪಕಕ್ಕೆ ಬರುತ್ತೆ: “ಜೀವರಥೋತ್ಸವವಿದು ಇದ ಅಣಕಿಸಿದರು ಎಲೆ ಸನ್ಯಾಸಿ”; ನನಗೆ ಕಾವ್ಯವೇ- ಕಾವ್ಯ ಅನ್ನೋದೇನು ಬೇರೆ ಅಲ್ಲ, ಅದು ಇಡೀ ಮನುಷ್ಯ ಲೋಕದ ಒಂದು ಮುಖ್ಯವಾದ ಒಂದು ಚೈತನ್ಯವೆಂದು ನಾವು ತಿಳಿಯುವುದಾದರೆ, ಇಂದು ಅದು ಕಪ್ಪಡಿ, ಬೊಪ್ಪಣಪುರಗಳಲ್ಲಿ ಇನ್ನೂ ಕೂಡ ಜೀವಂತವಾಗಿದೆ. ಇಲ್ಲಿ ಅಂದ್ರೆ ಜಾತ್ರೆಲಿ ಯಾರನ್ನೇ ಕೇಳಿ, ಅವರು ಯಾಕೆ ಬಂದಿದ್ದಾರೆ ಅಂದ್ರೆ, ಅವರು ಮಾತಾಡುವುದೇ ಇಡೀ ಕಾವ್ಯ ಒಂದು ಏನೋ ಮಾಡಿದೆ ಅನ್ನೋ ಕಾರಣದಿಂದ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಈ ಕಥನವನ್ನು ಹೇಳುತ್ತಾರೆ ಅನ್ನೋ ಕಾರಣವೇ, ಸಂಸ್ಕೃತಿಯ ನಾಯಕರ ಕಲ್ಪನೆ ಏನು ಎಂಬುದಾಗಿದೆ. ರಾಚಪ್ಪಾಜಿ ಒಂದು ಸಂಸ್ಕೃತಿಯ ನಾಯಕ. ಮಂಟೇಸ್ವಾಮಿ ಇಂಥ ನಾಯಕರ ನಾಯಕರು. ಅವರು ಧರೆಗೆ ದೊಡ್ಡವರು. ಕಳೆದ ಭಾನುವಾರ ರಾಮನಗರದ ಹತ್ತಿರ ಒಬ್ಬ ಲಂಬಾಣಿ ಗಾಯಕ ಮಂಟೇಸ್ವಾಮಿ ಕಾವ್ಯವನ್ನು ಹಾಡ್ತಾ ಇದ್ದ. ಅವನು ಧರೆಗೆ ದೊಡ್ಡವರು ಅನ್ನೋ ಮಾತನ್ನು “ದೊರೆಗೆ ದೊಡ್ಡವರು” ಎನ್ನುವ ಪಾಠವನ್ನಾಗಿ ಹೇಳಿದ. ಅದನ್ನು ನಾನು ರೆಕಾರ್ಡ್ ಮಾಡಿದ್ದೇನೆ. ಅದು ನನ್ನ ಹತ್ತಿರ ಇದೆ. “ಧರೆಗೆ ದೊಡ್ಡವರು” ಅಂತ ಹೆಸರು ಕರೀತಾರೆ. ಕನ್ನಡದ ಮಾತಿನ ಓರೆಯೋ ಕೋರೆಯೋ ಗೊತ್ತಿಲ್ಲ ಅದು. ಅವನು ದೊರೆಗೆ ದೊಡ್ಡವರು ಅಂತ ಹಾಡ್ತಿದ್ದ. “ಧರೆ” ಸಂಸ್ಕೃತ ಪದ, “ದೊರೆ” ಕನ್ನಡ ಪದ. ನಾನು ವೆಂಕಟೇಶ ಇಂದ್ವಾಡಿಯವರ ಪುಸ್ತಕ ಓದಿದೆ. ಈ ಪರಂಪರೆಯಲ್ಲಿ ಬೆರೆತುಹೋಗಿರುವ ಧಾರೆಗಳ ಬಗ್ಗೆ ಬರೀತರೆ ಅವರು. ಇಡೀ ಪರಂಪರೆಯಲ್ಲಿ ಎಷ್ಟು ಧಾರೆಗಳಿವೆ ಅಂತ ಲೆಕ್ಕ ಹಾಕೋದಕ್ಕೆ ಇಂದ್ವಾಡಿಯವರಿಗೆ ಇನ್ನು 20 ವರ್ಷ ಬೇಕು. ಅಷ್ಟು ಧಾರೆಗಳು ಈ ಕಾವ್ಯದಲ್ಲಿವೆ, ಈ ಪರಂಪರೆಯಲ್ಲಿವೆ.
ಕೆಬ್ಬೇಪುರದ ರಾಚಯ್ಯನವರ ವರ್ಶನ್ ಕೇಳಿದರೆ ಒಂದು ಕೇಳುತ್ತೆ, ಮಳವಳ್ಳಿ ಮಾದೇವ ವರ್ಶನ್ ಕೇಳಿದ್ರೆ ಇನ್ನೊಂದು ಕೇಳುತ್ತೆ. ಇನ್ನೊಬ್ಬ ಹೇಳಿದರೆ ಇನ್ನೊಂದು ಕೇಳುತ್ತೆ ಅದು. ನಮ್ಮ ಐರೋಪ್ಯ ಸಿದ್ಧಾಂತಗಳು ಕೂಡ ತತ್ತರಿಸಿ ಹೋಗ್ತವೆ- ನಮ್ಮ ಈ ಕಾವ್ಯ ಪರಂಪರೆಯ ಮುಂದೆ, ಅಲಬರ್ಟ್ ಲಾರ್ಡ್ ಅಥವಾ ಹೋಮರ್ ಮುಂತಾದವರ ತತ್ವಗಳನ್ನು ಆರಾಮಾಗಿ ಓದಿದ್ರು ಕೂಡ, ನನಗೆ ಈ ಧಾರೆಗಳನ್ನು ಹಾಗೇ ಯೋಚನೆ ಮಾಡೋಕಾಗಲ್ಲ, ನಾವೇನ್ ಮಾಡಿದೀವಿ ಈಗ ಅಂದ್ರೆ, ಶಿಷ್ಟ ಸಾಹಿತ್ಯ ಪರಂಪರೆಗಳ ಧಾರೆಗಳನ್ನು ಹಿಡಿಯುವ ಹಾಗೇ, ಈ ಪರಂಪರೆಗಳ ಧಾರೆಗಳನ್ನು ಹಿಡಿಯುವ ಪ್ರಯತ್ನವನ್ನು ಮಾಡ್ತಾ ಇದ್ದೀವಿ. ಹಾಗೆ ಮಾಡಲಾಗದ ಒಂದು ಪರಂಪರೆ ಇದು.
ಬಹಳ ಕಷ್ಟ ಇದೆ ಇದು. ಯಾಕೆಂದ್ರೆ ಇದೊಂದು ಸಂಸ್ಕೃತಿ ಕಥನವೇ ಆದ್ದರಿಂದ ನೇರವಾದ ಕಥನ ಪರಂಪರೆಯ ಒಳಹಾಸು ಹೊಕ್ಕುಗಳನ್ನು ಹಾಗೆ ಗುರುತಿಸಲಾರೆವು. ಇದಕ್ಕೆ ಕಾರಣಾನೇ ನಮ್ಮ ಸುತ್ತ ನಡೀತಾ ಇರೋ ಈ ಕಪ್ಪಡಿ ಜಾತ್ರೆ- “ಸಂತೆಯೊಳಗೊಂದು ಮನೆಯ ಮಾಡಿ” ಅನ್ನೋ ಹಾಗೆ. ಬಹಳ ಬೌದ್ಧಿಕವಾಗಿ, ಐರೋಪ್ಯ ವಾಕ್ ಪರಂಪರೆಯ ಕಾವ್ಯಗಳನ್ನು ವಿಶ್ಲೇಷಣೆ ಮಾಡುವ ರೀತಿಯಲ್ಲಿ, ಧರೆಗೆ ದೊಡ್ಡವರ ಪರಂಪರೆಯನ್ನಾಗಲಿ ಮಲೆ ಮಾದೇಶ್ವರರ ಪರಂಪರೆಯನ್ನಾಗಲಿ ಅಥವಾ ಕರಿಬಂಟನ ಪರಂಪರೆಯನ್ನಾಗಲಿ, ಜುಂಜಪ್ಪನ ಪರಂಪರೆಯನ್ನಾಗಲಿ ಅಥವಾ ಪಿರಿಯಾಪಟ್ಟಣದ ಕಾಳಗದ ಕಥನವನ್ನಾಗಲಿ ನಾವು ಮಾಡಕೂಡದು. ಅದೊಂದು ಇಂಟಲೆಕ್ಚುವಲ್ ಎಕ್ಸರ್‌ಸೈಜ್ ಅಷ್ಟೆ. ಈ ಕಾವ್ಯ, ಇದೊಂದು ಜನಮನದ ನಿತ್ಯಚಿಂತನೆಯ ಒಂದು ಕ್ರಮ. ಕಾವ್ಯವೆಂಬುದು ಜನಸಮದಾಯದ ನಡುವೆ ಬೆರೆತುಹೋದ ಒಂದು ಸಂದರ್ಭವನ್ನು ಹೇಗೆ ಗ್ರಹಿಸುವುದು? ನಮಗೆಲ್ಲಾ ಏನಾಗಿದೆ ಅಂದ್ರೆ, ವೆಸ್ಟ್ರನ್ ಹಿನ್ನೆಲೆಯಲ್ಲಿ ಯೋಚನೆ ಮಾಡಿ ಮಾಡಿ, ಅದಕ್ಕೆ ಬೇರೆ ಒಂದು ವಿಶಿಷ್ಟವಾದ ನೆಲೆಯನ್ನು ಕೊಟ್ಟುಬಿಟ್ಟಿದ್ದೀವಿ. ಕಾವ್ಯ ’ಓರಲ್ ಟ್ರೆಡಿಶನ್’ ಅದು. ಯಾವುದನ್ನು ಮೌಖಿಕ ಪರಂಪರೆ ಅಂತ ಕರಿತೀವಿ ಅದು.
ಈ ಜನ ಜಾತ್ರೆಗೆ ಯಾಕೆ ಬಂದಿದ್ದಾರೆ ಅಂದ್ರೆ, ಅವರು ಇದು ಒಂದು ದೇವರು ಅನ್ನುವ ಕಲ್ಪನೆಯಿಂದ ಬಂದಿಲ್ಲ. ಇವರೆಲ್ಲ ಮನುಷ್ಯರಾಗಿಯೇ (ರಾಚಪ್ಪಾಜಿ, ಮಂಟೇಸ್ವಾಮಿಯವರು) ಬಂದವರು. ನಮ್ಮೆದುರುಗಡೆ ಅವರು ತೋರಿಸಿದ ಎಲ್ಲ ರೀತಿಯಾದ ಆಚರಣೆಗಳು, ಎಷ್ಟು ಭಿನ್ನ ವ್ಯಾಖ್ಯಾನಗಳನ್ನು ಪಡೆದುಕೊಂಡಿದೆ ಅಂತ ಅಂದ್ರೆ, ಇಲ್ಲಿ ಜನಪದ ವಿದ್ವಾಂಸರ ಸಾಮಾನ್ಯ ಕೂಗಿಗೆ ಅರ್ಥ ಇಲ್ಲ. ಯಾವ ’ಜನಪದ’ ಎಂಬುದು ಅರ್ಥ ಕಳಕೊಳ್ಳುತ್ತಾ ಇದೆ, ನಾಶಗೊಳ್ಳುತ್ತಾ ಇದೆ ಎನ್ನುತ್ತಾರೋ, ಹಾಗೆ ಅದು ನಾಶಗೊಳ್ಳುತ್ತಿಲ್ಲ ಎನ್ನುವುದೇ ಕಪ್ಪಡಿ, ಹಾಗೆ ನಾಶಗೊಳ್ಳುತ್ತಿಲ್ಲವೆನ್ನುವುದೇ ಚಿಕ್ಕಲ್ಲೂರು, ಹಾಗೆ ನಾಶಗೊಳ್ಳೋದಿಲ್ಲವೆಂಬುದೇ ಬೊಪ್ಪೇಗೌಡನಪುರ ಜಾತ್ರೆಗಳು. ಹಾಗಾಗಿ ಇದೊಂದು ರೀತಿ ಕಾವ್ಯ ಮತ್ತು ಜೀವನ, ಇವೆರಡೂ ಕೂಡ ಏಕತ್ವ ಸಮ್ಮಿಳನವಾಗುವ ಉತ್ತಮೋತ್ತಮ ಸ್ಥಿತಿ. ಉತ್ತಮೋತ್ತಮ ಸ್ಥಿತಿ ಅಂದ್ರೆ, ಎಲ್ಲ ವ್ಯವಸ್ಥೆಯ ಕ್ರೌರ್ಯಗಳನ್ನು ಮೀರಿ, ಈ ಸಂಸ್ಕೃತಿ ನಮ್ಮದು ಎಂದು ಭಾವಿಸುವ ಒಂದು ಅನನ್ಯತೆಯ ಸ್ಥಿತಿ. ಇದು ಬಹಳ ದೊಡ್ಡದು. ಇದನ್ನ ಕಲ್ಪಿಸಿಕೊಳ್ಳುವುದಕ್ಕೆ ಕೂಡ ತುಂಬಾ ದೊಡ್ಡ ಒಂದು ಮುನ್ನೋಟ ಬೇಕು. ಇಲ್ಲ ಅಂದ್ರೆ ಆಗಲ್ಲ. ಬಹಳ ಕಷ್ಟ ಇದೆ. ಯಾವುದೇ ಕಾವ್ಯ ಆಗಬಹುದು. ಕಾವ್ಯವನ್ನು ಕೇಳ್ತಾ ಇದ್ರೂ ಅನಿಸುತ್ತೆ, ಓದುತ್ತಾ ಇದ್ರೂ ಅನಿಸುತ್ತೆ ಅದು. ಇಂದ್ವಾಡಿಯವರಾಗಲಿ, ಬೋರಲಿಂಗಯ್ಯ ಆಗಲಿ, ಜೀಶಂಪ ಅವರಾಗಲಿ ಸಂಪಾದಿಸಿ ಕೊಟ್ಟಿರುವ ಕಾವ್ಯಗಳ ಓದಿನಿಂದಲೇ ಒಂದನ್ನು ಪಡೀಬಹುದು. ಕೇಳೋದ್ರಿಂದ ಇನ್ನೊಂದನ್ನು ಪಡೀಬಹುದು. ನಾನು ಗೋವಿಂದಯ್ಯನವರ ವಿಚಾರವನ್ನು ಒಪ್ತೇನೆ. ನಮ್ಮ ವಿಶ್ವವಿದ್ಯಾನಿಲಯಗಳು ಇಷ್ಟು ವರ್ಷಗಳಾದರೂ ಇಂತಹ ಕಾವ್ಯ ಮತ್ತು ಪರಂಪರೆಯನ್ನು ಗುರುತಿಸುವಲ್ಲಿ ವಿಫಲವಾಗಿರುವದು ಸೋಜಿಗದ ಸಂಗತಿ, ನಿಜ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಬಹಳಷ್ಟು ಹತ್ತಿರದಲ್ಲಿ, 50-60 ಕಿ.ಮೀ. ದೂರದಲ್ಲಿರೋ ಜಾಗ ಇದು. ಈ ಮಂಟೇಸ್ವಾಮಿ ಪರಂಪರೆಯನ್ನು ಗುರುತಿಸಲು, ಈ ಕಾವ್ಯವನ್ನು ಹಿಡಿದಿಡಲು ಅದಕ್ಕೆ ಆಗಿಲ್ಲವೆಂದರೆ ಅದು ಏನರ್ಥ?
ಈ ಜೀವ ಸ್ವರೂಪವನ್ನು ಹಿಡಿಯುವುದಕ್ಕೆ ನಮ್ಮ ಘನ ವಿದ್ವಾಂಸರು ಯಾಕೆ ಹೀಗೆ ಮಾಡಿದರು? ನಾನು ಯಾರ ಹೆಸರನ್ನು ಹೇಳುವುದಿಲ್ಲ. ಯಾಕೆ ಅಧ್ಯಯನ ನಡೀಲಿಲ್ಲ? ಇಷ್ಟು ವರ್ಷ ಯಾಕೆ ಬೇಕಾಯ್ತು? ಅವರು ಯಾವುದೋ ತ್ರಿಪದಿಗಳನ್ನು ಹಿಡಿಯುವುದರಲ್ಲಿ, ಲಾವಣಿಗಳನ್ನು ಹಿಡಿಯುವುದರಲ್ಲಿ ಇಷ್ಟೇ ಆಗೋಯ್ತಲ್ಲ. ಇಡೀ ಒಂದು ಟ್ರೆಡಿಷನ್, ಇಡೀ ಒಂದು ಸಮುದಾಯವೇ ಪಾಲ್ಗೊಳ್ಳುವ ಒಂದು ಕಾವ್ಯದ ಜೀವಂತ ಜಾತ್ರೆಯನ್ನು ನಾವು ಬಹಳ ಕಡೆಗಣಿಸಿದ್ದೇವೆ. ನಾವು ಅದರ ಹತ್ತಿರದಲ್ಲೇ ಇದ್ದೇವೆ. ಬಹಳ ಸಮೀಪದಲ್ಲೇ ಇದ್ದು ಕಡೆಗಣಿಸಿದ್ದೇವೆ. ಬರೀ ಈ ಭಾಗಕ್ಕೆ ಮಾತ್ರವಲ್ಲ, ಕರ್ನಾಟಕದ ಇತರೆ ಭಾಗಗಳ ಬಗ್ಗೆನೂ ನಾನು ಈ ಮಾತು ಹೇಳ್ತಾ ಇರೋದು. ಆಪಾದನೆ ಅಲ್ಲ. ನಾನು ಮಾತಾಡ್ತ ಇರೋದು. ಕಾರಣ ಬೇರೆಬೇರೆ ಇರಬಹುದು.
ಇದು ನಿಜವಾಗಿ ಸಾಂಸ್ಥಿಕವಲ್ಲದ ಒಂದು ಸಂಸ್ಥೆ. ಬೊಪ್ಪೇಗೌಡನಪುರ, ಕಪ್ಪಡಿ, ಚಿಕ್ಕಲ್ಲೂರು, ಸಾಂಸ್ಥಿಕವಲ್ಲದ ಸಂಸ್ಥೆಗಳು. ಇಲ್ಲಿ ಮೂರು ಮಠಗಳನ್ನು ಕುರಿತು ಯೋಚನೆ ಮಾಡಬಹುದು, ಸ್ನೇಹಿತರು. ನಾನು ಇಲ್ಲಿ ಚರ್ಚೆ ಮಾಡೋಕೆ ಮೂರುಮಠಗಳನ್ನು ವಿಶ್ಲೇಷಣೆ ಮಾಡೋಕೆ ಹೋಗಲ್ಲ. ಇದು ಸಂದರ್ಭವೂ ಅಲ್ಲ, ಅಗತ್ಯವೂ ಇಲ್ಲ ಅಂತ ಕಾಣುತ್ತೆ.
ಒಂದು ಇಂತಹ ಕಾವ್ಯ ಪರಂಪರೆಯ ಫರ್‌ಫಾರ್ಮೆನ್ಸ್- ಪ್ರದರ್ಶನ ಮತ್ತು ಅದರ ಟ್ರೈನಿಂಗ್-ತರಬೇತಿ; ಎರಡನೇದು ಅದರ ಒಂದು ಟೆಕ್‌ನಿಕ್- ಅದರ ತಂತ್ರ; ಅವು ಬಹಳ ಮುಖ್ಯವಾದದ್ದು ಅಂತ ಭಾವಿಸ್ತೇನೆ. ನನಗೇನನಿಸಿದೆ ಅಂದ್ರೆ, ನಿರ್ದಿಷ್ಟ ನೀಲಗಾರನನ್ನು ಹುಡುಕಿ ಇವನು ಶ್ರೇಷ್ಠಗಾಯಕ, ಇವನು ಸಾಮಾನ್ಯ ಗಾಯಕ ಎನ್ನುವುದನ್ನು ನಾವು ಭಾವಿಸಬಾರದು. ಎಲ್ಲ ನೀಲಗಾರರು ಸೇರಿಯೇ ಈ ಪರಂಪರೆ. ಸುಮ್ಮನೇ ಇಪ್ಪತ್ತು ನಿಮಿಷ ಈ ಕಾವ್ಯ ಹಾಡುವವನು ಈ ಪರಂಪರೆಯನ್ನು ಮುಂದುವರಿಸೋನಾಗಿರ್ತಾನೆ. ಕೆಬ್ಬೇಪುರದ ರಾಚಯ್ಯನವರು ಮಾತ್ರ ಅಲ್ಲ, ಮಾದೇವಯ್ಯ ಮಾತ್ರ ಅಲ್ಲ, ಸುಮ್ಮನೆ ಅರ್ಧ ಗಂಟೆ ಹೇಳುವವರು ಇದ್ದಾರೆ. ಇಲ್ಲಿ ಹಾಡ್ತಾ ಇರೋ ಈ ಮಗು ಕೂಡ ಮುಂದೆ ಈ ಪರಂಪರೆಯವನು (ಅಲ್ಲಿ ಹಾಡು ಹೇಳುತ್ತಿದ್ದ ಹುಡುಗನ ಕುರಿತು). ನನಗೇನನಿಸಿದೆ ಅಂದ್ರೆ, ಇವರೆಲ್ಲಾ ರಿಪೀಟರ್ಸ್ ಅಲ್ಲ. ಈ ಹೊತ್ತು ಸನ್ಮಾನ ಮಾಡಿಸಿಕೊಂಡ ಗಾಯಕನನ್ನು ಸೇರಿಸಿಕೊಂಡು ಜನಪದ ವಿದ್ವಾಂಸರಲ್ಲಿ ಒಂದು ಅಪಕಲ್ಪನೆ ಇದೆ- ’ಇವರೆಲ್ಲಾ ಕಲಿತಿದ್ದಾರೆ, ಇವರು ಅದನ್ನೇ ಪುನರಾವರ್ತನೆ ಮಾಡ್ತಾರೆ’ ಅಂತ. ಇದು ಪುನರಾವರ್ತನೆ ಅಲ್ಲ ಕ್ರಿಯೇಶನ್. ಇದು ನಿರ್ಮಾಣ. ಇದು ನಿರ್ಮಾಣ ಪ್ರತಿಭೆ. ಇಡೀ ಪಠ್ಯವನ್ನು, ಅಂದ್ರೆ ಟೆಕ್ಸ್ಟ್‌ಅನ್ನು, ಮತ್ತೆ ಒಂದು ಕಾನ್‌ಟೆಕ್ಸ್ಟ್‌ನಲ್ಲಿ, ಮತ್ತೆ ಒಂದು ಪ್ರಿಟೆಕ್ಸ್ಟ್‌ನಲ್ಲಿ ಪ್ರಸೆಂಟ್ ಮಾಡೋದು. ನಮ್ಮ ಜನಪದ ಅಧ್ಯಯನದಲ್ಲಿ ಈ ನಿರ್ಮಾಣ ಪ್ರತಿಭೆಯನ್ನು ಕುರಿತು ಅಧ್ಯಯನ ಇಲ್ಲವೇ ಇಲ್ಲ. ಇವರನ್ನೆಲ್ಲರನ್ನೂ ಕೂಡ ನಾವು ಎಷ್ಟು ರೀತಿಯಲ್ಲಿ ಯೋಚನೆ ಮಾಡಿದ್ದೀವಿ ಅಂದ್ರೆ, ನಮ್ಮ ಯಾಂತ್ರೀಕೃತವಾದ ಕಲ್ಪನೆಗೆ ಅನುಗುಣವಾಗಿ ಇವರು ಕೂಡ ಪುನರಾವರ್ತನೆ ಮಾಡುವವರು ಎಂಬುದು. ಜನಪದ ಕಾವ್ಯ ಒಂದು ನಿರಂತರ ನಿರ್ಮಾಣವನ್ನು ಒಳಗೊಂಡಿರುವಂತಹದ್ದು. ಈಗ ಯಾವುದೇ ಗಾಯಕ ಎಲ್ಲೇ ಹಾಡ್ತಾ ಇರಲಿ, ಅವನು ತಂಬೂರಿ ಸಂಪ್ರದಾಯದಲ್ಲಿರಲಿ, ಕಂಸಾಳೆ ಸಂಪ್ರದಾಯದಲ್ಲಿರಲಿ, ಅವನು ಹಾಡ್ತಾ ಒಂದು ನಿರ್ಮಾಣ ಮಾಡ್ತಾ ಇರ್ತಾನೆ. ನಮ್ಮ ಎದುರುಗಡೆ ನಿರ್ಮಾಣ ಮಾಡ್ತಾ ಇರ್ತಾನೆ. ಹೀಗಾಗಿ ಇವರನ್ನು ಒಂದುರೀತಿ ಚಲನಶೀಲವಾಗಿ ಯೋಚನೆ ಮಾಡಿದಾಗ ಮಾತ್ರ ನಮಗೆ ಈ ಪರಂಪರೆಯ ಒಂದು ಜೀವಂತಿಕೆ ಅಥವಾ ಅದರ ಸಜೀವತೆ ಏನು ಎಂಬುದರ ಅರಿವು ಆಗುತ್ತೆ. ಹೀಗಾಗಿ ಈ ಪರಂಪರೆ ಎಂಬುದು ನಿರಂತರವಾಗಿ ಮುಂದುವರೀತಾ ಇದೆ. ಹಾಗೇ ಮುಂದುವರಿಯುವುದರ ಒಂದು ಮಹಾನ್ ಕ್ಷೇತ್ರಾನೇ ಕಪ್ಪಡಿ. ಇದು ಕಾವ್ಯ ಕೇಂದ್ರ. ಕಾವ್ಯ ಕೇಂದ್ರ ಅಂದತಕ್ಷಣ ಯೋಚನೆ ಮಾಡಬೇಕು. ಕಾವ್ಯ ಎನ್ನುವುದು ಜನರ ನಿಜವಾದ ಜೀವನ ವಿಧಾನವೇ ಆಗುವ ಒಂದು ಕಾವ್ಯ ಕ್ರಿಯೆ. ಕಾವ್ಯವನ್ನು ಹಾಗೇ ದಿನನಿತ್ಯದಲ್ಲಿ ತಮ್ಮ ಎಲ್ಲಾ ಉಪದ್ವ್ಯಾಪಗಳೊಂದಿಗೆ, ಕಷ್ಟಸಂಕಷ್ಟಗಳೊಂದಿಗೆ ಬದುಕುವ, ಕಾವ್ಯವನ್ನು ತಮ್ಮ ಬದುಕಿನ ಒಂದು ಭಾಗವನ್ನಾಗಿ ಸ್ವೀಕರಿಸುವ, ಸಾವಯವವಾಗಿ, ಜೈವಿಕವಾಗಿ ಬದುಕುವ ಒಂದು ಕಲ್ಪನೆಯನ್ನು, ಕಪ್ಪಡಿ ಜಾತ್ರೆ ಹೇಳುತ್ತೆ, ಚಿಕ್ಕಲ್ಲೂರು ಜಾತ್ರೆ ಹೇಳುತ್ತೆ. ಯಾಕಂದ್ರೆ ಇಡೀ ಮಂಟೇಸ್ವಾಮಿ ಕಾವ್ಯ ಇದೆಯಲ್ಲ ಅದು ಬಹಳ ಫ್ಲೆಕ್ಸಿಬಲ್. ಅನೇಕ ರೂಪರೂಪಾಂತರಗಳನ್ನು ಪ್ರತೀಕ್ಷಣದಲ್ಲೂ ಕೂಡ ಪ್ರಕಟಿಸುವಂತಹ ಸಾಮರ್ಥ್ಯ ಈ ಕಾವ್ಯಕ್ಕಿದೆ. ಹೀಗಾಗಿ ಜಗತ್ತಿನ ಮಹೋನ್ನತ ವಾಕ್ ಪರಂಪರೆಯ ಕಾವ್ಯಗಳಲ್ಲಿ ಧರೆಗೆ ದೊಡ್ಡವರನ್ನು ಕುರಿತ ಮಂಟೇಸ್ವಾಮಿ ಕಾವ್ಯ, ಬಹಳ ದೊಡ್ಡ ಕಾವ್ಯಗಳಲ್ಲಿ ಒಂದಾಗಿದೆ.
ಜಗತ್ತಿನ ಹಲವು ಕಾವ್ಯಗಳ ಬಗ್ಗೆ ಗೊತ್ತಿರಬಹುದು. ಕಲೇವಾಲ ಬಗ್ಗೆ ಗೊತ್ತಿರಬಹುದು, ಹೋಮರ್ ಬಗ್ಗೆ ಗೊತ್ತಿರಬಹುದು, ಮತ್ತೊಂದರ ಬಗ್ಗೆ ಗೊತ್ತಿರಬಹುದು. ಇಟೀಸ್ ದಿ ಕ್ರಿಯೇಶನ್. ಒಂದು ಕಥಾ ಹಂದರ ಇದೆ ಅವನಿಗೆ. ಆ ಹಂದರದ ಹೂರಣವೆಲ್ಲವೂ ಕೂಡ ಸಮಕಾಲೀನ. ಅರ್ಥಪೂರ್ಣವಾಗಿ ಸಮಕಾಲೀನ. ಇಡೀ ಪಾಠಾಂತರದಲ್ಲಿ ಅದನ್ನು ನೋಡಬಹುದು. ಇಡೀ ಪಾಠಾಂತರವೇ ಆ ರೀತಿಯಾದ ಒಂದು ಜೀವಂತಿಕೆಯ ಎಲ್ಲ ಲಯಗಳನ್ನು ಹೊಂದಿರುವಂಥಾದ್ದು. ಆ ಭಾಷೆಯ ಜೀವಂತಿಕೆ ಏನ್ಹೇಳುತ್ತೆ ಅಂದ್ರೆ, ಸಮಕಾಲೀನ ಮನುಷ್ಯರ ಜೀವಂತಿಕೆಯನ್ನೇ ಪ್ರತಿಬಿಂಬಿಸುವಂಥದ್ದಾಗಿದೆ ಎನ್ನುವುದನ್ನು ಹೇಳುತ್ತೆ. ಅಂದ್ರೆ, ಇಡೀ ಕಥನವನ್ನು ’ಇಲ್ಲಾಜಿಕಲ್’ ಅನ್ನಬಹುದು. ಅಂದ್ರೆ ಯಾವುದು ಅಸ್ತಿತ್ವದಲ್ಲಿಲ್ಲವೋ, ಯಾವುದು ಅತಾರ್ಕಿಕವಾದುದೋ ಅದೇ ನಿಜವಾದ ’ಒರಿಜಿನಲ್’. ಯಾವ ಒರಿಜನಲ್‌ಗೂ ಆಗದೇ ಇರುವ ಒಂದು ಒರಿಜಿನಲ್, ಹೀಗಾಗಿ ಒರಿಜಿನಲ್ ಎನ್ನುವ ಕಲ್ಪನೆಯನ್ನೇ ಇದು ಬಿಸಾಕಿಬಿಡುತ್ತದೆ.
12ನೇ ಶತಮಾನದ ಒರಿಜಿನಲ್ ಕ್ರಾಂತಿಯನ್ನು ಎಲ್ಲ ರೀತಿಯಲ್ಲಿಯೂ ಕೂಡ ಇದು ನಿರಂತರವಾಗಿ ಪ್ರಶ್ನೆಗೆ ಗುರಿಪಡಿಸುತ್ತದೆ. 12ನೇ ಶತಮಾನದಲ್ಲಿ ಒಂದು ಚಳವಳಿ ನಡೀತು. ಅದು ಎಷ್ಟು ದೊಡ್ಡದು, ಯಾವ ಯಾವ ರೀತಿಯಲ್ಲಿ ದೊಡ್ಡದು ಎಂಬುದು ನಮಗೆಲ್ಲ ಗೊತ್ತಿದೆ. ಅದು ಚರಿತ್ರೆಗೆ ಸಂದ ವಿಚಾರ. ಅನಂತರದ ಕ್ರಿಯೆ ಏನು? ಅದು ಧರ್ಮ ಆಯ್ತು. ಹೆಚ್ಚೆಚ್ಚು ಮಠೀಯವಾಯ್ತು. ಹೆಚ್ಚೆಚ್ಚು ಶಿಷ್ಟವಾಯ್ತು. ಯಾವ ಬಸವಣ್ಣ ಕೆಳಜಾತಿಯ, ಕೆಳವರ್ಗದ ಎಲ್ಲರನ್ನೂ ಕೂಡ ಸಂಘಟಿಸುವುದಕ್ಕೆ ಪ್ರಯತ್ನಿಸಿದ ಅಥವಾ ಚಳವಳಿ ಪ್ರಯತ್ನಿಸಿತೋ, ಆ ಪ್ರಯತ್ನದ ವಿಫಲತೆಯ ಎದುರುಗಡೆ ಏರ್ಪಟ್ಟ ಮರು ಬಂಡಾಯ ಈ ಮಂಟೇಸ್ವಾಮಿ ಪರಂಪರೆ ಮತ್ತು ಕಾವ್ಯ. ಹೀಗಾಗಿ ಚಳವಳಿಗಿಂತ ಒಂದು ಕುಲ ಸ್ಥಾಪನೆಯ ಕಲ್ಪನೆಯೊಂದು ಮಂಟೇಸ್ವಾಮಿ ಕಾವ್ಯದಲ್ಲಿದೆ. ಇದು ಚಳವಳಿಯಾಗಲಾರದು. ಕುಲ ಕುಲದ ಒಗ್ಗಟ್ಟಿನ ಕತೆಯಿದು. ಮಂಟೇಸ್ವಾಮಿ ಕಾವ್ಯ ಕುಲದ ಸಂಗೋಪನೆ. ಅಂದ್ರೆ ಮಂಟೇಸ್ವಾಮಿ ಮತ್ತು ಮಾದೇಶ್ವರ ಒಂದು ಕುಲದ ಸಾತತ್ಯವನ್ನ ಎತ್ತಿ ಹಿಡಿದವರು. ಯಾವ ಕುಲಗಳು ಒಂದು ಚಳವಳಿಯ ಕಾರಣದಿಂದಾಗಿ ಸಂಘಟಿತವಾಗಿ ಒಂದು ಚಳವಳಿಯ ಭಾಗವೇ ಆಗಿ ಹೋದವೋ, ಅಂತಹ ಕುಲಗಳು, ಅನಂತರದ ದಿನಗಳಲ್ಲಿ ದಿಕ್ಕೆಟ್ಟುಹೋದವು. ಹೀಗೆ ದಿಕ್ಕೆಟ್ಟಾಗ ಒಂದು ನಾಡಿನ ಚಳವಳಿಯಲ್ಲಿ ಮುಂದುವರಿಯುವುದಕ್ಕೆ ಮತ್ತೆ ಮತ್ತೆ ಅವನ್ನು ಕಟ್ಟಿಕೊಳ್ಳಬೇಕು. ಆ ಕುಲದ ಐಡೆಂಟಿಟಿಯನ್ನು ಬೇರೆಬೇರೆ ರೀತಿಯಲ್ಲಿ ಮತ್ತೆ ಸ್ಥಾಪಿಸಬೇಕು ಎನ್ನುವ ಕಲ್ಪನೆ ಇಲ್ಲಿದೆ.
ಈ ಭಿಕ್ಷದ ಕಲ್ಪನೆಯೂ ಕೂಡ ಕುಲದ ನೆಲೆಯನ್ನು ಮತ್ತೆ ಮತ್ತೆ ಅರ್ಥಪೂರ್ಣ ಮಾಡಿಕೊಳ್ಳುವುದಕ್ಕೆ ಬಂದಿದೆ. ಆ ಭಿಕ್ಷೆ ಯಾಕೆ ಬೇಕು. ಕುಲದ ಸಂವರ್ಧನೆಗಾಗಿ ಬೇಕು. ಯಾಕಂದ್ರೆ ರಾಜಕೀಯವಾದ ರಕ್ಷಣೆ ಹೊರಟು ಹೋಯಿತು, ಸಾಮಾಜಿಕವಾದ ರಕ್ಷಣೆ ಹೊರಟು ಹೋಯಿತು. ಅದೆಲ್ಲಾ ಮಠ ಆಗೋಯ್ತು. ಹಾಗಾದರೆ ಮಾನವ ಅಸ್ತಿತ್ವ ಯಾವ ರೀತಿಯಲ್ಲಿ ತನ್ನನ್ನು ಸಂಗೋಪನೆಗೊಳಿಸಿಕೊಳ್ಳಬೇಕು. ಬೇರೆ ಬೇರೆ ವ್ಯವಸ್ಥೆಗಳು ನಮ್ಮನ್ನು ಕೈಬಿಟ್ಟಾಗ ನಾವೇನು ಮಾಡಬೇಕು? ಆಗ ’ಹೌದು, ನನಗೆ, ನಿನ್ನ ಮಗನೇಬೇಕು. ನಿಮ್ಮ ಭೂಮಿನೇ ಬೇಕು’ ಅಂತ ಬರುತ್ತೆ. ಹೀಗಾಗಿ ಕುಲವೆನ್ನುವುದನ್ನು ಬಹಳ ಖಚಿತವಾಗಿ ಹಿಡಿಯುವ ಒಂದು ಕಲ್ಪನೆಯಾಗಿ ಇಡೀ ಜನಪದರು ಯೋಚನೆ ಮಾಡಿದರು. ಜನಪದರ ಯೋಜನೆ ಕುಲವನ್ನು ಕಟ್ಟುವುದು. ಆ ಕುಲವನ್ನು ಕಟ್ಟುವುದಕ್ಕೆ ಇದ್ದ ದೊಡ್ಡ ಹಿನ್ನಡೆ ಯಾವುದಪ್ಪ ಅಂದ್ರೆ, ಶರಣ ಚಳವಳಿಗೆ ಬಂದಂತಹ ಶೂದ್ರಾತಿಶೂದ್ರ ವರ್ಗದ ಒಂದು ತೊರೆ. ಅಲ್ಲಿ ಮಾದಾರ ಚೆನ್ನಯ್ಯ ಇರಬಹುದು, ಕಿನ್ನರಿ ಬೊಮ್ಮಯ್ಯ ಇರಬಹುದು. ಹೀಗಾಗಿ ಮಂಟೇಸ್ವಾಮಿ ಕಾವ್ಯ ಇಡೀ ಶೂದ್ರ ವರ್ಗದ ನಾಯಕತ್ವವೊಂದಕ್ಕೆ ಅರ್ಥವನ್ನು ತಂದುಕೊಡುವ ಕ್ರಮ ಹೇಗೆ ಅಂತ ಯೋಚನೆ ಮಾಡುತ್ತದೆ. ಶೂದ್ರ ವರ್ಗದಲ್ಲಿರುವ ಪೊಟೆನ್ಷಾಲಿಟಿ ಎಷ್ಟು ದೊಡ್ಡದು ಎನ್ನುವುದನ್ನು ಎತ್ತಿ ಹಿಡಿಯುವುದೇ ಈ ಕಾವ್ಯದ ದೊಡ್ಡ ತಿರುಳು ಅಂತ ನಾನು ತಿಳುಕೊಂಡಿದ್ದೀನಿ. ಇದರಲ್ಲಿ ಸ್ಥಿರೀಕರಣಗೊಂಡಂತಹ ವೀರಶೈವ ಧರ್ಮಕ್ಕೆ ಬಹಳ ಜೋರಾದಂತಹ, ಸಾಮುದಾಯಿಕವಾದಂತಹ ಒಂದು ಪ್ರತಿಕ್ರಿಯೆಯನ್ನು, ಸಾಮುದಾಯಿಕವಾದಂತಹ ಒಂದು ಎದುರು ಶಕ್ತಿಯನ್ನು ಸೃಷ್ಟಿಸುವುದೇ ದಕ್ಷಿಣದ ಒಳನಾಡಿನ ಈ ಕಥನಗಳ ಆಶಯವಾಗಿದೆ.
ಬೇರೆಬೇರೆ ಮಟ್ಟುಗಳಲ್ಲಿ ಇದನ್ನು ಯೋಚನೆ ಮಾಡಬಹುದು. ನೋಡಿ, ಅಲ್ಲಮ ಪ್ರಭುಗಳಿಗೂ ಮತ್ತು ಮಂಟೇಸ್ವಾಮಿ ಕಾವ್ಯಕ್ಕೂ ಇರುವ ಸಂಬಂಧ ಇದೆಯಲ್ಲ ಬಹಳ ದೊಡ್ಡದದು. ನಮಗೆ ಮಂಟೇಸ್ವಾಮಿಯವರ ಬಗೆಗೆ ಇರತಕ್ಕಂತಹ ಲೋರಿದೆಯಲ್ಲ, ಈ ’ಲೋರ್’ಗೆಲ್ಲಾ ಧಾತುನೇ ಕಾವ್ಯ. ಲೋರ್‌ನಲ್ಲೇನಿದೆ ಅಂದ್ರೆ, ಕಾವ್ಯದಲ್ಲಿರೋದೆ ಲೋರ್‌ನಲ್ಲಿರೋದು. ಕಾವ್ಯ ಏನು ಅಂತಂದ್ರೆ ಅದು ಲೋರ್. ಲೋರ್ ಮತ್ತು ಕಾವ್ಯಕ್ಕೂ ಒಡಕಿಲ್ಲದೆ ಇರೋದೇ ಈ ಕಾವ್ಯ. ಈವಾಗ ಹೋಗಿ ಆ ಜಾತ್ರೆಯಲ್ಲಿರೊ ಯಾವನಾದರೊಬ್ಬನನ್ನು ಕರೆತರೋಣ. ಯಾರಾದರೂ ಸರಿ, ಈಗಲೇ ಇಲ್ಲೇ. ಅವನನ್ನು ’ಸಿದ್ದಪ್ಪಾಜಿ ಅಂದ್ರೆ ಏನಪ್ಪ, ರಾಚಪ್ಪಾಜಿ ಅಂದ್ರೆ ಏನಪ್ಪ’ ಅಂತಂದ್ರೆ ಅವನು ಅದಕ್ಕೊಂದು ಕತೆ ಹೇಳ್ತಾನೆ. ಅದಕ್ಕೆ ಕಾವ್ಯದಲ್ಲಿ ವಿವರ ಇದೆ. ಅಂದ್ರೆ ಈ ಕಾವ್ಯ ಎಷ್ಟು ಬಹಳ ಇಳಿದಿದೆ ಅಂದ್ರೆ ಆಶ್ಚರ್ಯವಾಗಿ ಬಿಡುತ್ತೆ.
ನೋಡಿ ಅಲ್ಲಮಪ್ರಭು, ಅವನು ಇಡೀ ಬಸವ ಚಳವಳಿಯಲ್ಲಿದ್ದೇ ಬಸವ ಚಳುವಳಿಯ ವಿರೋಧಿ. ಬೇರೆ ಬೇರೆ ಜನ ಹೇಳ್ತಾರೆ. ಮಂಟೇಸ್ವಾಮಿ ಅಂದ್ರೆ ಅಲ್ಲಮಪ್ರಭುವೆ, ಬೇರೆ ಅಲ್ಲ ಅಂತ. ಇಷ್ಟಲಿಂಗ ಪ್ರಾಣಲಿಂಗ ಕಲ್ಪನೆ ನೋಡಿ. ಬಹಳ ಚೆನ್ನಾಗಿದೆ ಆ ಕಲ್ಪನೆ. ಅದು ಒಂದುರೀತಿ ಸಾಂಸ್ಥಿಕಗೊಂಡಂತಹ ಎಲ್ಲ ಧರ್ಮಗಳ ವಿರೋಧವಾಗಿದೆ. ನಾಟ್ ಓನ್‌ಲಿ ಇನ್ ವೀರಶೈವ. ಎಲ್ಲಾ ಕಡೆ ಇದ್ದದ್ದೆ. ಧರ್ಮ ಅಲ್ಲ ಅದು. ಇಲ್ಲಿಯದೇ ಏನು ಅಂದ್ರೆ ಸಾಂಸ್ಥಿಕ ಧರ್ಮಗಳನ್ನೆಲ್ಲಾ ಮೀರಿ ಹೊಸ ಧರ್ಮ ಸ್ಥಾಪನೆಯ ಆಶಯ.
ನನಗೆ ಗೊತ್ತಿಲ್ಲ ಇದು. ಮಂಟೇಸ್ವಾಮಿಯವರ ಪವಾಡಗಳಿಂದ ಈ ಕಾವ್ಯ ಉದ್ಭವಿಸಿತೋ? ಅಥವಾ ಈ ಪವಾಡ ಮತ್ತು ಮಂಟೇಸ್ವಾಮಿ ಎಲ್ಲಾ ಸೇರಿ ಅದೊಂದು ಕಾವ್ಯಾತ್ಮಕವಾದ ಹೊಸವಿನ್ಯಾಸವನ್ನು ಪಡೆದುಕೊಂಡಿತೋ? ಅದೊಂದು ಬಹಳ ಆಂತರಿಕವಾದ ಅಪೇಕ್ಷೆಯಿಂದ ಹುಟ್ಟಿಕೊಂಡಂತಹದ್ದು. ಕಾವ್ಯ ಅಂದ್ರೇನೇ ಎಲ್ಲವೂ ಆಗುತ್ತೆ. ಅಂತ ಕಾವ್ಯಗಳು ಜಗತ್ತಿನಲ್ಲಿವೆ. ಅಂದರೆ ಶರಣ ಚಳವಳಿಯ ಮುಂದಿನ ಒಂದು ಕ್ರಿಯಾ ವ್ಯಾಪಾರವನ್ನು, ಈ ಕಾವ್ಯ ಬೇರೆಬೇರೆ ಮಟ್ಟುಗಳಲ್ಲಿ ಹೇಳುತ್ತೆ. ಈ ಭಿಕ್ಷದ ಕಲ್ಪನೆ ಅನ್ನೋದು ಬಹಳ ಪುರಾತನವಾದದ್ದು. ಬೌದ್ಧರಲ್ಲಿದೆ. ಎಲ್ಲಾ ಕಲ್ಚರ್‌ಗಳಲ್ಲೂ ಇದೆ. ಈಗ ಭಿಕ್ಷಾ ಅನ್ನೋದಕ್ಕೆ ಹೀನಾರ್ಥ ಪ್ರಾಪ್ತಿಯಾಗಿದೆ. ಅದು ಬೇರೆಮಾತು. ಆ ಭಿಕ್ಷೆಗೂ, ಈ ಭಿಕ್ಷೆಗೂ ಬೇರೆಬೇರೆ ಅರ್ಥಗಳು ಇವೆ. ಭಿಕ್ಷೆ ಅಲ್ಲ ಇದು. ಕುಲದ ಸಾಮೀಪ್ಯವನ್ನು ಮೇಲಿಂದ ಮೇಲೆ ವೃದ್ಧಿಸಿಕೊಳ್ಳುವುದಕ್ಕೆ ಭಿಕ್ಷೆ. ಮಂಟೇಸ್ವಾಮಿ ಕಾವ್ಯದಲ್ಲಿ ಬರುವ ಈ ಪವಾಡಗಳಿವೆಯಲ್ಲ, ಅವು ಅತಿಮಾನುಷ ಅಲ್ಲ ಅವು. ಮೇಲುನೋಟಕ್ಕೆ ಅತಿಮಾನುಷವೆಂದು ತೋರ್ತವೆ. ಆದರೆ ಅದರ ಒಳಹೂರಣ ಏನಿದೆ ಅಂತಂದ್ರೆ, ನಿಜವಾಗಿಯೂ ಸಾಮುದಾಯಿಕವಾದ ವಾಸ್ತವಿಕತೆಯೇ ಈ ಪವಾಡಗಳ ಅರ್ಥಸೂಚಿಯಾಗಿದೆ.
ಪವಾಡಗಳ ಬಗ್ಗೆ ವಿಚಾರವಾದಿಗಳಾಗಿ ನಾವು ಆತಂಕ ಪಡಬಾರದು. ಕಂಪ್ಯೂಟರ್ ಪವಾಡವನ್ನು ಇಲ್ಲಿ ಕುಳಿತು ಒಪ್ಪಿಕೊಳ್ಳುವ ನಮಗೆ, ಮಂಟೇಸ್ವಾಮಿ ಪವಾಡ ಯಾಕ್ರಿ ಆಶ್ಚರ್ಯವಾಗುತ್ತೆ? ವೈದ್ಯಕೀಯವು ಪವಾಡ ಅನ್ನಿಸ್ತಾ ಇಲ್ವೆ ನಮಗೆ? ಪವಾಡಗಳ ಬಗ್ಗೆ ರ್‍ಯಾಶನಲಿಸ್ಟ್ ಆಗಿ ವಿಚಾರವಾದಿಗಳಾಗಿ ಯೋಚನೆ ಮಾಡಬಾರದು ನಾವು. ನಾನಂತೂ ಮಾಡಲ್ಲ. ಪವಾಡದಲ್ಲಿರತಕ್ಕಂಥದ್ದು ಒಂದು ಹ್ಯೂಮನ್ ಎಲಿಮೆಂಟ್- ಅದು ಮುಖ್ಯ. ಹ್ಯೂಮನ್ ಎಲಿಮೆಂಟ್ ಆ ಪವಾಡದಲ್ಲಿರತಕ್ಕಂತಹದ್ದು ಮಾನವ ಜೀವನಕ್ಕೆ ಎಷ್ಟು ರೀತಿಯಲ್ಲಿ ಒಂದು ಕಾಣಿಕೆಯಾಗುತ್ತೆ ಎಂಬುದು ಮುಖ್ಯ. ಹಾಗೆ ನೋಡಕ್ಹೋದ್ರೆ ಈ ಹೊತ್ತು ಚಿಕ್ಕಮಕ್ಕಳಿಗೆ ಗಾಂಧಿ ಪವಾಡವಾಗಿ ಕಾಣ್ತಾನೆ. ಅಂಬೇಡ್ಕರ್ ಪವಾಡವಾಗಿ ಕಾಣ್ತಾನೆ. ವಿಧಾನಸೌಧ ಕಪ್ಪಡಿ ಹತ್ತಿರದ ಹಳ್ಳಿಯ ಜನಕ್ಕೆ ಒಂದು ಪವಾಡವೇ. ಸುಮ್ಮನೇ ಪವಾಡ ಪವಾಡ ಅಂತ ವಿಚಾರವಾದಿಗಳ ರೀತಿ ದರಿದ್ರ ಬೊಂಬಡ ಹೊಡೀಕೂಡದು. ಅಸಹ್ಯ ಅದು. ನಮಗೆ ಅಸಹಾಯಕತೆ ಇದೆ. ಅಸಹಾಯಕತೆಯನ್ನು ಮೀರೋದಕ್ಕೆ ನಾನೊಂದು ನನ್ನ ಈ ಲೋಕದ ಎಲ್ಲಾ ವಾಸ್ತವತೆಗಳನ್ನ ಮೀರಿದ ಒಂದು ಯೋಚನೆಯನ್ನು ಮಾಡ್ತೀನಿ. ಬಸವಣ್ಣನ ಪವಾಡದ ಕಲ್ಪನೇನೂ ಅಷ್ಟೇ, ಮಂಟೇಸ್ವಾಮಿ ಪವಾಡದ ಕಲ್ಪನೇನೂ ಅಷ್ಟೆ. ಪವಾಡದ ಒಳಗಡೆ ಇರುವಂತಹ ಮಾನವೀಯ ಕಲ್ಪನೆಗಳ ಸುಳಿವು ನಮಗೆ ಬೇಕು. ಅದು ಇಲ್ಲದಿದ್ದರೆ ಪವಾಡಾನ ಅರ್ಥಮಾಡಿಕೊಳ್ಳಕ್ಕಾಗಲ್ಲ. ಬರೀ ಕರ್ನಾಟಕದಲ್ಲಲ್ಲ ಪವಾಡ ಇರೋದು, ಭಾರತದಲ್ಲಲ್ಲ, ಪವಾಡ ಅನ್ನೋದು ವಿಶ್ವವ್ಯಾಪಿ. ಪವಾಡಗಳಿಲ್ಲದೆ ಮಹಾಕಾವ್ಯಗಳೇ ಇಲ್ಲ. ಹನುಮಂತ ಲಂಕೆಗೆ ಹಾರೋದೇ ಪವಾಡ. ಪವಾಡ ಇಲ್ಲದೆ ರಾಮಾಯಣವೇ ಇಲ್ಲ. ದ್ರೌಪದಿಗೆ ಅಕ್ಷಯವಸ್ತ್ರ ಕೊಡೋದೇ ಒಂದು ಪವಾಡ. ಪವಾಡ ಇಲ್ಲದೆ ನಮ್ಮ ಮಹಾಭಾರತವೇ ಇಲ್ಲ. ಇನ್ನು ಈ (ಮಂಟೇಸ್ವಾಮಿ) ಪವಾಡದ ಬಗ್ಗೆ ವಿಚಾರವಾದಿಗಳು ಮಾತಾಡ್ತಾರೆ. ವಿಚಾರವಾದಿಗಳು ಪವಾಡಗಳ ಬಗ್ಗೆ ಮಾತಾಡೋದಾದ್ರೆ ಅವರಿಗೆ ಮಹಾಕಾವ್ಯಗಳೇ ಇಲ್ಲ. ಅದೊಂದು ನಿತ್ಯ ಚಟುವಟಿಕೆ. ಮುಂಬೈನ ಷೇರು ಮಾರುಕಟ್ಟೆ, ಬೀಡಿಗೆ ಕಾಸಿಲ್ಲದಿರೋ ನನಗೆ ಪವಾಡ ಅಷ್ಟೆ. ಪವಾಡದ ಬಗ್ಗೆ ಏನೇನೂ ಯೋಚಿಸುವುದಿಲ್ಲ. ಪವಾಡ ಇಲ್ಲದೆ ಶೇಕ್ಸ್‌ಪಿಯರ್ಸ್ ನಾಟಕಗಳೇ ಇಲ್ಲ. ’ಮ್ಯಾಕ್‌ಬೆತ್’ ನಾಟಕವೇ ಇಲ್ಲ. ನಮಗೆ ಏನೋ ಒಂದು ರೋಗ ಬಂದು ಬಿಟ್ಟಿದೆ; ವೈಚಾರಿಕವಾಗಿ ಇವನ್ನೆಲ್ಲಾ ಪಾರ್ಟ್ ಔಟ್ ಮಾಡಬಿಡಬೇಕು ಅಂತ. ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಹೇಳಿಕೊಟ್ಟವರಿಂದ ನಮಗೆ ಬಂದಿರೋ ಪಾಠಗಳು ಇವು. ಅರೆವಿಜ್ಞಾನಿಗಳಿಂದ ಅಥವಾ ಉದರಪೋಷಣೆ ವಿಜ್ಞಾನಿಗಳಿಂದ ಬಂದಿರೋ ಕೆಲವು ಕಲ್ಪನೆಗಳು ಇವು. ಪವಾಡದೊಳಗಡೆ ಇರುವ ಹ್ಯೂಮನ್ ಎಲಿಮೆಂಟ್ಸ್ ಏನು ಎಂಬುದೇ ಇಲ್ಲಿ ಮುಖ್ಯ. ಒಂದು ಕೆಟ್ಟ ಮಾರ್ಕ್ಸ್‌ವಾದಿ ಆಲೋಚನೆ ಹುಟ್ಟಿಕೊಂಡಿರೋ ಹಿನ್ನೆಲೇನೆ ಇದೆಲ್ಲಕ್ಕೂ ಕಾರಣವಾಗಿರೋದು. ಸ್ಟುಪಿಡ್. ಮಂಟೇಸ್ವಾಮಿನ ಯಾರಾರು ಪವಾಡ ವಿರೋಧಿಗಳು ಅನ್ನೋರು, ಇಲ್ಲಿದ್ರೆ ಯಾರಾದ್ರು ಇಲ್ಲಿಂದನೆ ಬರ್‌ಖಾಸ್ತ್ ಮಾಡಿಬಿಡೋಣ ಸಭೇನ. ಮಂಟೇಸ್ವಾಮಿನೇ ಒಂದು ಪವಾಡ. ಮಾದೇಶ್ವರನೇ ಒಂದು ಪವಾಡ. ಬಹಳ ಕುತೂಹಲ ಇದು. ಏನಿದು ಪವಾಡ? ಕಬ್ಬಿಣದ ಕಲ್ಪನೆ ಒಂದು ಕಾಯಕವನ್ನು ಒಂದು ಇಂಡಸ್ಟ್ರಿಯ ಲೆವೆಲ್‌ಗೆ ಬೇರೆಬೇರೆ ರೀತಿಯಲ್ಲಿ ತಿರುಗಿಸುವುದರ ಕಡೆಗೆ ಈ ಕಾವ್ಯದಲ್ಲಿ ವಿಚಾರ ಇದೆ.
ಬಹಳ ಇಂಟ್ರೆಸ್ಟಿಂಗ್ ಅಂದ್ರೆ, ಕಲ್ಪಿತವಾದ ಕಲ್ಯಾಣದ ಮೇಲಿನ ಒಂದು ದಾಳಿ. ವೀರಶೈವ ಧರ್ಮ ಸಾಂಸ್ಥಿಕವಾಗಿಬಿಡ್ತು. ಸಾಂಸ್ಥಿಕವಾಯಿತಷ್ಟೆ ಅಲ್ಲ, ಧರ್ಮವೂ ಆಗಲಿಲ್ಲ ಅದು. ಜಾತಿ ಆಯಿತು ಅದು. ಜಾತಿಯ ಎದುರುಗಡೆ ಕುಲದ ಕಲ್ಪನೆಯನ್ನ ಮಂಟೇಸ್ವಾಮಿಯವರು ಕಟ್ಟಿದರು. ಬಹಳ ಇಂಟ್ರೆಸ್ಟಿಂಗ್ ಆಗಿದೆ. ಸ್ವಲ್ಪ ಯೋಚನೆ ಮಾಡಿ. ಸ್ನೇಹಿತರೆಲ್ಲಾ ಮುಂದೆ ಏನಾರ ಚರ್ಚೆ ಮಾಡಬಹುದು. ಜಾತಿಯ ಕಲ್ಪನೆ ಯಾರದು? ಜಾತಿಯ ಕಲ್ಪನೆಯನ್ನು ಕುರಿತು ಯೋಚನೆ ಮಾಡೋಣ. ಈ ಜಾತಿಯ ಕಲ್ಪನೆ ಕೂಡ ಮೂಲತಃ ನಿರ್ಮಾಣವಾದದ್ದೆ ವರ್ಣಾಶ್ರಮ ಪದ್ಧತಿಯ ಮೂಲಕ. ಕ್ಷತ್ರಿಯ ಮತ್ತು ಬ್ರಾಹ್ಮಣ ಈ ಎರಡು ವಲಯಗಳಿಂದಲೇ ಹಾಗೆ ಜಾತಿ ಎಂಬುದು ನಿರ್ಮಾಣವಾಯಿತು. ಜಾತಿಯ ಸ್ಥಿರೀಕರಣ ಏರ್ಪಟ್ಟದ್ದು ಮನುವಿನಿಂದಲೇ. ಅಂದರೆ ಇದು ಎಷ್ಟು ದೊಡ್ಡ ಶಕ್ತಿಯುತವಾದಂತಹ ಕಲ್ಪನೆಯಾಗಿದೆ ಅಂದ್ರೆ, ಈ ಹೊತ್ತಿನ ಸಂದರ್ಭದಲ್ಲಿಯೂ ಕೂಡ ಈ ಒಂದು ಕಲ್ಪನೆಗಳ ಹಿನ್ನೆಲೆಯಲ್ಲಿಯೇ ಜಾತಿಯ ಪ್ರಶ್ನೆ ಎನ್ನುವುದು ಬೇರೆಬೇರೆ ರೀತಿಯಲ್ಲಿ ಚರ್ಚಿತವಾಗ್ತಾ ಇದೆ. ಅಂದರೆ ಅಧಿಕಾರದ ಶಕ್ತಿ ಜಾತಿ ಎನ್ನುವ ಕಲ್ಪನೆಯನ್ನು ಸೃಷ್ಟಿಸಿತು.
ಆದರೆ ಈ ಹೊತ್ತು ನಾವು ಮುಂದುವರಿಸಿಕೊಂಡು ಹೋಗ್ತಾ ಇರೋದು ಯಾವುದಾಗಿದೆ ಅಂದ್ರೆ, ಆ ಜಾತಿ ಅನ್ನುವುದರಲ್ಲಿ ಒಂದು ರೀತಿಯಾಗಿರುವಂತಹ ಮಾನವ ಅಸ್ತಿತ್ವ ತನ್ನ ಅರ್ಥವಂತಿಕೆಯನ್ನು ಪಡೆದುಕೊಳ್ಳುತ್ತಾ ಇದೆ ಅನ್ನುವ ಕಾರಣದಿಂದಲೇ ಆಗಿದೆ. ಯಾವ ಮನು ಕ್ಷತ್ರಿಯ ಮತ್ತು ಬ್ರಾಹ್ಮಣ ವರ್ಗದಿಂದ ಜಾತಿ ಎನ್ನುವ ಕಲ್ಪನೆಯನ್ನ ಸ್ಥಿರೀಕರಿಸಿದನೋ, ಅದು ಆ ಹೊತ್ತು ಏನಾಗಿದೆ ಅಂದ್ರೆ, ಮೇಲುವರ್ಗವು ಹಾಕಿಕೊಟ್ಟಿರುವ ಜಾತಿಯ ಸ್ಥಿರೀಕರಣದ ಕಲ್ಪನೆಯನ್ನೇ ನಮ್ಮ ಈ ಹೊತ್ತಿನ ಜಾತಿಯ ಕಲ್ಪನೆಯು ಮುಂದುವರಿಸ್ತಾ ಇದೆ. ಅದನ್ನು ಮುರಿಯುವ ಪ್ರಯತ್ನ ಮಾಡಿದ್ದು ಮಂಟೇಸ್ವಾಮಿ. ಅದು ಕುಲದ ಕಲ್ಪನೆ. ಹಾಗಾಗಿ ಜಾತಿಯ ಕಲ್ಪನೆಗಿಂತ ಕುಲದ ಕಲ್ಪನೆ ಎನ್ನುವುದು ಹೆಚ್ಚು ಸೂಕ್ತ. ಒಕ್ಕಟ್ಟಿನ ಕಲ್ಪನೆ ಎಂಬುದು ಮಂಟೇಸ್ವಾಮಿ ಕಾವ್ಯ. ಆದ್ದರಿಂದ ಮಂಟೇಸ್ವಾಮಿಗಳ ವಲಯಕ್ಕೆ ಬರುವವರು ಒಂದು ರೀತಿಯಲ್ಲಿ ಕುಲದ ಕಲ್ಪನೆಯವರು. ಬೇರೆಬೇರೆ ಜಾತಿ, ವಲಯಗಳು ಯಾಕೆ ಮಂಟೇಸ್ವಾಮಿ ಸಂಪ್ರದಾಯದ ಜೊತೆ ಸಂಬಂಧವನ್ನು ಬೆಸೆದಿವೆ ಎಂಬುದು ಮುಖ್ಯ. ಹಾಗಾಗಿ ವೀರಶೈವ ಧರ್ಮ ಸೃಷ್ಟಿ ಮಾಡಿದ ಜಾತಿಯ ನಿರಾಕರಣೆ ಮತ್ತು ಕುಲದ ಕಲ್ಪನೆಯ ನಿಜವಾದ ಅರ್ಥವಂತಿಕೇನೆ ಮಂಟೇಸ್ವಾಮಿ ಕಾವ್ಯ ಮತ್ತು ಪರಂಪರೆಯಾಗಿದೆ.
ಕಿ ರಂ ನಾಗರಾಜ
(ಬರೆಹರೂಪಕ್ಕೆ ತಂದವರು: ಮಹಾದೇವ ಶಂಕನಪುರ)
(ಇದನ್ನು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಹೊರಡಿಸುತ್ತಿದ್ದ ’ಕನ್ನಡ ಅಧ್ಯಯನ’ -ಮಳೆ ಸಂಚಿಕೆಯಿಂದ ಆಯ್ದುಕೊಳ್ಳಲಾಗಿದೆ.)


