HomeUncategorizedಪೌರತ್ವ ತಿದ್ದುಪಡಿ ಕಾಯ್ದೆ: ಮತ್ತೊಂದು ದೇಶವಿಭಜನೆಯ ಹೊಸ್ತಿಲಿನಲ್ಲಿ? - ಡಿ.ಉಮಾಪತಿ

ಪೌರತ್ವ ತಿದ್ದುಪಡಿ ಕಾಯ್ದೆ: ಮತ್ತೊಂದು ದೇಶವಿಭಜನೆಯ ಹೊಸ್ತಿಲಿನಲ್ಲಿ? – ಡಿ.ಉಮಾಪತಿ

ಮುಸ್ಲಿಮರನ್ನು ಬಹುಸಂಖ್ಯಾತ ಹಿಂದೂ ರಾಷ್ಟ್ರದ ಎರಡನೆಯ ದರ್ಜೆಯ ಪ್ರಜೆಗಳನ್ನಾಗಿಸಿ ಸಮಾನತೆಯನ್ನು ನಿರಾಕರಿಸುವುದು ಪೌರತ್ವ ಕಾಯಿದೆ ತಿದ್ದುಪಡಿ ಮತ್ತು ಎನ್.ಆರ್.ಸಿ.ಯ ಮೂಲ ಉದ್ದೇಶ. ಈ ಕಸರತ್ತುಗಳು ಬೇಡುವ ಮಾನವೀಯ ಬೆಲೆ ಅಪಾರ.

- Advertisement -
- Advertisement -

ಹಾಸಿಗೆ ಹಿಡಿದಿರುವ ಆರ್ಥಿಕ ಸ್ಥಿತಿ,, ಬತ್ತಿ ಹೋಗಿರುವ ಉದ್ಯೋಗಾವಕಾಶಗಳು, ಬರಿದಾಗಿರುವ ತುತ್ತಿನ ಚೀಲಗಳು, ಅಡವಿಗಾಗಿ ಖನಿಜಕ್ಕಾಗಿ ಆದಿವಾಸಿಗಳ ಬದುಕುಗಳಿಗೆ ಬೆಂಕಿ, ದಲಿತರ ಮೇಲೆ ತಗ್ಗದ ದೌರ್ಜನ್ಯ, ಬಿತ್ತಿ ಬೆಳೆಯಲಾಗುತ್ತಿರುವ ಭಯ- ದ್ವೇಷ-ಸೇಡು, ಮಹಿಳೆಯ ಮೇಲೆ ದೌರ್ಜನ್ಯ, ಅತ್ಯಾಚಾರ, ತಳವರ್ಗಗಳು ಮತ್ತು ಬಡಬಗ್ಗರು ಉನ್ನತ ಶಿಕ್ಷಣಕ್ಕಾಗಿ ಹಂಬಲಿಸಿ ನೋಡುವ ಜೆ.ಎನ್.ಯು.ವಿನ ದಮನ, ಕಾನೂನುಬಾಹಿರವಾಗಿ ನಾಗರಿಕರ ಮೇಲೆ ಗೂಢಚರ್ಯೆ- ಫೋನುಗಳ ಕದ್ದಾಲಿಕೆ, ವಾಟ್ಸ್ಯಾಪ್ ಹ್ಯಾಕಿಂಗ್, ನ್ಯಾಯಾಂಗಕ್ಕೆ ಅಗೌರವ, ನ್ಯಾಯಪ್ರಕ್ರಿಯೆಗೆ ಒಳಪಡಿಸದೆ ಆರೋಪಿಗಳ ಹತ್ಯೆ, ಬೈಗುಳದ ಶೂಲಕ್ಕೇರಿಸಲಾಗಿರುವ ಜಾತ್ಯತೀತ ಮೌಲ್ಯ ಸಂವಿಧಾನವನ್ನು ಬಾಯಿಮಾತಿನಲ್ಲಿ ವೈಭವೀಕರಿಸುತ್ತ ಕೃತಿಯಲ್ಲಿ ಕೊಲ್ಲುವ ಕಪಟ, ದಿವಾಳಿಯೆದ್ದಿರುವ ಪ್ರತಿಪಕ್ಷಗಳ ಮೇಲೆ ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆಯ ದಾಳಿಯ ಬ್ಲ್ಯಾಕ್‍ಮೇಲ್ ರಾಜಕಾರಣ, ಆಳುವ ಪಕ್ಷದ ಖಜಾನೆ ಖಾಲಿಯಾಗದಂತೆ ನೋಡಿಕೊಳ್ಳುವ ಚುನಾವಣಾ ಬಾಂಡುಗಳ ಹುನ್ನಾರ…….

ಎಣಿಸುತ್ತಲೇ ಹೋಗಬಹುದಾದ ಆಘಾತಗಳಿಂದ ಹೈರಾಣಾಗಿರುವ ಜನಸಮುದಾಯಗಳನ್ನು ಸದ್ಯದಲ್ಲಿಯೇ ಮತ್ತೊಂದು ಸಂಕಟ ಬೆನ್ನಟ್ಟಿ ಬೇಟೆಯಾಡಲಿದೆ. 1947ರ ದೇಶವಿಭಜನೆಯ ಮಹಾ ದುರಂತದ ಮರುಸೃಷ್ಟಿಯಾಗಲಿದೆ. 1955ರ ಪೌರತ್ವ ಕಾಯಿದೆ ತಿದ್ದುಪಡಿ ವಿಧೇಯಕವನ್ನು ಲೋಕಸಭೆ ಸೋಮವಾರ ರಾತ್ರಿ ಅಂಗೀಕರಿಸಿತು. ವಿಧೇಯಕದ ಪಯಣ ರಾಜ್ಯಸಭೆಯಲ್ಲಿ ಮುಂದುವರೆಯಲಿದೆ. ಅಲ್ಲಿಯೂ ಅದನ್ನು ದಡ ಕಾಣಿಸುವ ವಿಶ್ವಾಸ ಆಳುವ ಪಕ್ಷಕ್ಕಿದೆ.

ಈ ತಿದ್ದುಪಡಿಯನ್ನು ವಿರೋಧಿಸಿ ಈಶಾನ್ಯದ ರಾಜ್ಯಗಳು ಮತ್ತೊಮ್ಮೆ ಹಿಂಸೆಯ ಹಾದಿಯಲ್ಲಿವೆ. ಬಿಜೆಪಿಯ ಮಿತ್ರಪಕ್ಷಗಳು ಮುನಿದಿವೆ. ದೊಡ್ಡ ರಾಜ್ಯ ಅಸ್ಸಾಮ್ ಪುನಃ ಕುದಿಯತೊಡಗಿದೆ. ಅಲ್ಲಿ ಸಿಡಿದೆದ್ದಿರುವ ಮುಸಲ್ಮಾನರಲ್ಲ, ಬದಲಾಗಿ ಬಹುಸಂಖ್ಯಾತರು ಹಿಂದೂಗಳು ಮತ್ತು ಬೇರುಮಟ್ಟದ ಬುಡಕಟ್ಟು ಜನಾಂಗಗಳು.

ಮೂಲ ಕಾಯಿದೆಯ ಪ್ರಕಾರ ಅಕ್ರಮ ವಲಸೆಗಾರರು ಭಾರತೀಯ ಪೌರತ್ವ ಕೋರಿ ಅರ್ಜಿ ಹಾಕುವಂತಿಲ್ಲ. ವೀಸಾ ಅಥವಾ ಇತರೆ ಕಾನೂನುಬದ್ಧ ದಾಖಲೆ ದಸ್ತಾವೇಜುಗಳಿಲ್ಲದೆ ಭಾರತವನ್ನು ಪ್ರವೇಶಿಸಿದವರು, ಸೀಮಿತ ಅವಧಿಯ ವಾಸಕ್ಕೆಂದು ಕಾನೂನುಬದ್ಧವಾಗಿ ಬಂದರೂ ತಮ್ಮ ದೇಶಗಳಿಗೆ ಹಿಂದಿರುಗದೆ ಇಲ್ಲಿಯೇ ಅಕ್ರಮವಾಗಿ ನೆಲೆಸಿದವರನ್ನು ಅಕ್ರಮ ವಲಸಿಗರು ಎಂದು ಪೌರತ್ವ ಕಾಯಿದೆ ಪರಿಗಣಿಸುತ್ತದೆ. ಹತ್ತಾರು ಲಕ್ಷಗಳಷ್ಟು ಹಿಂದೂ ಮತ್ತು ಮುಸ್ಲಿಂ ಬಾಂಗ್ಲಾ ವಲಸಿಗರು ಅಸ್ಸಾಮ್, ಪಶ್ಚಿಮ ಬಂಗಾಳ, ತ್ರಿಪುರ ಮುಂತಾದೆಡೆ ನೆಲೆಸಿರುವುದುಂಟು. ಇವರು ಪೌರತ್ವ ಕೋರಿ ಅರ್ಜಿ ಸಲ್ಲಿಸಲು ಅವಕಾಶ ಇರಲಿಲ್ಲ. ಕಾಯಿದೆ ಪ್ರಕಾರ ಇವರನ್ನು ಬಂಧಿಸಿ ಅವರವರ ದೇಶಗಳಿಗೆ ವಾಪಸು ಕಳಿಸಬೇಕಿತ್ತು. ಈ ಕ್ರಿಯೆಗೆ ಸಂಬಂಧಪಟ್ಟ ಕಾಯಿದೆ ಕಾನೂನುಗಳ ಬಿಗಿ ಅನುಷ್ಠಾನ ಆಗಬೇಕೆಂದು ಅಸ್ಸಾಮ್ ಆಂದೋಲನ ಆಗ್ರಹಿಸಿತ್ತು. ಕೇಂದ್ರ ಸರ್ಕಾರ ಮತ್ತು ಅಸ್ಸಾಂ ಆಂದೋಲನಕಾರರ ನಡುವೆ ಒಪ್ಪಂದ ನಡೆಯಿತು. ಅದರ ಪ್ರಕಾರ 1971ರ ಮಾರ್ಚ್ 24ಕ್ಕಿಂತ ಮೊದಲು ಬಂದವರನ್ನು ಉಳಿಸಿಕೊಂಡು, ಆನಂತರ ಬಂದವರು ಮುಸ್ಲಿಮರಿರಲಿ, ಹಿಂದುಗಳೇ ಆಗಿರಲಿ ಅವರನ್ನು ಗುರುತಿಸಿ ಹೊರಹಾಕಬೇಕಿತ್ತು. ಆದರೆ ಹಿಂದೂ ವಲಸಿಗರಿಗೆ ಇದೀಗ ಬಾಗಿಲು ತೆರೆಯುತ್ತಿರುವುದು ಸರಿಯಲ್ಲ ಎಂಬುದು ಈಶಾನ್ಯದ ಪ್ರತಿಭಟನೆಗೆ ಕಾರಣ.

ಪೌರತ್ವ ಕಾಯಿದೆಗೆ ಇದೀಗ ತರಲಾಗಿರುವ ತಿದ್ದುಪಡಿಯ ಪ್ರಕಾರ ಮುಸಲ್ಮಾನರನ್ನು ಮಾತ್ರವೇ ಗುರುತಿಸಿ ಹೊರಹಾಕಲಾಗುವುದು. ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರೈಸ್ತ ಜನಾಂಗಗಳ ಅಕ್ರಮ ವಲಸಿಗರಿಗೆ ಐದೇ ವರ್ಷಗಳ ಅವಧಿಯಲ್ಲಿ ಪೂರ್ಣ ಪ್ರಮಾಣದ ಭಾರತೀಯ ಪೌರತ್ವ ನೀಡಲಾಗುವುದು. ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯ (ಎನ್.ಆರ್.ಸಿ.) ಪ್ರಕಾರ ಎಲ್ಲ ಅಕ್ರಮ ವಲಸಿಗರನ್ನು ಗುರುತಿಸಲಾಗುವುದು. ಪೌರತ್ವ ತಿದ್ದುಪಡಿ ಕಾಯಿದೆ ಪ್ರಕಾರ ಅಕ್ರಮ ಮುಸ್ಲಿಮ್ ವಲಸಿಗರ ವಿನಾ ಉಳಿದೆಲ್ಲರಿಗೆ ಪೌರತ್ವ ದೊರೆಯುವುದು
ಭಾರತೀಯ ಪೌರತ್ವಕ್ಕೆ ಧರ್ಮವನ್ನೇ ಮುಖ್ಯ ಮಾನದಂಡ ಮಾಡುವ ನಡೆಯಿದು. ಸಂಪೂರ್ಣವಾಗಿ ಸಂವಿಧಾನಬಾಹಿರ. ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಕೂಡದು ಎನ್ನುತ್ತದೆ ಸಂವಿಧಾನದ 14ನೆಯ ಅನುಚ್ಛೇದ. ಈ ತತ್ವ ಸಂವಿಧಾನದ ಮೂಲಭೂತ ರಚನೆ. ಮೂಲಭೂತ ರಚನೆಯನ್ನು ಸಂಸತ್ತು ಕೂಡ ಬದಲಾಯಿಸುವಂತಿಲ್ಲ ಎಂದು ಸುಪ್ರೀಮ್‍ಕೋರ್ಟ್ ಹಲವು ಐತಿಹಾಸಿಕ ತೀರ್ಪುಗಳಲ್ಲಿ ಈಗಾಗಲೆ ಸಾರಿ ಹೇಳಿದೆ.

ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಂತಹ ಮುಸ್ಲಿಮ್ ಬಾಹುಳ್ಯ ದೇಶಗಳಲ್ಲಿ ತೀವ್ರ ಪೀಡನೆಗೆ ಈಡಾಗಿ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತರ ರಕ್ಷಣೆಯೇ ಈ ತಿದ್ದುಪಡಿಯ ಉದ್ದೇಶ ಎಂಬುದು ಸರ್ಕಾರದ ಸಮರ್ಥನೆ. ಆದರೆ ಇವೇ ದೇಶಗಳಲ್ಲಿ ಹಿಂದೂಗಳ ಜೊತೆಗೆ ಅಹ್ಮದೀಯರು, ಶಿಯಾಗಳು ತೀವ್ರ ಪೀಡಿತರು. ಮಯನ್ಮಾರ್‍ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮಾರಣಹೋಮ ನಡೆದಿದೆ. ಶ್ರೀಲಂಕೆಯಲ್ಲಿ ಮುಸಲ್ಮಾನರು ಮತ್ತು ತಮಿಳರು ಪೀಡಿತ ಅಲ್ಪಸಂಖ್ಯಾತರು. ಇವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಇವರ ಕುರಿತು ಪೌರತ್ವ ಕಾಯಿದೆ ತಿದ್ದುಪಡಿ ವಿಧೇಯಕ ಮೌನ ತಳೆದಿದೆ. ಅರ್ಥಾತ್ ಬಹುಮುಖೀ ಜಾತ್ಯತೀತ ಸಂಸ್ಕೃತಿಯನ್ನು ಅಳಿಸಿ ಬಹುಸಂಖ್ಯಾತ ಹಿಂದೂ ರಾಷ್ಟ್ರ ನಿರ್ಮಾಣದತ್ತ ಸಾಗಿರುವ ಕೇಂದ್ರ ಸರ್ಕಾರ ಸಂವಿಧಾನಬಾಹಿರ ತಿದ್ದುಪಡಿಯಿದು.

1947ರಲ್ಲಿ ಧರ್ಮದ ಆಧಾರದ ಮೇಲೆ ದೇಶವಿಭಜನೆಯನ್ನು ಕಾಂಗ್ರೆಸ್ ಒಪ್ಪಿಕೊಳ್ಳದೆ ಹೋಗಿದ್ದರೆ ಇಂದು ಪೌರತ್ವ ಕಾಯಿದೆ ತಿದ್ದುಪಡಿಯ ಅಗತ್ಯ ಇರಲಿಲ್ಲ ಎಂದು ಗೃಹಮಂತ್ರಿ ಅಮಿತ್ ಶಾ ಹೇಳಿದ್ದಾರೆ. ಆದರೆ ಅವರ ಈ ತಿಳಿವಳಿಕೆ ನಿರಾಧಾರ. ಧರ್ಮದ ಆಧಾರದ ವಿಭಜನೆಗೆ ಕಾಂಗ್ರೆಸ್ ಸಮ್ಮತಿ ಇರಲಿಲ್ಲ. ಧರ್ಮದ ಆಧಾರದ ಮೇಲೆ ಅಸ್ತಿತ್ವಕ್ಕೆ ಬಂದ ದೇಶ ಪಾಕಿಸ್ತಾನವೇ ವಿನಾ ಭಾರತ ಅಲ್ಲ. ಮುಸ್ಲಿಂ ಲೀಗ್ ಮತ್ತು ಸಾವರ್ಕರ್ ಅವರಂತಹ ಹಿಂದೂ ಬಲಪಂಥೀಯರು ಎರಡು ದೇಶಗಳ ಮಾತನ್ನು ಆಡಿದ್ದರು. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಭಾರತೀಯ ನಾಯಕರು ಭಾರತವನ್ನು ಜಾತ್ಯತೀತ ರಾಷ್ಟ್ರವಾಗಿ ರೂಪಿಸಿದರು.
ಪರಿವಾರವು ದೇಶ ವಿಭಜನೆಯ ಆರೋಪವನ್ನು ವೃಥಾ ಗಾಂಧೀ-ನೆಹರೂ-ಕಾಂಗ್ರೆಸ್ ಮೇಲೆ ಹೊರಿಸುತ್ತದೆ ಹಿಂದುತ್ವದ ಮೂಲಪುರುಷನೆಂದು ತಾನು ಆರಾಧಿಸುವ ಸಾವರ್ಕರ್ ಅವರು ಜಿನ್ನಾಗಿಂತ ಮೊದಲೇ ಎರಡು ರಾಷ್ಟ್ರದ ಪ್ರತಿಪಾದಕರಾಗಿದ್ದರು ಎಂಬ ಸಂಗತಿ ಕುರಿತು ಜಾಣಕುರುಡು ನಟಿಸುತ್ತದೆ.

ಎರಡು ರಾಷ್ಟ್ರಗಳ (ಹಿಂದುಸ್ತಾನ- ಪಾಕಿಸ್ತಾನ) ಸಿದ್ಧಾಂತದ ಮೂಲ ಪ್ರತಿಪಾದಕರು ವಿನಾಯಕ ದಾಮೋದರ ಸಾವರ್ಕರ್ ಎಂದು ಇತಿಹಾಸ ಗುರುತಿಸಿದೆ. ಜಿನ್ನಾ ಮತ್ತು ಮುಸ್ಲಿಮ್ ಲೀಗ್ ಇಂತಹ ಬೇಡಿಕೆಯನ್ನು ಇಡುವ ಬಹಳ ಮುನ್ನವೇ ಭಾರತದಲ್ಲಿ ಎರಡು ರಾಷ್ಟ್ರಗಳಿವೆ, ಒಂದು ಹಿಂದೂ ರಾಷ್ಟ್ರ ಮತ್ತೊಂದು ಮುಸ್ಲಿಂ ರಾಷ್ಟ್ರ ಎಂದಿದ್ದರು.

ಈ ಮಾತಿಗೆ ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಈ ಉಲ್ಲೇಖವೇ ಸಾಕ್ಷಿ- “ವಿಚಿತ್ರವಾಗಿ ತೋರಬಹುದು, ಸಾವರ್ಕರ್ ಮತ್ತು ಜಿನ್ನಾ ಮಹಾಶಯರು ಒಂದು ದೇಶ ಅಥವಾ ಎರಡು ದೇಶಗಳೆಂಬ ವಿಷಯದಲ್ಲಿ ಒಬ್ಬರನ್ನೊಬ್ಬರು ವಿರೋಧಿಸುವ ಬದಲು ಸಂಪೂರ್ಣ ಸಹಮತ ಹೊಂದಿದ್ದಾರೆ. ಕೇವಲ ಒಪ್ಪಿಕೊಳ್ಳುವುದಷ್ಟೇ ಅಲ್ಲ, ಭಾರತದೊಳಗೆ ಹಿಂದೂ ರಾಷ್ಟ್ರ ಮತ್ತು ಮುಸ್ಲಿಂ ರಾಷ್ಟ್ರಗಳಿವೆ ಎಂದು ವಾದಿಸುತ್ತಾರೆ.’’

ಸಾವರ್ಕರ್ ಪ್ರತಿಪಾದನೆಯನ್ನು ಒಂದು ಕ್ಷಣ ಪಕ್ಕಕ್ಕಿಡುವುದಾದರೂ, ಜಿನ್ನಾ ಜಾತ್ಯತೀತವಾದಿ ಎಂದು ಹೊಗಳಿದ್ದ ಲಾಲ್ ಕೃಷ್ಣ ಅಡ್ವಾಣಿಯವರನ್ನು ಮೂಲೆಗುಂಪು ಮಾಡಿದ ಪರಿವಾರ ಇಂದು ಅದೇ ಜಿನ್ನಾ ಅವರ ಬೆನ್ನು ತಟ್ಟಿದೆ. ಆತನ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಒಪ್ಪಿಕೊಂಡಂತಾಗಿದೆ.

ಮುಸ್ಲಿಮರನ್ನು ಬಹುಸಂಖ್ಯಾತ ಹಿಂದೂ ರಾಷ್ಟ್ರದ ಎರಡನೆಯ ದರ್ಜೆಯ ಪ್ರಜೆಗಳನ್ನಾಗಿಸಿ ಸಮಾನತೆಯನ್ನು ನಿರಾಕರಿಸುವುದು ಮತ್ತು ಸಂವಿಧಾನ ವಿರೋಧಿ ಎಂಬ ಅಂಶಗಳ ಹೊರತಾಗಿಯೂ ಪೌರತ್ವ ಕಾಯಿದೆ ತಿದ್ದುಪಡಿ ಮತ್ತು ಎನ್.ಆರ್.ಸಿ. ಕಸರತ್ತುಗಳು ಅವಾಸ್ತವಿಕ ಮತ್ತು ಅಮಾನವೀಯ. ತೆರಬೇಕಾಗಿ ಬರುವ ಮಾನವೀಯ ಬೆಲೆ ಅಪಾರ.

ವಿದೇಶೀಯರನ್ನು ಹಿಂದೂಗಳು, ಸಿಖ್ಖರು, ಜೈನ, ಬೌದ್ಧ, ಪಾರ್ಸಿ, ಕ್ರೈಸ್ತ ತಪ್ಪಾಗಿ ಗುರುತಿಸಿ ಭಾರತೀಯ ಪೌರತ್ವ ನೀಡುವ ಸಾಧ್ಯತೆಗಳನ್ನು ತಳ್ಳಿ ಹಾಕಲು ಬರುವುದಿಲ್ಲ. ಇಂತಹ ತಪ್ಪು ತಡೆಗಳು ದೇಶದ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸುತ್ತವೆ ಎಂಬ ಆತಂಕ ನಿರಾಧಾರ ಅಲ್ಲ. ಜೊತೆಗೆ ನಿಜವಾಗಿಯೂ ಭಾರತೀಯ ಪೌರರಾಗಿದ್ದವರನ್ನು ಅಕ್ರಮ ವಲಸೆಗಾರರೆಂದು ತಪ್ಪಾಗಿ ಗುರುತಿಸುವ ದುರಂತವೂ ಜರುಗುತ್ತದೆ. ಅಸ್ಸಾಮ್‍ನಲ್ಲಿ ಜರುಗಿರುವ ಭಾರೀ ಸಂಖ್ಯೆಯ ಇಂತಹ ತಪ್ಪು ತಡೆಗಳೇ ಈ ಮಾತಿಗೆ ಜ್ವಲಂತ ಉದಾಹರಣೆ. ಹಿಂದೂಗಳನ್ನು ಹೀಗೆ ತಪ್ಪಾಗಿ ಗುರುತಿಸಲಾಗಿರುವಾಗ ಇನ್ನು ಮುಸಲ್ಮಾನರ ಪಾಡೇನು?

ಅಗತ್ಯ ಕಾಗದಪತ್ರಗಳನ್ನು ಹೊಂದಿಸಲಾಗದ ಪೌರರನ್ನು ಕಷ್ಟಕಾರ್ಪಣ್ಯಗಳು ವರ್ಷಗಟ್ಟಲೆ ಕಾಡಲಿವೆ. ಕುಟುಂಬಗಳು ಛಿದ್ರವಾಗಲಿವೆ. ನಿರ್ಗತಿಕರಾದವರು ಮೇಲ್ಮನವಿ ಹಾಕಲು ಸಾಲಸೋಲ ಮಾಡಬೇಕು, ಇದ್ದಬದ್ದ ಹಣವನ್ನೆಲ್ಲ ಖರ್ಚು ಮಾಡಬೇಕು. ಸಾಲವೂ ಹುಟ್ಟದ ಬಡವರು ಬಹುಸಂಖ್ಯೆಯಲ್ಲಿದ್ದಾರೆ. ಅವರನ್ನು ಅಡವಿ ರೋದನಕ್ಕೆ ಈಡು ಮಾಡುವುದು ಅಮಾನವೀಯ. ಅಂತಹ ನಿರ್ಗತಿಕ ಬದುಕುಗಳು ಬಂಧನ ಕೇಂದ್ರಗಳ ಪಾಲಾಗಲಿವೆ. ನಿಜದಲ್ಲಿ ಪೌರರಾಗಿದ್ದರೂ ಕಡೆಗೆ ದೇಶದಿಂದ ಹೊರ ಹಾಕಿಸಿಕೊಳ್ಳುವುದು ದುರಂತವೇ ಸರಿ. ಇಂತಹ ಬಡವರನೇಕರು ಅಸ್ಸಾಮಿನಲ್ಲಿ ಆತ್ಮಹತ್ಯೆಗಳಿಗೆ ಶರಣಾಗಿದ್ದಾರೆ. ಬಂಗಾಳದಿಂದಲೂ ಆತ್ಮಹತ್ಯೆಗಳು ವರದಿಯಾಗತೊಡಗಿವೆ. ಆಧಾರ್ ಕಾರ್ಡುಗಳ ತಯಾರಿಕೆಯಲ್ಲಿ ಹೆಸರು, ಊರು, ವಯಸ್ಸು ಮುಂತಾದ ವಿವರಗಳಲ್ಲಿ ಶೇ.8.8ರಷ್ಟು ತಪ್ಪು ತಡೆಗಳು ಕಂಡುಬಂದಿವೆ. ಎನ್.ಆರ್.ಸಿ.ಯಲ್ಲಿ ಕೇವಲ ಕಾಗುಣಿತದ ತಪ್ಪುಗಳು ವ್ಯಕ್ತಿಗಳ ಪೌರತ್ವವನ್ನೇ ಬಲಿ ತೆಗೆದುಕೊಳ್ಳಬಲ್ಲವು. ಆಧಾರ್‍ನಲ್ಲಿ ಕಂಡುಬಂದಿರುವ ಶೇ.8.8ರಷ್ಟು ತಪ್ಪು ತಡೆಗಳನ್ನು ಭಾರತದ ಒಟ್ಟು ಜನಸಂಖ್ಯೆಗೆ ಅನ್ವಯಿಸಿ ಲೆಕ್ಕ ಹಾಕಿದರೆ ಫಜೀತಿಗೆ ಬೀಳಲಿರುವ ಜನರ ಸಂಖ್ಯೆ 12 ಕೋಟಿ! ಅರ್ಥಾತ್ ಕರ್ನಾಟಕದಂತಹ ಎರಡು ರಾಜ್ಯಗಳ ಜನಸಂಖ್ಯೆ!

ಅತ್ಯಂತ ದಕ್ಷತೆಯಿಂದ ಈ ಕ್ರಿಯೆ ನಡೆದರೂ ಶೇ.ಒಂದರಷ್ಟು ತಪ್ಪು ತಡೆಗಳನ್ನು ಅನಿವಾರ್ಯ ಎನ್ನಲಾಗಿದೆ. ಈ ಒಂದರಷ್ಟು ತಪ್ಪುಗಳು ಕೂಡ 1.35 ಕೋಟಿ ಜನರನ್ನು ಪರದಾಟಕ್ಕೆ ಹಚ್ಚಲಿದೆ. ಈ ಸಂಖ್ಯೆಯು ದೇಶವಿಭಜನೆಯ ಹೊತ್ತಿನಲ್ಲಿ ಗುಳೆ ಕೀಳಬೇಕಾಗಿ ಬಂದ ಜನಸಂಖ್ಯೆಗೆ ಸಮ ಎನ್ನುತ್ತಾರೆ ಸಂಶೋಧಕಿ ಶೃತಿ ರಾಜಗೋಪಾಲನ್.

ತಿದ್ದುಪಡಿಯಾಗುವ ಪೌರತ್ವ ಕಾಯಿದೆ ಮತ್ತು ಎನ್.ಆರ್.ಸಿ. ಜಾರಿ ಉಂಟುಮಾಡಲಿರುವ ಅಗಾಧ ಮಾನವ ದುರಂತವನ್ನು ಕಲ್ಪಿಸಿಕೊಳ್ಳುವುದೂ ಭಯಾನಕ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇದು ದೇಶದ್ರೋಹದ ಬರವಣಿಗೆ. ಬುದ್ದಿಜೀವಿಗಳ ಹೆಸರಲ್ಲಿ ಇಂತಹ ಬರವಣಿಗೆ ಬರೆದು ಭಾರತದ ಜನಸಾಮಾನ್ಯರ ದಾರಿತಪ್ಪಿಸುತ್ತಿದ್ದಾರೆ ಮತ್ತು ಭಾರತದ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ಸೇರದಂತೆ ಮಾಡುತ್ತಿದ್ದಾರೆ. ಜನಸಂಖ್ಯಾ ನಿಯಂತ್ರಣ, ದರ್ಮಾದಾರಿತ ಕೌಟುಂಭಿಕ ಕಾನೂನು, ಅಲ್ಪಸಂಖ್ಯಾತರ ಮತಗಳನ್ನು ಗುರಿಯಾಗಿಸಿ ಓಲೈಕೆ ಮಾಡುವ ಕೆಲವು ಪಕ್ಷಗಳು,ವ್ಯಕ್ತಿಗಳು,ನಾಯಕರು ಭಾರತೀಯ ವ್ಯವಸ್ಥೆಯನ್ನು ಅವ್ಯಾಹತವಾಗಿ ಹಾಳುಗೆಡುವಲು ನಿರಂತರವಾಗಿ ಶ್ರಮಿಸಿ ಸಪಲರಾಗಿದ್ದಾರೆ. ಇದು ಸದ್ಯದ ಪರಿಸ್ಥಿತಿಯಲ್ಲಿ ಬೆಂಬಲಿಸಲು ಯೋಗ್ಯವಲ್ಲಾ. ಭಾರತದಂತಹ ದೇಶ ಪ್ರಜೆಗಳು ಇಡಿ ಭೂಮಂಡಲದಲ್ಲೀಲ್ಲಾ. ಭಾರತೀಯ ಜೀವನ ಶೈಲಿ ಯಾವುದೇ ದೇಶದಲ್ಲಿಲ್ಲಾ. ಭಾರತದ ಮುಸಲ್ಮಾನರೂ ಸೇರಿದಂತೆ ಎಲ್ಲರೂ ಸಹಿಷ್ಣುತೆ ಹೊಂದಿರುವವರೆ ಅಧಿಕಾರಕ್ಕಾಗಿ ಭಾರತಕ್ಕೆ ವ್ಯವಸ್ಥಿತವಾದ ವ್ಯವಸ್ಥೆ ರೂಪಿಸಿದರೆ ಹೇಗೆ ಎಂಬುದೆ ಒಂದು ಪಕ್ಷದ ಅದ್ಯತೆಯೇಅಲ್ಲಾ. ಶಾಭಾನು ಕೇಸ್ ನ ಇತಿಹಾಸ, ತಲ್ಲಾಕ್, ಬಹುಪತ್ನಿತ್ವ ಇವನ್ನು ವಿರೋದಿಸಿದರೆ ಅಲ್ಪಸಂಖ್ಯಾತ ವಿರೋಧಿ ಪಟ್ಟಕಟ್ಟುವ ಪಕ್ಷಗಳು ನಿರಂತರವಾಗಿ ಸಪಲವಾಗಿವೆ. ಮೈಸೂರಿನ ಬಹುಸಂಖ್ಯಾತ ಹಿಂದುಗಳ ನಡುವೆ ಒಬ್ಬಸೈನಿಕ ಹೈಧರಾಲಿ ಅರ್ದ ಭಾರತದ ಆಢಳಿತಾಧಿಕಾರಿಯಾಗಿದ್ದು ಗೊತ್ತಿದೆಯಲ್ಲವೇ? 1989 ರಲ್ಲಿ ವಿರೇಂದ್ರಪಾಟಿಲ್ ಮುಖ್ಯ ಮಂತ್ರಿಯಾಗಿದ್ದ ಕಾಲದಲ್ಲಿ ನಿರಂತರವಾಗಿ ಕರ್ನಾಟಕದಲ್ಲಿ ಹಿಂದೂ ಮುಸ್ಲೀಂ ಗಲಾಟೆ ನಡೆದದ್ದುಯಾಕೆ, ಯಾರುನಡೆಸಿದ್ದರು. ನಮ್ಮದೇಶಕ್ಕೆ ವ್ಯವಸ್ಥಿತ ಕಾನೂನುಗಳು ಬೇಕೆಹೊರತು ಇಂತಹ ನಾಮಾಕಾವಸ್ಥೆ ಅನಕಂಪವಲ್ಲಾ. ನಾನು ಬ್ರಸ್ಟಾಚಾರ ನಡೆಸಿ ಒಕ್ಕಲಿಗ ಎಂದುಹೇಳಿಕೊಂಡು ತಿರುಗಾಡಿದರೆ ಹೇಗೆ?
    ಕಾಲ ನಿಮಗೆ ಎಲ್ಲಾಪಾಠಗಳನ್ನು ಕಲಿಸಿದೆ. ಅನಭವದ ಆದಾರದಲ್ಲಿ ನಮ್ಮ ಮುಂದಿನ ಜನಾಂಗಕ್ಕೆ ಮಾದರಿಯಾಗಿ ನಮ್ಮ ದೇಶದ ವ್ಯವಸ್ಥಯನ್ನು ರೂಪಿಸಲು ಬೆಂಬಲಿಸಬೇಕಿದೆ…….

    Let who ever rakes any issue for the benefit of one nation, one Constitution, one civil code, unified spirit and patriotism for progress of Indian common man. When birth rate is like bacteria and virus what about food, cloth and shelter. Already Indian partisan taken place in 1947 on the basis of religion and even now there are many burnig issues in the nation. Every day rohingyas from Mianmar, Bangladeshis and Pakistanis entering Indian borders why the Idiots are not talking about unifications.
    One of the CM talks about UNO intervention for CAA, why. OK let Pakistan, Bangladesh, Afghanistan,Nepal, Tibet, Srilanka and Bhutan be unified and common civil code if implemented the issues will be solved. Instead one speak infavour of Pak , Bangla,China etc why?

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...