Homeಅಂಕಣಗಳುಟಿಪ್ಪು ಮತ್ತು ಮೈಸೂರು ಚರಿತ್ರೆ ಕುರಿತ ಎರಡು ಅಮೂಲ್ಯ ಬರಹಗಳು

ಟಿಪ್ಪು ಮತ್ತು ಮೈಸೂರು ಚರಿತ್ರೆ ಕುರಿತ ಎರಡು ಅಮೂಲ್ಯ ಬರಹಗಳು

- Advertisement -
- Advertisement -

ಟಿಪ್ಪು ಎಂದಾಕ್ಷಣ ನಮಗೆ, ಮೈಸೂರು, ಶ್ರೀರಂಗಪಟ್ಟಣ, ಹುಲಿಯನ್ನು ಕೊಲ್ಲಲು ಧೈರ್ಯದಿಂದ ಅದರ ಬಾಯಿಗೆ ಕೈಹಾಕಿ ನಿಂತ ವೀರನ ಚಿತ್ರ ಮತ್ತು ಶೃಂಗೇರಿ ಶಾರದಾ ದೇವಾಲಯಗಳು ನೆನಪಾಗುತ್ತಿದ್ದವು. ಆದರೆ
ಇಂದು ಟಿಪ್ಪು ಎಂದಾಕ್ಷಣ ನೆನಪಾಗುವುದು ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ರಚಿಸಿ
ಹರಿಬಿಡಲ್ಪಟ್ಟ ವಿವಾದಗಳು. ತಮ್ಮ ಹಿತಾಸಕ್ತಿ ಮತ್ತು ಜನಾಂಗ ದ್ವೇಷಗಳಿಂದ ಕೆಲವು ಜನ ಹುಟ್ಟು ಹಾಕಿದ ಸುಳ್ಳುಗಳ ಕಾರಣಕ್ಕಾಗಿ ಈಗ ಟಿಪ್ಪು ಒಬ್ಬ ವಿವಾದಾಸ್ಪದ ರಾಜ. ಒಂದು ತಲೆಮಾರಿನ ಅಂತರದಲ್ಲಿ ಇತಿಹಾಸವನ್ನೇ ಮರೆವಿಗೆ ಸರಿಸಿಬಿಡುವ ಸಂಕಥನಗಳನ್ನು ಹುಟ್ಟು ಹಾಕಿ, ಸುಳ್ಳುಗಳನ್ನೇ ಅಧಿಕೃತ ಇತಿಹಾಸ ಎಂದು ನಂಬಿಸುವ ಹುನ್ನಾರುಗಳು ನಡೆಯುತ್ತಲೇ ಇವೆ. ಪಠ್ಯಪುಸ್ತಕದಲ್ಲಿದ್ದ ಟಿಪ್ಪುವಿನ ಚರಿತ್ರೆಯ
ಕಥೆಯನ್ನು ನಾವೆಲ್ಲ ಹೆಮ್ಮೆಯಿಂದ ಓದುತ್ತಿದ್ದಾಗಲೆ ಆತನನ್ನು ಖಳನನ್ನಾಗಿಸಿದ್ದು ಯಾಕೆ? ಟಿಪ್ಪು ಒಬ್ಬ ಸ್ವಾಭಿಮಾನಿ ರಾಜನಾಗಿ ತನ್ನ ಹೋರಾಟದ ಬದುಕಲ್ಲಿ ಪೀಡಕನಾಗಿ ಬದುಕಿದ್ದನೇ? ಹಾಗಾದರೆ ಇಲ್ಲಿಯವರೆಗೆ ಟಿಪ್ಪುವನ್ನು ಕೊಂಡಾಡುವ ಚರಿತ್ರೆಯ ಪಾಠಗಳು ಸುಳ್ಳೇ? ಅಥವಾ ಟಿಪ್ಪುವನ್ನು ಉದ್ದೇಶಪೂರ್ವಕವಾಗಿ ಕ್ರೂರ ರಾಜನನ್ನಾಗಿ ಬಿಂಬಿಸಲು ಹುಸಿ ಚರಿತ್ರೆಯನ್ನು ರಚಿಸಲಾಗುತ್ತಿದೆಯೇ? ಇಲ್ಲಿಯ ತನಕ ಟಿಪ್ಪುವಿನ ಕುರಿತ ವಿವಾದಗಳು ಯಾಕೆ ಯಾರಿಗೂ ಮುಖ್ಯವಾಗಿರಲಿಲ್ಲ. ಅಥವಾ ಟಿಪ್ಪುವನ್ನು ಒಬ್ಬ ಮತಾಂಧನನ್ನಾಗಿ ಚಿತ್ರಿಸಲು ಹುಟ್ಟುಹಾಕಲ್ಪಟ್ಟ ವಿವಾದಗಳಲ್ಲಿ ಸತ್ಯಗಳಿವೆಯೇ? ಎಂಬ ಪ್ರಶ್ನೆಗಳು ನಮ್ಮೆದುರು ನಿಂತುಕೊಂಡಿವೆ.

ಚರಿತ್ರೆಯಲ್ಲಿನ ಟಿಪ್ಪುವಿನ ರೂಹನ್ನು ವಿಕಾರಗೊಳಿಸಲೆಂದೇ ಕೆಲವು ದುರ್ಬಲರು ಸುಳ್ಳುಗಳನ್ನು ಹುಟ್ಟುಹಾಕಿದ್ದಾರೆ. ಚರಿತ್ರೆಯಲ್ಲಿನ ವೈರುಧ್ಯಗಳು ಆಯಾ ಕಾಲಘಟ್ಟದ ವಾಸ್ತವಗಳು ಎಂಬುದನ್ನು ಮುಚ್ಚಿಡುತ್ತಲೇ ತಮ್ಮ ಸುಳ್ಳುಗಳಿಗೆ ವಿವಾದದ ಸ್ವರೂಪವನ್ನು ಇವರು ನೀಡುತ್ತಿದ್ದಾರೆ. ಟಿಪ್ಪುವನ್ನು ಕುರಿತ ಈ ವಿವಾದಗಳೇ ಅಖೈರು ಸತ್ಯಗಳು ಎಂದು ಈ ದುರ್ಬಲರು ಕಿರುಚುತ್ತಿದ್ದಾರೆ. ಐತಿಹಾಸಿಕವಾಗಿ ಈ ಕಿರುಚಾಟ ದುರ್ಬಲವಾಗಿದ್ದರೂ ಅದರಲ್ಲಿನ ಜನಾಂಗ ದ್ವೇಷಕ್ಕೆ ಹಾಲಾಹಲ ಮೈಗೂಡಿರುವುದರಿಂದ ಹೆಚ್ಚು ಜನ ಇದರ ಸೋಂಕಿಗೆ ಒಳಗಾಗುತ್ತಿದ್ದಾರೆ. ಚರಿತ್ರೆಯಲ್ಲಿನ ವಾಸ್ತವಗಳಿಗೆ ವಿವಾದಗಳ ವಿಷವನ್ನು ಮೈಗೂಡಿಸುವ ಕೆಲಸ ಬಹು ಹಿಂದಿನಿಂದ ನಡೆದುಕೊಂಡು ಬಂದಿದೆ. ಜನಾಂಗ ದ್ವೇಷ, ಜಾತಿ ವೈಷಮ್ಯ ಮತ್ತು ವರ್ಗ ಅಸಹನೆಗಳ ಸಂದರ್ಭದಲ್ಲಿ ಸಾಮೂಹಿಕ ಕಗ್ಗೊಲೆಗಳನ್ನು ನಡೆಸಲು ಚರಿತ್ರೆಗೆ ಇಲ್ಲಿ ನಂಜನ್ನು ಮೈಗೂಡಿಸಲಾಗುತ್ತದೆ. ಜಗತ್ತಿನ ಇತಿಹಾಸದಲ್ಲಿ ಫ್ಯಾಸಿಸ್ಟರು ಜನಾಂಗ ನಾಶ (Genocide) ಮಾಡುವ ಸಂದರ್ಭದಲ್ಲಿ ಚರಿತ್ರೆಗೆ ವಿಷ ಉಣಿಸಿದ ದಾಖಲೆಗಳು ಬೇಕಾದಷ್ಟಿವೆ. ಈಗಲೂ ಟಿಪ್ಪುವಿನ ಪ್ರತಿಮೆಯನ್ನು ಖಿಲಗೊಳಿಸಲು ಪ್ರಯತ್ನಿಸುತ್ತಿರುವ ಫ್ಯಾಸಿಸ್ಟರು ಚರಿತ್ರೆಗೆ ಕಾರ್ಕೋಟಕವನ್ನು ಅಂತರ್ಗತವಾಗಿಸುತ್ತಿದ್ದಾರೆ. ಒಂದು ಕೋಮಿನ ಜನರನ್ನು ಸಮಷ್ಟಿ ಬದುಕಿಂದ ಅನ್ಯವಾಗಿಸುವ ಮತ್ತು ಆ ಮೂಲಕ ಅವರನ್ನು ಚರಿತ್ರೆಯ ಪುಟಗಳಿಂದ ಕಿತ್ತುಹಾಕುವ ಹುನ್ನಾರಗಳು ಈ ಕೃತ್ಯದ ಹಿಂದಿರುವುದು ಸ್ಪಷ್ಟ. ಈ ಕಾರಣಕ್ಕಾಗಿಯೇ ಚರಿತ್ರೆಯಲ್ಲಿನ ಯಾವುದೋ ಒಂದು ಘಟನೆಯನ್ನು ಹೆಕ್ಕಿಕೊಂಡು, ಅದನ್ನು ಜನಾಂಗ ದ್ವೇಷ ಹುಟ್ಟು ಹಾಕುವ ಸಾಧನವನ್ನಾಗಿ ಬಳಸುತ್ತಿದ್ದಾರೆ.

ರಾಜೇಂದ್ರನಾಮೆ ಮರು ಓದು
ಸಂಪಾದನೆ, ಪ್ರಸ್ತಾವನೆ ಮತ್ತು ಟಿಪ್ಪಣಿಗಳು
ವಿಜಯ್ ಪೂಣಚ್ಚ ತಂಬಂಡ
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2019
ಬೆಲೆ: 900/-

ಚರಿತ್ರೆಯು ತಾನು ಹುಟ್ಟಿದ ಸಾಮಾಜಿಕ ಸಂದರ್ಭದ ಸಕಲ ವೈರುಧ್ಯಗಳಿಂದ ನಿರ್ಮಾಣವಾಗಿರುತ್ತದೆ ಮತ್ತು ಅಂದಂದಿನ ಕಾಲಘಟ್ಟದ ಮೌಲ್ಯ ಮತ್ತು ಸಂದರ್ಭಗಳ ಅನಿವಾರ್ಯತೆಗಳನ್ನು ಹಾದುಬಂದಿರುತ್ತದೆ. ಆಯಾ ಕಾಲಘಟ್ಟ ಮತ್ತು ಆ ಕಾಲದ ಜನ ಬದುಕಿನ ವಾಸ್ತವಗಳ ಆಧಾರದಲ್ಲಿ ಚರಿತ್ರೆಯು ರೂಪುಗೊಳ್ಳುತ್ತದೆ. ಈ ಲೋಕೋತ್ತರ ಸಂಗತಿಯನ್ನು ಗೌಣವಾಗಿಸುವ ಫ್ಯಾಸಿಸ್ಟರು ಚರಿತ್ರೆಯಲ್ಲಿನ ವೈರುಧ್ಯಗಳನ್ನು ವರ್ತಮಾನಕ್ಕೆ ಎಳೆದು ತರುತ್ತಾರೆ. ಈ ವಿವಾದ ಮತ್ತು ಭ್ರಮೆಗಳನ್ನು ಮುಖ್ಯವಾಗಿಸಿಕೊಳ್ಳುವ ಜನಾಂಗಗಳು ಸತ್ಯದ ಸುಡು ವಾಸ್ತವಗಳಿಗೆ ಬೆನ್ನು ಹಾಕುತ್ತವೆ. ಪರಂಪರೆ, ಧರ್ಮ, ಜನಾಂಗ ಶ್ರೇಷ್ಠತೆಯ ಅಮಲನ್ನು ಅಂತರ್ಗತವಾಗಿಸಿಕೊಳ್ಳುವ ಜನಾಂಗವು ತನ್ನ ಸುತ್ತಲ ಜಗತ್ತನ್ನು ಅದರ ವೈರುಧ್ಯಗಳ ಮೂಲಕ ಅರ್ಥ ಮಾಡಿಕೊಳ್ಳುವ ಸರಳ ವ್ಯಾಕರಣವನ್ನೇ ಮರೆತುಬಿಡುತ್ತದೆ. ಚರಿತ್ರೆಯನ್ನು ಅದರ ಕಾಲಘಟ್ಟದಲ್ಲಿಟ್ಟು ಅರ್ಥ ಮಾಡಿಕೊಳ್ಳದ ಮತಿಹೀನರು ಟಿಪ್ಪುವಿನ ಅಂದಿನ ರಾಜಕೀಯ ನಡೆಗಳನ್ನು ಇಂದು ಜನಾಂಗ ದ್ವೇಷವನ್ನು ಸಂಚಯಿಸಲು ಬಳಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಟಿಪ್ಪುವಿನ ಚಾರಿತ್ರಿಕ ನಡೆಗಳನ್ನು ನಮ್ಮ ಮುಂದೆ ತೆರೆದಿಡುವ ಎರಡು ಕೃತಿಗಳು ಪ್ರಕಟವಾಗಿವೆ. ಒಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ತಂಬಂಡ ವಿಜಯ ಪೂಣಚ್ಚ ಅವರ ‘ರಾಜೇಂದ್ರನಾಮೆ ಮರು ಓದು’, ಇನ್ನೊಂದು ಪ್ರೊ. ಪಿ. ವಿ. ನಂಜರಾಜ ಅರಸು ಅವರ ‘ಟೀಪೂ ಮಾನ್ಯತೆ ಸಿಗದ ಸುಲ್ತಾನ್’ ಎರಡು ಕೃತಿಗಳು ಹಳೆ ಮೈಸೂರಿನ ಚರಿತ್ರೆಯನ್ನು ಸಾಕ್ಷ್ಯಾಧಾರಗಳ ಮೂಲಕ ನಮ್ಮ ಮುಂದಿಡುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ರಾಜೇಂದ್ರನಾಮೆ ಮರು ಓದು’ ಕೃತಿಯು ಹಾಲೇರಿ ಅರಸು ಮನೆತನದ ಕಥನ. 1797ರಲ್ಲಿ ಶುರುವಾದ ‘ರಾಜೇಂದ್ರನಾಮೆ’ ಕೃತಿ ರಚನೆಯ ಕೆಲಸವನ್ನು ಕೊಡಗಿನ ಅರಸ ವೀರರಾಜನು 1807ರಲ್ಲಿ ಪೂರೈಸುತ್ತಾನೆ. ಕೃತಿಯ ಸಂಪಾದಕರು ಹೇಳುವಂತೆ ಹಲವು ಲೇಖಕರು ಈ ಕೃತಿಯ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ‘ರಾಜೇಂದ್ರನಾಮೆ’ಯು ಕೇವಲ ಹಾಲೇರಿ ಅರಸು ಮನೆತನದ ಏಳುಬೀಳಿನ ಕಥನ ಮಾತ್ರವಲ್ಲ.
‘ರಾಜೇಂದ್ರನಾಮೆ’ಯು ಆಧುನಿಕಪೂರ್ವದ ಮೈಸೂರು, ಕೊಡಗು ಮತ್ತು ಮಲಬಾರ್ ಪ್ರದೇಶದ ಅಂದಿನ ರಾಜಕಾರಣವನ್ನು ಮುಖ್ಯವಾಗಿಟ್ಟುಕೊಂಡು ರೂಪುಗೊಂಡ ಪುಸ್ತಕವಿದು. ಹಾಗಾಗಿ ಈ ಕೃತಿಯಲ್ಲಿ ಮೈಸೂರು ರಾಜ್ಯ, ಮರಾಠರು, ನಿಜಾಮ, ಫ್ರೆಂಚ್, ಪೋರ್ಚುಗೀಸ್ ಮತ್ತು ಬ್ರಿಟಿಷ್ ವಸಾಹತುಶಾಹಿ ರಾಜಕಾರಣದ ವಿವರಗಳು ಯಥೇಚ್ಛವಾಗಿವೆ. ಹಾಲೇರಿ ಮತ್ತು ಟಿಪ್ಪುವಿನ ಶತ್ರುತ್ವ ಚಾರಿತ್ರಿಕವಾದದ್ದು. ಕೊಡಗು ಮತ್ತು ಮಲಬಾರ್ ಯುದ್ಧಗಳ ಕಾರಣಕ್ಕಾಗಿ ಪದೇಪದೇ ಮುಖಾಮುಖಿಯಾಗುತ್ತಿದ್ದ ಈ ಇಬ್ಬರಿಗೂ ಅಜನ್ಮ ವೈರವೂ ಇತ್ತು. ಆದರೆ ಟಿಪ್ಪುವಿನ ಮರಣಾನಂತರ ವೀರರಾಜನು ವಸಾಹತು ಆಡಳಿತ ಮತ್ತು ಮೈಸೂರು ಒಡೆಯರ ಗಡಿ ತಕರಾರನ್ನು ಎದುರಿಸುತ್ತಾನೆ. ನಂತರ ಒಡೆಯರ್ ಮತ್ತು ಕಂಪನಿ ಆಡಳಿತದ ಕಾರಣಕ್ಕಾಗಿ ಇಡೀ ಹಾಲೇರಿ ವಂಶ ಗಡಿಪಾರಾಗುತ್ತದೆ. ಆಗ ವೀರರಾಜನು ಟಿಪ್ಪುವಿನ ಘನ ವ್ಯಕ್ತಿತ್ವ, ಸಹಿಷ್ಣತೆ ಮತ್ತು ರಾಜಕೀಯ ಬದ್ಧತೆಯನ್ನು ಮೆಚ್ಚಿಕೊಂಡಿರುವುದು ರಾಜೇಂದ್ರನಾಮೆಯಲ್ಲಿ ಉಲ್ಲೇಖವಾಗಿದೆ. ಇದಲ್ಲದೆ ಹಾಲೇರಿ ಅರಸರ ಬ್ರಾಹ್ಮಣ ದ್ವೇಷ ಮತ್ತು ಟಿಪ್ಪು ಬ್ರಾಹ್ಮಣ ನೌಕರರಿಗೆ ತನ್ನ ಆಸ್ಥಾನದಲ್ಲಿ ನೀಡುತ್ತಿದ್ದ ಪ್ರಾಶಸ್ತ್ಯವನ್ನು ಈ ಕೃತಿ ಉಲ್ಲೇಖಿಸುತ್ತದೆ.

ಇದಲ್ಲದೆ ಟಿಪ್ಪುವು ರಾಜನಾಗಿದ್ದ ಸಂದರ್ಭದಲ್ಲಿ ನಡೆದ ಯುದ್ಧಗಳಲ್ಲಿ ಕೊಡಗಿನ ಜನರನ್ನು ಕೊಂದು ಹಾಕಿದ ವಿವರಗಳು ರಾಜೇಂದ್ರನಾಮೆಯಲ್ಲಿ ಉಲ್ಲೇಖವಾಗಿಲ್ಲ. ಬದಲಿಗೆ ಕೊಡಗಿನ ವೀರ ಯೋಧರು ಟಿಪ್ಪುವಿನ 300 ಜನ ಸೈನಿಕರನ್ನು ಕೊಂದು ಆತನ ಸ್ಥಳೀಯ ಕೋಟೆಗೆ ಬೆಂಕಿ ಹಚ್ಚಿ ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದ ವಿವರಗಳಿವೆ. ಜೊತೆಗೆ ಹಾಲೇರಿ ಅರಸರ ಕಡು ವೈರಿಗಳೇ ಆಗಿದ್ದ ಮಲೆಯಾಳಿಯ ಚೆರಿಕಲ್ ಅರಸು ಮನೆತನದ ಬಗ್ಗೆ ವಿವರಗಳಿವೆ. ತನ್ನ ಜೊತೆ ಹಲವು ಯುದ್ಧಗಳಲ್ಲಿ ಮುಖಾಮುಖಿಯಾದ ಟಿಪ್ಪುವಿನ ಕುರಿತ ವೀರರಾಜೇಂದ್ರನ ದ್ವೇಷ ಮತ್ತು ವೀರರಾಜೇಂದ್ರ ಸ್ವತಃ ತಾನು ಬ್ರಾಹ್ಮಣರಿಗೆ ನೀಡಿದ ಕಿರುಕುಳಗಳೂ ಆಯಚಿತವಾಗಿ ಈ ಕೃತಿಯಲ್ಲಿ ದಾಖಲಾಗಿವೆ. ಕೃತಿಯನ್ನು ಸಂಪಾದನೆ ಮಾಡಿರುವ ವಿಜಯ್ ತಂಬಂಡ ತಮ್ಮ ಪ್ರಸ್ತಾವನೆಯ ಕೊನೆಯಲ್ಲಿ ಹೀಗೆ ಬರೆದಿದ್ದಾರೆ; ‘ರಾಜೇಂದ್ರನಾಮೆಯ ಬಹು ದೊಡ್ಡ ಖಳನಾಯಕ ಟಿಪ್ಪುಸುಲ್ತಾನನೇ ಆಗಿದ್ದರೂ ಟಿಪ್ಪುವನ್ನು ಹೊರತುಪಡಿಸಿ ರಾಜೇಂದ್ರನಾಮೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಆಗದಂತಹ ಪರಿಸ್ಥಿತಿಯನ್ನು ರಾಜೇಂದ್ರನಾಮೆಯನ್ನು ಬರೆಯಿಸಿದ ವೀರರಾಜೇಂದ್ರ ಒಡೆಯನು ಸೃಷ್ಟಿಸಿದ್ದಾನೆ. ಒಮ್ಮೊಮ್ಮೆ ಇದು ರಾಜೇಂದ್ರನಾಮೆಯೇ ಅಥವಾ ಟಿಪ್ಪುನಾಮೆಯೇ ಎನ್ನುವಷ್ಟರ ಮಟ್ಟಿಗೆ ಟಿಪ್ಪು ಕೇಂದ್ರಿತ ರಾಜೇಂದ್ರನಾಮೆಯನ್ನು ನೋಡಬಹುದು. ಟಿಪ್ಪುಸುಲ್ತಾನ ಸತ್ತ 10 ವರ್ಷಗಳಲ್ಲಿಯೇ ಮರಣ ಹೊಂದಿದ ವೀರರಾಜನು ಆ 10 ವರ್ಷಗಳ ಅವಧಿ ಹೊರತುಪಡಿಸಿದರೆ ತನ್ನ ಯೌವನದಿಂದ ತನ್ನ ಮಧ್ಯವಯಸ್ಸಿನವರೆಗೂ ಟಿಪ್ಪುವಿನ ಜೊತೆ ಸೆಣಸಾಡುತ್ತಾ, ಯುದ್ಧ ಮಾಡುತ್ತಾ ತನ್ನ ರಾಜಕಾರಣ ಹಾಗೂ ಜೀವನವನ್ನು ಮಾಡುತ್ತಾನೆ. ಹೀಗಾಗಿ ಅವನಿಗೆ ಟಿಪ್ಪುವು ಸದಾ ಕಾಡುವ ಭೂತವಾಗಿದ್ದನೇನೋ ಎಂಬಂತೆ ರಾಜೇಂದ್ರನಾಮೆ ರಚನೆಗೊಂಡಿದೆ. ಕರ್ನಾಟಕದ ಮಧ್ಯಕಾಲೀನೋತ್ತರ ಚರಿತ್ರೆಯ ಹಲವು ಮಜಲುಗಳನ್ನು ಅರ್ಥೈಸಲು, ಕರ್ನಾಟಕ ಚರಿತ್ರೆಯ ಕೆಲವು ರಹಸ್ಯ ಪುಟಗಳನ್ನು ವಿಮರ್ಶಿಸಲು ರಾಜೇಂದ್ರನಾಮೆಯ ಮರು ಓದು ಒಂದು ಸಣ್ಣ ಹೆಜ್ಜೆಯಾಗಿದೆ’ ಎನ್ನುತ್ತಾರೆ.

ಟೀಪೂ ಮಾನ್ಯತೆ ಸಿಗದ ಸುಲ್ತಾನ; ಅಂದು ಇಂದು
ಪ್ರೊ. ಪಿ. ವಿ. ನಂಜರಾಜ ಅರಸ್
ಅಭಿರುಚಿ ಪ್ರಕಾಶನ, ಮೈಸೂರು, 2022
ಬೆಲೆ: 600/-

ಪ್ರೊ. ಪಿ. ವಿ. ನಂಜರಾಜ ಅರಸು ಅವರ ‘ಟೀಪೂ ಮಾನ್ಯತೆ ಸಿಗದ ಸುಲ್ತಾನ್’ ಕೃತಿಯು ನಾನು ಓದಿದ ಎರಡನೇ ಪುಸ್ತಕ. ಆಕರ ಸಂಗ್ರಹ, ವಿಶ್ಲೇಷಣೆ ಮತ್ತು ಚರಿತ್ರೆಯ ತರ್ಕಬದ್ಧ ಮಂಡನೆಯ ಕಾರಣಕ್ಕಾಗಿ ನನಗೆ ಇದು ಮುಖ್ಯವಾದ ಕೃತಿ ಎನ್ನಿಸಿತು. ತಮ್ಮ ಸುದೀರ್ಘ ಕಾಲದ ಅಧ್ಯಾಪನ ಮತ್ತು ಅಧ್ಯಯನಗಳ ಭಾಗವಾಗಿ ನಂಜರಾಜ ಅರಸುಈ ಕೃತಿ ರಚನೆ ಮಾಡಿದ್ದಾರೆ. ಪುಸ್ತಕ ತೆರೆಯುತ್ತಿದ್ದಂತೆ ಲಲಿತ ಪ್ರಬಂಧದ ಲಹರಿಯ ಬರವಣಿಗೆಯು ನಮ್ಮನ್ನು ಆರಂಭದಲ್ಲಿಯೇ ಗಮನ ಸೆಳೆಯುತ್ತದೆ. ಚರಿತ್ರೆಯನ್ನು ಗಂಭೀರವಾಗಿ ಓದಬೇಕು ಎಂಬ ಸಾಂಪ್ರದಾಯಿಕ ಕ್ರಮವನ್ನು ಅರಸುಅವರು ಮುರಿಯುವಂತೆ ಲಘು ದಾಟಿಯಲ್ಲಿ ಗಂಭೀರ ಸಂಗತಿಗಳನ್ನು ಮುಂದಿಡುತ್ತಾ ಹೋಗುತ್ತಾರೆ. ‘ಯಾಕೆ ಈ ಸಂಶೋಧನೆಯನ್ನು ತಾವು ಕೈಗೊಳ್ಳಬೇಕಾಯಿತು’ ಎಂಬ ಘಟನೆಯನ್ನು ಹೃದ್ಯವಾಗಿ ಚಿತ್ರಿಸುವ ಅರಸುಟಿಪ್ಪುವಿನ ವ್ಯಕ್ತಿತ್ವ ಮತ್ತು ಅವನ ಆಳ್ವಿಕೆಯ ಅವಧಿಯ ರಾಜಕೀಯ-ಆರ್ಥಿಕ ವೈರುಧ್ಯಗಳನ್ನು ವಸ್ತುನಿಷ್ಟವಾಗಿ ವಿಶ್ಲೇಷಣೆ ಮಾಡಿದ್ದಾರೆ. ಕೃತಿಯ ಆರಂಭದಲ್ಲಿ ಅರಸುಅವರು, ‘ಆಧುನಿಕ ಭಾರತದ ಇತಿಹಾಸದಲ್ಲಿ ಟೀಪೂ ಓರ್ವ ರೋಮಾಂಚಕ ಹಾಗೂ ವಿವಾದಾತ್ಮಕ ವ್ಯಕ್ತಿ, ಉಹುಂ, ವ್ಯಕ್ತಿಯಲ್ಲ, ವಿವಾದಾತ್ಮಕ ಸುಲ್ತಾನ ಅನ್ನೋದರಲ್ಲಿ ಏನೇನೂ ಸಂಶಯವಿಲ್ಲ. ಬ್ರಿಟಿಷರು ಪರಕೀಯರು, ಇಂಡಿಯಾದಲ್ಲಿ ಖಾಯಂ ಆಗಿ ಠಿಕಾಣಿ ಹೂಡುವ ಅಧಿಕಾರ ಅವರಿಗಿಲ್ಲ. ಅವರನ್ನ ಇಲ್ಲಿಂದ ಸಮುದ್ರದಾಚೆಗೆ ಓಡಿಸಬೇಕು ಅಂತ ಗಟ್ಟಿಯಾಗಿ ದನಿ ಎತ್ತಿದ ಟೀಪೂ ಮೈಸೂರು ರಾಜ್ಯದ ಆರ್ಥಿಕಾಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದ. ಸಾಮಾಜಿಕ ಕಳಂಕದಂತಿದ್ದ ಪಿಡುಗುಗಳನ್ನು ಅಳಿಸಿಹಾಕಲೆತ್ನಿಸಿದ ಸುಧಾರಕನೂ ಆಗಿದ್ದ. ಬಡತನದ ನಿರ್ಮೂಲನೆಗೆ ಸಾಕಷ ಶ್ರಮಿಸಿದ್ದ. ಔದ್ಯಮಿಕ ಅಭಿವೃದ್ಧಿಗೆ ಆದ್ಯತೆ ನೀಡಿದ್ದ. ಉತ್ತಮ ಆಡಳಿತಗಾರನಾಗಿದ್ದ. ವಾಸ್ತವವಾಗಿ 18ನೇ ಶತಮಾನದ ಉತ್ತರಾರ್ಧದಲ್ಲಿ ಸಾಕಷ್ಟು ಗಮನಾರ್ಹ ಘಟನಾವಳಿಗಳು ಇಂಡಿಯಾದ ಐತಿಹಾಸಿಕ ರೂಪುರೇಷೆಗೆ ಹೊಸ ತಿರುವನ್ನು ನೀಡಿದವು. ಇಂಡಿಯಾ ಉಪಖಂಡದಲ್ಲಿ ವಿಶೇಷವಾಗಿ ವಿವಿಧ ಪ್ರಮುಖ ರಾಜ್ಯಗಳಲ್ಲಿ ಪ್ರಸ್ತುತವಿದ್ದ ರಾಜಕೀಯ ಅಸ್ಥಿರತೆ ಈ ಹೊಸ ತಿರುವಿಗೆ ಪ್ರಮುಖ ಕಾರಣವಾಗಿತ್ತು’ (ಪು: 47) ಎನ್ನುತ್ತಾರೆ.

ಒಬ್ಬ ಊಳಿಗಮಾನ್ಯ ರಾಜನ ಆಳ್ವಿಕೆಯನ್ನು ಹೇಗೆ ವಿಶ್ಲೇಷಿಸಬೇಕು ಎಂಬ ಹೊಸ ದೃಷ್ಟಿಕೋನವನ್ನು ಈ ಕೃತಿ ನಮ್ಮ ಮುಂದಿಡುತ್ತದೆ. ಈ ಮೂಲಕ ನಂಜರಾಜ ಅರಸುಅವರು ಹೊಸ ಚರಿತ್ರರಚನಾ ಮಾದರಿಯನ್ನು ನಮ್ಮ ಮುಂದಿಡುತ್ತಾರೆ. ವಸಾಹತು ಆಡಳಿತದ ಅವಧಿಯಲ್ಲಿದ್ದ ದಕ್ಷಿಣ ಭಾರತದ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಮತ್ತು ದಕ್ಷಿಣದ ಮರಾಠ ಪೇಶ್ವೆ, ನಿಜಾಮ ಮತ್ತು ಮಲಬಾರ್‌ನ ಪ್ರಭಾವಿ ಅರಸು ಮನೆತನಗಳ ಚಾರಿತ್ರಿಕ ನಡೆಗಳನ್ನು ಈ ಕೃತಿಯು ಪೂರ್ವಾಗ್ರಹಗಳಿಗೆ ಆಸ್ಪದವಿಲ್ಲದೆ ನಮ್ಮ ಮುಂದಿಡುತ್ತದೆ. ಈ ಪುಸ್ತಕದಲ್ಲಿ ಟಿಪ್ಪುವಿನ ಕುರಿತು ಆರಾಧನೆ ಇಲ್ಲ. ಬದಲಿಗೆ ಟಿಪ್ಪುವನ್ನು ಅವನ ಕಾಲದ ರಾಜಕೀಯ ಸಂದಿಗ್ಧಗಳ ಮೂಲಕ ಅರ್ಥೈಸುವ ಪ್ರಯತ್ನವನ್ನು ಮಾಡಲಾಗಿದೆ. ಪ್ರಾಯಶಃ ಟಿಪ್ಪುವನ್ನಷ್ಟೇ ಅಲ್ಲದೆ ವಸಾಹುತು ಕಾಲದ ದೇಶಿ ಅರಸು ಮನೆತನಗಳು ಹೇಗೆ ತಲ್ಲಣಕ್ಕೀಡಾದವು ಎಂಬುದನ್ನು ವಿಶ್ಲೇಷಿಸುವ ಕೃತಿಗಳು ಬಹಳ ಕಡಿಮೆ. ಆದರೆ ಪ್ರಸ್ತುತ ಕೃತಿಯು ಈ ಕೊರತೆಯನ್ನು ಕಡಿಮೆ ಮಾಡಿದೆ.

ಮೇಲ್ಕಾಣಿಸಿದ ಎರಡು ಕೃತಿಗಳು ಸ್ಥಳೀಯ ಚರಿತ್ರೆಯನ್ನು ರಚಿಸಿಕೊಡುವ ಕಾರಣಕ್ಕಾಗಿ ಮಾತ್ರ ಮುಖ್ಯ ಎಂದು ನಾನು ಭಾವಿಸುವುದಿಲ್ಲ. ಚರಿತ್ರೆ ರಚನೆಯನ್ನು ಮಾಡುವ ಸಮತೋಲಿತ ದೃಷ್ಟಿಕೋನ ಚರಿತ್ರೆಕಾರನಿಗೆ ಏಕೆ ಬೇಕು? ಎಂಬ ಪ್ರಶ್ನೆಯನ್ನು ಮುಂದಿಡುತ್ತವೆ. ಜನಾಂಗೀಯ ಹಿತಾಸಕ್ತಿ ಮತ್ತು ಕೋಮು ದ್ವೇಷಗಳನ್ನು ಸಂಚಯಿಸುವುದಕ್ಕಾಗಿ ಚರಿತ್ರೆಯನ್ನು ಬಳಸಿಕೊಳ್ಳುವ ರಾಜಕಾರಣಕ್ಕೆ ಈ ಎರಡೂ ಕೃತಿಗಳಲ್ಲಿ ಪಾಠಗಳಿವೆ. ಈ ಕಾರಣಕ್ಕಾಗಿ ಕೃತಿಕಾರರಾದ ತಂಬಂಡ ವಿಜಯ್ ಪೂಣಚ್ಚ ಮತ್ತು ಪಿ. ವಿ. ನಂಜರಾಜ ಅರಸುಅವರನ್ನು ಅಭಿನಂದಿಸುವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ವಿಶೇಷ ವರದಿ; ಬಲಪಂಥೀಯ ರಾಜಕಾರಣದಲ್ಲಿ ಪಠ್ಯ ಪರಿಷ್ಕರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

6 COMMENTS

  1. ಇದಕ್ಕೆ ಸೇರಿಸಬಹುದಾದ ಮತ್ತೊಂದು ಆಯಾಮ – ಸಧ್ಯಕ್ಕೆ ಬಲಪಂಥೀಯರು ನಮ್ಮ ಚರಿತ್ರೆ ಬ್ರಿಟಿಷರು ದಾಖಲು ಮಾಡಿದ ಚರಿತ್ರೆಯಾದ್ದರಿಂದ ಪೂರ್ವಗ್ರಹ ಪೀಡಿತ ಎಂದೂ ಅವರಿಗೆ ಭಾರತೀಯರ ಬಗ್ಗೆ ಅಸಡ್ಡೆ ಇತ್ತು ಹಾಗಾಗಿ ಸರಿಯಾಗಿ ದಾಖಲಿಸಲಿಲ್ಲ ಎಂದೂ ದೂರುತ್ತಾರೆ. ಆದರೆ ಅದು ಸರಿಯಾದ ಗ್ರಹಿಕೆ ಅಲ್ಲ. ಪ್ರಾರಂಭದಲ್ಲಿ ಬ್ರಿಟಿಷರಿಗೆ ಭಾರತದ ಬಗ್ಗೆ ಅಂತಹ ಧೋರಣೆ ಇದ್ದಿತ್ತಾದರೂ ಟೀಪು ಮತ್ತು ಕೊಡಗಿನ ಅರಸರ ಕಾಲದ ಹೊತ್ತಿಗೆ ಪರಿಸ್ಥಿತಿ ಸಾಕಷ್ಟು ಬದಲಾಗಿತ್ತು. ಅಂದಿನ ಕಾಲದ ಸುದೀರ್ಘ ಮೂಲ ಪತ್ರವ್ಯವಹಾರಗಳನ್ನು ಸೆಂಟ್ ಫೋರ್ಟ್ ಜಾರ್ಜ್ ನಲ್ಲಿ ಸಂಗ್ರಹಿಸಿಡಲಾಗಿದೆ. ಜೊತೆಗೆ ಬ್ರಿಟಿಷ್ ಆರ್ಕೈವ್ಸ್ ನಲ್ಲಿಯೂ ಇವೆ. ಅವುಗಳನ್ನು ಓದಿದರೆ ಅಂದಿನ ರಾಜಕಾರಣದ ವಸ್ತು ಸ್ಥಿತಿ ತಿಳಿಯುತ್ತದೆ. ಅವು ನಮ್ಮವರೇ ಬರೆದ ಪತ್ರಗಳು. ಒಂದು ಸಣ್ಣ ಉದಾಹರಣೆ ಕೊಡಬೇಕೆಂದರೆ ಮಹಾರಾಣಿ ಲಕ್ಷ್ಮಮ್ಮಣ್ಣಿಯವರು ಬ್ರಿಟಿಷರಿಗೆ ನೆರವು ಕೋರಿ ಬರೆದ ಪತ್ರಗಳು, ಮಾಡಿಕೊಂಡ ಒಪ್ಪಂದಗಳು ಹೈದರನನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕಿಂತ ಘೋರ ಪರಿಣಾಮ ಉಂಟುಮಾಡುವಾತವು. ಪುಣ್ಯಕ್ಕೆ ಬ್ರಿಟಿಷರು ಅವರ ಕೋರಿಕೆಯನ್ನು ನಿರಾಕರಿಸಿದರು. ಅದರಲ್ಲೂ ವಿಶೇಷವಾಗಿ ಮೈಸೂರು ಮತ್ತು ಕೊಡಗು ರಾಜರುಗಳು ಬರೆದ ಪತ್ರಗಳನ್ನು ಓದಿ ಅಂದಿನ ಪರಿಸ್ಥಿತಿಯನ್ನು ಜೀರ್ಣಿಸಿಕೊಳ್ಳಲು ವಿಸ್ತಾರ ನೋಟ ಬೇಕು. ಇವತ್ತಿದ್ದಂತೆಯೇ ಅವತ್ತೂ ಕುಟಿಲ ಕಾರಸ್ಥಾನಗಳು, ದಂಗೆ, ಕೊಲೆ, ಪಿತೂರಿ, ಎಲ್ಲವೂ ಇತ್ತು. ಒಡೆಯರ್ ರಾಜರ ಕೊಲೆ ಮಾಡಿಸಿದ್ದು ದಳವಾಯಿಗಳೇ. ಟೀಪುವಿನ ಸಂಕೀರ್ಣ ವ್ಯಕ್ತಿತ್ವ ಅಷ್ಟು ಸುಲಭಕ್ಕೆ ಅರ್ಥ ಮಾಡಿಕೊಳ್ಳುವಂಥದ್ದಲ್ಲ.

  2. ಒಳ್ಳೆಯ ಪ್ರಯತ್ನ. Thank you.ಪುಸ್ತಕ ವಿಮರ್ಶೆಗಿಂತ ಮೀರಿ ಸ್ವಂತ ಅಭಿಪ್ರಾಯ ಹೇರಬಾರದು.

  3. ಜಾತಿ, ಮತಗಳೆಂಬ ದರಿದ್ರಗಳನ್ನು ನಂಬಿ ಕೂತಿರುವ ಪಿಶಾಚಿಗಳ ಗಣಗಳಲ್ಲಿ ಮರೆತು ಹೊದ ಸುಲ್ತಾನ್ 🙏
    ದ. ಭಾರತದ ಪ್ರಬಲ ವೈರಿಯೆಂದು ಗುರುತಿಸಿದ ಬ್ರಿಟಿಷ್ ರಿಗೆ ಆತನ ಮೇಲೆ ಎಲ್ಲಾ ರೀತಿಯ ಅಪವಾದಗಳು, ಅಪಪ್ರಚಾರ ಗಳನ್ನು ಹರಿಬಿಟ್ಟು ಸಮಾಜದಲ್ಲಿ ಅಶಾಂತಿ ಎಬ್ಬಿಸಿ ಹೋದವರಿಗೆ ಜೈ… ಎನ್ನುವ ಬದಲು ನೈಜ್ಯ ಇತಿಹಾಸದ ಜ್ಞಾನ ಗಳಿಸಿಕೊಂಡರೆ ಯಾವುದು ತಪ್ಪು ಯಾವುದು ಸರಿ ಎಂಬುದು ತಿಳಿಯುತ್ತದೆ.

  4. ಇಂತ ಮತಾಂದನನ್ನ ,ನರರಾಕ್ಷಸನನ್ನ ಹೊಗೊಳೋಕೆ ಕಮ್ಯೂನಿಸ್ಟ್ ನಗರ ನಕ್ಸಲರು ಬಿಟ್ಟರೆ ಯಾರೂ ಮಾಡಲಾರರು ,ಯಾಕೆಂದರೆ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಇವರು ಬಿಟ್ಟರೆ ಯಾರೂ ಮಾಡಲು ಅಸಾಧ್ಯ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...