ಲೋಕಸಭೆಯಲ್ಲಿ ಇಂದು(ಡಿ.13)ಚೊಚ್ಚಲ ಭಾಷಣ ಮಾಡಿದ ವಯನಾಡ್ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅದಾನಿ ವಿಷಯವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ದ ಗುಡುಗಿದರು.
ಕೇಂದ್ರದ ಬಿಜೆಪಿ ಸರ್ಕಾರವು ಭಾರತೀಯ ಜನತೆಯ ವೆಚ್ಚದಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ಕಡೆಗೆ ಅನಗತ್ಯ ಒಲವು ತೋರುತ್ತಿದೆ ಎಂದು ಆರೋಪಿಸಿದರು. 142 ಕೋಟಿ ನಾಗರಿಕರ ಕಲ್ಯಾಣಕ್ಕಿಂತ ಒಬ್ಬ ವ್ಯಕ್ತಿಯ ಹಿತಾಸಕ್ತಿಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
“ದೇಶದ ಸಂಪತ್ತು, ವಿಮಾನ ನಿಲ್ದಾಣಗಳು ಮತ್ತು ಭೂಮಿಯನ್ನು ಒಬ್ಬ ವ್ಯಕ್ತಿಗೆ ಅನುಕೂಲವಾಗುವಂತೆ ಹಸ್ತಾಂತರಿಸಲಾಗುತ್ತಿದೆ. ಬಡ ಭಾರತೀಯರು ಸಂಕಷ್ಟದಲ್ಲಿದ್ದಾರೆ. ಸಾರ್ವಜನಿಕ ಸಂಪನ್ಮೂಲಗಳ ಈ ಘೋರ ದುರುಪಯೋಗ ಒಪ್ಪುವಂತದಲ್ಲ ಎಂದು ಪ್ರಿಯಾಂಕಾ ಹೇಳಿದರು.
ಎನ್‌ಡಿಎ ಸರ್ಕಾರವು ಭಿನ್ನಾಭಿಪ್ರಾಯವನ್ನು ಮೌನಗೊಳಿಸಲು ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಇದೇ ವೇಳೆ ಪ್ರಿಯಾಂಕಾ ಗಾಂಧಿ ಆರೋಪಿಸಿದರು. ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕಲು ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ, ಈ ಅಧಿಕಾರ ದುರ್ಬಳಕೆ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ” ಎಂದರು.
ಎನ್‌ಡಿಎ ಸರ್ಕಾರ ತನ್ನ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ನಂತಹ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂಬ ಪ್ರತಿಪಕ್ಷ ನಾಯಕರ ಆರೋಪವನ್ನು ಪ್ರಿಯಾಂಕಾ ಪುನರುಚ್ಚರಿಸಿದರು.
ಲೋಕಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಪ್ರಿಯಾಂಕಾ ಅವರು, ಸತ್ಯ ಮತ್ತು ಅಹಿಂಸೆಯ ತತ್ವಗಳಲ್ಲಿ ಬೇರೂರಿರುವ ಭಾರತದ ಸ್ವಾತಂತ್ರ್ಯ ಚಳವಳಿಯ ವಿಶಿಷ್ಟ ಸ್ವರೂಪವನ್ನು ಒತ್ತಿ ಹೇಳಿದರು.
ಭಾರದ ಸಂವಿಧಾನವನ್ನು ‘ಪರಿವರ್ತಕ ಶಕ್ತಿ’ ಎಂದು ಶ್ಲಾಘಿಸಿದ ಪ್ರಿಯಾಂಕಾ, ಸಂವಿಧಾನ ನಾಗರಿಕರಿಗೆ ತಮ್ಮ ಹಕ್ಕು ಮತ್ತು ನ್ಯಾಯವನ್ನು ಪಡೆಯಲು ಅವಕಾಶ ನೀಡಿದೆ ಎಂದರು.
“ಸಂವಿಧಾನವು ಜನರಿಗೆ ತಮ್ಮ ಹಕ್ಕು ಮತ್ತು ನ್ಯಾಯವನ್ನು ಕೇಳಿ ಪಡೆಯುವ ಅವಕಾಶ ನೀಡಿದೆ. ಅಗತ್ಯವಿದ್ದಾಗ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಸಾಮರ್ಥ್ಯವನ್ನು ಕೊಟ್ಟಿದೆ ಎಂದು ಕೊಂಡಾಡಿದರು.ಪ್ರಜಾಪ್ರಭುತ್ವ ಮತ್ತು ಹೊಣೆಗಾರಿಕೆಯನ್ನು ಎತ್ತಿಹಿಡಿಯುವಲ್ಲಿ ಅದರ ಪಾತ್ರವನ್ನು ಒತ್ತಿ ಹೇಳಿದರು.
ಎನ್‌ಡಿಎ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಅದು ಖಂಡಿತವಾಗಿಯೂ ಸಂವಿಧಾನದ ಅಂಶಗಳನ್ನು ಬದಲಾಯಿಸುತ್ತದೆ. ಬಡ ಜನರು ಮತ್ತು ಬುಡಕಟ್ಟು ಜನಾಂಗದವರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.
ರೈತರ ಸಂಕಷ್ಟದ ಬಗ್ಗೆ ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂದ ಪ್ರಿಯಾಂಕಾ, “ದೇಶದ ರೈತರು ಅಳುತ್ತಿದ್ದಾರೆ, ಆದರೆ ಸರ್ಕಾರ ಅವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಸವಾಲುಗಳನ್ನು ಎದುರಿಸುವ ಬದಲು ಬಿಜೆಪಿ ಹಳೆಯ ವಿಷಯಗಳನ್ನು ಕೆದಕುತ್ತಿದೆ ಎಂದು ವಯನಾಡ್ ಸಂಸದೆ ಟೀಕಿಸಿದರು.ಬಿಜೆಪಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ದೂಷಿಸುವ ಕೆಲಸ ಮಾಡುತ್ತಿದೆ. ಈಗ ದೇಶಕ್ಕೆ ಅಗತ್ಯವಿರುವ ಬದಲಾವಣೆಗಳನ್ನು ಜಾರಿಗೆ ತರಲು ಅದು ಏನನ್ನೂ ಮಾಡಿಲ್ಲ” ಎಂದು ಪ್ರಿಯಾಂಕಾ ಕಿಡಿಕಾರಿದರು.
ಇದನ್ನೂ ಓದಿ : ದೆಹಲಿ ಚುನಾವಣೆ | ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್


