Homeಮುಖಪುಟಲಾಕ್‌ಡೌನ್‌ಗೆ 1 ವರ್ಷ: ಇನ್ನೂ ಚೇತರಿಸಿಕೊಳ್ಳದ ಹೋಟೆಲ್ ಉದ್ಯಮ: ವಿಶೇಷ ವರದಿ

ಲಾಕ್‌ಡೌನ್‌ಗೆ 1 ವರ್ಷ: ಇನ್ನೂ ಚೇತರಿಸಿಕೊಳ್ಳದ ಹೋಟೆಲ್ ಉದ್ಯಮ: ವಿಶೇಷ ವರದಿ

- Advertisement -
- Advertisement -

ಲಾಕ್‌ಡೌನ್ ಹೆಸರು ಕೇಳಿದರೇ ಬೆಚ್ಚಿ ಬೀಳುವಂತಾಗಿದೆ ಇಂದಿನ ಪರಿಸ್ಥಿತಿ. ಸಾವಿರಾರು ಜನರ ಸಾವಿಗೆ ಕಾರಣವಾದ, ಲಕ್ಷಾಂತರ ಮಂದಿಯ ಬದುಕು ಬೀದಿಗೆ ತಂದಿಟ್ಟ ಮಾರ್ಚ್ 2020, 24ರ ಆ ಕರಾಳ ದಿನವನ್ನು ಮತ್ತೆ ನೆನಪಿಸಿಕೊಳ್ಳಲು ಕೂಡ ಜನ ಬಯಸುವುದಿಲ್ಲ. ಲಾಕ್‌ಡೌನ್‌ಗೆ ಒಂದು ವರ್ಷ ತುಂಬಿದೆ.

ಈ ಒಂದು ವರ್ಷದಲ್ಲಿ ಕೊರೊನಾ ಸಾಂಕ್ರಾಮಿಕ ಬಾಧಿಸಿದ್ದಕ್ಕಿಂತ, ಒಕ್ಕೂಟ ಸರ್ಕಾರ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಜಾರಿ ಮಾಡಿದ ಲಾಕ್‌ಡೌನ್ ಸೃಷ್ಟಿಸಿದ ಅನಾಹುತಗಳ ಬಾಧೆಯೆ ಅಧಿಕವಾಗಿದೆ. ಲಕ್ಷಾಂತರ ವಲಸೆ ಕಾರ್ಮಿಕರು ಬರಿಗಾಲಿನಲ್ಲಿ ತಮ್ಮ ಊರುಗಳಿಗೆ ಸೇರಲು ಹೊರಟರು. ಊರು ಸೇರದೆ ದಾರಿಯಲ್ಲೇ ಅಸುನೀಗಿದವರು ನೂರಾರು ಜನ. ಲಕ್ಷಾಂತರ ಸಂತ್ರಸ್ತರ ನೋವನ್ನು ಸರ್ಕಾರಗಳು ಕೇಳಿಸಿಕೊಳ್ಳಲಿಲ್ಲ.

ಅನ್‌ಲಾಕ್ 1.0, 2.0, 3.0, 4.0, 5.0 ಎಂಬ ನಿಯಮಾವಳಿಗಳ ಮೂಲಕ, ಹೊಸ ಹೊಸ ಮಾರ್ಗಸೂಚಿಗಳನ್ನು ಹೊರಡಿಸುತ್ತಾ ಒಕ್ಕೂಟ ಸರ್ಕಾರ ಲಾಕ್‌ಡೌನ್‌ಗೆ ಮುಕ್ತಿ ನೀಡಿತು. ಆದರೆ, ಲಾಕ್‌ಡೌನ್ ಸಮಯದಲ್ಲಿ ಮತ್ತು ಲಾಕ್‌ಡೌನ್ ಅನ್‌ಲಾಕ್ ಆದನಂತರ ಮಧ್ಯಮ ವರ್ಗದ ಉದ್ಯಮಗಳ ಮೇಲೆ ಆದ ಪರಿಣಾಮಗಳು ಇಂದಿಗೂ ಕಾಡುತ್ತಿವೆ.

ಬೆಂಗಳೂರು ಅವಕಾಶಗಳ ತವರೂರು ಎಂಬ ಕಾರಣದಿಂದ ಹಳ್ಳಿಗಾಡಿನಿಂದ ವಲಸೆ ಬರುವವರ, ವಿದ್ಯಾಭ್ಯಾಸ ಮುಗಿಸಿ ಕೆಲಸ ಅರಸುವವರ, ದೂರದ ಜಿಲ್ಲೆಗಳಿಂದ ಹೊಸ ಅವಕಾಶ ಅರಸಿ ಬರುವವರ ನೆಚ್ಚಿನ ತಾಣವಾಗಿದೆ. ಇಲ್ಲಿಗೆ ಬಂದವರು ಹೆಚ್ಚುಕಮ್ಮಿ ಮೊದಲು ಆಶ್ರಯಿಸುವುದು ಹೋಟೆಲ್‌ಗಳನ್ನೆ. ಹೋಟೆಲ್‌ಗಳ ಊಟ-ಉಪಚಾರದಿಂದಲೇ ಇವರ ಕೆಲಸ ಆರಂಭವಾಗುತ್ತದೆ. ತಳ್ಳುಗಾಡಿ ಹೋಟೆಲ್‌ನಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್‌ಗಳನ್ನು ಆಶ್ರಯಿಸಿರುವ ಲಕ್ಷಾಂತರ ಮಂದಿ ಬೆಂಗಳೂರನಲ್ಲಿದ್ದಾರೆ.

ಲಾಕ್‌ಡೌನ್ ನಂತರ ಹೋಟೆಲ್ ಉದ್ಯಮ ಕೂಡ 2020ರ ಮೇ ಅಂತ್ಯದವರೆಗೆ ಸಂಪೂರ್ಣ ಬಂದ್ ಆಯಿತು. ಕಾರ್ಮಿಕರು ಸೇರಿದಂತೆ ಹೋಟೆಲ್ ನಂಬಿಕೊಂಡಿದ್ದ ಲಕ್ಷಾಂತರ ಜನರಿದ್ದ ಕಾರಣ ಜೂನ್‌ನಲ್ಲಿ ಬರೀ ಪಾರ್ಸಲ್ ವ್ಯವಸ್ಥೆಗೆ ಅವಕಾಶ ನೀಡಲಾಯಿತು. ನಂತರ ಜುಲೈ ತಿಂಗಳಿನ 2ನೇ ವಾರದಿಂದ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಸರ್ವಿಸ್ ನೀಡಲು ಅವಕಾಶ ನೀಡಲಾಯಿತು. ಆದರೂ ಕೂಡ ಕೊರೊನಾ ಲಾಕ್‌ಡೌನ್‌ನ ಕರಾಳತೆಯಿಂದ ಹೋಟೆಲ್ ಉದ್ಯಮ ಇನ್ನು ಚೇತರಿಸಿಕೊಂಡಿಲ್ಲ.

ಬೆಂಗಳೂರಿನಲ್ಲಿ ಸರಿಸುಮಾರು 24,500 ಹೋಟೆಲ್‌ಗಳಿವೆ. ಇದರಲ್ಲಿ 3,500 ಹೋಟೆಲ್‌ಗಳು ರೂಮ್ ಮತ್ತು ರೆಸ್ಟೋರೆಂಟ್ ಸೇವೆ ಒದಗಿಸುತ್ತಿವೆ. ಇನ್ನು 21 ಸಾವಿರ ಹೋಟೆಲ್‌ಗಳಲ್ಲಿ ಸಣ್ಣ ಪುಟ್ಟ ಹೋಟೆಲ್‌ನಿಂದ ಹಿಡಿದು ಫೈವ್‌ಸ್ಟಾರ್ ಹೋಟೆಲ್‌ಗಳು ಸೇರುತ್ತವೆ.

ಲಾಕ್‌ಡೌನ್‌ಗೂ ಮುಂಚೆ ಗ್ರಾಹಕರಿಂದ ತುಂಬಿರುತ್ತಿದ್ದ ಹೋಟೆಲ್‌ಗಳು ಇಂದು ಗ್ರಾಹಕರಿಗಾಗಿ ಕಾಯುವಂತಾಗಿದೆ. ಲಾಕ್‌ಡೌನ್‌ನಿಂದ ತಮ್ಮ ಊರುಗಳಿಗೆ ಹೋಗಿರುವ ಕಾರ್ಮಿಕರು ಇನ್ನೂ ಸಂಪೂರ್ಣವಾಗಿ ವಾಪಸ್ ಆಗಿಲ್ಲ. ಅನಕ್ಷರಸ್ಥರಿಗೆ ಊಟ, ವಸತಿ ಜೊತೆಗೆ ಕೆಲಸ ನೀಡುವ ಉದ್ಯಮ ಎಂದು ಹೆಚ್ಚು ಜನ ಹೋಟೆಲ್‌ಗಳಲ್ಲಿ ಕೆಲಸಕ್ಕೆ ಸೇರುತ್ತಾರೆ. ಬಿಹಾರ, ಒರಿಸ್ಸಾ ಸೇರಿದಂತೆ ಉತ್ತರ ಭಾರತದ ಹೆಚ್ಚು ಕಾರ್ಮಿಕರು ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈಗ ಅವರೆಲ್ಲಾ ತಮ್ಮ ಊರುಗಳಿಗೆ ವಾಪಸ್ ಆಗಿದ್ದಾರೆ. ಬಂದರೂ ಅವರಿಗೆ ಸಂಬಳ ನೀಡುವ ಸ್ಥಿತಿಯಲ್ಲಿ ಹೋಟೆಲ್ ಮಾಲೀಕರು ಇಲ್ಲ ಎಂಬುದು ಇನ್ನೊಂದು ವಾಸ್ತವ.

“ಇಷ್ಟು ವರ್ಷಗಳ ಉಳಿತಾಯವನ್ನು ಹೂಡಿ ಮಾರ್ಚ್ 13ಕ್ಕೆ ನನ್ನ ಕನಸಿನ ’ಶ್ರೀ ಬ್ರಾಹ್ಮಿ ಉಪಹಾರ ದರ್ಶಿನಿ’ ಎಂಬ ಪುಟ್ಟ ಹೋಟೆಲ್ ಆರಂಭಿಸಿದ್ದೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಕೆಲಸಕ್ಕೆ ಹೋಗುವ ಒಂಟಿ ಯುವಕ, ಯುವತಿಯರು ಈ ಏರಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಹೋಟೆಲ್ ಆರಂಭಿಸಲು ಕಾರಣ. ಆದರೆ, ಹೋಟೆಲ್ ಆರಂಭಿಸಿ 20 ದಿನವೂ ಆಗಿರಲಿಲ್ಲ. ನನ್ನ ಕನಸಿಗೆ ಕೊರೊನಾ ಲಾಕ್‌ಡೌನ್ ತಣ್ಣೀರು ಎರಚಿತು. ಒಳ್ಳೆಯ ವ್ಯಾಪಾರವಾಗುತ್ತಿದ್ದ ನನ್ನ ಹೋಟೆಲ್‌ಗೆ 20 ದಿನದಲ್ಲಿಯೇ ಬಾಗಿಲು ಹಾಕಬೇಕಾಯಿತು” ಎಂದು ನೊಂದುಕೊಳ್ಳುತ್ತಾರೆ ಹೋಟೆಲ್ ಮಾಲೀಕ ಸೋಮಶೇಖರ್.

“ಈಗೇನೊ ಹೋಟೆಲ್ ಓಪನ್ ಮಾಡಿಕೊಂಡು ಕೂತಿದೀವಿ. ಆದ್ರೆ ಜನ ಮಾತ್ರ ಇಲ್ಲ. ರಸ್ತೆಯಲ್ಲೇ ಜನ ಓಡಾಡುತ್ತಿಲ್ಲ. ಅಂತಹುದರಲ್ಲಿ ಹೋಟೆಲ್‌ಗೆ ಯಾರು ಬರ್ತಾರೆ. ಶಾಲಾ-ಕಾಲೇಜುಗಳು ಬಂದ್ ಆಗಿದ್ದರಿಂದ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ವಾಪಸ್ ಹೋದರು. ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದವರಿಗೆ ವರ್ಕ್ ಫ್ರಂ ಹೋಮ್ ಆಗಿದೆ. ಆದ್ದರಿಂದ ಈಗಲೂ ಜನ ಹೋಟೆಲ್‌ಗಳಿಗೆ ಬರುತ್ತಿಲ್ಲ. ಆದರೂ ವ್ಯಾಪಾರ ಇಂದಲ್ಲ ನಾಳೆ ಸರಿ ಹೋಗಬಹುದು ಎಂಬ ಆಸೆಯಿಂದ ಹೋಟೆಲ್ ತೆರೆಯುತ್ತಿದ್ದೇವೆ. ಆದರೆ ಸರ್ಕಾರ ಮತ್ತೆ ಲಾಕ್‌ಡೌನ್ ವಿಧಿಸಿದರೆ ನಮ್ಮ ಪಾಡು ಮಾತ್ರ ಏನಾಗುತ್ತದೋ ಎಂಬ ಭಯವಿದೆ” ಎಂದು ಸೋಮಶೇಖರ್ ಆತಂಕ ವ್ಯಕ್ತಪಡಿಸುತ್ತಾರೆ.

ಲಾಕ್‌ಡೌನ್ ಕಾರಣದಿಂದ ಸಾವಿರಾರು ಹೋಟೆಲ್‌ಗಳಿಗೆ ಶಾಶ್ವತವಾಗಿ ಬೀಗ ಬಿದ್ದಿದೆ. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾವಿರಾರು ಕಾರ್ಮಿಕರು ಪರ್ಯಾಯ ಉದ್ಯೋಗಕ್ಕಾಗಿ ಅಲೆದಾಡುವಂತಾಗಿದೆ.

“ಲಾಕ್‌ಡೌನ್ ಆರಂಭದಲ್ಲಿ ನಮಗೆ ತುಂಬಾ ಕಷ್ಟವಾಯಿತು. ಎಲ್ಲಾ ಹೋಟೆಲ್‌ಗಳು ಸಂಪೂರ್ಣವಾಗಿ ಬಂದ್ ಮಾಡಿದೆವು. ಆದರೆ ಸರ್ಕಾರ ಬೇಗನೆ ಪಾರ್ಸಲ್ ವ್ಯವಸ್ಥೆಗೆ ಅವಕಾಶ ನೀಡಿದ್ದು ಸ್ಪಲ್ಪ ಸಮಾಧಾನ ನೀಡಿತ್ತು. ಆದರೆ ಆಗಲೂ ಕೂಡ 3,500ಕ್ಕೂ ಹೆಚ್ಚು ಹೋಟೆಲ್‌ಗಳು ಓಪನ್ ಆಗಲಿಲ್ಲ. ಈಗ ಸಂಪೂರ್ಣವಾಗಿ ಹೋಟೆಲ್ ತೆರೆಯಲು ಅವಕಾಶ ನೀಡಿದ್ದರೂ ಕೂಡ ಇನ್ನೂ 1,500 ಹೋಟೆಲ್‌ಗಳು ಓಪನ್ ಆಗೇ ಇಲ್ಲ. ಇದರಲ್ಲಿ ಒಂದು ಸಾವಿರ ಹೋಟೆಲ್‌ಗಳು ಶಾಶ್ವತವಾಗಿ ಮುಚ್ಚಿ ಹೋಗುವ ಸಂಭವವಿದೆ” ಎಂದು ಹೇಳುತ್ತಾರೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್.

“24,500 ಹೋಟೆಲ್‌ಗಳಲ್ಲಿ 1,500 ಹೋಟೆಲ್‌ಗಳು ಮುಚ್ಚುವ ಹಂತದಲ್ಲಿವೆ. ಅದು ಗಣನೆಗೆ ಬಂದಿರುವುದು. ಇದರಲ್ಲಿ 500 ಹೋಟೆಲ್‌ಗಳು ಐಟಿ ಸೆಕ್ಟರ್ ಓಪನ್ ಆಗಿ ಕೆಲಸಕ್ಕೆ ಜನ ಬರುವಂತಾದರೆ ಉಳಿಯುತ್ತವೆ ಇಲ್ಲದಿದ್ದರೇ ಇವುಗಳು ಕೂಡ ಮುಚ್ಚಿ ಹೋಗುತ್ತವೆ. ಈ ಹೋಟೆಲ್‌ಗಳು ಅವಲಂಬಿಸಿರುವುದು ಐಟಿ-ಬಿಟಿ ವಲಯದಲ್ಲಿ ಕೆಲಸ ಮಾಡುವವರ ಮೇಲೆ. ಇನ್ನು ಒಂದು ಸಾವಿರ ಹೋಟೆಲ್‌ಗಳು ಕಾರ್ಮಿಕರ ಅಲಭ್ಯತೆ, ಹಣಕಾಸಿನ ತೊಂದರೆ, ಬಾಡಿಗೆ ಸಮಸ್ಯೆಗಳ ಕಾರಣಕ್ಕೆ ಮತ್ತೆಂದು ಓಪನ್ ಆಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ ಪಿ.ಸಿ ರಾವ್.

ಹೋಟೆಲ್ ಉದ್ಯಮ ಅವಲಂಬಿಸಿರುವುದನ್ನು ಸಾರ್ವಜನಿಕರನ್ನು. ಗ್ರಾಹಕನಿಲ್ಲದಿದ್ದರೆ ಹೋಟೆಲ್ ನಡೆಸಿ ಪ್ರಯೋಜನವಿಲ್ಲ. ಆದರೆ, ಹೋಟೆಲ್ ಉದ್ಯಮ ಇಷ್ಟು ದಿನವಾದರೂ ಚೇತರಿಸಿಕೊಳ್ಳದಿರುವುದಕ್ಕೆ ಹಲವು ಕಾರಣಗಳಿವೆ. ಉದಾಹರಣೆಗೆ ಪ್ರವಾಸೋದ್ಯಮಕ್ಕೆ ಬ್ರೇಕ್ ಹಾಕಿರುವುದು. ಐಟಿ-ಬಿಟಿ ವಲಯಗಳು ಇನ್ನು ಕೆಲಸ ಆರಂಭಿಸಿರದಿರುವುದು.

ಐಟಿ-ಬಿಟಿ ವಲಯಗಳು

ಬೆಂಗಳೂರಿನಲ್ಲಿ 12 ಸಾವಿರ ಐಟಿ-ಬಿಟಿ ಕಂಪನಿಗಳಿವೆ. ಅದರಲ್ಲಿನ 45 ದೊಡ್ಡ ದೊಡ್ಡ ಕಂಪನಿಗಳನ್ನು ನಂಬಿಕೊಂಡು 1,500 ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಇನ್ಫೋಸಿಸ್ ಫುಡ್‌ಕೋರ್ಟ್ ಒಂದರಲ್ಲಿಯೇ 60 ಹೋಟೆಲ್‌ಗಳಿವೆ. ಒಂದೊಂದು ಕಂಪನಿಯ ಒಳಗೆ 20 ರಿಂದ 30 ಹೋಟೆಲ್‌ಗಳಿದ್ದವು. ಈಗ ಅವ್ಯಾವುವು ಓಪನ್ ಆಗಿಲ್ಲ. ಮತ್ತೆ ಓಪನ್ ಆಗುವ ಯಾವ ಸುಳಿವು ಇನ್ನು ಸಿಕ್ಕಿಲ್ಲ. ಇನ್ನೂ ಹಲವು ಕಂಪನಿಗಳಿಗೆ ಪುಟ್ಟಪುಟ್ಟ ಹೋಟೆಲ್‌ಗಳು ಮತ್ತು ಮನೆಗಳಿಂದ ಕ್ಯಾಟರಿಂಗ್ ಸರ್ವಿಸ್ ಇತ್ತು. ಇದು ಕೂಡ ನಿಂತುಹೋಗಿದೆ..

ಮದುವೆ, ಸಮಾರಂಭಗಳಿಗೆ ಕಡಿತ

ಲಾಕ್‌ಡೌನ್‌ನಿಂದಾಗಿ ಮದುವೆ, ಸಮಾರಂಭಗಳು, ವಿಶೇಷ ಕಾರ್ಯಕ್ರಮಗಳು ಇಲ್ಲದೆ ಇರುವುದು ಅಥವಾ ಕಡಿಮೆಯಾಗಿರುವುದು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಮದುವೆಗೆ, ಹಲವು ಕಾರ್ಯಕ್ರಮಗಳಿಗೆ ಜನರ ಸಂಖ್ಯೆ ಮೇಲೆ ಸರ್ಕಾರ ನಿಯಂತ್ರಣ ಹೇರಿದೆ. 500, 1000 ಗೆಸ್ಟ್‌ಗಳಿರುತ್ತಿದ್ದ ಕಡೆ 100 ಜನ ಆಗಿರುವುದು ಕೂಡ ಹೋಟೆಲ್ ಉದ್ಯಮಕ್ಕೆ ಲಾಕ್‌ಡೌನ್ ಕೊಟ್ಟ ದೊಡ್ಡ ಪೆಟ್ಟು.

ಪ್ರವಾಸೋದ್ಯಮ

ಪ್ರವಾಸೋದ್ಯಮಕ್ಕೆ ಲಾಕ್‌ಡೌನ್ ತಡೆ ನೀಡಿದ್ದು, ಅದು ಹೆಚ್ಚು ಹೊಡೆತ ನೀಡಿದ್ದು ಹೋಟೆಲ್ ಉದ್ಯಮಕ್ಕೆ. ವಿದೇಶಿಗರು ನಗರಕ್ಕೆ ಬರುವುದು ನಿಂತಿದ್ದರಿಂದ ಹೋಟೆಲ್‌ಗಳು ಅರ್ಧ ಜೀವವಾದವು. ಮುಂಬೈ ಮತ್ತು ದೆಹಲಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ರೂಮ್ ಮತ್ತು ರೆಸ್ಟೋರೆಂಟ್ ಇರುವ ಹೋಟೆಲ್‌ಗಳು ಇವರ ಮೇಲೆಯೇ ಅವಲಂಬಿತರಾಗಿದ್ದರು. ಈಗ ಅದ್ಯಾವುದು ನಡೆಯುತ್ತಿಲ್ಲ. ಬೇರೆ ಕಡೆಯಿಂದ ಬಂದ ಕಂಪನಿ ಮ್ಯಾನೇಜರ್ ಜೊತೆಗೆ ಮೀಟಿಂಗ್‌ಗಳು ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿಯೇ ನಡೆಯುತ್ತಿತ್ತು. ಕೊರೊನಾ ಲಾಕ್‌ಡೌನ್ ಕಾರಣದಿಂದ ಆನ್‌ಲೈನ್ ಮೀಟಿಂಗ್‌ಗಳು ಆರಂಭವಾಗಿ ಹೋಟೆಲ್ ಉದ್ಯಮಕ್ಕೆ ನಷ್ಟ ಉಂಟಾಗುತ್ತಿದೆ.

ಕಾರ್ಮಿಕರು ವಾಪಸ್

ಅಭಿವೃದ್ಧಿ ಹೊಂದುತ್ತಿರುವ ನಗರ ಎಂಬ ಹಣೆಪಟ್ಟಿ ಹೊತ್ತುಕೊಂಡಿರುವ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸಗಳು ಹೇರಳವಾಗಿ ನಡೆಯುತ್ತಿದ್ದವು. ಲಾಕ್‌ಡೌನ್ ಕಾರಣದಿಂದ ಈ ಎಲ್ಲ ಕೆಲಸಗಳು ನಿಂತಿದ್ದರಿಂದ ಬಿಹಾರ, ಒರಿಸ್ಸಾ ಮೂಲದ ಕಟ್ಟಡ ಕಾಮಿಕರು ತಮ್ಮ ತಮ್ಮ ಗ್ರಾಮಗಳಿಗೆ ವಾಪಸ್ ಹೊರಟುಹೋದರು. ಒಂದು ಬೃಹತ್ತಾದ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ 1000 ದಿಂದ 1,500 ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರಲ್ಲಿ ಕನಿಷ್ಠ 25% ಜನ ಹೋಟೆಲ್‌ಗಳನ್ನು ಅವಲಂಬಿಸಿರುವವರು ಇರುತ್ತಿದ್ದರು. ಈಗ ಇವರೆಲ್ಲಾ ಇಲ್ಲದ ಕಾರಣಕ್ಕೆ ಮಧ್ಯಮ ವರ್ಗದ ಹೋಟೆಲ್‌ಗಳು ಗ್ರಾಹಕರಿಲ್ಲದೆ ಪರದಾಡುವಂತಾಗಿದೆ.

“ಹೆಚ್ಚಾಗಿ ಅನಕ್ಷರಸ್ಥ ಜನರಿಗೆ ಊಟ, ವಸತಿ ಜೊತೆಗೆ ಕೆಲಸ ಕೊಡುವ ಉದ್ಯಮ ನಮ್ಮದು. ಈಗ ಅವರೆಲ್ಲಾ ಬೇರೆಡೆ ಕೆಲಸಕ್ಕೆ ಹೋಗಬೇಕಾಗಿದೆ. ಲಾಕ್‌ಡೌನ್‌ನಲ್ಲಿ ಹೈನುಗಾರಿಕೆ ನಡೆಸುತ್ತಿದ್ದ ರೈತರಿಗೆ ಹೆಚ್ಚಿನ ನಷ್ಟವಾಗಿದೆ. ಪ್ರಮುಖವಾಗಿ ಹಾಲು ಅತ್ಯಧಿಕವಾಗಿ ನಷ್ಟವಾಗುತ್ತಿರುವ ಪದಾರ್ಥವಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಕೂಡ ಮಾಡಿದ್ವಿ. ಲಾಕ್‌ಡೌನ್‌ನಿಂದ ಕೇವಲ ಹೋಟೆಲ್ ಕಾರ್ಮಿಕರಿಗೆ ಮಾತ್ರವಲ್ಲ ಇದನ್ನು ನಂಬಿಕೊಂಡಿದ್ದ ಹಲವು ವಲಯಗಳಿಗೆ ತೊಂದರೆಯಾಗಿದೆ” ಎನ್ನುತ್ತಾರೆ ಪಿ.ಸಿ. ರಾವ್.

“ಈಗತಾನೇ ಕೊಂಚಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದೇವೆ. ಆದರೆ ಜನ ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿಂದ ಮತ್ತೆ ಲಾಕ್‌ಡೌನ್ ಮಾಡಿದರೆ ತುಂಬಾ ಕಷ್ಟವಾಗುತ್ತದೆ. ಆದರೆ, ರಾಜಕೀಯ ಪಕ್ಷಗಳ ಪ್ರತಿಭಟನೆಗಳು, ಸಮಾವೇಶಗಳು ನಡೆಯುವಾಗ ಲಕ್ಷಾಂತರ ಮಂದಿ ಒಂದೆಡೆ ಸೇರುತ್ತಾರೆ. ಅವರಿಗೆ ಕೊರೊನಾ ನಿಯಮಗಳೇಕಿಲ್ಲ” ಎಂದು ಪ್ರಶ್ನಿಸುತ್ತಾರೆ ರಾವ್.

“ಕೊರೊನಾ ಸೋಂಕು ನಗರದಲ್ಲಿ ಅಧಿಕವಾಗಿದ್ದಾಗ ಸರ್ಕಾರಕ್ಕೆ ನಾವು ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ. 48 ಗಂಟೆಗಳಲ್ಲಿ, 23ಕ್ಕೂ ಅಧಿಕ ಆಸ್ಪತ್ರೆಗಳ ಪಕ್ಕದ ಹೋಟೆಲ್‌ಗಳನ್ನು ಅತಿ ಕಡಿಮೆ ಬೆಲೆಗೆ ಹಾಸ್ಪಿಟಲ್ ಆಗಿ ಮಾರ್ಪಾಡು ಮಾಡಿ ಜನರ ಉಪಯೋಗಕ್ಕೆ ಕೊಟ್ಟಿದ್ದೇವೆ. ಆದರೆ, ಸರ್ಕಾರ ಹೋಟೆಲ್ ಓಪನ್ ಮಾಡಲು ಅವಕಾಶ ನೀಡಿತೇ ಹೊರತು ನಮಗೆ ಬೇರೆ ಯಾವುದೇ ರೀತಿಯಲ್ಲಿಯೂ ಸಹಾಯ ಮಾಡಲಿಲ್ಲ” ಎಂದು ಕೂಡ ಅವರು ಹೇಳುತ್ತಾರೆ.

“ಅಂದರೆ, ಬಾರ್ ಅಂಡ್ ರೆಸ್ಟೋರೆಂಟ್‌ಗಳು 6 ತಿಂಗಳು ಓಪನ್ ಆಗಲಿಲ್ಲ. ತಿಂಗಳಿಗ 75 ಸಾವಿರ ಇರುವ ಅವುಗಳ ಲೈಸೆನ್ಸ್ ಫೀ ಕಡಿಮೆ ಮಾಡಿ ಎಂದೆವು. ನಾವು ಉಪಯೋಗಿಸದೇ ಇದ್ದ ಸಂದರ್ಭದ್ದು ಎಂದು ಕೇಳಿದ್ದೆವು. ಪ್ರಾಪರ್ಟಿ ಟ್ಯಾಕ್ಸ್, ಲೈಸೆನ್ಸ್ ಶುಲ್ಕ ಕಡಿತ, ಕರೆಂಟ್ ಬಿಲ್ ಹೀಗೆ ಹಲವು ಸಂಗತಿಗಳಲ್ಲಿ ಸರ್ಕಾರ ನಮ್ಮ ಸಹಾಯಕ್ಕೆ ಬರಬಹುದಿತ್ತು. ಆದರೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಲಿಲ್ಲ” ಎನ್ನುತ್ತಾರೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ, ಪಿ.ಸಿ.ರಾವ್

ಕ್ಯಾಟರಿಂಗ್ ಸರ್ವಿಸ್ ಕಡಿಮೆಯಾದ ಬಗ್ಗೆ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಭಟ್ಕಳದ ನಾಗರಾಜು ಹೇಳಿದ್ದು ಹೀಗೆ: “ಲಾಕ್‌ಡೌನ್ ವಿಧಿಸಿದಾಗ ಆ 2 ತಿಂಗಳು ನಾವು ನರಕ ಅನುಭವಿಸಿದ್ದೇವೆ. ಅಂದಿನ ಕ್ಷಣಗಳನ್ನು ನೆನೆಸಿಕೊಳ್ಳಲು ಸಹ ಭಯವಾಗುತ್ತದೆ. ಬೇಕರಿ ನಡೆಸುತ್ತಿದ್ದೇವೆ. ಆದರೆ ನಮ್ಮ ಮುಖ್ಯ ಉದ್ಯೋಗ ಕ್ಯಾಟರಿಂಗ್ ಸರ್ವಿಸ್ ನೀಡುವುದೇ ಆಗಿತ್ತು. ಸಮಾರಂಭಗಳೇ ಇಲ್ಲ. ಮದುವೆಗೂ ಜನರ ಸಂಖ್ಯೆ ಕಡಿಮೆ ಇರುತ್ತದೆ. ಹಾಗಾಗಿ ಆರ್ಡರ್ ಕೂಡ ಬರುತ್ತಿಲ್ಲ. ಬೇಕರಿಗೆ ಬಂದು ತಿನಿಸು ತೆಗೆದುಕೊಳ್ಳುವುದು ಈಗ ಕಡಿಮೆಯಾಗಿದೆ. ಲಾಕ್‌ಡೌನ್‌ಗಿಂತ ಮುಂಚೆ ಇದ್ದ ವ್ಯಾಪಾರಕ್ಕೂ ಈಗಿನ ವ್ಯಾಪಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೊರೊನಾ ಭಯಕ್ಕೆ ಜನ ಬೇಕರಿಯಲ್ಲಿ ತಿನಿಸು ತೆಗೆದುಕೊಳ್ಳುವುದನ್ನು ಬಿಟ್ಟುಬಿಟ್ಟಿದ್ದಾರೆ. ಇಲ್ಲೇ ಒಂದೆರಡು ಬೇಕರಿಗಳು ಮುಚ್ಚಿ ಹೋದವು. ಕಷ್ಟವೋ ಸುಖವೋ ನೋಡುವ ಏನಾಗುತ್ತದೆ ಅಂತಾ ದಿನಾ ಗ್ರಾಹಕರಿಗಾಗಿ ಕಾಯುತ್ತೇವೆ” ಎನ್ನುತ್ತಾರೆ.

ಮತ್ತೆ ಲಾಕ್‌ಡೌನ್ ಘೋಷಣೆ ಬಗ್ಗೆ ಸುಳಿವು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಾಗರಾಜ್, “ಮತ್ತೆ ಈಗ ಲಾಕ್‌ಡೌನ್ ಘೋಷಿಸಿದರೇ ಜನರೇ ರೊಚ್ಚಿಗೇಳುತ್ತಾರೆ. ಈಗತಾನೇ ಕೊಂಚ ಕೊಂಚ ಚೇತರಿಕೆ ಕಾಣಿಸೋಕೆ ಶುರುವಾಗಿದೆ. ಮತ್ತೆ ಲಾಕ್‌ಡೌನ್ ಘೋಷಿಸಿದರೆ, ಎಲ್ಲರೂ ಹಸಿವಿನಿಂದ ಸಾಯುತ್ತಾರೆ ಅಷ್ಟೇ. ಮತ್ತೆ ಲಾಕ್‌ಡೌನ್ ಮಾಡುವವರು ಔಷಧಿ ಯಾಕೆ ತರಬೇಕಿತ್ತು? ಎಲ್ಲರಿಗೂ ಔಷಧಿ ಕೊಡುತ್ತೇವೆ ಎಂದು ತಿಳಿಸಿ, ಕೊರೊನಾ ಹೋಗುತ್ತದೆ ಎಂದು ಹೇಳಿ ಈಗ ಮತ್ತೆ ಲಾಕ್‌ಡೌನ್ ಅಂದರೆ ಹೇಗೆ” ಎಂದು ಪ್ರಶ್ನಿಸುತ್ತಾರೆ.

ಇನ್ನು, ಬಹುತೇಕ ಹೋಟೆಲ್‌ಗಳು ವ್ಯವಹಾರ ನಡೆಸುವುದು ಬಾಡಿಗೆ ಕಟ್ಟಡದಲ್ಲಿಯೇ. ಅದರಲ್ಲೂ ಸಣ್ಣ-ಪುಟ್ಟ ಹೋಟೆಲ್‌ಗಳನ್ನು ಚಿಕ್ಕ ಚಿಕ್ಕ ಅಂಗಡಿಗಳಲ್ಲಿ ತೆರೆದಿರಲಾಗುತ್ತದೆ. ಕೊರೊನಾ ಲಾಕ್‌ಡೌನ್ ಕೊಟ್ಟ ಹೊಡೆತಕ್ಕೆ ಈ ಅಂಗಡಿಗಳು ಖಾಲಿಯಾಗಿರುವುದು ಈಗ ಎಲ್ಲೆಡೆ ಕಾಣಿಸುತ್ತಿದೆ. ಮೊದಲು ಒಂದು ರಸ್ತೆಗೆ ಕನಿಷ್ಠ 6-7 ಇರುತ್ತಿದ್ದ ಸಣ್ಣ ಹೋಟೆಲ್‌ಗಳ ಸಂಖ್ಯೆ ಈಗ 3-4ಕ್ಕೆ ಬಂದು ನಿಂತಿದೆ. ಎಲ್ಲೆಡೆ ’ಬಾಡಿಗೆಗಿದೆ’, ’ಶಾಪ್ ಖಾಲಿ ಇದೆ’, ’ಟುಲೆಟ್’ ಬೋರ್ಡ್‌ಗಳು ಸಾಮಾನ್ಯವಾಗಿವೆ. ಬಾಡಿಗೆ ಮನೆಗಳ ಮಾಲೀಕರ ಪರಿಸ್ಥಿತಿ ಮತ್ತೊಂದು ರೀತಿಯದ್ದು.

ಮೊದಲು ಹೋಟೆಲ್‌ಗಳಿದ್ದ ಜಾಗದಲ್ಲಿ ಹೊಸ ಅಂಗಡಿಗಳು ತಲೆ ಎತ್ತಿವೆ. ಮತ್ತೆ ಕೆಲವು ಕಡೆಗಳಲ್ಲಿ ಹೊಸ ಹೊಸ ಸಣ್ಣ ಹೋಟೆಲ್‌ಗಳು ಆರಂಭವಾಗಿ ತಮ್ಮ ಅದೃಷ್ಟದ ಪರೀಕ್ಷೆಗಿಳಿದಿವೆ. ಹೋಟೆಲ್‌ಗಳಿಗಾಗಿ, ಬೇಕರಿ, ಕ್ಯಾಟರಿಂಗ್ ಸರ್ವಿಸ್ ನಡೆಸುವವರಿಗೆ ಬಾಡಿಗೆ ನೀಡಿದ್ದ ಬಾಡಿಗೆದಾರ, ಇತ್ತ ಬಾಡಿಗೆ ಇಲ್ಲದೆ ಖಾಲಿ ಬೋರ್ಡ್ ಹಾಕಿಕೊಂಡಿರುವ ಸ್ಥಿತಿ ಬಂದಿದೆ.

ಹೋಟೆಲ್ ಉದ್ಯಮ ಕೇವಲ ಹೋಟೆಲ್ ಕಾರ್ಮಿಕರ ಮೇಲೆ ಪರಿಣಾಮ ಬೀರಿಲ್ಲ. ರೈತರ ಮೇಲೆ ಹೋಟೆಲ್ ಲಾಕ್‌ಡೌನ್ ಹೆಚ್ಚು ಪರಿಣಾಮ ಬೀರಿದೆ. ಹಾಲು ಉತ್ಪಾದಕರು, ತರಕಾರಿಗಳನ್ನು ಬೆಳೆಯುವವರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಾರ್ಮಿಕರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಬಾಡಿಗೆದಾರ ಬಾಡಿಗೆ ಇಲ್ಲದೆ ಪರೋಕ್ಷವಾಗಿ ನಿರುದ್ಯೋಗಿಯಾಗಿದ್ದಾನೆ.

ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳುತ್ತಿದ್ದ ಮಧ್ಯಮವರ್ಗದ ಹೋಟೆಲ್‌ಗಳಿಗೆ ಇಂಧನ ಬೆಲೆ ಏರಿಕ, ಅಗತ್ಯ ವಸ್ತುಗಳ ಬೆಲೆ ಏರಿಕೆ ನುಂಗಲಾರದ ತುತ್ತಾಗಿವೆ. ಇದರ ಪರಿಣಾಮ ಜನಸಾಮಾನ್ಯರ ಮೇಲೆ ಕೂಡ ಆಗಿದ್ದು, ತಿನಿಸುಗಳ ಬೆಲೆ ಏರಿಕೆ ಹೊರೆಯಾಗಿ ಪರಿಣಮಿಸಿದೆ. ಈ ಮಧ್ಯದಲ್ಲೆ ಮತ್ತೊಂದು ಲಾಕ್‌ಡೌನ್‌ಗೆ ಸರ್ಕಾರ ಸಣ್ಣ ಸುಳಿವು ನೀಡಿದೆ.


ಇದನ್ನೂ ಓದಿ: ರಾಜ್ಯದಲ್ಲಿ ಲಾಕ್‌ಡೌನ್, ನೈಟ್ ಕರ್ಫ್ಯೂ ಹೇರುವುದಿಲ್ಲ- ಸಿಎಂ ಯಡಿಯೂರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...