ಮಂಗಳವಾರ ಮುಂಜಾನೆ ಈರುಳ್ಳಿ ಬೆಲೆ ದಿಢೀರ್ ಕುಸಿದ ಹಿನ್ನೆಲೆಯಲ್ಲಿ ದಲ್ಲಾಳಿ ಅಂಗಡಿಗಳ ಗ್ಲಾಸ್‌ಗಳನ್ನು ರೈತರು ಒಡೆದು ಪುಡಿಪುಡಿ ಮಾಡಿದ ಘಟನೆ ಗದಗ ಎಪಿಎಂಸಿಯಲ್ಲಿ ನಡೆದಿದೆ. ರೈತರ ಆಕ್ರೋಶಕ್ಕೆ ದಲ್ಲಾಳಿಗಳು ಅಂಗಡಿಗಳನ್ನು ಬಿಟ್ಟು ಪರಾರಿಯಾದರು.
ಆಕ್ರೋಶಗೊಂಡ ರೈತರು ಗದಗ ಎಪಿಎಂಸಿಯಿಂದ ಜನರಲ್ ಕಾರ್ಯಪ್ಪ ಸರ್ಕಲ್‌ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಹೆದ್ದಾರಿ ತಡೆದರು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.
ಸ್ಥಳಕ್ಕೆ ಗದಗ ಎಸ್ಪಿ ಶ್ರೀನಾಥ್ ಜೋಷಿ, ಎಸಿ ಭೇಟಿ ನೀಡಿ ರೈತರ ಮನವೊಲಿಸಿದರು. ದಲ್ಲಾಳಿಗಳ ಜೊತೆ ಮಾತನಾಡಿ ಸೂಕ್ತ ಬೆಲೆ ಒದಗಿಸೋ ಪ್ರಯತ್ನ ಮಾಡೋ ಭರವಸೆ ಸಿಕ್ಕ ನಂತರ ರೈತರು ತಮ್ಮ ಪ್ರತಿಭಟನೆ ಹಿಂಪಡೆದರು. ಕ್ವಿಂಟಲ್ ಗೆ 4-5 ಸಾವಿರ ಇದ್ದ ಈರುಳ್ಳಿ ಬೆಲೆ ಈಗ ಏಕಾಏಕಿ ರೂ. 150 ಕ್ಕೆ ಕುಸಿದಿದ್ದು ರೈತರ ಆಕ್ರೋಶಕ್ಕೆ ಕಾರಣವಾಯಿತು.

ಗದಗ ಇಡೀ ರಾಜ್ಯಕ್ಕೆ ಉಳ್ಳಾಗಡ್ಡಿಯ ದೊಡ್ಡ ಮಾರುಕಟ್ಟೆ. ಗದಗಿನ ಎಲ್ಲಾ ತಾಲ್ಲೂಕುಗಳಲ್ಲೂ ಅಪಾರ ಪ್ರಮಾಣದಲ್ಲಿ ಪ್ರತಿವರ್ಷ ಉಳ್ಳಾಗಡ್ಡಿ ಬೆಳೆಯುತ್ತಾರೆ. ಕೆಲವೊಮ್ಮೆ ಬೆಳೆಯನ್ನು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ, ಮುಂಬೈನ ನಾಸಿಕಕ್ಕೂ ಕಳಿಸಿ ಮಾರುತ್ತಾರೆ. ಇಲ್ಲಿನ ಈರುಳ್ಳಿಗೆ ಒಳ್ಳೆ ಬೆಲೆಯೂ ಇದೆ. ಈ ಸಲ ವಿಪರೀತ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ನಾಶವಾಗಿದೆ. ಕೊಳೆರೋಗದಿಂದಲೂ ಇಳುವರಿ ಕಡಿಮೆಯಾಗಿದೆ. ಆದರೆ, ಚೆನ್ನಾಗಿ ಬಂದ ಬೆಳೆಗೂ ಸರಿಯಾದ ಬೆಲೆ ಸಿಕ್ಕಿಲ್ಲ.
ಮೊದಲಿಗೆ ಕೇಂದ್ರ ಸರ್ಕಾರ ರಫ್ತು ನಿಷೇಧ ಹೇರಿದ್ದರಿಂದ ಧಾರಣೆ ಕುಸಿದಿತ್ತು. ನಂತರ ರಫ್ತು ನಿಷೇಧ ತೆಗೆದ ಮೇಲೂ ಧಾರಣೆಯೇನೂ ಏರಲಿಲ್ಲ. ಕಳೆದ ವರ್ಷ 7-8 ಸಾವಿರವಿದ್ದ ದರ ಈ ವರ್ಷ 4 ಸಾವಿರಕ್ಕೆ ಇಳಿಯಿತು. ಆದರೆ ಇಂದು ಮುಂಜಾನೆ ರೈತರಿಗೆ ದೊಡ್ಡ ಆಘಾತ ಕಾದಿತ್ತು. ಈರುಳ್ಳಿ ದರ ಏಕಾಏಕಿ ಕ್ವಿಂಟಾಲ್‌ಗೆ 150 ರೂಪಾಯಿಗೆ ಕುಸಿಯಿತು.

ಕ್ಷಣಕಾಲ ಕುಸಿದೇ ಹೋದ ರೈತ ಸಮೂಹ ನಂತರ ಈ ಮಾರುಕಟ್ಟೆ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದರು. ಅದರ ಪರಿಣಾಮವಾಗಿ ತಂದಿದ್ದ ಈರುಳ್ಳಿಯನ್ನು ಎಪಿಎಂಸಿ ಆವರಣ, ರಸ್ತೆಗಳಲ್ಲಿ ಚೆಲ್ಲಾಡಿದರು. ದಲ್ಲಾಳಿ ಅಂಗಡಿಗಳ ಗಾಜುಗಳನ್ನು ಈರುಳ್ಳಿ ಎಸೆದೇ ಪುಡಿಪುಡಿ ಮಾಡಿದರು. ಕುರ್ಚಿ ಟೇಬಲ್ಲುಗಳನ್ನು ಜಖಂಗೊಳಿಸಿದರು. ಭಯಭಿತರಾದ ದಲ್ಲಾಳಿ ಅಂಗಡಿಯ ವ್ಯಾಪಾರಸ್ಥರು ಎದ್ದು ಬಿದ್ದ್ದು ಓಡಿ ಹೋದರು.
ಈ ಪರಿಸ್ಥಿತಿಗೆ ಕಾರಣರಾದ ದಲ್ಲಾಳಿ ಅಂಗಡಿಯ ವಂಚಕ ವ್ಯಾಪಾರಿಗಳನ್ನು ಅಟ್ಟಾಡಿಸಿಕೊಂಡು ಹೋದರು. ತಮ್ಮ ಬೆಳೆಗೆ ಸೂಕ್ತ ಬೆಲೆ ಕೊಡಬೇಕು ಅಂತ ಆಗ್ರಹಿಸಿ ಎಪಿಎಂಸಿಯಿಂದ ಪ್ರತಿಭಟನೆ ಮಾಡ್ತಾ, ನಗರದ ಜನರಲ್ ಕಾರ್ಯಪ್ಪ ಸರ್ಕಲ್ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಹೆದ್ದಾರಿ ಬಂದ್ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆಗೆ ಉಳ್ಳಾಗಡ್ಡಿ ಇಂದು ಸಾಕ್ಷಿಯಾಗಿ ನಿಂತಿದೆ. ಈರುಳ್ಳಿ ಬೆಳೆದ ರೈತನ ಕಣ್ಣಲ್ಲಿ ಕಣ್ಣೀರು ಮಾತ್ರವಲ್ಲ, ಆಕ್ರೋಶವೂ ಇದೆ.

ಸಾಕು ಸಾಕಾಗಿದೆ : ಗಂಗಾಧರಯ್ಯ, ರೈತ.
ಗದಗ ಜಿಲ್ಲೆ ಈ ಬಾರಿಯ ಪ್ರವಾಹದಿಂದ ನಲುಗಿಹೋಗಿದೆ. ರೈತರು ಬೆಳೆದಿದ್ದ ಈರುಳ್ಳಿಯೆಲ್ಲಾ ನೀರು ಪಾಲಾಗಿತ್ತು. ಅಷ್ಟೋ ಇಷ್ಟೋ ಉಳಿದ ಬೆಳೆಯನ್ನು ಮಾರುಕಟ್ಟೆಗೆ ತಂದ್ರೆ ಕ್ವಿಂಟಲ್ ಈರುಳ್ಳಿಗೆ 100 ರಿಂದ 150 ರೂಪಾಯಿ ಮಾತ್ರ ಹರಾಜು ಕೂಗಲಾಗ್ತಿದೆ. ಇದು ನಮ್ಮ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಬೆಲೆಯ ಕಣ್ಣಾ ಮುಚ್ಚಾಲೆ ಆಟದಿಂದ ಇಂದು ರೈತರ ಆಕ್ರೋಶದ ಕಟ್ಟೆ ಇಂದು ಒಡೆದು ಹೋಯಿತು ಎಂದಿದ್ದಾರೆ.


