“ಹಿಂದೂಗಳು ಮಾತ್ರ ದೇಶಭಕ್ತರಾಗಲು ಸಾಧ್ಯ. ಯಾಕೆಂದರೆ ಅದು ಅವರ ಮೂಲ ಗುಣ ಮತ್ತು ಸ್ವಭಾವವಾಗಿರುತ್ತದೆ” ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಹೇಳಿದ್ದಾರೆ.
ಜೆ.ಕೆ.ಬಜಾಜ್ ಮತ್ತು ಎಂ.ಡಿ ಶ್ರೀನಿವಾಸ್ ಬರೆದ “ಮೇಕಿಂಗ್ ಆಫ್ ಎ ಹಿಂದೂ ದೇಶಭಕ್ತ: ಗಾಂಧೀಜಿಯ ಹಿಂದ್ ಸ್ವರಾಜ್ ಹಿನ್ನೆಲೆ” ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತನಾಡುತ್ತಾ, “ದೇಶಪ್ರೇಮವು ಅವರ ಧರ್ಮದಿಂದ ಹುಟ್ಟಿಕೊಂಡಿದೆ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದಾರೆ” ಎಂದು ಉಲ್ಲೇಖಿಸಿ ಮಾತನಾಡಿದರು.
ಇದನ್ನೂ ಓದಿ: ಪ್ರಧಾನಿ ವಿರುದ್ಧ ದನಿಯೆತ್ತಿದರೆ ಮೋಹನ್ ಭಾಗವತ್ ಕೂಡಾ ಭಯೋತ್ಪಾದಕರೇ! – ರಾಹುಲ್ ಗಾಂಧಿ
ಈ ಪುಸ್ತಕ ಮಹಾತ್ಮ ಗಾಂಧಿಯವರ ಕುರಿತಾದ ಅಧಿಕೃತ ವಿದ್ವತ್‌ಪೂರ್ಣ ಸಂಶೋಧನಾ ದಾಖಲೆಯಾಗಿದೆ ಎಂದು ವಿವರಿಸಿದ ಭಾಗವತ್, “ತನ್ನ ತಾಯಿನಾಡಿನ ಮೇಲಿನ ಪ್ರೀತಿಯು ಅವರ ಆಧ್ಯಾತ್ಮಿಕತೆಯಿಂದ ಹುಟ್ಟಿಕೊಂಡಿರುವುದರಿಂದ ಅವರ ಧರ್ಮ ಮತ್ತು ದೇಶಭಕ್ತಿ ಭಿನ್ನವಾಗಿರಬಾರದು ಎಂದು ಗಾಂಧೀಜಿ ಹೇಳಿದ್ದಾರೆ. ಧರ್ಮವು ಕೇವಲ ಧರ್ಮದ ಅರ್ಥದಲ್ಲಿಲ್ಲ, ಅದು ಧರ್ಮಕ್ಕಿಂತ ವಿಶಾಲವಾಗಿದೆ” ಎಂದು ಹೇಳಿದರು.
“ಹಿಂದೂಗಳಾದವರು ದೇಶಭಕ್ತರಾಗಿರಲೇಬೇಕು. ಅದು ಅವರ ಮೂಲ ಗುಣ ಮತ್ತು ಸ್ವಭಾವವಾಗಿರುತ್ತದೆ. ಕೆಲವೊಮ್ಮೆ ನೀವು ಅವರ ದೇಶಭಕ್ತಿಯನ್ನು ಜಾಗೃತಗೊಳಿಸಬೇಕಾಗಬಹುದು. ಆದರೆ ಅವರು ಎಂದಿಗೂ ಭಾರತ ವಿರೋಧಿ ಆಗಲು ಸಾಧ್ಯವಿಲ್ಲ. ಆದರೆ ಯಾರೇ ಒಬ್ಬ ತನ್ನ ದೇಶವನ್ನು ಪ್ರೀತಿಸಿದರೆ ಅದು ಕೇವಲ ಭೂಮಿಯನ್ನು ಮಾತ್ರ ಪ್ರೀತಿಸುವುದು ಎಂದು ಅರ್ಥವಲ್ಲ. ಅಲ್ಲಿನ ಜನರು, ನದಿಗಳು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಎಲ್ಲವನ್ನೂ ಅರ್ಥೈಸಿಕೊಳ್ಳಬೇಕು ಎಂಬ ಅಂಶವನ್ನು ಅರಿತುಕೊಳ್ಳಿ” ಎಂದು ಅವರು ಹೇಳಿದರು.
ಇದನ್ನೂ ಓದಿ: ’ದಾರಿ ತಪ್ಪಲು ನಾವು ಮಕ್ಕಳಲ್ಲ’: ಮೋಹನ್ ಭಾಗವತ್‌ಗೆ ಓವೈಸಿ ತಿರುಗೇಟು


