ಹಿಂದೂ- ಮುಸ್ಲಿಂ ಕೋಮು ದಳ್ಳುರಿ ಎಬ್ಬಿಸಲು ಕೆಲವು ಮತೀಯ ಸಂಘಟನೆಗಳು ಬಯಸುತ್ತಿರುವ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಆದೇಶ ಹೊರಡಿಸಿದೆ.
ಇಲ್ಲಿನ 2 ಎಕರೆಗೂ ಹೆಚ್ಚು ಜಾಗವನ್ನು ಆಟದ ಮೈದಾನವಾಗಿಯೂ ಹಾಗೂ ಮುಸ್ಲಿಂ ಸಮುದಾಯದವರು ಬಕ್ರೀದ್ ಮತ್ತು ರಂಜಾನ್ ಸಮಯದಲ್ಲಿ ಪ್ರಾರ್ಥನೆಗಾಗಿ ಮಾತ್ರವೇ ಬಳಸಬಹುದು ಎಂದು ಮಧ್ಯಂತರ ಆದೇಶದಲ್ಲಿ ಹೇಳಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಂಟಿ ಆಯುಕ್ತ (ಪಶ್ಚಿಮ) ಆಗಸ್ಟ್ 7ರಂದು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ರಾಜ್ಯ ವಕ್ಫ್ ಮತ್ತು ಬೆಂಗಳೂರು ಜಿಲ್ಲಾ ವಕ್ಫ್ ಅಧಿಕಾರಿಗಳು ಪ್ರಶ್ನಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಜಮೀನಿನ ಮಾಲೀಕತ್ವವನ್ನು ಪರಿಶೀಲಿಸುವಂತೆ ಜಂಟಿ ಆಯುಕ್ತರಿಗೆ (ಪಶ್ಚಿಮ) ಬಿಬಿಎಂಪಿ ಮುಖ್ಯ ಆಯುಕ್ತರು ಸೂಚಿಸಿದ್ದರು. ನಂತರ ಅಧಿಕಾರಿಯು ಆಗಸ್ಟ್ 7ರಂದು ಜಮೀನು ಕಂದಾಯ ಇಲಾಖೆಗೆ ಸೇರಿದ್ದು ಎಂದು ಪ್ರತಿಕ್ರಿಯೆ ನೀಡಿದ್ದರು.
ಈ ಆಸ್ತಿ ವಿವಾದವು 1955ರಷ್ಟು ಹಿಂದಿನದು. ಸುಪ್ರೀಂ ಕೋರ್ಟ್ 1965ರಲ್ಲಿ ವಕ್ಫ್ ಪರವಾಗಿ ತೀರ್ಪು ನೀಡಿತ್ತು.
ಈದ್ಗಾ ಮೈದಾನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ನೀಡಬೇಕು ಎಂದು ಕೆಲವು ಹಿಂದುತ್ವ ಸಂಘಟನೆಗಳು ಬಿಬಿಎಂಪಿಯನ್ನು ಕೋರಿದ್ದವು.
ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ 1965ರ ಗೆಜೆಟ್ ಅನ್ನು ಪ್ರಸ್ತುತಪಡಿಸಿ ಈ ಮೈದಾನವು ವಕ್ಫ್ ಆಸ್ತಿ ಎಂದು ತಿಳಿಸಿತು. 1974ರ ಸಿಟಿ ಸರ್ವೆ ದಾಖಲೆಗಳು ಈ ಜಾಗವನ್ನು ಆಟದ ಮೈದಾನವೆಂದು ಸೂಚಿಸಿರುವುದಾಗಿ ಹೇಳಲಾಗುತ್ತಿದೆ.
ಬಿಬಿಎಂಪಿ ಆದೇಶದ ನಂತರ ಹಿಂದುತ್ವ ಸಂಘಟನೆಗಳು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದಾಗಿ ಘೋಷಿಸಿದವು. ಅಲ್ಲದೆ ಸ್ಥಳೀಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರೂ ಇಲ್ಲಿ ರಾಷ್ಟ್ರಧ್ವಜ ಹಾರಿಸುವುದಾಗಿ ತಿಳಿಸಿದರು.
ಇದನ್ನೂ ಓದಿರಿ: ಕೋಮುವಾದಿಗಳು ಎಬ್ಬಿಸಿದ ವಿವಾದದ ಸುಳಿಯಲ್ಲಿ ಈದ್ಗಾ ಮೈದಾನದ ಬಯಲು
ರಾಜ್ಯ ಕಂದಾಯ ಇಲಾಖೆಯು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಆಗಸ್ಟ್ 15ರಂದು ಈದ್ಗಾ ಮೈದಾನದಲ್ಲಿ ಸಹಾಯಕ ಆಯುಕ್ತ ಶ್ರೇಣಿಯ ಅಧಿಕಾರಿಯೊಬ್ಬರು ಧ್ವಜಾರೋಹಣ ಮಾಡಿದ್ದರು.
ಇದೇ ವೇಳೆ ಕೆಲವು ಹಿಂದುತ್ವ ಸಂಘಟನೆಗಳು ಆಟದ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಿಸುವಂತೆ ಒತ್ತಾಯಿಸಿದ್ದವು. ಈ ಮೂಲಕ ಈದ್ಗಾ ಮೈದಾನವನ್ನು ವಿವಾದದ ಕೇಂದ್ರ ಬಿಂದು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಯಥಾಸ್ಥಿತಿ ಮುಂದುವರಿಸಲು ಸೂಚಿಸಿದೆ.
ವಿವಾದಿತ ಈದ್ಗಾ ಮೈದಾನವನ್ನು ಆಟದ ಮೈದಾನವಾಗಿ ಮತ್ತು ಮುಸ್ಲಿಮರು ಹಬ್ಬದ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಮಾತ್ರ ಬಳಸಬೇಕೆಂದು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ತೀರ್ಪು ನೀಡಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿದ್ದಾರೆ.


