Homeಕರ್ನಾಟಕಕೋಮುವಾದಿಗಳು ಎಬ್ಬಿಸಿದ ವಿವಾದದ ಸುಳಿಯಲ್ಲಿ ಈದ್ಗಾ ಮೈದಾನದ ಬಯಲು

ಕೋಮುವಾದಿಗಳು ಎಬ್ಬಿಸಿದ ವಿವಾದದ ಸುಳಿಯಲ್ಲಿ ಈದ್ಗಾ ಮೈದಾನದ ಬಯಲು

- Advertisement -
- Advertisement -

(ಸೂಚನೆ: ಈ ವರದಿಯು ‘ನ್ಯಾಯಪಥ’ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ. ವರದಿ ಮುದ್ರಣವಾದ ಒಂದು ದಿನದ ನಂತರದಲ್ಲಿ ಬಿಬಿಎಂಪಿ ಪ್ರತಿಕ್ರಿಯೆ ನೀಡಿದ್ದು, ‘ಚಾಮರಾಜಪೇಟೆ ಈದ್ಗಾ ಮೈದಾನ ತನಗೆ ಸೇರಿಲ್ಲ’ ಎಂದು ಸ್ಪಷ್ಟನೆ ನೀಡಿದೆ.)

ಮಸೀದಿ ಮತ್ತು ಅನ್ಯ ಧರ್ಮೀಯರ ಪ್ರಾರ್ಥನಾ ಸ್ಥಳಗಳ ಕೆಳಗೆ ದೇವಾಲಯಗಳನ್ನು ದೇವರ ವಿಗ್ರಹಗಳನ್ನು ಹುಡುಕಿ ಒಂದು ಮಟ್ಟಕ್ಕೆ ಸಹಬಾಳ್ವೆಯಿಂದ ಬದುಕುತ್ತಿರುವ ಸಮಾಜಕ್ಕೆ ಕೋಮು ದ್ವೇಷ ಹಚ್ಚುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಲ್ಲದೇ ಇರುವ ವಿವಾದವನ್ನು ಸೃಷ್ಟಿಸಿ, ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ’ಫ್ರಿಂಜ್ ಎಲಿಮೆಂಟ್’ಗಳು ರಾರಾಜಿಸುತ್ತಿವೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಪುರಾತನ ಈದ್ಗಾ ಮೈದಾನಕ್ಕೂ ಈ ’ಫ್ರಿಂಜ್‌ಗಳು’ ಕೈಹಾಕಿರುವಂತಿದೆ.

ಚಾಮರಾಜಪೇಟೆಯ ಈದ್ಗಾ ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕೆಲವು ಹಿಂದುತ್ವ ಸಂಘಟನೆಗಳು ಬಿಬಿಎಂಪಿಯಿಂದ ಸ್ಪಷ್ಟೀಕರಣ ಕೇಳಿದವು. ವಿಚಾರವಾದಿಗಳ ಹತ್ಯೆಗಳಲ್ಲಿ ಹೆಸರಿಸಲಾಗಿ ಆರೋಪ ಎದುರಿಸುತ್ತಿರುವ ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಸಂಘಟನೆಗಳು ವಿವಾದ ಸೃಷ್ಟಿಗೆ ಮುಂದಾಗಿ, “ಈ ಆಟದ ಮೈದಾನ ಬಿಬಿಎಂಪಿಗೆ ಸೇರಿರುವುದರಿಂದ ತಮಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು” ಎಂದವು.

ಯಾರೋ ಬಂದು ಏನನ್ನೋ ಪ್ರತಿಪಾದಿಸುತ್ತಾರೆ. ಆದರೆ ಆಡಳಿತ ವರ್ಗವೂ ಇದೇ ಪ್ರತಿಪಾದನೆಯನ್ನು ಮಾಡಿದಾಗ ವಿಷಯ ಬೇರೊಂದು ಮಗ್ಗುಲಿಗೆ ಹೊರಳಿತು. “ಚಾಮರಾಜಪೇಟೆಯ ಈದ್ಗಾ ಮೈದಾನವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಸೇರಿದೆ. ಪಾಲಿಕೆಯ ದಾಖಲೆಗಳ ಪ್ರಕಾರ ಪೂರ್ವಾನುಮತಿ ಪಡೆದು ಎಲ್ಲ ಸಮುದಾಯದವರು ಈ ಮೈದಾನವನ್ನು ಬಳಸಬಹುದು” ಎಂದು ಬಿಬಿಎಂಪಿ ಹೇಳಿಬಿಟ್ಟಿದೆ.

ಬಿಬಿಎಂಪಿ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ, “ಇದು ಬಿಬಿಎಂಪಿ ಆಸ್ತಿಯಾಗಿದ್ದು, ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರು ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆಟದ ಮೈದಾನದಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಈ ಸ್ಥಳವನ್ನು ನೀಡಬಹುದು ಎಂದು ನ್ಯಾಯಾಲಯದ ಆದೇಶವಿದೆ” ಎಂದು ತಿಳಿಸಿದ್ದಾರೆ.

“ನ್ಯಾಯಾಲಯದ ಆದೇಶದ ಪ್ರಕಾರ ಪಶ್ಚಿಮ ವಲಯ ಜಂಟಿ ಆಯುಕ್ತರ ಅನುಮತಿಯೊಂದಿಗೆ ಮುಸ್ಲಿಮರು ರಂಜಾನ್ ಮತ್ತು ಬಕ್ರೀದ್ ಸಮಯದಲ್ಲಿ ಪ್ರಾರ್ಥನೆಗಾಗಿ ಇಲ್ಲಿ ಸೇರುತ್ತಾರೆ” ಎಂದು ತಿಳಿಸಿದ್ದಾರೆ.

“ಪ್ರತಿ ವರ್ಷ ರಂಜಾನ್ ಮತ್ತು ಬಕ್ರೀದ್ ಸಮಯದಲ್ಲಿ, ಈ ಸ್ಥಳವು ಧಾರ್ಮಿಕ ಚಟುವಟಿಕೆಯ ಕೇಂದ್ರವಾಗುತ್ತದೆ. ಬಕ್ರೀದ್ ಸಮಯದಲ್ಲಿ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಮತ್ತು ಇತರ ಜಿಲ್ಲೆಗಳ ರೈತರು ಕುರಿ ಮತ್ತು ಮೇಕೆಗಳನ್ನು ಇಲ್ಲಿಗೆ ತಂದು ಮಾರುತ್ತಾರೆ. ಈ ಎರಡು ಸಂದರ್ಭಗಳನ್ನು ಹೊರತುಪಡಿಸಿ, ಇತರ ಚಟುವಟಿಕೆಗಳಿಗೆ ಅವಕಾಶ ನೀಡುವ ಬಗ್ಗೆ ಜಂಟಿ ಆಯುಕ್ತರು ನಿರ್ಧಾರ ತೆಗೆದುಕೊಳ್ಳಬಹುದು” ಎಂದು ಪಾಲಿಕೆ ಹೇಳಿತು.

ಈ ಜಾಗವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಲು ಸಿದ್ಧರಿರುವ ಯಾರಾದರೂ ಬಿಬಿಎಂಪಿಗೆ ಪ್ರಸ್ತಾವನೆಯನ್ನು ಕಳುಹಿಸಬಹುದು. ಅರ್ಜಿಯನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.

ಈ ಮೂಲಕ ಈ ಜಾಗ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಸೇರಿದ್ದೋ ಅಥವಾ ಬಿಬಿಎಂಪಿಗೆ ಸೇರಿದ್ದೋ ಎಂಬ ಪ್ರಶ್ನೆ ಎದ್ದಿದೆ. ವಿವಾದವನ್ನು ಸುಖಾಸುಮ್ಮನೆ ಹುಟ್ಟು ಹಾಕಲಾಗುತ್ತಿದೆಯೇ ಎಂಬ ಗುಮಾನಿಯೂ ಹುಟ್ಟಿಕೊಂಡಿದೆ.

ಚಾಮರಾಜಪೇಟೆಯ ಈದ್ಗಾ ಮೈದಾನ ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಲಿಯೋ ಎಫ್ ಸಾಲ್ಡಾನಾ. “ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳು ಒಂದು ಕ್ಷುಲ್ಲಕ ವಿಷಯವನ್ನು ಅನಾವಶ್ಯಕವಾಗಿ ಕದಡಿ ರಾಡಿ ಎಬ್ಬಿಸಿರುವ ತಮ್ಮ ಅಧೀನ ಅಧಿಕಾರಿಯ ವಿರುದ್ಧ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕು. ಇದು ರಾಜ್ಯಾದ್ಯಂತ ದ್ವೇಷ ಮತ್ತು ಕೋಮುವಾದವನ್ನು ಹರಡುತ್ತಿರುವವರ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿರಬೇಕು” ಎಂದು ಆಗ್ರಹಿಸುತ್ತಾರೆ.

ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಅವರು, ಈದ್ಗಾ ಮೈದಾನ ಕೇವಲ ಕ್ರಿಕೆಟ್ ಆಟಕ್ಕಷ್ಟೇ ಅಲ್ಲದೆ ಸರ್ವಜನಾಂಗಗಳ ಸಾಮರಸ್ಯ ಕೇಂದ್ರವಾಗಿತ್ತು ಎನ್ನುತ್ತಾರೆ. “ಚಾಮರಾಜಪೇಟೆಯ ಉದ್ದಗಲಕ್ಕೂ ಗೆಳೆಯರ ಭೇಟಿಗೆ ಹೋಗುತ್ತಿದ್ದಾಗ, ಅವರು ಯಾವ ಧರ್ಮ ಅಥವಾ ಜಾತಿಗೆ ಸೇರಿದವರು, ಅವರು ಎಲ್ಲಿಂದ ಬಂದವರು ಎಂಬ ಚಿಂತೆಯನ್ನು ನಾವು ಎಳ್ಳಷ್ಟೂ ಮಾಡುತ್ತಿರಲಿಲ್ಲ. ಒಬ್ಬರು ಇನ್ನೊಬ್ಬರ ಸಹವಾಸವನ್ನು ಸಾಧ್ಯವಿರುವ ಎಲ್ಲಾ ರೀತಿಗಳಲ್ಲಿ ನಾವು ಆನಂದಿಸುತ್ತಿದ್ದೆವು” ಎನ್ನುತ್ತಾರೆ ಸಾಲ್ಡಾನಾ.

ಡಾ.ಹರೀಶ್ ಕುಮಾರ್

ಈಗಲೂ ಯಾವುದೇ ಬೇಲಿಯನ್ನು ಹೊಂದಿರದ ಈ ಮೈದಾನದಲ್ಲಿ ಸಂತೆ ನಡೆಯುತ್ತದೆ. ಎಲ್ಲ ಜಾತಿ, ಜನಾಂಗಗಳು ಸೇರುತ್ತವೆ. ಎಪ್ಪತ್ತರ ದಶಕದಿಂದೀಚೆಗೆ ದೇಶದಲ್ಲಿ ಘಟಿಸಿರುವ ಕೋಮು ಸಂದಿಗ್ಧತೆಯ ಏರಿಳಿತಗಳಿಗೂ ಈ ಮೈದಾನ ಸಾಕ್ಷಿಯಾಗಿದೆ ಎಂಬುದು ಸಾಲ್ಡಾನಾ ಅವರ ಅನುಭವ.

ಈದ್ಗಾ ಮೈದಾನದೊಂದಿಗಿನ ತಮ್ಮ ಬಾಲ್ಯದ ನೆನಪುಗಳನ್ನು ’ನ್ಯಾಯಪಥ’ದ ಜೊತೆ ಹಂಚಿಕೊಂಡ ಬೆಂಗಳೂರಿನ ನಿವಾಸಿ ದಿನೇಶ್ ಫ್ರಾನ್ಸಿಸ್, “ಶಿವರಾತ್ರಿ ಹಬ್ಬ ಬಂದಾಗಲೂ ಆಚರಣೆಗಳು ನಡೆಯುತ್ತಿದ್ದವು. ಮುಸ್ಲಿಮರು ತಮ್ಮ ಹಬ್ಬಗಳ ಸಂದರ್ಭದಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು. ಇಪ್ಪತ್ತು ವರ್ಷಗಳ ಹಿಂದೆ ಈ ಮೈದಾನವನ್ನು ಸರ್ಕಾರ ತನ್ನ ಹಿಡಿತಕ್ಕೆ ಪಡೆದು ಬೇರೆ ಅಭಿವೃದ್ಧಿ ಕಾಮಗಾರಿ ನಡೆಸಲು ಮುಂದಾಗಿತ್ತು. ಆಗ ನಾವೆಲ್ಲ ವಿರೋಧಿಸಿ ತಡೆದೆವು. ಮಕ್ಕಳು ಆಟವಾಡಲು ಸೂಕ್ತವಾದ ಮೈದಾನವಿದೆಂದು ಹೋರಾಟ ನಡೆಸಿದೆವು. ಇಲ್ಲಿ ಯಾವುದೇ ರಾಜಕೀಯ ರ್‍ಯಾಲಿಗಳು ನಡೆಯುತ್ತಿರಲಿಲ್ಲ. ಧರ್ಮಗಳ ಸಂಗತಿ ನಮಗೆ ಮುಖ್ಯವೇ ಆಗಿರಲಿಲ್ಲ ಎಂದರು.

ಬದುಕಿನ ಭಾವಕೋಶಗಳಲ್ಲಿ ಇಷ್ಟೆಲ್ಲ ಬೆರೆತಿರುವ ಈದ್ಗಾ ಮೈದಾನ ವಿವಾದದ ಕೇಂದ್ರವಾಗುತ್ತಿರುವುದು ಏತಕ್ಕೆ? ’ಈ ಜಾಗ ಯಾರಿಗೆ ಸೇರಿದ್ದು?’ ಎಂಬ ಚರ್ಚೆ ಹುಟ್ಟಿಕೊಂಡಿದ್ದು ಹೇಗೆ? ಈ ಜಾಗ ಬಿಬಿಎಂಪಿಗೆ ಸೇರಬೇಕೋ, ವಕ್ಫ್ ಮಂಡಳಿಗೆ ಸೇರಬೇಕೋ? ಈ ಎರಡು ಸರ್ಕಾರಿ ಸಂಸ್ಥೆಗಳ ನಡುವೆ ಗುದ್ದಾಟ ಶುರುವಾಗಿದ್ದು ಎಲ್ಲಿಂದ?

’ಬಿಬಿಎಂಪಿ ಹೇಳಿಕೆ ಹಿಂಪಡೆಯಲಿ’ ’ಚಾಮರಾಜಪೇಟೆ ಈದ್ಗಾ ಮೈದಾನ ತಮ್ಮದೆಂದು ಹೇಳಿಕೆ ನೀಡಿರುವ ಬಿಬಿಎಂಪಿ ತನ್ನ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಕೇಂದ್ರ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) ಆಗ್ರಹಿಸಿದೆ.

ಬಿಬಿಎಂಪಿ ವಿಶೇಷ ಆಯುಕ್ತರಿಗೆ ಪತ್ರ ಬರೆದಿರುವ ಸಿಎಂಎ ಪ್ರಧಾನ ಕಾರ್ಯದರ್ಶಿ ಡಾ.ಜಹೀರುದ್ದೀನ್ ಅಹ್ಮದ್, “ಈ ಭೂಮಿ ವಕ್ಫ್‌ಗೆ ಸೇರಿದೆ. ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ಅಂದಿನ ಬೆಂಗಳೂರು ಸಿಟಿ ಕಾರ್ಪೊರೇಶನ್ ಪ್ರತಿಪಾದನೆಯನ್ನು ವಜಾಗೊಳಿಸಿತ್ತು. ಈ ಕುರಿತು ವಕ್ಫ್ ಗೆಜೆಟ್ ಅಧಿಸೂಚನೆಯನ್ನು ಜೂನ್ 7, 1965ರಂದು ಹೊರಡಿಸಿದೆ” ಎಂದು ತಿಳಿಸಿದ್ದಾರೆ.

“ಪಾಲಿಕೆಯು ಈದ್ಗಾ ಮೈದಾನದ ನೈಋತ್ಯ ಮೂಲೆಯಲ್ಲಿ ಅನಧಿಕೃತವಾಗಿ ವಾರ್ಡ್ ಕಚೇರಿಯನ್ನು ನಿರ್ಮಿಸಿತ್ತು. ಆದರೆ 1971ರ ಆಗಸ್ಟ್ 28ರಂದು ಅಂದಿನ ಮೇಯರ್ ಎಂ.ಬಿ.ಲಿಂಗಯ್ಯ ಮತ್ತು ಸಿಎಂಎ ಪ್ರತಿನಿಧಿಗಳ ನಡುವೆ ಸಭೆ ನಡೆಯಿತು. 30 ವರ್ಷಗಳ ಕಾಲ ಜಾಗವನ್ನು ಗುತ್ತಿಗೆ ನೀಡಲು ಒಪ್ಪಿಗೆ ನೀಡಲಾಯಿತು” ಎಂದಿದ್ದಾರೆ ಅಹ್ಮದ್.

“1994ರ ಮಾರ್ಚ್ 3ರಂದು ಪಾಲಿಕೆಗೆ ಪತ್ರ ಬರೆದು ವಾರ್ಡ್ ಕಚೇರಿಯನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಈದ್ಗಾ ಮೈದಾನ ಆಟದ ಮೈದಾನವಾಗಿದ್ದು, ಅದು ತಮಗೆ ಸೇರಿದೆ ಎಂದು ಬಿಬಿಎಂಪಿ ಹೇಳಿರುವುದು ಅಚ್ಚರಿಯ ಸಂಗತಿಯಾಗಿದೆ. ಬಿಬಿಎಂಪಿ ತನ್ನ ಹೇಳಿಕೆಯನ್ನು ವಾಪಸ್ ಪಡೆಯಬೇಕು” ಎಂದು ಅವರು ಆಗ್ರಹಿಸಿದ್ದಾರೆ.

’ನ್ಯಾಯಪಥ’ದೊಂದಿಗೆ ಮಾತನಾಡಿದ ವಕ್ಫ್ ಮಂಡಳಿ ಕಾರ್ಯ ನಿರ್ವಾಹಕ ಅಧಿಕಾರಿ ಪರ್ವೀಜ಼್ ಖಾನ್ ಕೂಡ ಇದೇ ಪ್ರತಿಪಾದನೆಯನ್ನು ಮಾಡಿದ್ದಾರೆ. “ಸುಪ್ರೀಂ ಕೋರ್ಟ್ ಆದೇಶದಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಅದು ಸಾರ್ವಜನಿಕವಾಗಿಯೂ ಲಭ್ಯವಿದೆ. ಈಗ ಬಿಬಿಎಂಪಿಯವರು ತಮ್ಮದೆಂದು ಯಾಕೆ ಹೇಳುತ್ತಿದ್ದಾರೆಂದು ಗೊತ್ತಿಲ್ಲ. ಎಲ್ಲ ದಾಖಲೆಗಳನ್ನು ಬಿಬಿಎಂಪಿಗೆ ಸಲ್ಲಿಸಿದ್ದೇವೆ. ಕಾನೂನು ಪ್ರಕ್ರಿಯೆ ನಡೆಯಬೇಕು ಎಂದು ಬಿಬಿಎಂಪಿ ತಿಳಿಸಿದೆ” ಎಂದು ಮಾಹಿತಿ ನೀಡಿದರು.

ಲಿಯೋ ಎಫ್ ಸಾಲ್ಡಾನಾ

“ನ್ಯಾಯಾಲಯದ ಆದೇಶವೇ ಅಂತಿಮ. ಹೀಗಾಗಿ ಯಾರು ಏನೇ ಹೇಳಿದರೂ ನಾವು ಅತಿಯಾದ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ. ಎರಡು ಸರ್ಕಾರಿ ಸಂಸ್ಥೆಗಳ ನಡುವೆ ಈ ಗೊಂದಲ ಏರ್ಪಟ್ಟಿದೆ. ನಾವು ಕಾನೂನಿನ ಚೌಕಟ್ಟಿನಲ್ಲಿ ಸಾಗುತ್ತೇವೆ” ಎಂದು ಅವರು ತಿಳಿಸಿದರು.

“ಇಷ್ಟು ವರ್ಷ ಕಳೆದರೂ ವಕ್ಫ್ ಮಂಡಳಿ ಈ ಮೈದಾನಕ್ಕೆ ತಂತಿ ಬೇಲಿಯನ್ನು ಹಾಕಿಲ್ಲ. ಎಲ್ಲರೂ ಜೊತೆಯಲ್ಲಿ ಇರಬೇಕೆಂಬುದು ನಮ್ಮ ಆಶಯ. ಇತ್ತೀಚೆಗೆ ಈ ವಿವಾದ ಬಂದಿದೆ. ಹೀಗಾಗಿ ವಿವಾದ ಸೃಷ್ಟಿಸಲು ಯತ್ನಿಸುವವರಿಗೆ ಪ್ರತಿಕ್ರಿಯೆ ನೀಡಲು ನಾವು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಬಿಎಂಪಿ ಪಶ್ಚಿಮ ವಿಭಾಗದ ಆಯುಕ್ತರಾದ ಶ್ರೀನಿವಾಸ್ ’ನ್ಯಾಯಪಥ’ಕ್ಕೆ ಪ್ರತಿಕ್ರಿಯೆ ನೀಡಿ, “ಸುಪ್ರೀಂ ಕೋರ್ಟ್ ಆದೇಶವಿರುವ ದಾಖಲೆಗಳನ್ನು ವಕ್ಫ್ ಬೋರ್ಡ್ ಕಳುಹಿಸಿಕೊಟ್ಟಿದೆ. ಇದು ಬಿಬಿಎಂಪಿಗೆ ಸೇರಿದೆ ಎಂಬ ದಾಖಲೆಗಳೂ ಇವೆ. ಅವುಗಳನ್ನು ಮುಖ್ಯ ಕಚೇರಿಯ ಕಾನೂನು ವಿಭಾಗಕ್ಕೆ ಸಲ್ಲಿಸಿದ್ದೇವೆ. ಈಗ ಇರುವ ಪ್ರಸ್ತುತ ದಾಖಲೆಗಳ ಪ್ರಕಾರ ಈ ಆಟದ ಮೈದಾನ ಬಿಬಿಎಂಪಿಗೆ ಸೇರಿದೆ. ಈ ಸಮಸ್ಯೆ ಇತ್ಯರ್ಥವಾಗಲು ಇನ್ನೂ ಹತ್ತು ದಿನ ಬೇಕಾಗಬಹುದು. ಈ ಸ್ಥಳವು ಯಾರಿಗೆ ಸೇರಿದ್ದೆಂದು ತಿಳಿಯಲು ಹಳೆಯ ದಾಖಲೆಗಳನ್ನು ಕಳುಹಿಸಿಕೊಡುವಂತೆ ಕಂದಾಯ ಇಲಾಖೆಗೂ ಪತ್ರ ಬರೆದಿದ್ದೇವೆ” ಎಂದು ಹೇಳಿದರು.

“ಇಲ್ಲಿಯವರೆಗೂ ನಡೆಯುತ್ತಿದ್ದ ಪ್ರಾರ್ಥನೆಗೆ ನಿಮ್ಮ ಅನುಮತಿಯನ್ನು ಪಡೆಯಲಾಗುತ್ತಿತ್ತೇ?” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇಲ್ಲಿಯವರೆಗೆ ಈ ರೀತಿಯ ಮನವಿಗಳು ಬಂದಿದ್ದು ಇಲ್ಲ. ವರ್ಷಕ್ಕೆ ಎರಡು ಭಾರಿ ಪ್ರಾರ್ಥನೆ ನಡೆಯುತ್ತಿತ್ತು. ಉಳಿದಂತೆ ಆಟದ ಮೈದಾನವಾಗಿ ಬಳಕೆಯಾಗುತ್ತಿತ್ತು. ವಕ್ಫ್‌ನವರು ಈ ಜಾಗ ನಮ್ಮದೆಂದು ಹೇಳಿದ ಬಳಿಕ ವಿವಾದ ಸೃಷ್ಟಿಯಾಗಿದೆ” ಎಂದು ಹೇಳಿದರು.

ಹೀಗೆ ಕೆಲವು ’ಫ್ರಿಂಜ್ ಎಲಿಮೆಂಟ್’ಗಳ ಕಾರಣದಿಂದ ಎರಡು ಸರ್ಕಾರಿ ಸಂಸ್ಥೆಗಳು ವಿವಾದ ಕೇಂದ್ರವಾಗಿಬಿಟ್ಟಿವೆ. ಬೇಕೆಂದೇ ಕೆಲವು ಕೋಮುವಾದಿ ಸಂಘಟನೆಗಳು ಎಬ್ಬಿಸಿರುವ ಈ ವಿವಾದ ಕೊನೆಗೊಂಡು ಈದ್ಗಾ ಮೈದಾನ ಎಂದಿನಂತೆ ಮುಕ್ತ ಮೈದಾನವಾಗಿ ಉಳಿಯಬೇಕಿದೆ ಎಂಬುದು ಬೆಂಗಳೂರಿನ ಪ್ರಜ್ಞಾವಂತರ ಕೂಗು.


ಇದನ್ನೂ ಓದಿ: ಈದ್ಗಾ ಮೈದಾನ ವಿವಾದ; ಬದಲಾದ ಚಾಮರಾಜಪೇಟೆಯ ಕಥನ ಭಾರತದ್ದೂ ಹೌದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ

0
ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಸವರ್ಣೀಯರು ಮರಕ್ಕೆ ಕಟ್ಟಿ ಥಳಿಸಿರುವ ಮತ್ತು ಆ ಯುವಕ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಜಾತಿ...