Homeಕರ್ನಾಟಕಈದ್ಗಾ ಮೈದಾನ ವಿವಾದ; ಬದಲಾದ ಚಾಮರಾಜಪೇಟೆಯ ಕಥನ ಭಾರತದ್ದೂ ಹೌದು!

ಈದ್ಗಾ ಮೈದಾನ ವಿವಾದ; ಬದಲಾದ ಚಾಮರಾಜಪೇಟೆಯ ಕಥನ ಭಾರತದ್ದೂ ಹೌದು!

- Advertisement -
- Advertisement -

‘ಚಾಮರಾಜಪೇಟೆಯ ಈದ್ಗಾ ಮೈದಾನ ಮುಸಲ್ಮಾನರಿಗೆ ಮಾತ್ರ ಸೇರಿದ್ದೋ? ನಮಗೂ ಪ್ರಾರ್ಥನೆಗೆ ಅವಕಾಶ ಕೊಡಿ’ ಎಂದು ಕೆಲವು ಹಿಂದುತ್ವ ಸಂಘಟನೆಗಳು ಬಿಬಿಎಂಪಿಗೆ ಕೇಳಿದ ಹಿನ್ನಯಲ್ಲಿ, ಬಿಬಿಎಂಪಿಯ
ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. “ಮೈದಾನ ಬಿಬಿಎಂಪಿಗೆ ಸೇರಿದ್ದು, ಕೋರ್ಟ್ ಆದೇಶದ ಪ್ರಕಾರ ರಂಜಾನ್ ಮತ್ತು ಬಕ್ರೀದ್ ಹಬ್ಬಗಳಲ್ಲಿ ಮುಸಲ್ಮಾನರು ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ” ಎಂದು ಹೇಳಿದ್ದಾರೆ. ಆದರೆ ದಾಖಲೆಗಳ ಪ್ರಕಾರ ಇದು ಬಿಬಿಎಂಪಿಗೆ ಸೇರಿದ ಮೈದಾನವಾಗಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳು ಒಂದು ಕ್ಷುಲ್ಲಕ ವಿಷಯವನ್ನು ಅನಾವಶ್ಯಕವಾಗಿ ಕದಡಿ ರಾಡಿ ಎಬ್ಬಿಸಿರುವ ತಮ್ಮ ಅಧೀನ ಅಧಿಕಾರಿಯ ವಿರುದ್ಧ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕು. ಇದು ರಾಜ್ಯಾದ್ಯಂತ ದ್ವೇಷ ಮತ್ತು ಕೋಮುವಾದವನ್ನು ಹರಡುತ್ತಿರುವವರ ಬೇಡಿಕೆಗಳಿಗೆ ಇದು ಪ್ರತಿಕ್ರಿಯೆಯಾಗಿರಬೇಕು.

ನಾನು ಚಾಮರಾಜಪೇಟೆಯಲ್ಲಿ ಬೆಳೆದವನು ಮತ್ತು ಅಲ್ಲಿನ ಬೀದಿಗಳಲ್ಲಿ ಕಲಿತ ಕ್ರಿಕೆಟ್ ಕೌಶಲಗಳನ್ನು ಈದ್ಗಾ ಮೈದಾನದಲ್ಲಿ ಸುಧಾರಿಸಲು ಯತ್ನಿಸಿದವನು. ನಾವು ನಮ್ಮ ಕ್ರಿಕೆಟ್ ಆಟಗಳನ್ನು ಫೋರ್ಟ್ ಹೈಸ್ಕೂಲು ಮತ್ತು ಬೆಂಗಳೂರು ಹೈಸ್ಕೂಲು ಮೈದಾನಗಳಲ್ಲಿ ವಿವಿಧ ತಂಡಗಳ ವಿರುದ್ಧ ಆಡಿದ್ದೇವೆ. ಈದ್ಗಾ ಮೈದಾನವು ಈಗಲೂ ಇರುವಂತೆ, ಈ ಮೈದಾನಗಳು ಕೂಡ ಹಿಂದೆ ಬೇಲಿಯಿಲ್ಲದೆ, ಮುಕ್ತವಾಗಿದ್ದವು. ಅವೆಲ್ಲವೂ ನಡೆದೇ ಹೋಗಬಹುದಾದಷ್ಟು ದೂರದಲ್ಲಿದ್ದವು. ಹೀಗಿದ್ದರೂ, ಅವೆಲ್ಲಾ ಒಂದೊಂದು ಸ್ಥಳೀಯ ತಂಡಗಳ ಜೊತೆಗಿನ ಹೆಮ್ಮೆಯ ಸಂಬಂಧದಿಂದಾಗಿ ವಿಶಿಷ್ಟವಾಗಿದ್ದವು. ಒಂದು ಮೈದಾನದ ತಂಡದ ಎದುರು ಇನ್ನೊಂದು ಮೈದಾನದ ತಂಡದೊಂದಿಗೆ ನಮ್ಮ ಟೆನಿಸ್ ಬಾಲ್ ಕ್ರಿಕೆಟ್ ನಡೆಯುತ್ತಿತ್ತು. ಇವು ಕ್ರಿಕೆಟ್ ಪಾರಮ್ಯಕ್ಕಾಗಿ ನಡೆಯುತ್ತಿದ್ದ ಗಂಭೀರ ಕದನಗಳಾಗಿದ್ದು, ಅತ್ಯಂತ ಉತ್ಸಾಹ ಮತ್ತು ಸಂತೋಷವನ್ನು ನೀಡುವುದು ಮಾತ್ರವಲ್ಲದೆ, ಕೆಲವೊಮ್ಮೆ ಭಾರೀ ಬೇಗುದಿಯನ್ನೂ ಉಂಟುಮಾಡುತ್ತಿದ್ದವು. ಈದ್ಗಾ ಮೈದಾನವು ಸಂಪೂರ್ಣವಾಗಿ ಮುಸ್ಲಿಮರ ಒಂದು ಪ್ರಾರ್ಥನಾ ಸ್ಥಳ ಎಂಬುದರ ಬಗ್ಗೆ ಯಾವತ್ತೂ ಯಾವುದೇ ಗೊಂದಲಗಳಿರಲಿಲ್ಲ. ಈ ವಾಸ್ತವವನ್ನು ಪರಿಶೀಲಿಸುವ ಯಾವುದೇ ಅಗತ್ಯ ನಮಗಿರಲಿಲ್ಲ; ಯಾಕೆಂದರೆ, ಅದು ಮುಸ್ಲಿಮರು ಪ್ರಾರ್ಥನೆ ಮಾಡುವ ಜಾಗ ಎಂದು ಜನರಲ್ಲಿ ವ್ಯಾಪಕ ಗೌರವ ಹೊಂದಿತ್ತು. ಮೂಲೆಯಲ್ಲಿ ಕುರಿ ವ್ಯಾಪಾರ ನಡೆಯುತ್ತಿದ್ದ ವಾರದ ಸಂತೆಯ ಹೊರತಾಗಿಯೂ, ಅದು ಯಾವತ್ತೂ ಸ್ವಚ್ಛವಾಗಿತ್ತು.
ಯಾರೂ, ಯಾವತ್ತೂ ನಮ್ಮನ್ನು ಕ್ರಿಕೆಟ್ ಆಡದಂತೆ ತಡೆಯಲಿಲ್ಲ; ಅದು ಎಲ್ಲರೂ ಕಾಳಜಿವಹಿಸುತ್ತಿದ್ದ ಮತ್ತು ಶುಕ್ರವಾರದ ಪ್ರಾರ್ಥನೆಗಳು ಶಾಂತಿಯುತವಾಗಿ ನಡೆಯುವುದನ್ನು ಖಾತರಿಪಡಿಸುತ್ತಿದ್ದ ಜಾಗವಾಗಿತ್ತು.

ಚಾಮರಾಜಪೇಟೆಯ ಉದ್ದಗಲಕ್ಕೂ ಗೆಳೆಯರ ಭೇಟಿಗೆ ಹೋಗುತ್ತಿದ್ದಾಗ, ಅವರು ಯಾವ ಧರ್ಮ ಅಥವಾ ಜಾತಿಗೆ ಸೇರಿದವರು, ಅವರು ಎಲ್ಲಿಂದ ಬಂದವರು ಎಂಬ ಚಿಂತೆಯನ್ನು ನಾವು ಎಳ್ಳಷ್ಟೂ ಮಾಡುತ್ತಿರಲಿಲ್ಲ. ನಾವು ಒಬ್ಬರು ಇನ್ನೊಬ್ಬರ ಸಹವಾಸವನ್ನು ಸಾಧ್ಯವಿರುವ ಎಲ್ಲಾ ರೀತಿಗಳಲ್ಲಿ ಆನಂದಿಸುತ್ತಿದ್ದೆವು. ಕ್ರಿಕೆಟ್, ಕಾಮಿಕ್ ಪುಸ್ತಕಗಳು ಮತ್ತು ಆಹಾರ ಜೊತೆಸೇರಿಸುವ ಬಹುದೊಡ್ಡ ವಿಷಯಗಳಾಗಿದ್ದವು.

ಶಾಲೆ ಅಥವಾ ಕ್ರಿಕೆಟ್ ನಂತರ ನಾವು ಒಂದೊಂದು ದಿನ ಮುಜಾಹಿದನ ಮನೆಯಲ್ಲಿ ಅದ್ಭುತ ಬಿರಿಯಾನಿಯನ್ನು, ಕಿರಣ್ ಡಿಎಂನಲ್ಲಿ ಬಿಸಿಬಿಸಿಯಾಗಿ ಬಡಿಸುತ್ತಿದ್ದ ಅತ್ಯುತ್ತಮ ಬಿಸಿಬೇಳೆಬಾತನ್ನು ಚೆನ್ನಾಗಿ ಬಾರಿಸುತ್ತಿದ್ದೆವು. ಮಂಜುನಾಥನ ತಾಯಿ ಕೈಯ ಉಪ್ಪಿಟ್ಟನ್ನು ಸವಿಯುವ ಅವಕಾಶವನ್ನು ಯಾವತ್ತೂ ಕಳೆದುಕೊಳ್ಳುತ್ತಿರಲಿಲ್ಲ. ಆಗಾಗ ಭಾನುವಾರದ ಚರ್ಚ್ ಪ್ರಾರ್ಥನೆಯ ನಂತರ, ಯಾವಾಗಲೂ ಸಂಗೀತ ಪ್ರತಿಧ್ವನಿಸುತ್ತಿದ್ದ ದೇವರಾಜನ ಮನೆಯಲ್ಲಿ, ಅಸಾಧಾರಣವಾಗಿ ವರ್ಣಮಯವಾಗಿದ್ದ ನಡುಮನೆಯ ಜಾಗದಲ್ಲಿ ಆಗಾಗ ಜೊತೆ ಸೇರುತ್ತಿದ್ದೆವು. ಅಥವಾ ಕಾಶೀನಾಥ ದೀಕ್ಷಿತನ ವಠಾರದ ಮನೆಯಲ್ಲಿ. ಅವನು ತನ್ನ ಮೃದಂಗ ಪರಿಣತಿಯ ಪ್ರದರ್ಶನ ಮಾಡುವುದನ್ನು ನೋಡುತ್ತಿದ್ದೆವು.

ಹಬ್ಬಗಳು ಬಂದರಂತೂ-ಯಾವ ಹಬ್ಬವಾದರೂ ಸರಿ- ನೆರೆಹೊರೆಯವರು ವಿನಿಮಯ ಮಾಡುತ್ತಿದ್ದ- ಕಡುಬು, ಲಾಡುಗಳು, ಒಬ್ಬಟ್ಟು, ಪೊಂಗಲ್ (ಅದರಲ್ಲೂ ಸಿಹಿ ಪೊಂಗಲ್) ಮುಂತಾದ ತಿಂಡಿಗಳನ್ನು ಆದರದಿಂದ ಸ್ವಾಗತಿಸುತ್ತಿದ್ದೆವು! ಯಾರ ಮನೆಯ ಅಡಿಗೆ ಕೌಶಲ ಉತ್ತಮ ಎಂದು ಚರ್ಚೆ ಮಾಡುತ್ತಿದ್ದೆವು (ನಮ್ಮ ಅಹಂಕಾರ ನೋಡಿ!)

ನನ್ನ ಕುಟುಂಬದ ಸರದಿ ಬಂದಾಗ, ನನ್ನ ಪುಟ್ಟ ತಂಗಿಗೆ ಒಳ್ಳೆಯ ಬಟ್ಟೆ ತೊಡಿಸಿ ದೊಡ್ಡಕ್ಕನ ಜೊತೆ ಅವರಿವರೆನ್ನದೇ ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ, ನಾವು ತಡರಾತ್ರಿಯವರೆಗೂ ಕುಳಿತು ತಯಾರಿಸುತ್ತಿದ್ದ ಕ್ರಿಸ್ಮಸ್ ಸಿಹಿತಿಂಡಿಗಳನ್ನು ತುಂಬಿ, ಕಸೂತಿ ಮಾಡಿದ ಬಿಳಿ ವಸ್ತ್ರದಿಂದ ಮುಚ್ಚಿದ ಟ್ರೇಗಳನ್ನು ಹಂಚುತ್ತಿದ್ದೆವು.

ಕ್ರಿಸ್ಮಸ್ ಹತ್ತಿರ ಬರುತ್ತಿದ್ದಂತೆ ಕ್ರೈಸ್ತರು ಮಾತ್ರವಲ್ಲ; ಈ ಸಂತೋಷಾಚರಣೆ ನಡೆಯುತ್ತಿದ್ದ ತಡರಾತ್ರಿಯಲ್ಲಿ ತೆರೆದಿದ್ದ ಎಲ್ಲಾ ಮನೆಗಳಿಗೂ ಹೋಗಿ ಕೆರೋಲ್ (ಸಮೂಹಗಾನ) ಹಾಡುತ್ತಿದ್ದೆವು. ಶಬರಿಮಲೆ ಯಾತ್ರೆಯ ಸಮಯದಲ್ಲಿ ಪ್ರತಿಯೊಬ್ಬರೂ ಅಲ್ಲಿ ಇಲ್ಲಿ ಏಳುತ್ತಿದ್ದ ಚಪ್ಪರಗಳಿಗೆ ಹೋಗಿ ಅಯ್ಯಪ್ಪ ಭಜನೆಗಳಿಗೆ ಸೇರುತ್ತಿದ್ದೆವು.

ಜಾನ್ ನೆಪೋ ಕ್ರೂಸ್ ಮೈಸೂರು ರಸ್ತೆಯಲ್ಲಿ ತನ್ನ ಕುಟುಂಬದ ಜೊತೆ ವಾಸಿಸುತ್ತಿದ್ದ. ಅವನ ಅಕ್ಕ ಮಾಡ್ತಾ ಅತ್ಯುತ್ತಮ ಶಿಕ್ಷಕಿಯಾಗಿದ್ದು, ನಂತರ ಬೆಂಗಳೂರಿನ ಬ್ರಿಯಾಂಡ್ ಸ್ಕ್ವೇರಿನ ಸೆಂಟ್ ಜೋಸೆಫ್ಸ್ ಶಾಲೆಯ ಮುಖ್ಯೋಪಾಧ್ಯಾಯರಾದರು. ನೆಪೋ ಹೆಗಲಲ್ಲೊಂದು ಗಿಟಾರ್ ನೇತುಹಾಕಿ ತನ್ನ ಗಡುಸು ಧ್ವನಿಯಲ್ಲಿ ಒಂದರ ನಂತರ ಇನ್ನೊಂದರಂತೆ ಹಾಡುಗಳನ್ನು ಹಾಡುತ್ತಾ, ನಮಗೆ ಬೀಟಲ್ಸ್ (ಪ್ರಖ್ಯಾತ ಸಂಗೀತ ಗುಂಪು) ಪರಿಚಯಿಸಿ, ಹೇಗೆ ’ಕಲ್ಪನಾ’ ಲೋಕಕ್ಕೆ ಜಾರಬೇಕೆಂದು ಕಲಿಸಿದವನು. ನಾವು ನೆಲದ ಮೇಲೇ ಕುಳಿತು ಕೇಳುತ್ತಿದ್ದೆವು ಮತ್ತು ಕೆಲವೊಮ್ಮೆ ಜೊತೆಗೆ ಗುನುಗುನುಗಿಸುತ್ತಿದ್ದೆವು.

ನೀರೋನ ದೊಡ್ಡಣ್ಣ ನಿಕೋಲಸ್ ಡಿ’ಕ್ರೂಸ್ ನಮಗೆ ಇತಿಹಾಸ ಕಲಿಸಿದರು. ಅವರು ನಮಗೆ ಕಲಿಸಿದ ಮೊದಲ ವಿಷಯ ಎಂದರೆ, ನಾವು ಪಠ್ಯ ಎಂದು ಕರೆಯುತ್ತಿದ್ದ ಕಳಪೆ ಪುಸ್ತಕಗಳನ್ನು ಬದಿಗಿಡಿ ಎಂಬುದು. ಆಗ ಅವರು ಹೇಳುತ್ತಿದ್ದ ಇತಿಹಾಸದ ಕತೆಗಳನ್ನು ನಾವು ತೀರಾ ಗಮನವಿಟ್ಟು ಕೇಳುತ್ತಿದ್ದೆವು. ಚಲನಚಿತ್ರಗಳಂತೆ ಮೂಡುತ್ತಿದ್ದ ಅವರ ವಿವರಗಳಲ್ಲಿ ವಿಶ್ವಯುದ್ಧ, ಅಥವಾ ದೇಶ ವಿಭಜನೆಯ ಭಯಾನಕತೆಗಳು, ಭಗತ್ ಸಿಂಗರ ಶೌರ್ಯ ಮತ್ತು ಸ್ವಾತಂತ್ರ್ಯ ಚಳವಳಿಯ ಹಿರಿಮೆಯನ್ನು ಕಣ್ಣಿಗೆ ಕಟ್ಟಿಕೊಡುತ್ತಿತ್ತು. ಅಕ್ಬರನ ಆಸ್ಥಾನವಿರಲಿ, ಅಶೋಕನ ಯುದ್ಧಗಳೇ ಇರಲಿ, ಅವರು ನಮಗೆ ಹೇಳಲು ಆಯ್ಕೆ ಮಾಡಿದ ಕತೆಯ ಕಾಲಕ್ಕೇ ನೇರವಾಗಿ ನಮ್ಮನ್ನು ರವಾನಿಸುತ್ತಿದ್ದ ಶಿಕ್ಷಕರಾಗಿದ್ದರು ಅವರು.

ವಾರಾಂತ್ಯದಲ್ಲಿ ನಾವು ಈದ್ಗಾ ಮೈದಾನದಿಂದ ಒಂದೇ ಬ್ಲಾಕ್ ದೂರವಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ಕಳೆಯುತ್ತಿದ್ದೆವು. ಇದು ಒಂದು ಉದ್ದವಾದ ಮನೆಯಲ್ಲಿ ಇದ್ದು, ಎಲ್ಲಾ ರೀತಿಯ ಪುಸ್ತಕಗಳಿಂದ ತುಂಬಿದ ಹೊಸಹೊಸ ಕೋಣೆಗಳು ತೆರೆಯುತ್ತಲೇ ಇದ್ದವು. ಇದು ನಮಗೆ ಒಂದು ಪ್ರಪಂಚದ ನಂತರ ಇನ್ನೊಂದು ಪ್ರಪಂಚವನ್ನು ತೆರೆಯುತ್ತಲೇ ಇತ್ತು.

ಇದೇ ಜಾಮರಾಜಪೇಟೆಯಲ್ಲೇ 1970ರ ದಶಕದ ಒಂದು ಬೆಳಗ್ಗೆ ನಾನು ಎದ್ದಾಗ ಕೋಮುಗಲಭೆಯ ಭೀಕರತೆಯನ್ನು ಕಂಡೆ. ಶುಕ್ರವಾರದ ಪ್ರಾರ್ಥನೆಗೆ ಸ್ವಲ್ಪವೇ ಮುಂಚೆ ಯಾರೋ ಈದ್ಗಾ ಮೈದಾನಕ್ಕೆ ಹಂದಿಯ ಮೃತದೇಹವನ್ನು ಎಸೆದಿದ್ದರು ಎಂಬ ವದಂತಿ ಹರಡಿತ್ತು. ಕೆಲವರು ಭಯಂಕರವಾಗಿ ಸತ್ತರು. ಹಲವು ದಿನಗಳ ಕಾಲ ಶಾಲೆಗಳು ಮುಚ್ಚಿದ್ದು, ನಮ್ಮ ಗೆಳೆಯರ ಬಗ್ಗೆ ಚಿಂತಿಸುತ್ತಾ, ಅವರು ಸುರಕ್ಷಿತವಾಗಿರಲೆಂದು ಆಶಿಸುತ್ತಾ ಮನೆಗಳಲ್ಲೇ ಕಳೆದೆವು. ಗಾಳಿಯಲ್ಲಿ ಅಶ್ರುವಾಯುವಿನ ವಾಸನೆ ಸುಳಿದಾಡುತ್ತಿತ್ತು. ಕಣ್ಣುಗಳು ಉರಿಯುತ್ತಾ, ಮೂಗು ಸುರಿಯುತ್ತಾ ಈ ಘಾಟು ವಾಸನೆಯನ್ನು ಸಹಿಸುವುದು ಅನಿವಾರ್ಯವಾಗಿತ್ತು. ಅದು ಹೇಗೋ ನಾವು ಈರುಳ್ಳಿಗಳನ್ನು ಮೂಸುವುದರಿಂದ ಉಸಿರಾಟ ಸುಲಭವಾಗುವುದು ಎಂದು ನಂಬಿದ್ದೆವು.

ಉಬ್ಬಸದಿಂದ ನರಳುತ್ತಿದ್ದ ನನ್ನ ಸಹೋದರ, ಪೊಲೀಸರು ಈ ಗಲಭೆಗಳನ್ನು ತಣಿಸಲು ಅಶ್ರುವಾಯು ಸಿಡಿಸಿದಾಗಲೆಲ್ಲಾ ನಿಜವಾಗಿಯೂ ತುಂಬಾ ಕಷ್ಟಪಟ್ಟ. ಸಾಕಷ್ಟು ಪ್ರಮಾಣದ ಅಸ್ತಾಲಿನ್ ಔಷಧಿ ಇರಲೆಂದು ನಾವು ಆಶಿಸುತ್ತಿದ್ದೆವು. ಅದನ್ನು ಕರ್ಫ್ಯೂ ನಡುವೆ ಸಣ್ಣಗೆ ತೆರೆದ ಮೆಡಿಕಲ್ ಶಾಪಿನ ಬಾಗಿಲ ಸಂದಿಯಿಂದ ಕೊಡುತ್ತಿದ್ದರು. ಅಲ್ಲಿಗೆ ಬಾಣದಂತೆ ಓಡಿ, ಪೊಲೀಸ್ ಲಾಠಿಯ ಗೌರವಕ್ಕೆ ಪಾತ್ರರಾಗದೆ ಮರಳಿ ಬರುವುದು ಒಂದು ಕಲೆಯಾಗಿತ್ತು.

ಈ ಹತ್ಯಾಕಾಂಡ ನಿಂತಾಗ, ಹಲವಾರು ಮುಸ್ಲಿಂ ಮಾಲಕತ್ವದ ಅಂಗಡಿಗಳನ್ನು- ಮುಖ್ಯವಾಗಿ ನಾವು ಹಾಸಿಗೆಯಂಗಡಿಗಳೆಂದು ಕರೆಯುತ್ತಿದ್ದ ಅಂಗಡಿಗಳನ್ನು ಗುರಿಮಾಡಿ ಬೆಂಕಿ ಹಚ್ಚಿರುವುದನ್ನು ಕಂಡೆವು. ಇಲ್ಲಿ ಹಾಸಿಗೆಗಳನ್ನು ಮತ್ತು ಪೀಠೋಪಕರಣಗಳನ್ನು ತಯಾರಿಸುತ್ತಿದ್ದ ಹಲವಾರು ಅಂಗಡಿಗಳಿದ್ದವು. ಅವೆಲ್ಲವೂ ನಾಶವಾಗಿದ್ದವು. ಆ ಅಂಗಡಿ ಮಾಲೀಕರು ಪರಿಚಿತ ಮುಖಗಳಾಗಿದ್ದು, ಬೆಂಕಿ ಹೊಗೆಯಾಡುತ್ತಿದ್ದ ಅವಶೇಷಗಳ ನಡುವೆ ಬೆದಕುತ್ತಾ, ಉಳಿದಿರಬಹುದಾದದ್ದನ್ನು ಹುಡುಕುವ ದೃಶ್ಯ ದುಃಖಮಯವಾಗಿತ್ತು.

ಆ ಬಳಿಕ ಸಾಮಾನ್ಯ ಸ್ಥಿತಿ ಮರಳಲಿಲ್ಲ. ನಾವು ಮರಳಿದ್ದು ಹೊಸ ಸಾಮಾನ್ಯ ಸ್ಥಿತಿಗೆ ಮಾತ್ರವೇ! ಚಾಮರಾಜಪೇಟೆ ಮತ್ತು ಶಂಕರಪುರಂ ಪ್ರದೇಶಗಳಲ್ಲೇ ಇದ್ದ ಆರೆಸ್ಸೆಸ್ ಕಚೇರಿಗಳು ಸಂಶಯಾಸ್ಪದ ಚಟುವಟಿಕೆಗಳಿಂದ ಗಿಜಿಗುಡುತ್ತಿದ್ದವು. ಅದು ತುರ್ತುಪರಿಸ್ಥಿತಿಯ ಸಂದರ್ಭವಾಗಿದ್ದು, ನಾವು ಅವರ ಮುದ್ರಣಾಲಯಗಳ ಸಂದಿಗಳಲ್ಲಿ ಇಣುಕಿ ಒಳಗೆ ಏನು ನಡೆಯುತ್ತಿದೆ ಎಂದು ಅಚ್ಚರಿಪಡುತ್ತಿದ್ದೆವು. ಒಮ್ಮೆ ಏನಾಯಿತೆಂದರೆ, ಒಂದು ಮುದ್ರಣಾಲಯದ ಒಳಗಿದ್ದ ಕಾಗದವೆಲ್ಲ ಹೊತ್ತಿ ಉರಿಯಿತು. ನಾವು ಹತ್ತಿರದ ಕಟ್ಟಡಗಳ ಮೇಲಿನಿಂದ ನೋಡುತ್ತಿದ್ದಂತೆ ಮೇಲಿನ ಅಸ್ಬೆಸ್ಟೋಸ್ ಛಾವಣಿಯು ಒಳಗಿನ ದ್ವೇಷ ತುಂಬಿದ ಬೆಂಕಿಯ ಒತ್ತಡದಿಂದ ಸ್ಫೋಟಿಸಿ ಹಾರಿಹೋಯಿತು.

ಈ ಬಾರಿ ನಾವು ಎಂತೆಂತಹ ದ್ವೇಷ ತುಂಬಿದ ಸುಳ್ಳು ಕಥಾನಕಗಳನ್ನು ಹಾದಿಬೀದಿಗಳಲ್ಲಿ ಕೇಳಿದೆವು! (ಪ್ರಪಂಚದಾದ್ಯಂತ ಮುಸ್ಲಿಮರ ಕೋಪವನ್ನು, ಅದರಲ್ಲೂ ಧರ್ಮಾಧಾರಿತ ಮುಸ್ಲಿಂ ರಾಷ್ಟ್ರಗಳನ್ನು ಸಮಾಧಾನಪಡಿಸಲು ಭಾರತವು ಹೆಣಗಬೇಕಾಯಿತು.) ಇಂದಿರಾ ನೇತೃತ್ವದ ಕಾಂಗ್ರೆಸ್ ಮತ್ತೆ ಮರುಜೀವ ಪಡೆದು ಬಹುತೇಕ ಎಲ್ಲಾ ಕಡೆ ಅಧಿಕಾರಕ್ಕೆ ಬಂದ ತಕ್ಷಣವೇ ಈ ವಿದ್ಯಮಾನಗಳೆಲ್ಲವೂ ತಣ್ಣಗಾದವು. ಪತ್ರಿಕೆಗಳ ಮುಖಪುಟಗಳೆಲ್ಲಾ ಖಾಲಿಸ್ತಾನ ಚಳವಳಿ, ಪಂಜಾಬಿನ ಹತ್ಯೆಗಳು, ಸ್ವಲ್ಪ ಮಹಾಭಾರತದ ಅಣ್ಣತಮ್ಮಂದಿರ ಕಾಳಗದಂತೆಯೇ ಕಾಣುವ ಇರಾನ್-ಇರಾಕ್ ನಡುವಿನ ಎಂಟು ವರ್ಷಗಳ ಯುದ್ಧದ ಸುದ್ದಿಗಳೇ ತುಂಬಿರುತ್ತಿದ್ದ ಕಾಲವೂ ಅದಾಗಿತ್ತು.

ಎಂಭತ್ತರ ದಶಕದ ಆರಂಭದಲ್ಲಿ ನನ್ನ ಕುಟುಂಬವು ಚಾಮರಾಜಪೇಟೆಯಿಂದ ದೂರ ಹೋಯಿತು. ನಾವೀಗ ಬೆಂಗಳೂರಿನ ದಕ್ಷಿಣದ ಅಂಚಿನಲ್ಲಿ, ಈಗ ತುಂಬಿತುಳುಕುತ್ತಿರುವ ಬನಶಂಕರಿಯಲ್ಲಿ- ಒಂದು ಡಜನ್‌ಗಿಂತ ಸ್ವಲ್ಪ ಹೆಚ್ಚು ಕುಟುಂಬಗಳ ನಡುವೆ ವಾಸಿಸಲು ಆರಂಭಿಸಿದಾಗ ನಾವು ಚಾಮರಾಜಪೇಟೆಯ ಗೆಳೆಯರನ್ನೆಲ್ಲಾ ತುಂಬಾ ನೆನಪು ಮಾಡಿಕೊಳ್ಳುತ್ತಿದ್ದೆವು.

ನಾನು ಬೆಳೆದ ನೆರೆಹೊರೆಗಳಿಗೆ ಮತ್ತೆ ಭೇಟಿ ನೀಡುವುದು ಒಂದು ರೀತಿಯಲ್ಲಿ ಸ್ವಲ್ಪ ಭ್ರಾಮಕ ಅನುಭವವಾಗಿತ್ತು. ಅದು ದಟ್ಟಣೆಯಿಂದ ಕಿಕ್ಕಿರಿದಂತೆ ಕಾಣುತ್ತಿತ್ತು. ಒಳಗೊಳಗೆ ಕೋಮು ಉದ್ವಿಗ್ನತೆ ಧುಮುಗುಡುತ್ತಿದ್ದು, ಯಾವಾಗ ಬೇಕಾದರೂ ಮೇಲಕ್ಕೆ ಬರಬಹುದು ಎಂಬಂತೆ ಕಾಣುತ್ತಿತ್ತು.

ಎಲ್.ಕೆ. ಆಡ್ವಾಣಿ, ಅಶೋಕ್ ಸಿಂಘಾಲ್ ಮತ್ತು ಮುರಳಿ ಮನೋಹರ ಜೋಶಿಯಂತ ನಾಯಕರು ದೇಶದಾದ್ಯಂತ ಸುತ್ತಾಡುತ್ತಾ ಬಾಬ್ರಿ ಮಸೀದಿಯ ನಾಶಕ್ಕೆ ಪ್ರಚೋದಿಸುತ್ತಾ, ಅದರ ಕೆಳಗೆಯೇ ರಾಮ ಜನ್ಮಸ್ಥಾನ ಇದೆಯೆಂದೂ, ಅದೇ ಜಾಗದಲ್ಲಿ ರಾಮ ಮಂದಿರ ಕಟ್ಟುವೆವು ಎಂದು ಹೇಳುತ್ತಿರುವ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಎಗ್ಗಿಲ್ಲದೇ ಸಕ್ರಿಯವಾಗಿತ್ತು.

ನಾನು ಮತ್ತು ನನ್ನ ಗೆಳೆಯರು ಬೆಳೆಯುತ್ತಿದ್ದೆವು ಮತ್ತು ಬೇರೆಯೇ ರೀತಿಯಲ್ಲಿ ಕೇಳುವ ಹೊಸ ಭಾಷೆಯನ್ನು ಮಾತಾಡಲು ಆರಂಭಿಸಿದ್ದೆವು. ಬುದ್ಧಿವಂತ ಮತ್ತು ಪ್ರೀತಿಪಾತ್ರ ಗೆಳೆಯರು “CAN KAM” – Can Kill All Muslims. (ಎಲ್ಲಾ ಮುಸ್ಲಿಮರನ್ನು ಕೊಲ್ಲಬಹುದು) ಇತ್ಯಾದಿ ಅಭಿವ್ಯಕ್ತಿಗಳನ್ನು ಗಿಳಿಗಳಂತೆ ಮಾತಾಡುವುದು ವಿಕ್ಷಿಪ್ತವಾಗಿ ಕಾಣುತ್ತಿತ್ತು. ನಮ್ಮಲ್ಲಿ ಕೆಲವು ಗೆಳೆಯರು ಇಂತಹ ಮಾತುಗಳನ್ನು ಹೇಳುವುದನ್ನು ಕೇಳಿ ಹೇವರಿಸುತ್ತಿದ್ದೆವು. ನಾವು ತಡರಾತ್ರಿಯವರೆಗೂ ಆ ರಾಜಕಾರಣಿ ಅಥವಾ ಈ ರಾಜಕಾರಣಿ ನೀಡಿದ ಹೇಳಿಕೆಗಳ ಗುಣದೋಷಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು.

ನಮ್ಮಲ್ಲಿ ಕೆಲವು ಗೆಳೆಯರು, ಮುಖ್ಯವಾಗಿ ಜಯನಗರದ ವಿಜಯ ಕಾಲೇಜಿನಲ್ಲಿ ಕಲಿಯುತ್ತಿದ್ದವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದಾಗ, ನಮ್ಮ ಜೀವನದ ವಿನ್ಯಾಸವೇ ಬೇರೆಯಾಯಿತು. ನಾವಿನ್ನೂ ಜೊತೆಯಾಗಿಯೇ ತಿರುಗಾಡುತ್ತಿದ್ದುದರಿಂದ ಅವರ ಗುರುವಾಗಿದ್ದ ಪ್ರೊಫೆಸರ್ ಕೆ. ಎಂ. ಶ್ರೀಧರ್ ಎಂಬವರನ್ನು ಭೇಟಿಯಾಗುವ ಅವಕಾಶ ನನಗೂ ಸಿಕ್ಕಿತ್ತು. (ಇತ್ತೀಚೆಗೆ ಹೊಸ ಶಿಕ್ಷಣ ನೀತಿಯನ್ನು ರೂಪಿಸಿದವರಲ್ಲಿ ಆವರೂ ಒಬ್ಬರು.) ಅದು ಹೇಗೋ ಅವರಿಗೆ ನಾನು ಮೆಚ್ಚಿಗೆಯಾಗಿದ್ದುದರಿಂದ ಆವರು ನನ್ನನ್ನು ಅವರ ಕೆಲವು ಸಭೆಗಳಿಗೆ ಸೇರಿಸಿಕೊಳ್ಳುತ್ತಿದ್ದರು. ನನಗೆ ತಿಳಿಯುವ ಮೊದಲೇ ಕೆಲವು ತಿಂಗಳುಗಳು ಕಳೆದುಹೋಗಿದ್ದವು.

ರಾಷ್ಟ್ರ ಕಟ್ಟುವ ವಿಷಯ, ದೇಶಪ್ರೇಮ, ಸಾಮಾಜಿಕ ಸವಾಲುಗಳನ್ನು ಎದುರಿಸಲು ಶಿಸ್ತು ಮತ್ತು ತರಬೇತಿ ಇತ್ಯಾದಿ ಈ ಸಭೆಗಳಲ್ಲಿ ನಿಜಕ್ಕೂ ಆಸಕ್ತಿಕರ ವಿಷಯಗಳಾಗಿದ್ದವು. ಸರಳ ಜೀವನ ನಡೆಸುತ್ತಿದ್ದ, ಶಿಸ್ತಿನ, ದೃಢ ಸಂಕಲ್ಪದ ವ್ಯಕ್ತಿಗಳನ್ನು ಭೇಟಿಯಾಗಲು ಅವಕಾಶವಾಗುತ್ತಿತ್ತು. ಅವರು ನಮ್ಮ ಪ್ರೇರಕರು ಅನಿಸಿಕೊಳ್ಳುತ್ತಿದ್ದರು. ಅವರಲ್ಲಿ ಒಬ್ಬರು, ಅನಂತ ಕುಮಾರ್ ಹೆಗ್ಡೆ! ನನ್ನನ್ನು ತರಬೇತಿಗೊಳಿಸುವುದರಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು ಎಂದು ನನಗನಿಸುತ್ತದೆ.

Courtesy: Facebook

ಈ ಚರ್ಚೆಗಳು ಮುಸ್ಲಿಮರನ್ನು ಗುರಿ ಮಾಡುತ್ತಿದ್ದುದರಿಂದ ನನಗೆ ಈ ಸಭೆಗಳಲ್ಲಿ ಭಾಗವಹಿಸುವುದು ಸಾಧ್ಯವೇ ಇಲ್ಲ ಎಂಬಂತಾಯಿತು. ನಾನು ಬಿಟ್ಟುಬಿಟ್ಟೆ. ಹೀಗೆ ಬಿಟ್ಟದ್ದರಿಂದ ನಾನು ನನ್ನ ಬಾಲ್ಯದ ಹಲವಾರು ಗೆಳೆಯರಿಂದ ದೂರವಾಗಬೇಕಾಯಿತು. ಅವರು ಎಬಿವಿಪಿಯಲ್ಲೇ ಮುಂದುವರಿದರು. ನಾವೀಗ ಒಂದೇ ಹಾದಿಯಲ್ಲಿ ನಡೆಯುತ್ತಿರಲಿಲ್ಲ. ಅದು ಇನ್ನಷ್ಟು ಕಷ್ಟದ ವಿಷಯವಾಗಿತ್ತು. ನಾನು ನನ್ನ ಗೆಳೆಯರತ್ತ ನೋಡಿದಾಗ, ಅವರ ಜೊತೆ ಯಾವುದೇ ಸಮಾಧಾನಕರ ಮಾತುಕತೆ ನಡೆಸುವುದು ಕಷ್ಟವೆಂಬಂತೆ ಕಂಡಿತು.

ಆದುದರಿಂದ, ಈಗ ಬೇಕೆಂದೇ ಕಲಕಿ ಎಬ್ಬಿಸಲಾಗುತ್ತಿರುವ ಈ ಈದ್ಗಾ ಮೈದಾನದ ಪ್ರಶ್ನೆಯ ಬಗ್ಗೆ ಕೇಳಿದಾಗ, ನಾವು ಚಾಮರಾಜಪೇಟೆಯ ಮೂಲ ಗುಣಸ್ವಭಾವವೇ ಆಗಿದ್ದ ಸಹಬಾಳ್ವೆಯ ಹಾದಿಯಲ್ಲೇ ಮುಂದುವರಿದಿದ್ದರೆ, ಒಂದು ಸಮಾಜವಾಗಿ, ಒಂದು ದೇಶವಾಗಿ ನಾವು ಏನನ್ನೆಲ್ಲಾ ಸಾಧಿಸಬಹುದಿತ್ತು ಎಂದು ಚಿಂತಿಸುತ್ತೇನೆ. ರೂಪಕವಾಗಿ ನಾನು ಈದ್ಗಾ ಮೈದಾನ ಅಥವಾ ಫೋರ್ಟ್ ಹೈಸ್ಕೂಲು ಮೈದಾನ ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಹತ್ತಿರವೇ ಇರುವ ಹಿಂದೂ ಮಠವೊಂದರ ಮೈದಾನದಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದ ಆ ಚಾಮರಾಜ ಪೇಟೆಗಾಗಿ ಹಂಬಲಿಸುತ್ತೇನೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಲಿಯೋ ಎಫ್. ಸಾಲ್ಡಾನಾ

ಲಿಯೋ ಎಫ್. ಸಾಲ್ಡಾನಾ
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಲಿಯೋ, ಪರಿಸರ ಬೆಂಬಲ ಗುಂಪುಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ನ್ಯಾಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ.


ಇದನ್ನೂ ಓದಿ: ಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಗನ್ ಮೋಹನ್ ರೆಡ್ಡಿಯನ್ನು ಡ್ರಗ್ ಲಾರ್ಡ್ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಸಿದ ಚಂದ್ರಬಾಬು ನಾಯ್ಡು

0
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಹಿಂದಿನ ಮುಖ್ಯಮಂತ್ರಿ ವೈಎಸ್ ಜಗನ್‌ಮೋಹನ್ ರೆಡ್ಡಿ ವಿರುದ್ಧ ಇಂದು ರಾಜ್ಯ ವಿಧಾನಸಭೆಯಲ್ಲಿ ಸೇಡು ತೀರಿಸಿಕೊಂಡಿದ್ದು, ಅವರನ್ನು ಕೊಲಂಬಿಯಾದ ಡ್ರಗ್ ಲಾರ್ಡ್ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಸಿದ್ದಾರೆ. ಇಂಡಿಯಾ...