ಶಿವಸೇನೆಯ ಹಿಡಿತಕ್ಕಾಗಿ ಪಕ್ಷದ ಅಧ್ಯಕ್ಷ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಬಂಡಾಯ ನಾಯಕ ಏಕನಾಥ್ ಶಿಂಧೆ ನಡುವೆ ನಡೆಯುತ್ತಿರುವ ಹೋರಾಟದಲ್ಲಿ ಶಿವಸೇನಾ ಕಾರ್ಯಕರ್ತರು ಉದ್ಧವ್ ಠಾಕ್ರೆಗೆ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆ ಶನಿವಾರ ಶಿವಸೇನೆಯ ನಿಷ್ಠಾವಂತ ಕಾರ್ಯಕರ್ತರು ಬಂಡಾಯಗಾರರ ವಿರುದ್ಧ ಮಹಾರಾಷ್ಟ್ರದ ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆಗಳ ಹಿನ್ನೆಲೆ ಮಾತನಾಡಿರುವ ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ, ’ಮಹಾ ವಿಕಾಸ್ ಅಘಾಡಿ (ಎಂವಿಎ) ಹಿಡಿತದಿಂದ ಪಕ್ಷವನ್ನು ಉಳಿಸಲು ಅವರು (ಬಂಡಾಯಗಾರರು) ಹೋರಾಡುತ್ತಿದ್ದಾರೆ ಎಂಬುದನ್ನು ಶಿವಸೇನೆ ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.
ಪಕ್ಷದ ಅಧ್ಯಕ್ಷ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನಿಷ್ಠರಾಗಿರುವ ಶಿವಸೇನಾ ಕಾರ್ಯಕರ್ತರು ಅವರ ನೇತೃತ್ವದಲ್ಲಿ ಬಂಡಾಯ ಶಾಸಕರ ವಿರುದ್ಧ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಬಂಡಾಯಗಾರರ ಬ್ಯಾನರ್‌ಗಳನ್ನು ವಿರೂಪಗೊಳಿಸಿ, ಕೆಲವು ಸ್ಥಳಗಳಲ್ಲಿ ಕಲ್ಲು ತೂರಾಟ ನಡೆಸಿರುವ ಕಾರ್ಯಕರ್ತರು, ಪುಣೆಯಲ್ಲಿ ಬಂಡಾಯ ಶಾಸಕರ ಕಚೇರಿಯನ್ನು ಧ್ವಂಸಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರ ಬಳಿಕ ಏಕಾನಾಥ್ ಶಿಂಧೆ ಅವರ ಮನವಿ ಬಂದಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ಅತಂತ್ರ: ಇಲ್ಲಿವರೆಗೆ ಏನಾಯಿತು? ಸಂಕ್ಷಿಪ್ತ ವರದಿ ಇಲ್ಲಿದೆ
ಶಿವಸೇನೆಯ ಮುಖ್ಯ ವಕ್ತಾರ ಸಂಜಯ್ ರಾವತ್ ಅವರು ಇಂದು ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಬಂಡಾಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಂಡುಕೋರರು ಮಾಡಿದ ದ್ರೋಹವನ್ನು ಮರೆಯುವುದಿಲ್ಲ ಎಂದು ಠಾಕ್ರೆ ತಂಡ ಹೇಳಿದೆ.
ರಾಜ್ಯದಲ್ಲಿ ಹದಗೆಡುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಸಚಿವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಂಡಾಯಗಾರರಿಗೆ ಪಕ್ಷದಿಂದ ನಿರ್ಗಮಿಸಿ ಚುನಾವಣೆ ಎದುರಿಸಲು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಬಹಿರಂಗ ಸವಾಲು ಹಾಕಿದ್ದಾರೆ.
“ನಿಮಗೆ ಧೈರ್ಯವಿದ್ದರೆ ಶಿವಸೇನೆ ಬಿಟ್ಟು ಪಕ್ಷಾಂತರ ಮಾಡಿ ಹೋರಾಡಿ. ನಾವು ಮಾಡಿದ್ದು ತಪ್ಪು, ಉದ್ಧವ್ (ಠಾಕ್ರೆ) ನಾಯಕತ್ವ ತಪ್ಪು ಮತ್ತು ನಾವೆಲ್ಲರೂ ತಪ್ಪು ಎಂದು ನಿಮಗನ್ನಿಸಿದ್ದರೇ ರಾಜೀನಾಮೆ ನೀಡಿ ಚುನಾವಣೆ ಎದುರಿಸಿ. ನಾವು ಸಿದ್ಧರಿದ್ದೇವೆ” ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.
ಇತ್ತ, ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಕಳೆದ ರಾತ್ರಿ ಗುಜರಾತ್‌ನಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಸಾಧ್ಯತೆಯ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಹಾರಾಷ್ಟ್ರ: ಬಂಡಾಯ ಶಾಸಕನ ಕಚೇರಿ ಧ್ವಂಸ ಮಾಡಿದ ಶಿವಸೇನೆ ಕಾರ್ಯಕರ್ತರು