ಬಿಹಾರದಲ್ಲಿ ಎನ್‌ಡಿಎ ಜೊತೆಗಿನ ಮೈತ್ರಿ ಮುರಿದು ಮಹಾಘಟಬಂಧನ್ ಸೇರಿ ಸರ್ಕಾರ ರಚಿಸಿದ್ದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್‌ರವರಿಗೆ ಮಣಿಪುರ ರಾಜ್ಯದ ರಾಜಕೀಯ ಬೆಳವಣಿಗೆಗಳು ನಿರಾಶೆ ತಂದಿವೆ. ತಮ್ಮದೇ ಪಕ್ಷದ ಐವರು ಶಾಸಕರು ಪಕ್ಷ ತೊರೆದು ಬಿಜೆಪಿ ಜೊತೆಗೆ ವಿಲೀನವಾಗಿದ್ದಾರೆ.
ಮಣಿಪುರದಲ್ಲಿ ಜೆಡಿಯು ಪಕ್ಷವು 6 ಶಾಸಕರನ್ನು ಹೊಂದಿತ್ತು. ಆದರೆ ಅದರಲ್ಲಿ 5 ಶಾಸಕರು ಬಿಜೆಪಿ ಜೊತೆ ವಿಲೀನವಾಗಿರುವುದರಿಂದ ಶಾಸಕರ ಬಲ 1ಕ್ಕೆ ಕುಸಿದಿದೆ. 5 ಶಾಸಕರು ಒಟ್ಟಿಗೆ ಪಕ್ಷಾಂತರ ಮಾಡಿರುವುದರಿಂದ, ಒಟ್ಟು ಶಾಸಕರಲ್ಲಿ ಮೂರನೇ ಎರಡಕ್ಕಿಂತ ಹೆಚ್ಚುಇರುವುದರಿಂದ ಆ ಪಕ್ಷಾಂತರ ಮಾನ್ಯವಾಗಿದೆ ಎಂದು ಮಣಿಪುರ ಅಸೆಂಬ್ಲಿ ಸ್ಪೀಕರ್ ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಜೆಡಿಯು ಪಕ್ಷಕ್ಕೆ ಬೀಳುತ್ತಿರುವ ಎರಡನೇ ಹೊಡೆತ ಇದಾಗಿದೆ. ಪಕ್ಕದ ಅರುಣಾಚಲ ಪ್ರದೇಶದಲ್ಲಿ ಜೆಡಿಯು ಪಕ್ಷದಿಂದ 7 ಶಾಸಕರು ಆಯ್ಕೆಯಾಗಿದ್ದರು. ಆದರೆ 2020ರಲ್ಲಿ 6 ಶಾಸಕರು ಬಿಜೆಪಿ ಸೇರಿದ್ದರು. ಉಳಿದಿದ್ದ ಏಕೈಕ ಶಾಸಕ ಕೂಡ ಕಳೆದ ವಾರ ಬಿಜೆಪಿ ಸೇರಿದ್ದಾರೆ. ಅಲ್ಲಿಗೆ ಅರುಣಾಚಲದಲ್ಲಿ ಜೆಡಿಯು ಶಾಸಕರ ಸಂಖ್ಯೆ ಶೂನ್ಯಕ್ಕೆ ಕುಸಿದಿದೆ. ಒಂದು ಕಡೆ ರಾಷ್ಟ್ರೀಯ ನಾಯಕರಾಗಿ ಪ್ರಧಾನಿಯಾಗಬೇಕೆಂಬ ಹಂಬಲದಲ್ಲಿದ್ದ ನಿತೀಶ್ ಕುಮಾರ್‌ರವರ ಕನಸಿಗೆ ಈ ಬೆಳವಣಿಗೆಗಳು ತಣ್ಣೀರು ಎರಚಿವೆ.
ಮಣಿಪುರದಲ್ಲಿ ಈ ವರ್ಷ ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಸ್ಪರ್ಧಿಸಿದ್ದ 38 ಕ್ಷೇತ್ರಗಳ ಪೈಕಿ 6ರಲ್ಲಿ ಗೆದ್ದಿತ್ತು. ಆದರೆ ಶಾಸಕರಾದ ಕೆ.ಎಚ್. ಜೋಯ್ಕಿಶನ್, ಎನ್.ಸನತೆ, ಎಂಡಿ ಅಚಾಬ್ ಉದ್ದೀನ್, ಮಾಜಿ ಡಿಜಿಪಿ ಎಲ್.ಎಂ ಖೌಟೆ ಮತ್ತು ತಂಗಜಮ್ ಅರುಣ್‌ಕುಮಾರ್ ಎಂಬ ಐವರು ಶಾಸಕರು ಬಿಜೆಪಿ ಸೇರಿದ್ದಾರೆ. ಮತ್ತೊಬ್ಬ ಜೆಡಿಯು ಶಾಸಕ ಅಬ್ದುಲ್ ನಾಸೀರ್ ಸಹ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
60 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷವು 37 ಶಾಸಕರೊಂದಿಗೆ ಅತಿದೊಡ್ಡ ಪಕ್ಷವಾಗಿದೆ. ಅದರ ಮಿತ್ರಪಕ್ಷ ಎನ್‌ಪಿಪಿ 7 ಸದಸ್ಯರನ್ನು ಹೊಂದಿದೆ.
ಇದನ್ನೂ ಓದಿ; ಮುರುಘಾ ಶರಣರ ಮೇಲೆ ಅತ್ಯಾಚಾರ ಆರೋಪ: ಬಸವಶ್ರೀ ಪ್ರಶಸ್ತಿ ಹಿಂದಿರುಗಿಸಿದ ಪಿ. ಸಾಯಿನಾಥ್


